ಲೋಹಿಯಾ ಮತ್ತು ಕನ್ನಡ ಸಾಹಿತ್ಯ ಚಾರಿತ್ರಿಕ ನಂಟಿನ ಕತೆ
ಡಾ. ನಟರಾಜ್ ಹುಳಿಯಾರ್
ಸಾಹಿತ್ಯ ಮತ್ತು ವೈಚಾರಿಕ ಲೋಕದ ಗಾಳಿ ಮತ್ತು ಬೆಳಕು ನಟರಾಜ್ ಹುಳಿಯಾರ್. ಕಥೆಗಾರ, ಕಾದಂಬರಿಕಾರ, ಅಂಕಣಕಾರ, ಕವಿ ಮತ್ತು ವಿಮರ್ಶಕರಾಗಿ ಇವರು ಗುರುತಿಸಿಕೊಂಡಿದ್ದಾರೆ. ಲೋಹಿಯಾ,ಪಿ. ಲಂಕೇಶ್, ಡಿ. ಆರ್. ನಾಗರಾಜ್ ಅವರ ನೆರಳಲ್ಲಿ ಇವರ ಸಾಹಿತ್ಯ, ವೈಚಾರಿಕ ಚಿಂತನೆಗಳು ರೂಪುಗೊಂಡಿವೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಎಂಎ ಪದವಿ ಪಡೆದಿರುವ ಹುಳಿಯಾರ್, ‘ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದ ಕುರಿತು ಪಿಎಚ್‌ಡಿ ಪದವಿ ಪಡೆದಿದ್ದಾರೆ. ಡಾ. ರಾಮ್ ಮನೋಹರ ಲೋಹಿಯಾ ಅವರ ಕನ್ನಡ ಅನುವಾದ ಕೃತಿಗಳ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ಮೂರು ಬಾರಿ ಮತ್ತು 2017ರಲ್ಲಿ ಜೀವಮಾನ ಸಾಹಿತ್ಯ ಸಾಧನೆಗಾಗಿ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕಾಗೋಡಿನ ಗೇಣಿದಾರ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲು ಸಮಾಜವಾದಿ ಚಿಂತಕ-ನಾಯಕ ರಾಮಮನೋಹರ ಲೋಹಿಯಾ ಸಾಗರ ತಾಲೂಕಿನ ಕಾಗೋಡಿಗೆ 1951ರಲ್ಲಿ ಬಂದರು. ಆನಂತರದ ದಿನಗಳಲ್ಲಿ ಕರ್ನಾಟಕದ ರಾಜಕಾರಣ, ಚಳವಳಿ, ಸಾಹಿತ್ಯ, ಸಂಸ್ಕೃತಿಗಳ ಜೊತೆಗಿನ ಲೋಹಿಯಾ ಚಿಂತನೆಗಳ ನಂಟು ಬೆಳೆಯುತ್ತಲೇ ಹೋಯಿತು. ಶಾಂತವೇರಿ ಗೋಪಾಲಗೌಡರ ರಾಜಕಾರಣ ಹಾಗೂ ಎಂ.ಡಿ. ನಂಜುಂಡಸ್ವಾಮಿ ನೇತೃತ್ವದ ಸಮಾಜವಾದಿ ಪಕ್ಷ, ಸಮಾಜವಾದಿ ಯುವಜನ ಸಭಾದತ್ತ ಕನ್ನಡ ತರುಣ ಲೇಖಕರು ಆಕರ್ಷಿತರಾಗತೊಡಗಿದರು: ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಎಚ್.ಎಂ. ಚೆನ್ನಯ್ಯ, ಚ. ಸರ್ವಮಂಗಳ, ಯು. ಆರ್. ಅನಂತಮೂರ್ತಿ, ಚಂದ್ರಶೇಖರ ಪಾಟೀಲ, ಶ್ರೀಕೃಷ್ಣ ಆಲನಹಳ್ಳಿ ಮೊದಲಾದ ಲೇಖಕ, ಲೇಖಕಿಯರಿಗೆ ಲೋಹಿಯಾ ಚಿಂತನೆಗಳು ಭಾರತವನ್ನು ಗ್ರಹಿಸುವ ನೋಟಕ್ರಮಗಳನ್ನು ರೂಪಿಸುವ ಫಿಲಾಸಫಿಯಾಗಿ, ಅನುಭವವನ್ನು ಅರಿಯುವ ಚೌಕಟ್ಟುಗಳಾಗಿ ಕಾಣತೊಡಗಿದವು.
ಅಂದು ಭಾರತದುದ್ದಕ್ಕೂ ಹಾಗೂ ಕರ್ನಾಟಕದಲ್ಲಿ ಆಧುನಿಕ ಪ್ರಜ್ಞೆಯ ಉದಾರವಾದಿ ಲೇಖಕ ಲೇಖಕಿಯರು ಲೋಹಿಯಾ ಕಡೆಗೆ ತಿರುಗಿದ್ದಕ್ಕೆ ಕೆಲವು ಸ್ಥೂಲ ಕಾರಣಗಳಿದ್ದವು: ಆಗ ಕಾಂಗ್ರೆಸ್ ತಾನೇ ಒಂದು ವ್ಯವಸ್ಥೆಯಾಗಿದ್ದರಿಂದ ‘ಆ್ಯಂಟಿಎಸ್ಟಾಬ್ಲಿಶ್‌ಮೆಂಟ್’ ಅಥವಾ ವ್ಯವಸ್ಥಾವಿರೋಧಿ ಲೇಖಕ, ಲೇಖಕಿಯರಿಗೆ ಆ ಪಕ್ಷ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಕಮ್ಯುನಿಸ್ಟ್ ಪಕ್ಷಗಳು ಲೇಖಕರಿಗೆ, ಕಲಾವಿದರಿಗೆ ನೇರವಾಗಿ, ಪರೋಕ್ಷವಾಗಿ ಕೊಡಲೆತ್ನಿಸುತ್ತಿದ್ದ ‘ಪಾರ್ಟಿನೋಸ್ಟ್’ ಅಥವಾ ಪಾರ್ಟಿಯ ಸ್ಥೂಲ ನಿರ್ದೇಶನಗಳು; ಜನಸಂಘದಂಥ ಬಲಪಂಥೀಯ ಪಕ್ಷಗಳ ಮೂಲಭೂತವಾದಿ ಧೋರಣೆ ಇವೆರಡೂ ಅಂದಿನ ಅನೇಕ ಸ್ವತಂತ್ರ ಮನೋಭಾವದ ಗಂಭೀರ ಲೇಖಕ, ಲೇಖಕಿಯರಿಗೆ ಒಪ್ಪಿತವಾಗುತ್ತಿರಲಿಲ್ಲ. ಹೀಗಾಗಿ ಲೋಹಿಯಾ ವಿವರಿಸುತ್ತಿದ್ದ ಭಾರತೀಯ ಸಮಾಜವಾದದ ಮಾದರಿ ಹಾಗೂ ಬರಹಗಾರರ ಸ್ವಾತಂತ್ರ್ಯದ ಬಗ್ಗೆ ಲೋಹಿಯಾಗಿದ್ದ ಗೌರವ, ನಂಬಿಕೆ; ಲೋಹಿಯಾರ ಸಮಾನತಾವಾದಿ ರಾಜಕಾರಣ, ಉದಾರವಾದಿ ನೋಟ; ಹಾಗೂ ಸಂಸ್ಕೃತಿ ಸಮಾಜಗಳ ಹೊಸ ವ್ಯಾಖ್ಯಾನಗಳು, ಮಾತು-ಬರಹಗಳಲ್ಲಿ ಸತ್ಯದ ಹುಡುಕಾಟ ಇವೆಲ್ಲವೂ ಅಂದಿನ ನೂರಾರು ಲೇಖಕ, ಲೇಖಕಿಯರನ್ನು ಅವರತ್ತ ಸೆಳೆದಂತಿದೆ. ಜೊತೆಗೆ ಸ್ವತಃ ಲೋಹಿಯಾ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಬಹು ದೊಡ್ಡ ಲೇಖಕರಾಗಿದ್ದುದು ಕೂಡ ಈ ಸೆಳೆತಕ್ಕೆ ಮತ್ತೊಂದು ಕಾರಣವಾಗಿತ್ತು. ‘ವಿಚಾರಗಳನ್ನು ಆಯುಧಗಳಂತೆ ನೋಡಬಾರದು; ವಿಚಾರಗಳನ್ನು ಅವುಗಳ ಮೂಲ ಸೃಜನಾತ್ಮಕ ರೂಪದಲ್ಲಿ ನೋಡಬೇಕು’ ಎಂಬ ಲೋಹಿಯಾರ ನಿಲುವು ಕೂಡ ಸೃಜನಶೀಲ ಲೇಖಕ, ಲೇಖಕಿಯರನ್ನು ಆಕರ್ಷಿಸಿದ್ದವು.
ಅರವತ್ತರ ದಶಕದಲ್ಲಿ ಮೈಸೂರಿನಲ್ಲಿ ಗೋಪಾಲಗೌಡ, ಕೋಣಂದೂರು ಲಿಂಗಪ್ಪ ಮೊದಲಾದವರ ಜೊತೆ ರಾಜಪ್ರಭುತ್ವದ ಸಂಕೇತವಾದ ಜಂಬೂಸವಾರಿ ವಿರುದ್ಧದ ಪ್ರತಿಭಟನೆಯಲ್ಲಿ ಲೋಹಿಯಾ ಭಾಗಿಯಾದರು. ಕೆಲವರು ಭಾಷಣ ಮಾಡಿದರು. ಆಗೀಗ ಕವಿತೆ ಬರೆಯುತ್ತಿದ್ದ ಕೋಣಂದೂರು ಲಿಂಗಪ್ಪ, ‘ಜಂಬು-ಬೊಂಬು ಸವಾರಿ’ ಎಂಬ ಪದ್ಯ ಓದಿದರು. ಕೋಣಂದೂರು ಪದ್ಯ ಓದುತ್ತಿದ್ದರೆ, ಲೋಹಿಯಾ ಬೆರಗಿನಿಂದ ‘ಏ ಕ್ಯಾ ಹೈ? ಏ ಕ್ಯಾ ಹೈ?’ ಎಂದು ಪಕ್ಕದವರನ್ನು ಕೇಳಿ ಪದ್ಯವನ್ನು ಅರ್ಥ ಮಾಡಿಕೊಳ್ಳಲೆತ್ನಿಸುತ್ತಿದ್ದರು. ಆಗಿನಿಂದ ಲೋಹಿಯಾ ಬಾಯಲ್ಲಿ ಕೋಣಂದೂರು ‘ಕವಿ ಮಹಾರಾಜ್’ ಆದರು!
ಒಮ್ಮೆ ಬೆಂಗಳೂರಿನ ಶಾಸಕರ ಭವನದಲ್ಲಿದ್ದ ಲೋಹಿಯಾ ಲಿಂಗಪ್ಪನವರನ್ನು ಕೇಳಿದರು: ‘ಕವಿ ಮಹಾರಾಜ್! ಕ್ಯಾ ತುಮ್ ಶರಾಬ್ ಪೀತೇ ಹೋ?’
ಲಿಂಗಪ್ಪನವರಿಗೆ ಕೊಂಚ ಕೋಪ ಬಂತು. ‘ನಹೀ ಸಾಬ್! ಮೈ ಬಿಯರ್ ಪೀತಾ ಹೂಂ’ ಎಂದರು.
ಕಾರಣ, ಕೋಣಂದೂರು ಆಗ ಶರಾಬ್ ಎಂದರೆ ‘ಸರಾಯಿ’ ಎಂದುಕೊಂಡಿದ್ದರು; ತನ್ನನ್ನು ಡಾಕ್ಟರ್ ಸಾಹೇಬರು ಸರಾಯಿಯ ಮಟ್ಟಕ್ಕೆ ಇಳಿಸಿಬಿಟ್ಟರಲ್ಲ ಎಂದು ಪೆಚ್ಚಾಗಿ ಈ ಉತ್ತರ ಕೊಟ್ಟಿದ್ದರು! ಕೋಣಂದೂರರ ಹಿಂದಿ ಭಾಷಾಮುಗ್ಧತೆ ಕಂಡು ಲೋಹಿಯಾ ಮನಸಾರೆ ನಕ್ಕರು.
ಲಂಕೇಶರಂಥವರಿಗೆ ಸೋಶಲಿಸ್ಟ್ ಸಂಜೆಗಳು ಹೊಸ ನೋಟ ಕೊಟ್ಟ ಸಂಜೆಗಳಾಗಿದ್ದವು. ಅರುವತ್ತು, ಎಪ್ಪತ್ತರ ದಶಕದಲ್ಲಿ ನವ್ಯ ಲೇಖಕರಾಗಿ ವ್ಯಕ್ತಿಯ ತೀವ್ರ ಪರೀಕ್ಷೆಯ ಬರಹಗಳಲ್ಲಿ ತೊಡಗಿದ್ದ ಲಂಕೇಶರ ಪ್ರಜ್ಞೆ ಗೋಪಾಲಗೌಡರಿಂದ, ಸಮಾಜವಾದಿ ಪಕ್ಷದ ಇತರರ ಸಂಗದಿಂದ, ಸಮಾಜವಾದಿ ಸಂಜೆಗಳಿಂದ ನಿಧಾನವಾಗಿ, ಸೂಕ್ಷ್ಮವಾದ ಸಮುದಾಯ ಪ್ರಜ್ಞೆಯಾಗಿ ಬದಲಾದ ಸೂಚನೆಗಳು ಲಂಕೇಶರ ಆತ್ಮಕಥನ ‘ಹುಳಿಮಾವಿನಮರ’ದಲ್ಲಿವೆ:
‘ಒಂದೊಂದು ಪೆಗ್ ಇಳಿದಂತೆಯೂ ಗೋಪಾಲ್, ಅಣ್ಣಯ್ಯ, ಭರ್ಮಪ್ಪ ಮುಂತಾದವರು ಚರ್ಚೆಯನ್ನು ಮಹಾನ್ ಸಂಗೀತದ ಮಟ್ಟಕ್ಕೆ ಏರಿಸುತ್ತಿದ್ದರು. ಅವರ ಅನುಭವ, ಪ್ರತಿಭೆ, ಹತಾಶೆಯೆಲ್ಲ ಪೂರ್ಣ ಅಭಿವ್ಯಕ್ತಿ ಪಡೆದು, ಅಲ್ಲಿರುತ್ತಿದ್ದ ನನ್ನಂಥವರಿಗೆ ಬದುಕಿನ ಅನಿರೀಕ್ಷಿತ ಸ್ತರಗಳು ಗೋಚರಿಸುತ್ತಿದ್ದವು. ಜಾತಿ, ಭಾಷೆ, ಹಣ, ವೈಭವ ಎಲ್ಲವನ್ನೂ ಮೀರಿದ ಸುಖೀರಾಜ್ಯವೊಂದು ಸೃಷ್ಟಿಯಾಗುತ್ತಿತ್ತು. ಆಗ ನಮ್ಮ ಸಮಾಜವಾದಿ ಪಕ್ಷದಲ್ಲಿದ್ದ ಕಮ್ಮಾರರು, ಕ್ಷೌರಿಕರು, ಮೋಚಿಗಳು ಮತ್ತು ರೈತರು, ಕಾರ್ಮಿಕರು-ಎಲ್ಲರೂ ಒಂದಾಗಿ ಅದ್ಭುತ ಜಗತ್ತೊಂದು ಸೃಷ್ಟಿಯಾಗುತ್ತಿತ್ತು. ಜಾತಿಗಳನ್ನು ಮರೆತು ಜನರನ್ನು ತಿಳಿದುಕೊಳ್ಳುವ, ಪ್ರೀತಿಸುವ, ಒಟ್ಟಾಗಿ ಸೃಷ್ಟಿಸುವ ರೋಮಾಂಚನ ಆ ದಿನಗಳಿಂದ ನನ್ನಲ್ಲಿ ಆರಂಭವಾಗಿರಬೇಕೆಂದು ನನಗೆನ್ನಿಸುತ್ತದೆ.’
ಕನ್ನಡದ ವ್ಯಕ್ತಿಕೇಂದ್ರಿತ ನವ್ಯ ನಿಧಾನವಾಗಿ ಸಮಾಜಮುಖಿ ನವ್ಯವಾದದ್ದರ ಹಿನ್ನೆಲೆಯನ್ನೂ ಲಂಕೇಶರ ಮಾತು ಸೂಚಿಸುತ್ತದೆ. ಶೂದ್ರ ಲೇಖಕರೇ ಹೆಚ್ಚು ಇದ್ದ ಅಖಿಲ ಕರ್ನಾಟಕ ಬರಹಗಾರ ಕಲಾವಿದರ ಒಕ್ಕೂಟ, ಬ್ರಾಹ್ಮಣ-ಶೂದ್ರ ಇತ್ಯಾದಿ ತಾತ್ವಿಕ ಚರ್ಚೆಗಳು; ಸಮಾನತೆಯ ಚರ್ಚೆಗಳು; ಹಿಂದುಳಿದ ವರ್ಗಗಳ ಚಲನೆ; ಲಿಂಗ ಸಮಾನತೆಯ ಕಲ್ಪನೆ ಇವೆಲ್ಲವೂ ಲೋಹಿಯಾ ವಿವರಿಸುತ್ತಿದ್ದ ಸಮಾಜವಾದದಿಂದ ಕೂಡ ಗಟ್ಟಿಯಾಗತೊಡಗಿದವು. ಕೆಲವು ನವ್ಯ ಲೇಖಕರು ಗಾಂಧಿಯನ್ನು ಮರಳಿ ಹುಡುಕಿಕೊಂಡದ್ಡು ಕೂಡ ಲೋಹಿಯಾ ಚಿಂತನೆಗಳ ಹಿನ್ನೆಲೆಯಲ್ಲಿಯೇ. ನವ್ಯ ಮಾರ್ಗದಲ್ಲಿ ಬರೆಯುತ್ತಿದ್ದ ಲಂಕೇಶ್, ತೇಜಸ್ವಿ, ಚಂದ್ರಶೇಖರ ಪಾಟೀಲ, ಶ್ರೀಕೃಷ್ಣ ಆಲನಹಳ್ಳಿ, ಅನಂತಮೂರ್ತಿ, ಎಚ್.ಎಂ. ಚೆನ್ನಯ್ಯ ಮೊದಲಾದವರ ಬರವಣಿಗೆಯ ದಿಕ್ಕನ್ನು ಲೋಹಿಯಾ ಫಿಲಾಸಫಿ ನಿರ್ಣಾಯಕವಾಗಿ ಬದಲಿಸಿತು.
ನೆಹರೂಯುಗ ಕುರಿತ ಲೋಹಿಯಾರ ವಿಮರ್ಶೆಯ ಪ್ರಭಾವದಿಂದ 1958ರಲ್ಲಿ ಗೋಪಾಲಕೃಷ್ಣ ಅಡಿಗರು ಬರೆದ ‘ನೆಹರು ನಿವೃತ್ತರಾಗುವುದಿಲ್ಲ’ ಪದ್ಯದಲ್ಲಿ ನೆಹರೂ ವಿಮರ್ಶೆ:
ಭರತವಾಕ್ಯಕು ಬೆದರನೀತ ಧೀರೋದಾತ್ತ ಯುವಕ
ತೆರೆ ಬಿದ್ದರೂ ರಂಗ ಬಿಡದ ಚಿರ ಯುವಕ;
ಹೊತ್ತು ಸುತ್ತುತ್ತಾನೆ ಬಲು ಭಾರಿ ಭೂಗೋಳ,
ಗಂಟೆಗೆಂಬತ್ತು ಮೈಲಿ ಸ್ವಗತ...
ಒಮ್ಮೆ ಲೋಹಿಯಾ ಸಾಗರಕ್ಕೆ ಬಂದಾಗ, ಗೋಪಾಲಗೌಡರು ಅಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಕವಿ ಚಂದ್ರಶೇಖರ ಕಂಬಾರರನ್ನು ಲೋಹಿಯಾಗೆ ಪರಿಚಯಿಸಿದರು. ಗೋಪಾಲಗೌಡರ ಕೋರಿಕೆಯಂತೆ ಕಂಬಾರರು ತಮ್ಮ ‘ಹೇಳತೇನ ಕೇಳ’ ಎಂಬ ಖಂಡಕಾವ್ಯವನ್ನು ಲೋಹಿಯಾ ಎದುರು ಹಾಡಿದರು. ‘ಈ ಖಂಡಕಾವ್ಯ ವಸಾಹತುಶಾಹಿಯ ಆಗಮನದ ಸಂದರ್ಭವನ್ನು, ಅದರ ಪರಿಣಾಮಗಳನ್ನು ಕುರಿತು ಹೇಳುತ್ತಿದೆ’ ಎಂದು ಗೋಪಾಲಗೌಡರು ಲೋಹಿಯಾಗೆ ವಿವರಿಸತೊಡಗಿದರು.
ಕಂಬಾರರು ಮುಂದೊಮ್ಮೆ ಈ ಪ್ರಸಂಗವನ್ನು ನೆನಪಿಸಿಕೊಳ್ಳುತ್ತಾ ನನಗೆ ಹೇಳಿದರು: ‘ವಸಾಹತುಶಾಹಿ ಎನ್ನುವ ಶಬ್ದ ಮೊದಲು ನನ್ನ ಕಿವಿಗೆ ಬಿದ್ದಿದ್ದೇ ಆಗ ಕಣ್ರಿ! ಆ ತನಕ ನನ್ನ ಪದ್ಯ ವಸಾಹತುಶಾಹಿಯನ್ನು ಟೀಕಿಸುತ್ತಿದೆ ಎಂಬುದು ನನಗೆ ಗೊತ್ತಿರಲೇ ಇಲ್ಲ!’ ನಿರ್ವಸಾಹತೀಕರಣ ಚಿಂತಕರೂ ಆಗಿದ್ದ ಲೋಹಿಯಾ ಭೇಟಿ ಹಾಗೂ ಗೋಪಾಲಗೌಡರ ಸಾಂಸ್ಕೃತಿಕ ವ್ಯಾಖ್ಯಾನಗಳು ಕಂಬಾರರ ಮಹತ್ವದ ಕನ್ನಡ ಖಂಡಕಾವ್ಯಕ್ಕೆ ವಿಶೇಷ ರಾಜಕೀಯ ಅರ್ಥಗಳನ್ನು ಕೊಟ್ಟಿದ್ದವು. ಅಷ್ಟೇ ಅಲ್ಲ, ಆಗ ಹಿಮ್ಮುಖ ನೋಟದ ಕವಿಯಾಗಿದ್ದ ಕಂಬಾರರಿಗೆ ಹೊಸ ರಾಜಕೀಯ ಪ್ರಜ್ಞೆ ಮೂಡಿಸಿದ ಅರ್ಥಪೂರ್ಣ ಸಂದರ್ಭ ಇದು.
1963ರಲ್ಲಿ ಬರ್ಮಿಂಗ್‌ಹ್ಯಾಂಗೆ ಹೋದ ಅನಂತಮೂರ್ತಿ 1965ರಲ್ಲಿ ಬರೆದು ಮುಗಿಸಿದ ‘ಸಂಸ್ಕಾರ’ ಕಾದಂಬರಿ ಅರುವತ್ತು ಎಪ್ಪತ್ತರ ದಶಕದಲ್ಲಿ ಸ್ಫೋಟಕ ಕಾದಂಬರಿಯೆಂದು ಹೆಸರಾಯಿತು. ಈ ಕಾದಂಬರಿಯನ್ನು ಶಾಂತವೇರಿ ಗೋಪಾಲಗೌಡರು ಲೋಹಿಯಾ ಮಾಡಿದ್ದ ಜಾತಿಪದ್ಧತಿಯ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಗ್ರಹಿಸಿ ವ್ಯಾಖ್ಯಾನಿಸಿದರು. ಮದ್ರಾಸಿನಲ್ಲಿದ್ದ ಸ್ನೇಹಲತಾರೆಡ್ಡಿ ಹಾಗೂ ಅವರ ಪತಿ ಪಟ್ಟಾಭಿರಾಮರೆಡ್ಡಿಯವರಿಗೆ ಒಮ್ಮೆ ‘ಸಂಸ್ಕಾರ’ದ ಕಥಾಹಂದರವನ್ನು ಗೋಪಾಲಗೌಡರು ಹೇಳಿದರು. ಈ ಕುರಿತು ಸ್ನೇಹಲತಾ ಮುಂದೊಮ್ಮೆ ಬರೆದರು: ‘...ಸಂಸ್ಕಾರ’ ಡಾ.ಲೋಹಿಯಾ ಚಿಂತನೆಗಳು ಹಾಗೂ ಫಿಲಾಸಫಿಯಿಂದ ಪ್ರೇರಣೆಗೊಂಡಿತ್ತು. ಈ ಕತೆಯನ್ನು 1966ರಲ್ಲಿ ಗೋಪಾಲಗೌಡರ ಬಾಯಿಂದ ನಾವು ಮೊದಲ ಬಾರಿಗೆ ಕೇಳಿದಾಗ ಡಾಕ್ಟರ್ ಇದ್ದರು. ಡಾಕ್ಟರ್ ಈ ಕತೆಯನ್ನು ಮೆಚ್ಚುತ್ತಾ, ವಸ್ತು ತುಂಬಾ ಚೆನ್ನಾಗಿದೆ ಎಂದಿದ್ದು ನನಗೆ ಚೆನ್ನಾಗಿ ನೆನಪಿದೆ. ‘ಸಾಧ್ಯವಾದರೆ ಒಂದು ದಿನ ಇದನ್ನು ಸಿನೆಮಾ ಮಾಡುತ್ತೇನೆ’ ಎಂದರು ಪಟ್ಟಾಭಿ. ಮುಂದೆ ‘ಸಂಸ್ಕಾರ’ ಸಿನೆಮಾದಲ್ಲಿ ಸ್ನೇಹಲತಾ ಚಂದ್ರಿಯಾಗಿ, ಗಿರೀಶ್ ಕಾರ್ನಾಡ್ ಪ್ರಾಣೇಶಾಚಾರ್ಯನಾಗಿ, ಲಂಕೇಶ್ ನಾರಣಪ್ಪನಾಗಿ ನಟಿಸಿದ್ದರು. ‘ಸಂಸ್ಕಾರ’ 1970ರಲ್ಲಿ ಬಿಡುಗಡೆಯಾಗಿ ಹಲ ಬಗೆಯ ಚರ್ಚೆಗಳನ್ನು, ಮಂಥನವನ್ನು ಸೃಷ್ಟಿಸಿತು. ಅನಂತಮೂರ್ತಿಯವರ ‘ಅವಸ್ಥೆ’ ಕಾದಂಬರಿ ಒಟ್ಟು ಸಮಾಜವಾದಿ ರಾಜಕಾರಣದ ಏಳುಬೀಳುಗಳನ್ನು ಮರುಶೋಧಿಸಿತು.
ಅರುವತ್ತರ ದಶಕದಲ್ಲಿ ಮೈಸೂರಿನಲ್ಲಿ ನಡೆದ ಲೋಹಿಯಾ-ಕುವೆಂಪು ನಡುವಣ ಅಪೂರ್ವ ಭೇಟಿಯನ್ನು ತೇಜಸ್ವಿಯವರ ‘ಅಣ್ಣನ ನೆನಪು’ ಪುಸ್ತಕದ ‘ಡಾ. ರಾಮಮನೋಹರ ಲೋಹಿಯಾ’ ಅಧ್ಯಾಯ ದಾಖಲಿಸಿದೆ:
...ಲೋಹಿಯಾ ನಮ್ಮ ಮನೆಗೆ ಬಂದಾಗ ಅವರೊಡನೆ ಗೋಪಾಲಗೌಡರು ಮತ್ತು ಖಾದ್ರಿ ಶಾಮಣ್ಣ ಇದ್ದರು. ಕುವೆಂಪು ವೈಸ್‌ಛಾನ್ಸ್‌ಲರ್ ಆಗಿರುವುದೂ ಅವರು ಆಡಳಿತ ಮತ್ತು ಶಿಕ್ಷಣದಲ್ಲಿ ಇಂಗ್ಲಿಷ್ ವರ್ಜಿಸಿ ಕನ್ನಡ ಅನುಷ್ಠಾನಕ್ಕೆ ತರಲು ಹೋರಾಡುತ್ತಿದ್ದುದೂ ತಿಳಿದು, ಆಂಗ್ರೇಜಿ ಹಠಾವ್ ಸಮ್ಮೇಳನಕ್ಕೆ ಅಣ್ಣನನ್ನು ಅಧ್ಯಕ್ಷತೆ ವಹಿಸಬೇಕೆಂದು ಒಪ್ಪಿಸಲು ಲೋಹಿಯಾ ಬಂದಿದ್ದರು. ಅಣ್ಣ ಅಷ್ಟು ದೂರ ಬಂದು ಸಮ್ಮೇಳನದಲ್ಲಿ ಭಾಗವಹಿಸಲು ತಮ್ಮಿಂದ ಸಾಧ್ಯವಿಲ್ಲವೆಂದೂ ಕರ್ನಾಟಕದೊಳಗೇ ಎಲ್ಲಾದರೂ ನಡೆದಿದ್ದರೆ ಬರುತ್ತಿದ್ದೆನೆಂದೂ ಹೇಳಿದರು. ಲೋಹಿಯಾ ಅವತ್ತು ಅಣ್ಣನಿಗೆ ಹೇಗೆ ಇಂಗ್ಲಿಷ್ ಭಾಷೆ ಭಾರತದಲ್ಲಿ ಶೋಷಣೆಗೆ ಉಳ್ಳವರ ಆಯುಧವಾಗಿ ಪರಿಣಮಿಸಿದೆಯೆಂದು ವಿವರಿಸಿದರು. ಧರ್ಮ, ಜಾತಿ, ಭಾಷೆ ಇವೆಲ್ಲವುಗಳ ಬಗ್ಗೆ ತುಂಬಾ ಹೊತ್ತು ವಿಚಾರವಿನಿಮಯ ನಡೆಯಿತು. ಮಹಾತ್ಮಾಗಾಂಧಿಯವರ ಜೊತೆ ಲೋಹಿಯಾ, ಜೆ.ಪಿ. ಎಲ್ಲರೂ ಇದ್ದಿದ್ದು ಅಣ್ಣನಿಗೆ ಗೊತ್ತಿದ್ದರಿಂದ ಲೋಹಿಯಾರವರ ಆಳವಾದ ತತ್ವಚಿಂತನೆ, ಪಾಂಡಿತ್ಯಗಳು ಅಣ್ಣನಿಗೇನೂ ಹೊಸದಾಗಿ ಕಾಣಲಿಲ್ಲ. ಆದರೂ ಅವರ ವಿಚಾರಧಾರೆಗೂ ತಮ್ಮ ಅಭಿಪ್ರಾಯಗಳಿಗೂ ಇರುವ ಸಮಾನಾಂಶಗಳಿಂದ ಅಣ್ಣನಿಗೆ ಅವತ್ತು ತುಂಬಾ ಸಂತೋಷವಾಯ್ತು, ‘ನೀವು ಯಾವುದನ್ನು ರಾಜಕೀಯದ ಪರಿಭಾಷೆಯಲ್ಲಿ ಹೇಳುತ್ತಿದ್ದೀರೋ ಅದರ ಸಾಂಸ್ಕೃತಿಕ ಆವೃತ್ತಿಯನ್ನಷ್ಟೆ ನಾನು ಹೇಳುತ್ತಿರುವುದು’ ಎಂದು ಅವರ ಕೈ ಕುಲುಕುತ್ತಾ ಕೊನೆಯಲ್ಲಿ ಹೇಳಿದರು.
ಮುಂದೆ ತೇಜಸ್ವಿ, ಎಂ.ಡಿ. ನಂಜುಂಡಸ್ವಾಮಿ ಅನುವಾದಿಸಿ ರೂಪಿಸಿದ ‘ಲೋಹಿಯಾ’ ರೆಡ್ ಬುಕ್‌ಗೆ ಕುವೆಂಪು ಮುನ್ನುಡಿ ಬರೆಯುತ್ತಿದ್ದಾಗ ಲೋಹಿಯಾ ಚಿಂತನೆಗಳ ಮಹತ್ವ ಅವರಿಗೆ ಗಾಢವಾಗಿ ಮನವರಿಕೆಯಾದಂತಿದೆ.
2
ಲೋಹಿಯಾ ತೀರಿಕೊಂಡ ದಿನ ತಮಗಾದ ಅನುಭವ ಕುರಿತು ದೇವನೂರ ಮಹಾದೇವ ಬರೆಯುತ್ತಾರೆ: ‘‘ಪಿ.ಯು.ಸಿ. ಫೇಲಾಗಿದ್ದ ನಾನು ಲೋಹಿಯಾ ಅವರು ತೀರಿಕೊಂಡ ದಿನ ಅವರ ಬಗ್ಗೆ ಬಂದಿದ್ದ ಸುದ್ದಿ ಲೇಖನ ಓದಿ ಲೋಹಿಯಾ ಸೆಳೆತಕ್ಕೊಳಗಾದೆ- ಅವರ ಭೌತಿಕ ಶರೀರ ಗತಿಸಿದ ದಿನವಾದ್ದರಿಂದ, ಬಹುಶಃ ಅವರ ಪ್ರಜ್ಞೆಯೊಡನೆ. ಆಗ ಲೋಹಿಯಾ ಅವರ ‘ಜಾತಿಪದ್ಧತಿ’ ಹಾಗೂ ‘ರಾಜಕೀಯದ ಮಧ್ಯೆ ಬಿಡುವು’ ಈ ಎರಡೂ ಕೃತಿಗಳು ಕನ್ನಡದ ಲೇಖಕರ, ಚಿಂತಕರ ಹಾಗೂ ಆಸೆಗಣ್ಣಿನ ಯುವಕರ ಮನ ಗೆದ್ದಿದ್ದವು. ಇವುಗಳ ಪ್ರಭಾವ ನಾಡಿನ ಉದ್ದಗಲಕ್ಕೂ ಹಬ್ಬಿತ್ತು. ‘ಜಾತಿಪದ್ಧತಿ’ ಚರ್ಚಿತವಾಗುತ್ತಿದ್ದರೆ, ‘ರಾಜಕೀಯದ ಮಧ್ಯೆ ಬಿಡುವು’ ಒಬ್ಬ ಮಹಾನ್ ಕಲಾವಿದನ ಅಂತರಂಗದ ಅಭಿವ್ಯಕ್ತಿಯಾಗಿ ಮನಸೂರೆಗೊಂಡಿತ್ತು. ಅದಕ್ಕೆ ಒಳಗಾದವರಲ್ಲಿ ನಾನೂ ಒಬ್ಬನಾಗಿದ್ದೆ.’’
ಆ ಕಾಲದಲ್ಲಿ ಎಚ್.ಎಂ. ಚೆನ್ನಯ್ಯ ಬರೆದ ‘ಲೋಹಿಯಾ’ ಎಂಬ ಕವಿತೆ ಲೋಹಿಯಾ ಆರಂಭಿಸಿದ ಕೆಲಸವನ್ನು ಮುಂದುವರಿಸುವ ಆಶಯವನ್ನು ಪ್ರತಿಧ್ವನಿಸಿತು:
ಅಯ್ಯಾ
ನೀನಿಲ್ಲದಾಗ, ಈ ಅಡವಿಯಲ್ಲಿ
ಮತ್ತೆ ಆನೆ ಬೆಕ್ಕು ಇಲಿ ಓಡಾಟ ನಿರಾಕುಳ.
ನಿನ್ನಂಥ ಜಾಡಮಾಲಿ ಮತ್ತೊಬ್ಬನಿಲ್ಲೆನಿಸಿ
ನೀನು ಪಂಚತ್ವವನು ಪಡೆದೀ ಸಂದರ್ಭದಲ್ಲಿ
ಎರಡು ಹನಿ ಕಣ್ಣೀರಿಟ್ಟು
ಕೋಣೆಯ ಕಸ ಗುಡಿಸಲು ಕೈಗೆ
ಕಸಬರಿಕೆ ತೆಗೆದುಕೊಳ್ಳುತ್ತೇನೆ ನಾನು.
‘ಯಾರು ಕೊಳೆಯಲಾರಂಭಿಸುತ್ತಾರೋ, ಅವರನ್ನು ಕಿತ್ತೊಗೆಯಬೇಕು. ಜನರು ದಿನಾಲೂ ತಮ್ಮ ಮನೆಯಂಗಳವನ್ನು ಅಥವಾ ಬೀದಿಯನ್ನು ಗುಡಿಸುವಂತೆ ಸಾರ್ವಜನಿಕ ಜೀವನದಲ್ಲೂ ಕೊಳಕನ್ನು ನಿರ್ಮೂಲನ ಮಾಡಲು ಕಲಿಯಬೇಕು. ದಿನಾಲೂ ಮನೆಯನ್ನು ಸ್ವಚ್ಛಗೊಳಿಸುವುದು ಯಾರಿಗೂ ದಣಿವುಂಟುಮಾಡುವುದಿಲ್ಲ. ಹಾಗಿದ್ದ ಮೇಲೆ ಸರಕಾರವನ್ನು ನಮಗೆ ಎಷ್ಟು ಸಲ ಅಗತ್ಯವೆಂದು ತೋರುತ್ತದೋ ಅಷ್ಟು ಸಲ, ಎಷ್ಟು ಸಲ ಸಾಧ್ಯವಾಗುವುದೆಂದು ತೋರುತ್ತದೆ ರಸ್ತೆ ಗುಡಿಸಿದಷ್ಟು ಸುಲಭವಲ್ಲ. ಸ್ವಲ್ಪ ಸಮಯ ಹಿಡಿಯುತ್ತದೆ ಎಂಬುದನ್ನು ಬಿಟ್ಟರೆ, ಒಮ್ಮೆ ಜನತೆಯ ಮನೋಭಾವ ಬದಲಾಯಿಸಿಬಿಟ್ಟರೆ ಅದು ಅಸಾಧ್ಯದ ಮಾತೇನಲ್ಲ.’ 1962ರಲ್ಲಿ ಲೋಹಿಯಾ ಹೇಳಿದ್ದ ಈ ಮಾತುಗಳನ್ನು ಚೆನ್ನಯ್ಯನವರ ಕವಿತೆ ಪ್ರತಿಧ್ವನಿಸುತ್ತಿತ್ತು. ಹೀಗೆ ಲೋಹಿಯಾ ನಿರ್ಗಮನದ ನಂತರ ಅವರು ಅರ್ಧದಲ್ಲೇ ಬಿಟ್ಟುಹೋದ ಕೆಲಸವನ್ನು ಮುಂದುವರಿಸಬೇಕೆಂಬ ಕಾಳಜಿ, ತಹತಹ, ಜವಾಬ್ದಾರಿ ಭಾರತದ ರಾಜಕಾರಣ, ಸಂಸ್ಕೃತಿ, ಸಾಹಿತ್ಯಗಳ ವಲಯಗಳಲ್ಲಿ ಹಬ್ಬತೊಡಗಿದವು. ಸ್ವಾತಂತ್ರೊ ್ಯೀತ್ತರ ಭಾರತದಲ್ಲಿ ಗಾಂಧೀಜಿ, ಅಂಬೇಡ್ಕರ್ ನಿರ್ಗಮನದ ನಂತರ ಹುಟ್ಟಿದ್ದ ಇಂಥ ನಿಸ್ವಾರ್ಥ ಕಾತರ ಮತ್ತೆ ಹುಟ್ಟಿದ್ದು ಲೋಹಿಯಾ ನಿರ್ಗಮನದ ನಂತರವೇ, ಸ್ವಾತಂತ್ರಾ ್ಯನಂತರದ ಭಾರತದ ಸಾಮಾಜಿಕ-ರಾಜಕೀಯ ಚರಿತ್ರೆಯಲ್ಲಿ ದೇಶದುದ್ದಕ್ಕೂ ಇಂಥ ನಿಸ್ವಾರ್ಥ ಹಂಬಲ ಹಬ್ಬಿದ್ದು ಇದೇ ಕಡೆಯ ಸಲವೇನೋ.
ಲೋಹಿಯಾರನ್ನು ‘ಲೋಕ ಹಿತದ ಯಾತ್ರಿ’ ಎಂದು ಬಣ್ಣಿಸುತ್ತಾ, ಕೋಣಂದೂರು ಲಿಂಗಪ್ಪ ಬರೆದ ‘ಡಾ. ಲೋಹಿಯಾ’ ಕವಿತೆಯ ಚಿತ್ರಗಳು:
ಲೋಕ ಹಿತದ ಯಾತ್ರಿ ನೀನೆ ಲೋಹಿಯಾ
ಗಾಂಧಿ-ಮಾರ್ಕ್ಸರನು ಒಂದು ಮಾಡಿ ತಂದೆ
ತುಳಿದ ಜಾತಿಗಳ ಹಳಿದ ಭಾಷೆಗಳ ಮತ್ತೆತ್ತಲಿಕ್ಕೆ ಮಹಾವೀರನಾಗಿ ಬಂದೆ
ಹೋರಾಟಜೀವಿ, ಸಮಾಜವಾದಿ ನಿನಗಿಲ್ಲ ಎರಡು ದಾರಿ
ಸಪ್ತಕ್ರಾಂತಿಗೆ ದಾರಿ ತೋರಿ ನೀ ಹೋದೆ ಬಹಳ ಮುಂದೆ
ಜೆಪಿ ಹೆಗಲನೇರಿ ದಾರಿ ನೀನೆ ತೋರಿ ಸಂಪೂರ್ಣ ಕ್ರಾಂತಿ ಮಾಡಿ ಗೆದ್ದೆ.
ರಾಮ ಕೃಷ್ಣ ಶಿವರೆಲ್ಲರಿಗೆ ಹೊಸ ರೂಪ ಕೊಟ್ಟ ಕಲಾಕಾರ
ಸಿದ್ಧಾಂತ ದೈತ್ಯ, ಉತ್ಕ್ರಾಂತಿ ಸೂತ್ರ, ನಿಸ್ವಾರ್ಥ ವಿಶ್ವಮಿತ್ರ
ಶಾಂತಿ-ಕ್ರಾಂತಿಗಳ ಮಿಲನದಿಂದ ನೀ ಕೊಟ್ಟು ಹೋದೆ ಹೊಸ ವಿಶ್ವ ಸೂತ್ರ.
ಸಂಕೀರ್ಣದಲ್ಲಿ ಸಂಪೂರ್ಣ ನುಡಿದ, ಅದರಂತೆ ನಡೆದ, ನೀನೊಬ್ಬ ಕ್ರಾಂತಿವೀರ
ಲೋಕದೆಲ್ಲ ಕೊಳಕ ತೊಳೆವ ಸಾಹಸದ ಮಹಾ ಛಲಗಾರ
ನೀನೆಂದೂ ಅಮರ, ನಮೋ ನಿನಗೆ ಮನೋಹರ.
ಮುಂದೆ ನವ್ಯ ಮಾರ್ಗದಿಂದ ಹೊರಳುತ್ತಾ ಪೂರ್ಣಚಂದ್ರ ತೇಜಸ್ವಿ ತಮ್ಮ ‘ಅಬಚೂರಿನ ಪೋಸ್ಟಾಫೀಸು’ ಸಂಕಲನಕ್ಕೆ ಬರೆದ ‘ಹೊಸ ದಿಗಂತದೆಡೆಗೆ’ ಮುನ್ನುಡಿ ಈಗ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಮುಖ್ಯ ದಾಖಲೆಯಾಗಿದೆ:
‘ಲೋಹಿಯಾರವರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ- ಈ ಮೂರೇ ನನ್ನ ಈಚಿನ ಸಾಹಿತ್ಯರಚನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವುವು. ಬಹುಶಃ ಮುಂಬರುವ ಕಲಾವಿದರಿಗೆ ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಚೈತನ್ಯಶಕ್ತಿಯಾಗಬಲ್ಲಂಥವು ಈ ಮೂರೇ. ನನ್ನ ಜೀವನವಿಧಾನವನ್ನು, ಗ್ರಹಿಸುವ ಕ್ರಮವನ್ನು, ಆಲೋಚನೆಯನ್ನು, ಅಭಿವ್ಯಕ್ತಿ ವಿಧಾನವನ್ನು, ಒಟ್ಟಿನಲ್ಲಿ ಇಡೀ ಸಮಗ್ರ ವ್ಯಕ್ತಿತ್ವವನ್ನು ಸಂಪೂರ್ಣ ಬದಲಿಸಿದ್ದು ಲೋಹಿಯಾರವರ ತತ್ವಚಿಂತನೆ. ಸದ್ಯದ ಭಾರತೀಯ ಸಂದರ್ಭದಲ್ಲಿ ಲೋಹಿಯಾ ಒಬ್ಬರೇ ‘ಒರಿಜಿನಲ್’ ಎಂದು ಹೇಳಬಹುದಾದ ತತ್ವಮೀಮಾಂಸಕರು. ಲೋಹಿಯಾರವರ ಆಲೋಚನೆಗಳನ್ನು ವಿಶ್ವವಿದ್ಯಾಲಯದೊಳಕ್ಕೆ ಅವರ ಜೀವಿತಕಾಲದಲ್ಲಿ ಬರದ ಹಾಗೆ ನೋಡಿಕೊಂಡ ನಮ್ಮ ಬುದ್ಧಿಜೀವಿಗಳ ಸಮೂಹ ಒಂದು ದುಷ್ಟಕೂಟ. ನಮ್ಮ ಭಾರತದಲ್ಲಿ ಬೇರೂರಿರುವ ಗುಲಾಮಶಾಹಿ ಮತ್ತು ಜಾತೀಯತೆಯ ಸ್ವರೂಪವನ್ನಷ್ಟೆ ಇದು ಶ್ರುತಪಡಿಸುತ್ತದೆ. ಲೋಹಿಯಾರವರ ಆಲೋಚನೆಗಳಿಗೆ ಪ್ರತಿಸ್ಪಂದಿಸದ ಚೇತನ ಭಾರತದ ಯಾವುದಕ್ಕೂ ಸ್ಪಂದಿಸಲಾರದು. ಅಂತೆಯೇ ಹೊಸ ಸಾಹಿತ್ಯಕ್ಕೂ ಕೂಡ. ...ನಮ್ಮ ವಿದ್ಯಾಭ್ಯಾಸದ ತಿರುಳು, ವಿದ್ಯಾಭ್ಯಾಸ ಕ್ರಮ, ಶಿಕ್ಷಣ ಮಾಧ್ಯಮ ಇವು ಭಾರತೀಯ ಪರಿಸ್ಥಿತಿಯಲ್ಲಿ ಎಂಥ ಅಸಂಬದ್ಧತೆಯ ಪರಮಾವಧಿಯಾಗಿವೆ ಎಂಬುದು ನನಗೆ ಅರಿವಾಯ್ತು. ಈ ನಿಗೂಢ, ಅಪರಿಚಿತ ಭಾರತದ ಬಗ್ಗೆ ನನ್ನ ಕಣ್ಣು ತೆರೆಸಿದ್ದು ಲೋಹಿಯಾ... ಲೋಹಿಯಾರವರ ಕಾಣ್ಕೆ, ತತ್ವಚಿಂತನೆಗಳು ಮತ್ತು ಹಳ್ಳಿಯ ಜೀವನದ ಹೊಸ ಪರಿಸ್ಥಿತಿಗಳು ನನಗೆ ಇನ್ನೊಂದು ಬಗೆಯ ಶ್ರದ್ಧೆಯನ್ನು ತಂದಿತ್ತವು.’
1973ರಲ್ಲಿ ಕನ್ನಡ ಸಂಸ್ಕೃತಿಗೆ ಬಹು ಮುಖ್ಯ ತಿರುವು ಕೊಟ್ಟ ಶೂದ್ರ ಲೇಖಕರ ‘ಅಖಿಲ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ’ದಲ್ಲಿ ಎಂ.ಡಿ. ನಂಜುಂಡಸ್ವಾಮಿ, ಚಂದ್ರಶೇಖರ ಪಾಟೀಲ, ಶೂದ್ರ ಶ್ರೀನಿವಾಸ್, ಕೆ. ರಾಮದಾಸ್, ಲಂಕೇಶ್, ಶ್ರೀಕೃಷ್ಣ ಆಲನಹಳ್ಳಿ, ಬಿ.ಎನ್. ಶ್ರೀರಾಮ್ ಮೊದಲಾದ ಲೋಹಿಯಾಮಾರ್ಗದ ಸಮಾಜವಾದಿಗಳು ಹೆಚ್ಚು ಇದ್ದರು. ಆಗ ಬಿ.ಎ. ವಿದ್ಯಾರ್ಥಿಯಾಗಿದ್ದ ಡಿ. ಆರ್. ನಾಗರಾಜ್ ಮೈಸೂರಿನ ‘ಒಕ್ಕೂಟ’ ಸಮಾವೇಶಕ್ಕೆ ಹೋಗಿ ಬಂದ ಮೇಲೆ ತಮ್ಮೂರು ದೊಡ್ಡಬಳ್ಳಾಪುರದಲ್ಲಿ ಸಮಾಜವಾದಿ ಯುವಜನಸಭಾ ಮಾಡಿದರು. ಡಿ.ಆರ್.ನಾಗರಾಜ್ 1974ನೆಯ ಇಸವಿಯ ಹೊತ್ತಿಗಾಗಲೇ ಲೋಹಿಯಾ ಚಿಂತನೆಗಳನ್ನು ಕುರಿತ ಟಿಪ್ಪಣಿ ಮಾಡಿಕೊಂಡು ತಮ್ಮದೇ ಆದ ವಿಶ್ಲೇಷಣೆಯೊಂದನ್ನು ಮಾಡಿದ್ದರು. ಆಗ ‘ಮಾರ್ಕ್ಸ್‌ವಾದ, ಲೋಹಿಯಾವಾದದ ಬಗೆಗೆ ತಾಕಲಾಟ’ದಲ್ಲಿದ್ದ ಇಪ್ಪತ್ತರ ಹರೆಯದ ಡಿ ಆರ್. ನಾಗರಾಜ್, ‘ಸಂಘಟನೆ- ಚಳವಳಿ- ಸಿದ್ಧಾಂತ’ ಎಂಬ ತಲೆಬರಹದ ಕೆಳಗೆ ಬರೆದಿರುವ ಟಿಪ್ಪಣಿಯ ಭಾಗಗಳು ಅವರ ಆ ಕಾಲದ ಡೈರಿಯಲ್ಲಿವೆ:
‘ನಾನು ಈಗ ಪ್ರತಿಪಾದಿಸಲಿರುವ ಸಿದ್ಧಾಂತ ಕೂಡ ಅಪೂರ್ಣ; ಸಂಘಟನೆ ಮತ್ತು ಚಳವಳಿಯಂತೂ ಅನೀಮಿಯಾ ರೋಗದಿಂದ ನರಳುತ್ತಿದೆ. ನಲ್ಲಿ, ವಿದ್ಯುಚ್ಛಕ್ತಿ... ಈ ಯಾವುದಕ್ಕೂ ಸಂಬಂಧಪಡದ ಮೂವತ್ತು ಕೋಟಿ ಭಾರತೀಯರಿಗಾಗಿ ಲೋಹಿಯಾ.’ ಲೋಹಿಯಾರ ‘ಇತಿಹಾಸ ಚಕ್ರ’ ಹಾಗೂ ಪ್ರಬಂಧಗಳನ್ನು ಓದಿದ ಡಿ.ಆರ್.ಗೆ ‘ನಾನು ವಾಸ್ತವವಾಗಿ ಲೋಹಿಯಾ ವಿಚಾರಧಾರೆಯ ಪ್ರಭಾವಕ್ಕೆ ಒಳಗಾಗಿದ್ದೇನೆ ಎಂಬುದೇನೋ ನಿಜ’ ಎನ್ನಿಸುತ್ತದೆ. ‘‘ಲೋಹಿಯಾರ ‘ಮಾರ್ಕ್ಸ್, ಗಾಂಧಿ, ಸೋಶಲಿಸಂ’ ಪುಸ್ತಕ ಮತ್ತೆ ಲೋಹಿಯಾ ಕಂಬಕ್ಕೆ ನನ್ನ ಕಟ್ಟಿತು’’ ಎನ್ನುವ ಡಿ. ಆರ್., ಕೆಲವೊಮ್ಮೆ ಕಮ್ಯುನಿಸಂ ಕಡೆಗೆ ವಾಲುತ್ತಲೇ ಹೀಗೆಂದುಕೊಳ್ಳುತ್ತಾರೆ: ‘ಕಮ್ಯುನಿಸ್ಟನಾದರೆ ಜೀವನದ ಎಷ್ಟೋ ನಿಗೂಢ ಬಾಗಿಲುಗಳು ಶಾಶ್ವತವಾಗಿ ಮುಚ್ಚಿ ಹೋಗಿಬಿಡಬಹುದೇನೋ ಎಂಬ ಭಯ ನನ್ನನ್ನು ಕಮ್ಯುನಿಸ್ಟ್ ಆಗಲು ಬಿಟ್ಟುಕೊಟ್ಟಿಲ್ಲ.’ ಇದಾದ ನಂತರ ಕೆಲ ಕಾಲ ಮಾರ್ಕ್ಸ್‌ವಾದದತ್ತ ನಡೆದ ಡಿ.ಆರ್. ನಂತರ ಲೋಹಿಯಾರ ರಾಜಕೀಯ, ಸಾಂಸ್ಕೃತಿಕ ನೋಟಗಳಿಗೆ ವಾಪಸಾದರು.
ಒಮ್ಮೆ ಕಿ.ರಂ. ನಾಗರಾಜ್, ‘ಸಮಾಜವಾದ, ಮಾರ್ಕ್ಸ್‌ವಾದ ಇವನ್ನೆಲ್ಲ ನಮ್ಮ ತರಗತಿ ಪಾಠಗಳ ನಡುವೆ ಸೇರಿಸಿ ಹೇಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು’ ಎಂಬ ಬಗ್ಗೆ ತಾವು ಎಂ.ಡಿ. ನಂಜುಂಡಸ್ವಾಮಿಯವರನ್ನು ಕೇಳಿದ್ದನ್ನು ನೆನೆಯುತ್ತಾರೆ: ‘‘ಅದನ್ನೆಲ್ಲ ಹೇಗೆ ಹೇಳಬೇಕೆಂಬುದನ್ನು ಚರ್ಚಿಸಿದ ಎಂ.ಡಿ.ಎನ್, ‘ಆದರೆ ಮೇಲಿಂದ ಮೇಲೆ ಅದನ್ನೇ ಹೇಳೋಕೆ ಹೋಗಬೇಡಿ. ಸಾಹಿತ್ಯ ಹೇಳುತ್ತಲೇ ಅವೆಲ್ಲವನ್ನೂ ಸೇರ್ಪಡೆ ಮಾಡಬೇಕು’ ಎಂದರು.’’ ಇದಾದ ನಂತರದ ಒಂದು ಅನುಭವವನ್ನು ಕಿ.ರಂ. ನನ್ನ ಜೊತೆ ಹಂಚಿಕೊಂಡಿದ್ದರು: ‘‘ಮಾರನೆಯ ದಿನ ಕುಮಾರವ್ಯಾಸ ಕ್ಲಾಸಿತ್ತು. ಕೃಷ್ಣನ ಭಾಗ ಕುರಿತು ಪಾಠ ಮಾಡಬೇಕಾಗಿತ್ತು. ಏನಾದರೂ ಹೊಸದು ಹೇಳಬೇಕಲ್ಲ ಎಂದು ಯೋಚಿಸುತ್ತಿದ್ದವನಿಗೆ ಥಟ್ಟನೆ ಲೋಹಿಯಾ ಸಾಹೇಬರ ‘ರಾಮ ಕೃಷ್ಣ ಶಿವ’ ನೆನಪಾಯಿತು. ಈ ಲೇಖನದ ಮೂಲಕ ಕುಮಾರವ್ಯಾಸನನ್ನು ನೋಡಿದಾಗ ಹೊಸ ವ್ಯಾಖ್ಯಾನಗಳು ಹೊಳೆಯತೊಡಗಿದವು.’’ ಹೀಗೆ ಲೋಹಿಯಾರ ಸಂಸ್ಕೃತಿ ವಿಶ್ಲೇಷಣೆಯ ಬರಹಗಳು ಕನ್ನಡ ಲೇಖಕ ಲೇಖಕಿಯರ, ಸಾಹಿತ್ಯದ ಟೀಚರುಗಳ ನೋಟಗಳನ್ನು ಗಮನಾರ್ಹವಾಗಿ ಬದಲಿಸಿದವು.
ಲೋಹಿಯಾ ಮಾದರಿಯ ಸಮಾಜವಾದ, ಜಾತ್ಯತೀತ ನೋಟಗಳ ಮೂಲಕವೂ ಸಮಕಾಲೀನ ಸಮಾಜ, ರಾಜಕಾರಣ ಹಾಗೂ ಗ್ರಾಮಭಾರತವನ್ನು ಗ್ರಹಿಸಿದ ಇಪ್ಪತ್ತನೆಯ ಶತಮಾನದ ಕಾದಂಬರಿಗಳಲ್ಲಿ ಲಂಕೇಶರ ‘ಮುಸ್ಸಂಜೆಯ ಕಥಾಪ್ರಸಂಗ’, ಅನಂತಮೂರ್ತಿಯವರ ‘ಸಂಸ್ಕಾರ’, ‘ಅವಸ್ಥೆ’, ತೇಜಸ್ವಿಯವರ ‘ಕರ್ವಾಲೊ’, ‘ಚಿದಂಬರ ರಹಸ್ಯ’; ದೇವನೂರ ಮಹಾದೇವರ ‘ಕುಸುಮಬಾಲೆ’; ಕುಂದರನಾಡ ಪಾಟೀಲರ ‘ಹಂತ’ ಮುಖ್ಯವಾದವು. ಲಂಕೇಶರ ‘ಸಂಕ್ರಾಂತಿ’, ಎಚ್.ಎಂ. ಚೆನ್ನಯ್ಯನವರ ‘ಹುಯ್ಯೆಲವೊ ಡಂಗೂರವ’, ಟಿ.ಎನ್. ಸೀತಾರಾಂ ಅವರ ‘ಆಸ್ಫೋಟ’ ಮುಂತಾದ ನಾಟಕಗಳು ಸಮಾಜವಾದದ ಹಿನ್ನೆಲೆಯಲ್ಲಿ ಮೂಡಿ ಬಂದವು. ಇಪ್ಪತ್ತೊಂದನೆಯ ಶತಮಾನದ ಎರಡನೆಯ ದಶಕದಲ್ಲಿ ಬಂದ ಕರಿಗೌಡ ಬೀಚನಹಳ್ಳಿಯವರ ‘ಮಳೆಕೋಗಿಲೆ’, ನಟರಾಜ್ ಹುಳಿಯಾರ್ ಬರೆದ ‘ಕಾಮನ ಹುಣ್ಣಿಮೆ’ ಮುಂತಾದ ಕಾದಂಬರಿಗಳು ಕೂಡ ಲೋಹಿಯಾವಾದಿ ಸಮಾಜವಾದಿ ಮಾರ್ಗದ ಜಾತಿವಿನಾಶದ ಆಶಯವನ್ನು ಶೋಧಿಸಿದವು. ಈ ಎಲ್ಲ ಕೃತಿಗಳ ಪಾತ್ರಶೋಧ, ನಿರೂಪಣಾ ದೃಷ್ಟಿಕೋನ, ಸಂಘರ್ಷ, ಲೋಕದರ್ಶನಗಳನ್ನೂ ಲೋಹಿಯಾ ನೋಟಗಳು ಪ್ರೇರೇಪಿಸಿವೆ. ಲೋಹಿಯಾ ನಂತರದ ಎರಡು ಮೂರು ತಲೆಮಾರಿನ ಕನ್ನಡ ಲೇಖಕ, ಲೇಖಕಿಯರ ರಾಜಕೀಯ-ಸಾಮಾಜಿಕ ವಿಶ್ಲೇಷಣೆಗಳು ಸಮಾಜವಾದದ ಚೌಕಟ್ಟುಗಳನ್ನು ವಿಸ್ತರಿಸುತ್ತಲೇ ಬಂದಿವೆ. ಇದು ಭಾರತದುದ್ದಕ್ಕೂ ನಡೆಯುತ್ತಾ ಬಂದಿದೆ ಎನ್ನುವುದು ಲೋಹಿಯಾ ಹಾಗೂ ಒಟ್ಟಾರೆ ಭಾರತೀಯ ಸಾಹಿತ್ಯದ ನಿರಂತರ ನಂಟಿನ ಕತೆಯನ್ನೂ ಹೇಳುತ್ತದೆ.
(ಸದ್ಯದಲ್ಲೇ ಪ್ರಕಟವಾಗಲಿರುವ ನಟರಾಜ್ ಹುಳಿಯಾರ್ ಅವರ
‘ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ’ ಕೃತಿಯಿಂದ ಆಯ್ದ ಭಾಗಗಳು.)