×
Ad

ವಿಭಿನ್ನ ಲೋಕದೃಷ್ಟಿಗಳು

Update: 2025-12-24 08:45 IST

ಡಾ. ಪುರುಷೋತ್ತಮ ಬಿಳಿಮಲೆ

ಅಗತ್ಯ ಬಿದ್ದರೆ ಕಾಲಿಗೆ ಗೆಜ್ಜೆಕಟ್ಟಿ ಯಕ್ಷಲೋಕಕ್ಕೂ ನೆಗೆಯಬಲ್ಲ ಪುರುಷೋತ್ತಮ ಬಿಳಿಮಲೆ ಮೂಲತಃ ಸುಳ್ಯ ತಾಲೂಕಿನ ಪಂಜದವರು. ಹಂಪಿ ಕನ್ನಡ ವಿವಿಯಲ್ಲಿ ಪ್ರಾಧ್ಯಾಪಕರಾಗಿ, ಆನಂತರ ಹೊಸದಿಲ್ಲಿಯ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಭಾಷಾ ಪೀಠ ಸ್ಥಾಪನೆಯಲ್ಲಿ ಇವರ ಕೊಡುಗೆಯಿದೆ. ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಇವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಇವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ.‘ದಲಿತ ಜಗತ್ತು’, ‘ಶಿಷ್ಟ ಪರಿಶಿಷ್ಟ’, ‘ಕರಾವಳಿ ಜಾನಪದ’, ‘ಕೂಡುಕಟ್ಟು’, ‘ಬಹುರೂಪ’ ಇವರ ಕೆಲವು ಮುಖ್ಯ ಕೃತಿಗಳು. ಕಾಗೆ ಮುಟ್ಟಿದ ನೀರು ಇವರ ಆತ್ಮಕಥನ. ಕರ್ನಾಟಕ ಜಾನಪದ ಅಕಾಡಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ಸೇರಿ ಹಲವು ಗೌರವಗಳು ಸಂದಿವೆ.ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಭಿನ್ನ ಲೋಕದೃಷ್ಟಿಗಳು ಮಾನವ ಅನುಭವದ ವಿವಿಧ ಅಂಶಗಳಿಗೆ ಆದ್ಯತೆ ನೀಡುತ್ತವೆ. ಮಾನವತಾವಾದಿಗಳು ಮಾನವನ ಅಸ್ತಿತ್ವದ ದೊಡ್ಡ ಪ್ರಶ್ನೆಗಳನ್ನು ಸ್ವತಃ ಪರಿಹರಿಸುವ ವ್ಯಕ್ತಿಗಳಿಗೆ ಆದ್ಯತೆ ನೀಡುತ್ತಾರೆ. ಮಾನವ ಮತ್ತು ಇತರ ನೈಸರ್ಗಿಕ ಮೌಲ್ಯಗಳನ್ನು ಆಧರಿಸಿದ ನೈತಿಕತೆಯ ಮೂಲಕ ಹೆಚ್ಚು ಮಾನವೀಯ ಸಮಾಜವನ್ನು ನಿರ್ಮಿಸಲು ಈ ಚಿಂತಕರು ಹೋರಾಡುತ್ತಾರೆ. ಮಾನವನ ಸಾಮರ್ಥ್ಯಗಳ ಬಗ್ಗೆ ಇವರಿಗೆ ವಿಶೇಷ ನಂಬಿಕೆ ಇರುತ್ತದೆ. ಅಲೌಕಿಕವಾದ ಯಾವುದೇ ದೃಷ್ಟಿಕೋನಗಳನ್ನು ಇವರು ಸ್ವೀಕರಿಸುವುದಿಲ್ಲ. ಹಾಗಾಗಿ ಮಾನವತಾವಾದಿಗಳ ಲೋಕದೃಷ್ಟಿಯು ಮಾನವ ಕೇಂದ್ರಿತವಾಗಿದ್ದು ಸಮಾಜದ ಪರವಾಗಿರುತ್ತದೆ.

ಪ್ರತಿಯೊಬ್ಬ ಮನುಷ್ಯ, ಅವನನ್ನು ಒಳಗೊಂಡ ಸಮುದಾಯ, ಅನೇಕ ಸಮುದಾಯಗಳನ್ನು ಒಳಗೊಂಡ ರಾಜ್ಯ ಮತ್ತು ರಾಜ್ಯಗಳನ್ನೊಳಗೊಂಡ ದೇಶಕ್ಕೆ ತಿಳಿದೋ ತಿಳಿಯದೆಯೋ ತನ್ನದೇ ಆದ ಒಂದು ಲೋಕದೃಷ್ಟಿ ಇರುತ್ತದೆ. ಇದು ಅವರ ಸಾಮಾಜಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ನಿಷ್ಠೆಗಳು ಅಥವಾ ನೈತಿಕ ಆಚರಣೆಗಳಲ್ಲಿ ಸ್ಪಷ್ಟವಾಗಿ ಪ್ರಕಟವಾಗುತ್ತದೆ. ಅವರು ಜಗತ್ತನ್ನು ಹೇಗೆ ನೋಡುತ್ತಾರೆ, ಅದರಲ್ಲಿ ಅವರ ಸ್ಥಾನ ಏನು? ಮತ್ತು ಲೋಕವನ್ನು ಗೊತ್ತುಮಾಡಲು ಅನುಸರಿಸುವ ವೈಯಕ್ತಿಕ ಮಾನದಂಡಗಳೇನು? ಎಂಬಿತ್ಯಾದಿಗಳನ್ನು ಕೂಡಾ ಲೋಕದೃಷ್ಟಿ ತಿಳಿಸುತ್ತದೆ.

ಭಾರತದಂಥ ಬಹುಭಾಷಿಕ ದೇಶದಲ್ಲಿ ಅನೇಕ ಬಗೆಯ ಲೋಕದೃಷ್ಟಿಗಳಿವೆ. ಇಲ್ಲಿಯ ಜನರು ಲೋಕವನ್ನು ಗ್ರಹಿಸುವ ವಿಧಾನಗಳು ಭಿನ್ನ ಭಿನ್ನವಾಗಿವೆ. ಅಂಥ ಹಲವು ಲೋಕದೃಷ್ಟಿಗಳಲ್ಲಿ ವೈದಿಕರ ಲೋಕದೃಷ್ಟಿ ಕೂಡಾ ಒಂದು. ಆದರೆ ಕಾರಣಾಂತರಗಳಿಂದ ವೈದಿಕ ಲೋಕದೃಷ್ಟಿಯೇ ಭಾರತದ ಲೋಕದೃಷ್ಟಿ ಎನ್ನಲಾಗುತ್ತಿದೆ ಮತ್ತು ಅದನ್ನು ಒಪ್ಪಿಕೊಳ್ಳಲು ಬಗೆ ಬಗೆಯ ಒತ್ತಡಗಳನ್ನೂ ಹೇರಲಾಗುತ್ತಿದೆ. ಒಪ್ಪದವರನ್ನು ಭಾರತ ವಿರೋಧಿಗಳು ಎಂದೂ ಕರೆಯುತ್ತಾರೆ. ಉದಾಹರಣೆಗೆ, ದೇವರು ಇದ್ದಾನೋ ಇಲ್ಲವೋ ಎಂಬ ಪ್ರಶ್ನೆಗೆ ಸಿಗುವ ಉತ್ತರಗಳು ಹಲವು. ಅದೇ ರೀತಿಯಲ್ಲಿ, ಜಾತಿಗೆ ಅಂಟಿಕೊಂಡ ಮಾನವರು ಪರಸ್ಪರರ ಬಗ್ಗೆ ಯಾವ ದೃಷ್ಟಿಕೋನವನ್ನು ಹೊಂದಿದ್ದಾರೆ? ಮತ್ತು ಈ ವಿಷಯದಲ್ಲಿ ಅವರ ನೈತಿಕ ಕರ್ತವ್ಯಗಳೇನು ಎಂಬ ಪ್ರಶ್ನೆಗೆ ಸಿಗುವ ಉತ್ತರಗಳು ಇನ್ನೊಂದು ಬಗೆಯ ಲೋಕದೃಷ್ಟಿಯನ್ನು ಪ್ರಕಟಿಸುತ್ತವೆ. ದಲಿತರನ್ನು ನೋಡುವ ಬಗೆಯಲ್ಲಿ ಅಂಬೇಡ್ಕರ್ ಮತ್ತು ಗಾಂಧೀಜಿ ಹೇಗೆ ಭಿನ್ನ ದೃಷ್ಟಿಕೋನಗಳನ್ನು ಹೊಂದಿದ್ದಾರೆ? ಎಂದು ತಿಳಿದಿರುವವರಿಗೆ ಈ ಕುರಿತು ಮತ್ತೆ ಹೇಳಬೇಕಾಗಿಲ್ಲ. ಗಾಂಧಿಯವರು ಅಸ್ಪ ಶ್ಯತೆಯನ್ನು ತೀವ್ರವಾಗಿ ಖಂಡಿಸಿದಾಗ, ವರ್ಣ ವ್ಯವಸ್ಥೆಯನ್ನು ಖಂಡಿಸಲಿಲ್ಲ. ಅಸ್ಪ ಶ್ಯತೆಯ ನಿವಾರಣೆ ಮತ್ತು ಪ್ರತಿಯೊಂದು ಉದ್ಯೋಗಕ್ಕೂ ಸಮಾನ ಸ್ಥಾನಮಾನ ನೀಡುವ ಮೂಲಕ ಜಾತಿ ವ್ಯವಸ್ಥೆಯನ್ನು ಸುಧಾರಿಸಬಹುದೆಂದು ಅವರು ನಂಬಿದ್ದರು. ಆದರೆ ಸ್ವತಃ ದಲಿತರಾಗಿದ್ದ ಬಿ.ಆರ್.ಅಂಬೇಡ್ಕರ್ ಅವರು ‘ಜಾತಿ ವ್ಯವಸ್ಥೆಯು ಅಸ್ತವ್ಯಸ್ತವಾಗಿದೆ ಮತ್ತು ಹಿಂದೂ ಸಮಾಜವನ್ನು ಅದು ನಿರುತ್ಸಾಹಗೊಳಿಸಿ, ಅದನ್ನು ಜಾತಿಗಳ ಸಂಗ್ರಹಕ್ಕೆ ಇಳಿಸಿದೆ ’ ಎಂದು ಪ್ರಖರವಾಗಿ ವಾದಿಸಿದರು. ಜಾತಿ ವ್ಯವಸ್ಥೆ ಮತ್ತು ಅಸ್ಪ ಶ್ಯತೆ ಹಿಂದೂ ಧಾರ್ಮಿಕ ಗ್ರಂಥಗಳ ದ್ಯೋತಕವೆಂದು ಹೇಳಲು ಅಂಬೇಡ್ಕರ್ ಹಿಂಜರಿಯಲಿಲ್ಲ. ಹೀಗಾಗಿ ಅವರು ವೇದಗಳು, ಶಾಸ್ತ್ರಗಳು, ಸ್ಮತಿಗಳೇ ಮೊದಲಾದ ಧರ್ಮಗ್ರಂಥಗಳ ಲೋಕದೃಷ್ಟಿಯನ್ನು ತೀವ್ರವಾಗಿ ಖಂಡಿಸಿದರು. 1927ರ ಡಿಸೆಂಬರ್ 25ರಂದು ಅಂಬೇಡ್ಕರ್ ಮನುಸ್ಮತಿಗೆ ಬೆಂಕಿಯನ್ನೂ ಹಚ್ಚಿದರು. ಅಂಬೇಡ್ಕರ್ ಅವರು ಮೊದಲು ಭಾರತೀಯ ಸಮಾಜದಲ್ಲಿನ ಜಾತಿಯ ಅಸಮಾನತೆಯನ್ನು ಸ್ಪಷ್ಟಪಡಿಸಿದರು ಮತ್ತು ಜಾತಿ ವಿನಾಶಕ್ಕಾಗಿ ಕೆಲಸ ಮಾಡಿದರು. ಜಾತಿಯ ಮೇಲೆ ನಿರ್ಮಿಸಲಾದ ಎಲ್ಲವೂ ಅನಿವಾರ್ಯವಾಗಿ ಅಸಮಾನತೆಯನ್ನು ಪೋಷಿಸುತ್ತದೆ ಎಂದು ಅಂಬೇಡ್ಕರ್ ನಂಬಿದ್ದರು. ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರೂ ಅಸ್ಪ ಶ್ಯತೆಯನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಅದರ ನಿವಾರಣೆಯ ಹಾದಿ ಅವರಿಬ್ಬರಿಗೂ ಬೇರೆಬೇರೆಯಾಗಿ ಕಂಡಿತು. ಇಹಲೋಕವನ್ನು ನೋಡುವ ದೃಷ್ಟಿಕೋನದಲ್ಲಿ ಇರಬಹುದಾದ ಭಿನ್ನತೆಗಳಿಗೆ ಗಾಂಧಿ ಮತ್ತು ಅಂಬೇಡ್ಕರ್ ಒಳ್ಳೆಯ ಉದಾಹರಣೆಗಳು. ಹೀಗೆಯೇ ನಮ್ಮ ನಡುವೆ ಹಲವು ಬಗೆಯ ನಂಬಿಕೆಗಳಿವೆ. ಅವುಗಳನ್ನು ಮೂಢನಂಬಿಕೆಗಳೆಂದು ಕರೆಯುವವರ ದೃಷ್ಟಿಕೋನ ಬೇರೆಯಾಗಿದ್ದರೆ, ಅವುಗಳನ್ನು ನಂಬುವವರದು ಇನ್ನೊಂದು ರೀತಿ. ನಂಬಿಕೆಗಳನ್ನು ನಿಜವೋ ಸುಳ್ಳೋ ಎಂದು ಹೇಗೆ ತಿಳಿಯಬಹುದು ಎಂಬವರದು ಇನ್ನೊಂದು ನೋಟ. ಇದರ ಅರ್ಥ ಇಷ್ಟೆ- ಲೋಕದೃಷ್ಟಿ ಎಂಬುದು ಜೀವನದ ಒಂದು ನಿರ್ದಿಷ್ಟ ತತ್ವ ಶಾಸ್ತ್ರಕ್ಕೆ ಅನುಗುಣವಾಗಿ ರೂಪುಗೊಳ್ಳುತ್ತದೆ ಮತ್ತು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಬೆಳೆಯುತ್ತಲೇ ಇರುತ್ತವೆ.

ವಿಭಿನ್ನ ಲೋಕದೃಷ್ಟಿಗಳು ಮಾನವ ಅನುಭವದ ವಿವಿಧ ಅಂಶಗಳಿಗೆ ಆದ್ಯತೆ ನೀಡುತ್ತವೆ. ಮಾನವತಾವಾದಿಗಳು ಮಾನವನ ಅಸ್ತಿತ್ವದ ದೊಡ್ಡ ಪ್ರಶ್ನೆಗಳನ್ನು ಸ್ವತಃ ಪರಿಹರಿಸುವ ವ್ಯಕ್ತಿಗಳಿಗೆ ಆದ್ಯತೆ ನೀಡುತ್ತಾರೆ. ಮಾನವ ಮತ್ತು ಇತರ ನೈಸರ್ಗಿಕ ಮೌಲ್ಯಗಳನ್ನು ಆಧರಿಸಿದ ನೈತಿಕತೆಯ ಮೂಲಕ ಹೆಚ್ಚು ಮಾನವೀಯ ಸಮಾಜವನ್ನು ನಿರ್ಮಿಸಲು ಈ ಚಿಂತಕರು ಹೋರಾಡುತ್ತಾರೆ. ಮಾನವನ ಸಾಮರ್ಥ್ಯಗಳ ಬಗ್ಗೆ ಇವರಿಗೆ ವಿಶೇಷ ನಂಬಿಕೆ ಇರುತ್ತದೆ. ಅಲೌಕಿಕವಾದ ಯಾವುದೇ ದೃಷ್ಟಿಕೋನಗಳನ್ನು ಇವರು ಸ್ವೀಕರಿಸುವುದಿಲ್ಲ. ಹಾಗಾಗಿ ಮಾನವತಾವಾದಿಗಳ ಲೋಕದೃಷ್ಟಿಯು ಮಾನವ ಕೇಂದ್ರಿತವಾಗಿದ್ದು ಸಮಾಜದ ಪರವಾಗಿರುತ್ತದೆ. ನೈಸರ್ಗಿಕವಾದ ಲೋಕದೃಷ್ಟಿಯುಳ್ಳ ಜನರೂ ನಮ್ಮ ನಡುವೆ ಇದ್ದಾರೆ. ಅವರು ಪ್ರಪಂಚವನ್ನು ನೈಸರ್ಗಿಕ ವಿಧಾನಗಳ ಮೂಲಕವೇ ಸಂಪೂರ್ಣವಾಗಿ ವಿವರಿಸಬಹುದು ಎಂದು ನಂಬುತ್ತಾರೆ. ಅಲೌಕಿಕ ಅಥವಾ ದೈವಿಕತೆಯ ಯಾವುದೇ ಹಕ್ಕುಗಳ ವಿಷಯಕ್ಕೆ ಬಂದರೆ, ನೈಸರ್ಗಿಕವಾದಿಗಳು ಸಾಮಾನ್ಯವಾಗಿ ಅಜ್ಞೇಯತಾವಾದದ ಅಥವಾ ಸಂಪೂರ್ಣ ಸಂದೇಹವಾದದ ನಿಲುವನ್ನು ತೆಗೆದುಕೊಳ್ಳುತ್ತಾರೆ. ನಮ್ಮ ಆಲೋಚನಾಶಕ್ತಿಯು ಇಂದ್ರಿಯಾನುಭವಕ್ಕಿಂತ ಮುಂದೆ ಹೋಗಲಾರದು, ಆಧ್ಯಾತ್ಮಿಕ ವಿಷಯಗಳನ್ನು, ಅದರಲ್ಲೂ ದೇವರ ಅಸ್ತಿತ್ವ ವಿಚಾರವನ್ನು ಸಕಾರಣವಾಗಿ ಸಿದ್ಧಿಸುವುದಕ್ಕಾಗುವುದಿಲ್ಲ ಎಂಬುದು ಇವರ ನಂಬಿಕೆ. ಆಧುನಿಕೋತ್ತರವಾದ ಎಂಬುದು ಮೂಲತ: ಒಂದು ಬೌದ್ಧ್ದಿಕ ನಿಲುವು. ಈ ನಿಲುವು 20ನೇ ಶತಮಾನದ ಮಧ್ಯಭಾಗದಲ್ಲಿ ಹುಟ್ಟಿ, ಆಧುನಿಕತೆಯ ನಿರೂಪಣೆಗಳನ್ನು ಪ್ರಶ್ನಿಸಿ, ತಿರಸ್ಕರಿಸುತ್ತದೆ. ಜ್ಞಾನದ ನಿಶ್ಚಿತತೆ ಮತ್ತು ಸ್ಥಿರ ಅರ್ಥವನ್ನು ಆಧುನಿಕೋತ್ತರವಾದಿಗಳು ಒಪ್ಪಿಕೊಳ್ಳುವುದಿಲ್ಲ. ಇವರು ಎಲ್ಲಾ ಗುಂಪುಗಳು, ಸಂಸ್ಕೃತಿಗಳು, ಸಂಪ್ರದಾಯಗಳು, ಅಥವಾ ಜನಾಂಗಗಳಿಗೆ ಮಾಡಿದ ಆಧುನಿಕ ವ್ಯಾಖ್ಯಾನಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ. ಅದರ ಬದಲಿಗೆ ಪ್ರತಿ ವ್ಯಕ್ತಿಯ ಸಾಪೇಕ್ಷ ಸತ್ಯಗಳ ಮೇಲೆ ತಮ್ಮ ವಾದಗಳನ್ನು ಕೇಂದ್ರೀಕರಿಸುತ್ತಾರೆ. ಇವತ್ತು ನಾವು ಬಹುವಾಗಿ ಬಳಸುವ ವಸ್ತುನಿಷ್ಠತೆ, ವಾಸ್ತವತೆ , ನೈತಿಕತೆ , ಸತ್ಯ , ಸ್ವಭಾವ , ಕಾರಣ , ಭಾಷೆ ಮತ್ತಿತರವುಗಳನ್ನು ಆಧುನಿಕೋತ್ತರವಾದಿಗಳು ಟೀಕಿಸುತ್ತಾರೆ. ಪ್ರಪಂಚದ ದೃಷ್ಟಿಕೋನಗಳ ಪರಿಕಲ್ಪನೆಯನ್ನು ಸಂಪೂರ್ಣವಾಗಿ ವ್ಯಕ್ತಿನಿಷ್ಠವೆಂದು ಅವರು ಹೇಳುತ್ತಾರೆ. ಈ ವಾದವು ಲೋಕವನ್ನು ನಾವು ನೋಡುವ ದೃಷ್ಟಿಕೋನವನ್ನು ಆಮೂಲಾಗ್ರವಾಗಿ ಬದಲಾಯಿಸಿತು.

ಧಾರ್ಮಿಕ ಲೋಕದೃಷ್ಟಿಯ ಬಗ್ಗೆ ನಾನು ಇಲ್ಲಿ ಹೆಚ್ಚಿಗೆ ಹೇಳಬೇಕಾಗಿಲ್ಲ. ಧರ್ಮಗ್ರಂಥಗಳನ್ನೇ ಅಂತಿಮವೆಂದು ಭಾವಿಸುವವರು ತಮ್ಮ ಪವಿತ್ರ ಗ್ರಂಥಗಳಲ್ಲಿ ಪ್ರತಿಪಾದಿಸಿರುವ ಮೌಲ್ಯಗಳು ಮತ್ತು ಸಿದ್ಧಾಂತಗಳನ್ನು ಆಧರಿಸಿ ತಮ್ಮ ಲೋಕದೃಷ್ಟಿಯನ್ನು ಬೆಳೆಸಿಕೊಳ್ಳುತ್ತಾರೆ. ಉದಾಹರಣೆಗೆ, ಯಾರಾದರೂ ಕ್ರಿಶ್ಚಿಯನ್ ಲೋಕದೃಷ್ಟಿಯನ್ನು ಅಭ್ಯಸಿಸಲು ಆರಂಭಿಸಿದರೆ, ಅವರು ಯೇಸುಕ್ರಿಸ್ತನ ಬೋಧನೆಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಹಾಗೆಯೇ ಇಸ್ಲಾಮ್ ಧರ್ಮಾನುಯಾಯಿಗಳು ಕುರ್‌ಆನ್‌ನ್ನು ಆಧರಿಸಿ ತಮ್ಮ ಲೋಕ ದೃಷ್ಟಿಯನ್ನು ರೂಪಿಸಿಕೊಂಡಿದ್ದಾರೆ. ಭಾರತೀಯರಿಗೆ ಅಂಥ ಏಕರೂಪೀ ಲೋಕ ದೃಷ್ಟಿಯಿಲ್ಲ. ಅವು ಬಹುರೂಪಿಯಾಗಿರುತ್ತವೆ. ಆದರೆ ಈಚಿನ ದಿನಗಳಲ್ಲಿ ಸನಾತನ ಧರ್ಮ ಮಾತ್ರ ಶ್ರೇಷ್ಠ ಎಂದು ವಾದಿಸುವ ಸನಾತನಿಗಳು ಇತರರ ಲೋಕ ದೃಷ್ಟಿಯನ್ನು ಒಪ್ಪುವುದಿಲ್ಲ. ಇದು ಅನೇಕ ಗೊಂದಲಗಳಿಗೆ ಕಾರಣವಾಗಿದೆ ಮಾತ್ರವಲ್ಲ ಭಾರತ ದೇಶವನ್ನು ಅಪಾಯದತ್ತ ಕೊಂಡೊಯ್ಯುತ್ತದೆ.


 



ಭಾರತದಲ್ಲಿ ಲೋಕ ಕಲ್ಪನೆಯು, ಜಾತಿಯಿಂದ ಜಾತಿಗೆ, ಸಮುದಾಯದಿಂದ ಸಮುದಾಯಕ್ಕೆ , ಸಂಸ್ಕೃತಿಯಿಂದ ಸಂಸ್ಕೃತಿಗೆ ಭಿನ್ನ ಸ್ವರೂಪವನ್ನು ಹೊಂದುತ್ತದೆ. ಆಯಾ ಸಂಸ್ಕೃತಿಯ ಒಳಗಿನವರಿಗೆ ಅವರ ದೃಷ್ಟಿಕೋನಗಳು ಪರಮ ಸತ್ಯವೆಂದೇ ತೋರುತ್ತದೆ. ಹೀಗೆಂದಾಗ ಸರ್ವಸಾಮಾನ್ಯವಾದ ಒಂದೇ ಲೋಕದೃಷ್ಟಿ ಇರುವುದು ಸಾಧ್ಯವೇ ಇಲ್ಲವೆಂದು ಭಾವಿಸಬೇಕಾಗಿಲ್ಲ. ಭೌಗೋಳಿಕ ಪರಿಸರದಿಂದ ಪ್ರೇರಿತವಾದ ಭಿನ್ನ ಜನ ವರ್ಗದಲ್ಲಿ ಒಂದೇ ದೃಷ್ಟಿಕೋನ ಕಂಡು ಬರುವ ಸಾಧ್ಯತೆಯೂ ಇಲ್ಲದಿಲ್ಲ. ಇಷ್ಟಿದ್ದರೂ ಒಂದು ಮಾತಂತೂ ನಿಜ, ಜನರ ಲೋಕದೃಷ್ಟಿಯ ಅಂತಿಮ ಸ್ವರೂಪ ಒಂದೇ ಆಗಿದ್ದರೂ, ಅದು ಆಯಾ ಸಂಸ್ಕೃತಿಯ ಬಿಡಿ ಘಟಕಗಳಲ್ಲಿ ಪ್ರಕಟವಾದಾಗ ತನ್ನದೇ ಆದ ಪ್ರಾದೇಶಿಕ, ಸಾಮುದಾಯಿಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇದರಿಂದಾಗಿ ಜನರ ಲೋಕದೃಷ್ಟಿಯ ಬಗೆಗೆ ನಾವು ನಡೆಸುವ ಚರ್ಚೆಗಳು ಅಂತಿಮವಾಗಿ ಆಯಾ ಸಂಸ್ಕೃತಿಯ ವಿಮರ್ಶೆಯೇ ಆಗಿ ಪರಿಣಮಿಸುತ್ತದೆ. ಈ ಥರದ ಲೋಕ ವಿಮರ್ಶೆ ಅತ್ಯಂತ ಕುತೂಹಲಕಾರಿಯೂ, ಚೇತೋಹಾರಿಯೂ ಆಗಿರುತ್ತದೆ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ.

ಈ ಸಂದರ್ಭದಲ್ಲಿ ಎರಡು ಉದಾಹರಣೆಗಳನ್ನು ಗಮನಿಸಿಕೊಂಡು ಅವುಗಳಲ್ಲಿ ಲೋಕದೃಷ್ಟಿ ಪ್ರಕಟವಾಗುವ ಬಗೆಯನ್ನು ಗಮನಿಸೋಣ.

ಜಪಾನಿಯರ ಆರಂಭಿಕ ಕೃತಿಗಳಲ್ಲಿ ಕೊಜಿಕಿ ( ಓಟ್ಜಜಿಜಿ) ಕೂಡಾ ಒಂದು. ಇದರ ಕಾಲ ಕ್ರಿಸ್ತಶಕ 712 ಎಂದು ಹೇಳಲಾಗಿದೆ. ಕೊಜಿಕಿ ಎಂದರೆ ಜಪಾನಿ ಭಾಷೆಯಲ್ಲಿ ‘ಹಳೆಯ ಸಂಗತಿಗಳ ದಾಖಲೆ’ ಎಂದು ಅರ್ಥ. ಕೊಜಿಕಿಯು ಆಧುನಿಕರಿಗೆ ಒಂದು ಸೃಷ್ಟಿ ಪುರಾಣದ ಹಾಗೆ ಕಾಣುತ್ತದೆ. ಆದರೆ, ಜಪಾನಿಯರಿಗೆ ಅದು ಇತಿಹಾಸ. ಕ್ರಿಸ್ತಶಕ 712ರಷ್ಟು ಹಿಂದೆಯೇ ಸುಮಾರೋ ಎಂಬವನು ತನ್ನ ಅರಸನ ಆಣತಿಯ ಮೇರೆಗೆ ಮೌಖಿಕ ರೂಪದಲ್ಲಿದ್ದ ಈ ದಾಖಲೆಗಳನ್ನು ಸಂಗ್ರಹಿಸಿ ರಕ್ಷಿಸಿದ ಎಂದು ಹೇಳಲಾಗಿದೆ. ಇಂದು ಶಿಂತೋ ಮತವನ್ನು ಅನುಸರಿಸುವವರಿಗೆ ಕೊಜಿಕಿಯೇ ಮೂಲ ಮತ್ತು ಪವಿತ್ರ ಗ್ರಂಥ. ಜಪಾನಿ ಅರಸರು ತಾವು ಕೊಜಿಕಿಯಲ್ಲಿ ಹೇಳಿದ ಮೂಲ ಪುರುಷರ ವಂಶಸ್ಥರು ಎಂದು ಭಾವಿಸುತ್ತಾರೆ. ಇತ್ತೀಚಿನವರೆಗೆ ಕೊಜಿಕಿಯ ಬಗೆಗೆ ಜಪಾನಿಯರ ಹೊರತಾಗಿ ಬೇರೆಯವರಿಗೆ ತಿಳಿದಿರಲಿಲ್ಲ. 1882ರಲ್ಲಿ ಬ್ರಿಟಿಷ್ ವಿದ್ವಾಂಸ ಬೇಸಿಲ್ ಹಾಲ್ಚೇಂಬರ್ಲಿನ್ ಎಂಬವನು ಕೊಜಿಕಿಯನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದ ನಂತರ ವಿಶ್ವಕ್ಕೆ ಈ ಕಾವ್ಯದ ಪರಿಚಯವಾಯಿತು. ಈ ಕೃತಿಯನ್ನು ಜಪಾನಿಯರು ಐತಿಹಾಸಿಕ ಕೃತಿಯೆಂದೂ ಪೌರಾಣಿಕ ಕೃತಿಯೆಂದೂ ನಂಬುತ್ತಾರೆ. ಇವತ್ತು ಜಪಾನಿನುದ್ದಕ್ಕೂ ಕಾಣ ಸಿಗುವ ಅನೇಕ ಪುರಾಣಗಳ ಮತ್ತು ಆಚರಣೆಗಳ ಮೂಲ ಕೊಜಿಕಿಯೇ ಆಗಿದೆ. ಕಮಿಯೋ ( ದೇವರ ಯುಗ) ಎಂದು ಕರೆಯಲಾಗುವ ಕಾಲಘಟ್ಟದಲ್ಲಿ ಕೊಜಿಕಿಯೂ ಆರಂಭವಾಗುತ್ತದೆ. ಈ ಅರ್ಥದಲ್ಲಿ ಇದೊಂದು ಸೃಷ್ಟಿಪುರಾಣವೂ ಹೌದು. ಕೊಜಿಕಿಯ ಪ್ರಕಾರ ಜಪಾನಿಯರು ಇಜಾನಾಗಿ ಮತ್ತು ಇಜಾನಾಮಿ ಎಂಬ ದಂಪತಿಯಿಂದ ಹುಟ್ಟಿದವರು. ಅವರೇ ಜಪಾನಿನ ಸುಂದರವಾದ ದ್ವೀಪಗಳನ್ನೂ ಸೃಷ್ಟಿ ಮಾಡಿದರು. ನಿಧಾನವಾಗಿ ಸ್ವರ್ಗ, ಅಲ್ಲಿರುವ ಅಸಂಖ್ಯಾತ ದೇವರುಗಳು ಮತ್ತು ಭೂಮಿಯನ್ನೂ, ಭೂಮಿಯಲ್ಲಿ ಬದುಕುವ ಜನರನ್ನೂ ಸೃಷ್ಟಿಸಿದರು. ಕಾಲಾಂತರದಲ್ಲಿ ಕತಾನಾಯಕನಾದ ಇಜಾನಾಗಿ ಸಾಯುತ್ತಾನೆ. ಅವನ ಮರಣದ ನಂತರ ಏಕಾಂಗಿಯಾದ ಇಜಾನಾಮಿಯನ್ನು ಭೂಮಿಗೆ ಕರೆತರಲು ಜನರು ಒಕುನಿನುಶಿಯ ಎಂಬವನನ್ನು ಯೋಮಿ-ನೋ-ಕುನಿ ( ಪಾತಾಳ) ಕ್ಕೆ ಕಳಿಸುತ್ತಾರೆ. ಆತ ಬಹಳ ಸಾಹಸಿ. ಪಾತಾಳದಲ್ಲಿ ಸುಸಾನೊ ಹೆಸರಿನ ಎಂಟು ತಲೆಯ ಮತ್ತು ಎಂಟು ಬಾಲದ ಸರ್ಪದೊಡನೆ ಹೋರಾಡಿ ಒಕುನಿನುಶಿಯಾ ಗೆಲ್ಲುತ್ತಾನೆ. ಮುಂದೆ ಯಮತಾ-ನೊ-ಒರೊಚಿ ವಿರುದ್ಧವೂ ಶೌರ್ಯದಿಂದ ಹೋರಾಡಿ ಗೆಲ್ಲುತ್ತಾನೆ. ಒಕುನಿನುಶಿಯ ಸಾಹಸಗಳು ಮುಂದೆ ಜಪಾನ್‌ನ ನೆಲವನ್ನು ನಿಜವಾದ ರಾಷ್ಟ್ರವನ್ನಾಗಿ ಪರಿವರ್ತಿಸಲು ಸಹಾಯಮಾಡುತ್ತದೆ. ಒಕುನಿನುಶಿಯು ದೇವತೆಯ ಹಂತಕ್ಕೆ ಏರುತ್ತಾನೆ. ಅವನ ಹೋರಾಟದ ಕಾಲದಲ್ಲಿ ಅಮತೆರಸುವಿನ ಮೊಮ್ಮಗನಾದ ನಿನಿಗಿಯ ಜಪಾನ್ ಅನ್ನು ಆಳಲು ಸ್ವರ್ಗದಿಂದ ಬರುತ್ತಾನೆ. ಸ್ವತಃ ಅಮತೆರಸು ಜಪಾನಿಯರನ್ನು ಕಾಪಾಡಲು ಕಟಿ ಬದ್ಧಳಾಗುತ್ತಾಳೆ. ಈ ಪುರಾಣವು ಭಾರತದ ಮತ್ತು ಗ್ರೀಕ್ ಪುರಾಣಗಳಿಂದ ಬೇರೆಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಎಲ್ಲ ಕಡೆಯೂ ನಡೆಯುವಂತೆ ಮುಂದಿನ ಅರಸರುಗಳು ಇಂಥ ಕತೆಗಳನ್ನು ತಮ್ಮ ಅರಸೊತ್ತಿಗೆ ಮತ್ತು ಅಧಿಕಾರದೊಂದಿಗೆ ಸೇರಿಸಿಕೊಳ್ಳುತ್ತಾರೆ.

ಜಪಾನಿಯರ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗೆಗೆ ತಿಳಿಯಬಯಸುವವರು ಕೊಜಿಕಿಯನ್ನು ಒಂದು ಪ್ರಮುಖ ಆಕರ ಗ್ರಂಥವಾಗಿ ಬಳಸುತ್ತಾರೆ. ಟೋಕಿಯೋದಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿ ಕಾಗುರಾ ಎಂಬ, ಅಷ್ಟೇನೂ ಪ್ರಸಿದ್ಧವಲ್ಲದ ಪ್ರದರ್ಶನವನ್ನು ನಾನು ನೋಡುತ್ತಿದ್ದಾಗ ಅದರಲ್ಲಿನ ಒಂದು ಪಾತ್ರವು ಕೊಜಿಕಿಯಲ್ಲಿ ಪ್ರಸಿದ್ಧವಾಗಿದೆ ಎಂಬ ಮಾತು ಕೇಳಿಬಂತು. ಅಲ್ಲಿವರೆಗೆ ಕೊಜಿಕಿಯ ಬಗೆಗೆ ಅಷ್ಟೇನೂ ಆಸಕ್ತಿಯಿಲ್ಲದ ನನಗೆ, ಇದ್ದಕ್ಕಿದ್ದಂತೆ ಅದರ ಬಗ್ಗೆ ಕುತೂಹಲ ಮೂಡಿತು. ಇದಕ್ಕೆ ಮುಖ್ಯ ಕಾರಣ, ಕಾಗುರಾದಲ್ಲಿದ್ದ ಅಮತೆರಸು ಎಂಬ ಹೆಸರಿನ ಆ ಪಾತ್ರವು ಮೂಲತಃ ಸೂರ್ಯದೇವರಾಗಿದ್ದು, ಹೆಣ್ಣಾಗಿದ್ದುದು. ನಮ್ಮನ್ನೆಲ್ಲ ಬೆಳಗಿನ ಜಾವದಲ್ಲಿ ನಿದ್ರೆಯಿಂದ ಎಬ್ಬಿಸುತ್ತಿದ್ದುದು ತಾಯಿ. ಜಪಾನಿಯರಿಗೆ ಬೆಳಕು ತೋರಿಸುತ್ತಿದ್ದುದು ಅಮತೆರಸು ಎಂಬ ಸೂರ್ಯ ತಾಯಿ. ಈ ಅಂಶವು ಸೂರ್ಯ ಗಂಡೆಂಬ ನಮ್ಮ ತಿಳಿವಳಿಕೆಗೆ ವಿರುದ್ಧವಾಗಿದ್ದು, ಸ್ವಲ್ಪ ಕಾಲ ನನ್ನನ್ನು ಗೊಂದಲಗೊಳಿಸಿತು. ಮುಂದೆ ನಾನು ಜಪಾನಿನ ಹಾಯಚಿನೆ ಪರ್ವತದ ಬುಡಕ್ಕೆ ಹೋದೆ. ಭಾರತೀಯರಿಗೆ ಹಿಮಾಲಯ ಹೇಗೆ ಪವಿತ್ರವೋ ಹಾಗೆ, ಜಪಾನಿಯರಿಗೆ ಹಾಯಚಿನೆ ಪರ್ವತ. ಆ ಪರ್ವತದ ಬುಡದಲ್ಲಿರುವ ತಾಕೆ ಎಂಬ ಪುಟ್ಟ ಹಳ್ಳಿಯಲ್ಲಿ ಇಪ್ಪತ್ತು ಕುಟುಂಬಗಳು ಮಾತ್ರ ವಾಸಿಸುತ್ತಿವೆ. ಅಲ್ಲಿ ತಣ್ಣಗೆ ಜುಳುಜುಳು ಹರಿಯುವ ಪುಟ್ಟ ನದಿಯೊಂದರ ದಡದಲ್ಲಿ ಇಚಿರೊ ಸುಮಾರು 1,500 ವರ್ಷಗಳಷ್ಟು ಹಳೆಯದಾದ ಕೊಜಿಕಿ ಕಥೆಯನ್ನು ಸಂಕ್ಷಿಪ್ತವಾಗಿ ಹೇಳತೊಡಗಿದ. ತುಂಬಾ ಸ್ಥೂಲವಾಗಿ, ಆತ ಹೇಳಿದ ಕೊಜಿಕಿ ಕಥೆಯ ಹಂದರ ಇಂತಿದೆ:

‘‘ಆಗ ಅಲ್ಲಿ ಏನೂ ಇರಲಿಲ್ಲ. ನಿಧಾನವಾಗಿ ಅಲ್ಲಿ ರೂಪ ಮತ್ತು ಶಕ್ತಿ ಕಾಣಿಸಿಕೊಳ್ಳಲಾರಂಭಿಸಿತು. ಅದು ಸ್ವರ್ಗ ಮತ್ತು ಭೂಮಿ ಹುಟ್ಟುತ್ತಲ್ಲಿದ್ದ ಕಾಲ. ಆ ಕಾಲದಲ್ಲಿ ಮೂರು ಪವಿತ್ರ ದೈವಗಳು ಕಾಣಿಸಿಕೊಂಡವು. ಆನಂತರ ಮತ್ತೆರಡು ಹುಟ್ಟಿಕೊಂಡವು. ಈ ದೈವಗಳಲ್ಲಿ ಇಜಾನಾಗಿ ಮತ್ತು ಅವನ ತಂಗಿ ಇಜಾನಾಮಿ ಎಂಬೆರಡು ದೈವಗಳು ದ್ವೀಪವೊಂದಕ್ಕೆ ಇಳಿದು ಬಂದರು. ಅಲ್ಲಿ ಭೂಮಿ ಯಲ್ಲಿ ಊರಿದ ಕಂಬವೊಂದು ಸ್ವರ್ಗ ಮುಟ್ಟುತ್ತಿತ್ತು. ಅಣ್ಣ ಇಜಾನಾಗಿ ಹೇಳಿದ, ‘ಓ ಅತಿ ಗೌರವಾನ್ವಿತ ಮಹಿಳೆಯೇ, ಈ ಕಂಬಕ್ಕೆ ನಾನು ಬಲಗಡೆಯಿಂದ ಸುತ್ತು ಬರುತ್ತೇನೆ, ನೀನು ಎಡಗಡೆಯಿಂದ ಸುತ್ತು ಬಾ. ಹಾಗೆ ಬರುವಾಗ ನಾವು ಮುಖಾಮುಖಿಯಾದರೆ ಮದುವೆ ಮಾಡಿಕೊಳ್ಳೋಣ.’ ಕಂಬಕ್ಕೆ ಕೈ ಹಿಡಿದು ಸುತ್ತು ಬಂದರು, ಮುಖಾಮುಖಿಯಾದರು, ಮದುವೆ ಮಾಡಿಕೊಂಡರು. ದ್ವೀಪದ ನೆಲ ಹಸನು ಮಾಡಿದರು. ಅವರಿಗೆ ಒಂದು ಮಗುವಾಯಿತು. ಹಿರುಕೋ (ಜಿಗಣೆ) ಎಂದು ಹೆಸರಿಟ್ಟರು. ಆದರೆ, ಮೂರು ವರ್ಷಗಳಾದರೂ ಮಗುವಿಗೆ ಎದ್ದು ನಿಲ್ಲಲಾಗಲಿಲ್ಲ. ಆ ಮಗುವನ್ನು ಬೇರೊಂದು ದ್ವೀಪಕ್ಕೆ ದೋಣಿಯಲ್ಲಿ ಕಳುಹಿಸಿಕೊಟ್ಟರು. ಹುಟ್ಟಿದ ಮಗು ಹೆತ್ತವರಿಗೆ ಸಂತಸ ತರಲಿಲ್ಲ.

ಇಜಾನಾಗಿ ಹೇಳಿದ, ‘ಓ ಅತಿ ಗೌರವಾನ್ವಿತ ಮಹಿಳೆಯೇ, ಇನ್ನೊಮ್ಮೆ ಕಂಬ ಸುತ್ತೋಣವೇ?’ ಇಜಾನಾಮಿ ಒಪ್ಪಿದಳು. ಈ ಸಲ ಒಂದು ದೇಹದ, ನಾಲ್ಕು ಮುಖಗಳ ದ್ವೀಪವೊಂದು ಜನಿಸಿತು. ನಾಲ್ಕು ಮುಖಗಳಿಗೆ ನಾಲ್ಕು ಹೆಸರಿಟ್ಟರು. ಈ ದ್ವೀಪದಲ್ಲಿ ತಿನ್ನಬಹುದಾದ ಬಗೆಬಗೆಯ ಆಹಾರ ಧಾನ್ಯಗಳು ಬೆಳೆದವು. ಸಂತಸಗೊಂಡ ಇಜಾನಾಗಿ-ಇಜಾನಾಮಿಯರು ಮತ್ತೆ ಕಂಬ ಸುತ್ತಿದರು. ಈ ಸಲ ಎಂಟು ಮಹಾ ದ್ವೀಪಗಳು ಜನಿಸಿದವು. ಇದಾದ ನಂತರ ಮತ್ತೆ ಹತ್ತು ದೈವಗಳು ಜನಿಸಿದುವು; ನದಿ ದೈವ, ಕಡಲಿನ ದೈವ, ಪರ್ವತ ದೈವ, ಬೆಂಕಿಯ ದೈವ ಇತ್ಯಾದಿ. ಇಷ್ಟೊಂದು ಜೀವಗಳು ಜನಿಸಿದ ಕಾರಣವಾಗಿ, ಇಜಾನಾಮಿಯ ಜನನಾಂಗಕ್ಕೆ ಪೆಟ್ಟಾಯಿತು. ಕಂಬ ಸುತ್ತುವುದನ್ನು ನಿಲ್ಲಿಸಿದರು, ಯೋಚಿಸಿದರು. ಕೊನೆಗೆ, ಮಕ್ಕಳು ಮುಖದಿಂದ ಹೊರಬರಲು ಆರಂಭಿಸಿದರು. ಹಾಗೆ ತಾಯ ಮುಖದಿಂದ ಬಗೆಬಗೆಯ ಮಣ್ಣುಗಳು ಮತ್ತು ಖನಿಜಗಳು ಮೂಡಿಬಂದುವು. ಇಜಾನಾಮಿಯ ಬಾಯಿ ದಣಿಯಿತು. ಈಗ ಆಕೆಯ ಮೂತ್ರದಿಂದಆಹಾರಕ್ಕೆ ಸಂಬಂಧಿಸಿದ ದೈವಗಳು ಜನಿಸಿದುವು. ಮುಂದೆ ಆಕೆಯ ಕಣ್ಣೀರಿನಿಂದ ನಾಲ್ಕು ದೈವಗಳು ಜನಿಸಿದವು. ಹೀಗೆ, ಆಕೆಯ ದೇಹದ ವಿವಿಧ ಅಂಗಗಳಿಂದ ಬೇರೆ ಬೇರೆ ದೈವಗಳು ಜನಿಸಿದವು. ಇಷ್ಟಾಗುವಾಗ ಇಜಾನಾಮಿ ದಣಿದಳು. ಆದರೆ, ಇಜಾನಾಗಿಗೆ ಇನ್ನೂ ಮಕ್ಕಳು ಬೇಕೆನ್ನುವಾಸೆ. ಇಜಾನಾಮಿ ಒಪ್ಪಲಿಲ್ಲ. ಇಜಾನಾಗಿ ಒತ್ತಾಯಿಸಿದಾಗ ಆಕೆಗೆ ಭಯಾನಕ ಸಿಟ್ಟು ಬಂತು. ಕೋಪದಿಂದ ಕಂಬ ಸುತ್ತಿದಳು. ಆಗ ಆಕೆಯ ತಲೆಯಲ್ಲಿ ಸಿಡಿಲು ಮಗ ಕಾಣಿಸಿಕೊಂಡ, ಮೊಲೆಗಳಿಂದ ಮಿಂಚು ಮಗ, ಹೆಗಲುಗಳಿಂದ ಬೆಂಕಿ ಮಗ ಹುಟ್ಟಿಕೊಂಡರು. ಹೀಗೆ, ದೇಹದ ವಿವಿಧ ಭಾಗಗಳಿಂದ ಎಂಟು ಕೋಪಿಷ್ಟ ದೈವಗಳು ಕಾಣಿಸಿಕೊಂಡವು. ಕೋಪಿಷ್ಟ ದೈವಗಳನ್ನು ಕಂಡು ಇಜಾನಾಮಿ-ಇಜಾನಾಗಿ ಬೆದರಿದರು, ಕೋಪ ಕಡಿಮೆ ಮಾಡಿಕೊಂಡರು. ಇಜಾನಾಗಿ ಹೇಳಿದ, ‘ನಾವು ಈಗ ನಮ್ಮ ಕೋಪದಿಂದ ಭೂಮಿಯನ್ನು ಅಪವಿತ್ರಗೊಳಿಸಿದ್ದೇವೆ. ಇದರ ಮೈಲಿಗೆಯನ್ನು ಈಗ ಕಳೆಯಬೇಕಾಗಿದೆ. ನದಿ ದಡದಲ್ಲಿ ಮೈಲಿಗೆ ಕಳೆಯಲು ಕುಳಿತರು. ಈ ಕಾರ್ಯಕ್ಕಾಗಿ ಮತ್ತೆ ಹನ್ನೆರಡು ದೈವಗಳು ಹುಟ್ಟಿಕೊಂಡವು. ಅವು ಎಂಭತ್ತು ಬಗೆಯ ಮೈಲಿಗೆಗಳನ್ನು ಕಳೆದವು.

ಇಜಾನಾಗಿ ಕೊನೆಯದಾಗಿ ಮತ್ತೆ ಮೂರು ಪ್ರತಿಭಾವಂತ ಮಕ್ಕಳಿಗಾಗಿ ಬೇಡಿಕೆಯನ್ನಿತ್ತ. ಆಗ ಇಜಾನಾಗಿಯ ಕೊರಳ ಪದಕದಿಂದ ಆಕಾಶವನ್ನು ಬೆಳಗುವ ಅಮತೆರಸು ಜನಿಸಿ ದಳು. ಉಳಿದಿಬ್ಬರು ಮಕ್ಕಳಲ್ಲಿ ಒಬ್ಬ ರಾತ್ರಿಯನ್ನೂ , ಇನ್ನೊಬ್ಬಳು ಕಡಲನ್ನೂ ಆಳಬೇಕೆಂದು ಇಜಾನಾಗಿ ಹೇಳಿದ. ಇಷ್ಟರಲ್ಲಿ ಸೃಷ್ಟಿ ಕಾರ್ಯ ಮುಗಿದಂತಾಯಿತು. ಇಜಾನಾಮಿ ಹೇಳಿದಳು, ‘ನಾವಿನ್ನು ಕಂಬ ಸುತ್ತಲಾರೆವು, ಬೇರೆಬೇರೆಯಾಗಿ ಬದುಕೋಣ.’ ಇಜಾನಾಗಿ ಒಪ್ಪಿದ.ಆನಂತರ ಇಜಾನಾಮಿ ಮತ್ತು ಇಜಾನಾಗಿ ಬೇರೆ ದ್ವೀಪಕ್ಕೆ ಹೊರಟು ಹೋದರು. ಇದಾದ ನಂತರ ಲೋಕವು, ಅವರಿಬ್ಬರು ಸೃಷ್ಟಿಸಿದ ದೈವಗಳ ಆಣತಿಯಂತೆ ಮುಂದುವರಿಯಿತು.

ಹಲವು ದ್ವೀಪಗಳ ಮತ್ತು ದೈವಗಳ ಸೃಷ್ಟಿಗೆ ಕಾರಣರಾದ ಇಜಾನಾಮಿ-ಇಜಾನಾಗಿಯರನ್ನು ಮೋಡಗಳು ಸುತ್ತುಕಟ್ಟಿ ಕಾಪಾಡಿವೆ. ಈಗಲೂ ಮೋಡಗಳೆಡೆಯಿಂದ ಅವರು ನಮ್ಮತ್ತ ಇಣುಕಿ ನೋಡುತ್ತಿರುತ್ತಾರೆ. ಹೀಗೆ ಕೊಜಿಕಿ ಕಥೆ ಒಂದು ಸೃಷ್ಟಿ ಪುರಾಣವಾಗಿ ಜನಪ್ರಿಯವಾಗಿದೆ. ಕತೆಗಾರ ಇಚಿರೋನ ಪ್ರಕಾರ, ಇಜಾನಾಗಿ-ಇಜಾನಾಮಿಯರು ಜಿಗಣೆ ದಂಪತಿ. ನಾವೆಲ್ಲ ಅವರಿಂದ ಜನಿಸಿದ್ದೇವೆ. ಜಿಗಣೆಗಳೊಡನೆ ಹುಟ್ಟಿ ಬೆಳೆದ ನಮಗೆ ಈ ಕಥೆ ಅಪ್ತವಾಗದೆ ಇರಲು ಸಾಧ್ಯವಿಲ್ಲ.

ಕೊಜಿಕಿಯು ಲೋಕಸೃಷ್ಟಿಯನ್ನು ಹೇಳಿದ ಬಗೆಯಲ್ಲಿ ಇತಿಹಾಸ ಎಷ್ಟು? ಪುರಾಣ ಎಷ್ಟು ಎಂದು ಕೇಳಿದರೆ ನಮಗೆ ಕಾವ್ಯ ಅರ್ಥವಾಗುವುದು ಕಷ್ಟ. ಇಂಥದ್ದೇ ಹಲವು ಕತೆಗಳಿಗೆ ಕಿವಿಗೊಡಲು ಕರಾವಳಿ ಕರ್ನಾಟಕಕ್ಕೆ ಹೋಗಬೇಕು. ಅಲ್ಲಿ ಅನೇಕ ಭೂತಗಳಿವೆ. ಒಂದು ಅಂದಾಜಿನ ಪ್ರಕಾರ ಅವುಗಳ ಸಂಖ್ಯೆ ಸುಮಾರು 1,000 ಕ್ಕೂ ಹೆಚ್ಚು. ನಂಬಿದವರಿಗೆ ಅವು ಕಣ್ಣಿಗೆ ಕಾಣುವ ದೈವಗಳು. ಈ ದೈವಗಳ ಕಥನಗಳನ್ನು ಪಾಡ್ದನಗಳೆಂದು ಕರೆಯುತ್ತಾರೆ. ಪಾಡ್ದನಗಳ ನಾಯಕರೆಲ್ಲ ಏನೋ ಸಾಧನೆ ಮಾಡಿ ಕೊನೆಗೆ ಒಂದಲ್ಲ ಒಂದು ರೀತಿಯಲ್ಲಿ ಸಾವನ್ನಪ್ಪುತ್ತಾರೆ. ಕತಾ ನಾಯಕರ ಅಕಾಲಿಕ ಅಥವಾ ಆಕಸ್ಮಿಕ ಸಾವು ಜನಮನದ ಮೇಲೆ ಆಳವಾದ ಪರಿಣಾಮ ಉಂಟುಮಾಡುತ್ತದೆ. ಪ್ರತಿ ವರ್ಷ ನಡೆಯುವ ನಿರ್ದಿಷ್ಟ ಭೂತವೊಂದರ ಆರಾಧನೆಯ ಸಂದರ್ಭದಲ್ಲಿ ನಾಯಕರ ಸಾವಿನ ಘಟನೆ ಪುನರಾವರ್ತನೆಗೊಳ್ಳುತ್ತದೆ. ಈ ಅರ್ಥದಲ್ಲಿ ಹೆಚ್ಚಿನ ಪಾಡ್ದನಗಳು ಸಾವಿನ ಹಾಡುಗಳಾಗಿವೆ. ಈ ಬಗೆಯ ಹಾಡುಗಳಲ್ಲಿ ಭೂಮಿಯ ಹುಟ್ಟಿನ ಮತ್ತು ಜನ ಸಮುದಾಯದ ಹುಟ್ಟಿನ ಬಗೆಗೂ ವಿವರ ಸಿಗುತ್ತವೆ. ಗುಳಿಗ ಎಂಬ ದೈವವು ತಾಯಿಯ ಮೊಲೆಯನ್ನು ( ಕೆಲವು ಪಾಠಗಳ ಪ್ರಕಾರ ಹೊಟ್ಟೆಯನ್ನು) ಒಡೆದು ಹೊರಬರುತ್ತದೆ. ಕರ್ನಾಟಕದ ಇತರೆಡೆಗಳಲ್ಲೂ ಇಂಥ ಕಥೆಗಳು ಹೇರಳವಾಗಿ ಸಿಗುತ್ತವೆ. ಶ್ರೀ ಎನ್.ಪಿ. ಶಂಕರನಾರಾಯಣ ರಾವ್ ಅವರು ಅಂಥದ್ದೊಂದು ಸುಂದರ ಕಾವ್ಯವನ್ನು ಬಹಳ ಹಿಂದೆಯೇ ಸಂಗ್ರಹಿಸಿಕೊಟ್ಟಿದ್ದಾರೆ. ಕೊಡಗಿನ ‘ಫಣಿ ಎರವ’ ಎಂಬ ಹೆಸರಿನ ಬುಡಕಟ್ಟಿನ ಜನರು ಸಾವಿಗೆ ಸಂಬಂಧಿಸಿದ ಆಚರಣೆಗಳಲ್ಲಿ ‘ಚತ್ತವಂಡಪಾಟ್’ ಹಾಡುತ್ತಾರೆ-

‘ಬಾ, ಬಾ, ಬಲನಾಡಿಗೆ ಬಾ, ಮೊದಲಲ್ಲಿ ಆಕಾಶ ಗಂಡಾಗಿ, ಭೂಮಿ ಹೆಣ್ಣಾಗಿ ಅಂಟಿಕೊಂಡು ಬಿದ್ದಿದೆ. ಇದನ್ನು ನೋಡಿ ನೂರ ನಾಲ್ಕು ದೆಯ್ಯಗಳು, ಬೈನಾಡಪ್ಪ ಏನು ಮಾಡುವುದೆಂದು ಯೋಚಿಸಿದರು. ಚಿನ್ನದ ಹಾರೆ, ಗುದ್ದಲಿ ಮಾಡಿಕೊಂಡರು. ಗುಂಪುಗೂಡಿದರು. ಹಾರೆ, ಗುದ್ದಲಿಗಳಿಂದ ಜೋರಾಗಿ ಹೊಡೆದು ಭೂಮಿ ಆಕಾಶಗಳನ್ನು ಬೇರ್ಪಡಿಸಿದರು. ಆಕಾಶ ಅರ್ಧಗಾವುದ ಮೇಲೇರಿ ನಿಂತಿತು. ಭೂಮಿ ನಿಂತಲ್ಲೇ ನಿಂತಿತು. ಎರಡನೇ ಬಾರಿ ಗುದ್ದಿದಾಗ ಆಕಾಶ ಮತ್ತಷ್ಟು ಮೇಲೆ ಹಾರಿ ಹೋಯಿತು. ಭೂಮಿ ಅದುರ ತೊಡಗಿತು. ಆಕಾಶಕ್ಕೆ ಹಾರಿ ಹೋಗದೆ ಇರಲು, ಭೂಮಿಗೆ ಅದುರದೇ ಇರಲು ಈಗ ಅಪ್ಪಣೆ ಮಾಡಬೇಕು, ಕೆಲವು ಕಲ್ಲುಗಳನ್ನು ನೋಡಿದರು, ಅವು ಹುಳುಕು, ಒಡಕು, ಉಮ್ಮರ ಮಿಚ್ಚ ಎಂಬಲ್ಲಿ ಹಾಸುಗಲ್ಲು ಕಂಡರು. ಅದು ಎಲ್ಲರಿಗೂ ಒಪ್ಪಿಗೆಯಾಯಿತು. ಅಲ್ಲಿಗೆ ನೂರೊಂದು ಕಲ್ಲು ಕುಟಿಗರನ್ನು ಕೂಡಿಸಿದರು, ಹೂವು, ಹಣ್ಣು, ವೀಳ್ಯದೆಲೆ, ಕಾಯಿ, ಅಕ್ಕಿ ಇಟ್ಟು ಪೂಜಿಸಿ ದೀಪ ಬೆಳಗಿಸಿದರು. ಅಯಿಶೇ, ತೋಯಿಶೆ ನೀಡಿದರು. ಸುರಂಗಿ ಹೊಡೆದು ಮದ್ದು ಇಟ್ಟು ಕಲ್ಲು ಸಿಡಿಸಿದರು. ಆಗ ಭೂಮಿ ಆಕಾಶಗಳು ತತ್ತರಿಸುವಂತೆ ಕಲ್ಲುಗಳು ಒಡೆದುಕೊಂಡವು. ಆಕಾಶಕ್ಕೆ ಆರು ಶಾಸನ, ಭೂಮಿಗೆ ಮೂರು ಶಾಸನ ಹೀಗೆ ಒಟ್ಟು ಒಂಭತ್ತು ಶಾಸನ ಕೆತ್ತುವ ಕಾರ್ಯ ಕೈಗೊಂಡರು. ಆಗಲೂ ಪೂಜೆ ಸಲ್ಲಿಸಿ ಹಾರಿ ಹೋಗಬೇಡವೆಂದು ಆಕಾಶಕ್ಕೂ, ಅದುರ ಬೇಡವೆಂದು ಭೂಮಿಗೂ ಅಪ್ಪಣೆ ಮಾಡಿದ ಶಾಸನ ಕೆತ್ತಿದರು. ಆದರೆ ಆಕಾಶ ಹಾರಿಹೋಗುವುದು ನಿಲ್ಲಲಿಲ್ಲ. ಭೂಮಿ ಅದುರುವುದು ನಿಲ್ಲಲಿಲ್ಲ. ಎಲ್ಲರಿಗೂ ಚಿಂತೆಯಾಯಿತು.

ಆಗ ನೂರನಾಲ್ಕು ದೆಯ್ಯಗಳು, ಬೈನಾಡಪ್ಪ ಯೋಚಿಸಿದರು. ಕೋಟೆಯಲ್ಲಿರುವ ಚಾತ್ತಾಂಗೋಟ್ಟು ಮುತ್ತಿಯಲ್ಲಿಗೆ ಹೋದರು. ಅವರು ಅಲ್ಲಿಗೆ ಹೋದಾಗ ಚಾತ್ತಾಂಗೋಟ್ಟು ಮುತ್ತಿ ಮೂರು ಕಡ್ಡಿಗಳನ್ನು ಆನಿಸಿ ನಿಲ್ಲಿಸಿ ಮೂರು ಮೊಟ್ಟೆಗಳನ್ನಿರಿಸಿದ್ದಳು. ಅವಳ ತಲೆ ಅಡಕೆ ಕಾಯಿನಂತಾಗಿ, ಕೈಕಾಲು ಏಡಿಯ ಕೈಕಾಲುಗಳಂತೆ ಸೊಟ್ಟ ಸೊಟ್ಟಾಗಿ ಹೋಗಿ, ಕುಂದಿ ಕೃಶಳಾಗಿ ಬಿದ್ದಿದ್ದಳು. ಅವರು ಅವಳನ್ನು ಆಕಾಶ ಹಾರುವುದನ್ನು ಭೂಮಿ ಅದುರುವುದನ್ನು ನಿಲ್ಲಿಸಬೇಕು ಎಂದು ಕೇಳಿಕೊಂಡರು. ಅವಳು ತನ್ನ ಸ್ಥಿತಿ ಹೇಳಿಕೊಂಡು ನಾನೇ ಹೀಗಿರುವಾಗ, ನಾನು ಹೇಗೆ ಅಷ್ಟು ಬಲವಾದ ಆಕಾಶ ಭೂಮಿಗಳನ್ನು ಹಿಡಿತಕ್ಕೆ ತರಲಿ ಎಂದು ನಿಟ್ಟುಸಿರು ಬಿಟ್ಟಳು.

ಈ ಮಾತು ಕೇಳಿ ನೂರನಾಲ್ಕು ದೆಯ್ಯಗಳು, ಬೈನಾಡಪ್ಪ ಒಂದು ಕತ್ತಿ ತೆಗೆದುಕೊಂಡರು. ಅಲ್ಲಿದ್ದ ಮೂರು ಮೊಟ್ಟೆಗಳಲ್ಲಿ ಒಂದನ್ನು ಒಡೆದರು. ಕೂಡಲೇ ಹುಲ್ಲಗಾವಲುಗಳು, ಗಿಡಮರಗಳು ಎಲ್ಲ ಕಾಣಿಸತೊಡಗಿದವು. ಎರಡನೆಯ ಮೊಟ್ಟೆ ಒಡೆದಾಗ ನಾಲ್ಕು ಜಾತಿ, ನಲವತ್ತೆಂಟು ಕುಲ, ತೆವಳುವ ಹಾವು, ಹಾರುವ ಹಕ್ಕಿ ಎಲ್ಲ ತೋರಿಬಂದವು. ಕೊನೆಯ ಮೊಟ್ಟೆ ಒಡೆದಾಗ ಚಾತ್ತಾಂಗೋಟ್ಟು ಮುತ್ತಿಯು ಉದಯ ಸೂರ್ಯನಂತೆ ಮೇಲೆದ್ದು ಹಾರುತ್ತಾ ಚಾತ್ತಾಂಗೋಟ್ಟು ಶಿಖರದಲ್ಲಿ ಕುಳಿತು ನಾಲ್ಕು ದಿಕ್ಕಿಗೂ ನಾಲ್ಕು ಬಾರಿ ಕುಟುಕಿ, ನಾಲ್ಕು ಸುತ್ತು ಕುಣಿದು ಬಂದಳು. ತಕ್ಷಣ ಆಕಾಶದ ಹಾರಾಟ ನಿಂತಿತು. ಭೂಮಿಯು ಅದುರುವುದು ಕೊನೆಯಾಯಿತು.. ಆನಂತರ ಭೂಮಿಗೆ ಒಂದು ಮೊಲೆ ಒಂದು ಕಣ್ಣು ಇರಿಸಿದರು. ಹಾರಾಟ, ಅದುರಾಟ ನಿಂತೇ ಹೋಯಿತು?. ಅದ್ಭುತ ಕತೆಯಿದು!


 



ತುಳು ಭಾಷೆಯಲ್ಲಿ ದೊರೆಯುವ ಕೋಟಿ-ಚೆನ್ನಯ ಪಾಡ್ದನದಲ್ಲಿಯೂ ಹಕ್ಕಿಗಳೆರಡು ಮೊಟ್ಟೆಗಳನ್ನು ರೆಕ್ಕೆಯಮೇಲಿರಿಸಿ ಸಾಗಿಸುವ ಸುಂದರ ವಿವರ ಸಿಗುತ್ತದೆ. ಹಕ್ಕಿ, ಆಕಾಶ ಮತ್ತು ಭೂಮಿ ಜನಪದರ ಕುತೂಹಲವನ್ನು ಮತ್ತೆ ಮತ್ತೆ ಕೆಣಕುತ್ತಾ ಬಂದಿದೆ. ಪ್ರಾಣದ ಹಕ್ಕಿ , ಆಕಾಶದ ಬದಲಾಗುವ ಬಣ್ಣ, ಸೂರ್ಯ-ಚಂದ್ರರು ಮತ್ತು ಅದರ ನಿರಂತರತೆ ಜನರ ಬದುಕು ಮತ್ತು ಚಿಂತನೆಯ ಮೇಲೆ ಗಾಢ ಪರಿಣಾಮ ಬೀರಿವೆ.

ಭೂಮಿಯಾದರೂ ಅಷ್ಟೆ. ಅದು ಅನೇಕ ಬಗೆಯ ಪುರಾಣಗಳ, ವಿಧಿಯಾಚರಣೆಗಳ ಮತ್ತು ಕಲಾಕೃತಿಗಳ ಸೃಷ್ಟಿಗೆ ಕಾರಣವಾಗಿದೆ. ‘ಭೂಮಿ’ ಎಂಬ ಹೆಣ್ಣು ಮುಟ್ಟಾದಳೆಂದು ಭಾವಿಸಿಕೊಂಡು ಆಕೆಗೆ ತಿಂಡಿ ಕೊಟ್ಟು, ಎಣ್ಣೆ ಕೊಟ್ಟು ಸ್ನಾನ ಮಾಡಿಸಿ, ಮೂರು ದಿನ ‘ಮೈಲಿಗೆ’ ಆಚರಿಸುವ ಸಂಪ್ರದಾಯವು ಕರಾವಳಿ ಕರ್ನಾಟಕದಲ್ಲಿ ‘ಕೆಡ್ಡಸ’ ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಕೊಂತಿಪೂಜೆ, ಗೌರಿಪೂಜೆ, ಬಲೀಂದ್ರಪೂಜೆ ಮೊದಲಾದವು ಮೂಲತಃ ಕೃಷಿ ಭೂಮಿಯ ಆರಾಧನಾ ಕ್ರಮಗಳೇ ಆಗಿವೆ. ಸತ್ತ ಆನಂತರ ಭೌತಿಕ ದೇಹವನ್ನು ತನ್ನೊಳಗೆ ಸೆಳೆದುಕೊಳ್ಳುವ ಭೂಮಿಯ ಬಗೆಗೆ ಆಳದಲ್ಲಿ ಒಂದು ಬಗೆಯ ಭಯವೂ ಈ ಬಗೆಯ ಕತೆಗಳಲ್ಲಿ ಸೇರಿಕೊಂಡಂತಿದೆ. ನಮ್ಮ ಅನೇಕ ಜನಪದ ಮಹಾಕಾವ್ಯಗಳಲ್ಲಿ, ಕತೆಗಳಲ್ಲಿ ಭೂಮಿಯ ಇಂಥ ಬೀಭತ್ಸ ಮುಖದ ಚಿತ್ರವೂ ಇದೆ. ಈಗಾಗಲೇ ಹೇಳಿದಂತೆ, ‘ಗುಳಿಗ’ ಎಂಬ ಹೆಸರಿನ ಭೂತಕ್ಕೆ ಸಂಬಂಧಿಸಿದ ಪಾಡ್ದನವೊಂದರಲ್ಲಿ ತಾಯಿಯ ಬಲದ ಮೊಲೆ ಒಡೆದು ಭೂಮಿಗೆ ಬೀಳುವ ಗುಳಿಗನು ಭೂಮಿಯ ಸ್ಪರ್ಶ ಆಗುತ್ತಲೇ ದೈತ್ಯಾಕಾರವಾಗಿ ಬೆಳದು, ತಾಯಿಯ ಎಡದ ಮೊಲೆಯನ್ನು ತಿನ್ನುವ ಭಯಾನಕ ಚಿತ್ರವಿದೆ.

ಭಾರತದಂಥ ದೇಶದಲ್ಲಿ ಸಾಮಾನ್ಯ ಜನರ ಲೋಕದೃಷ್ಟಿಯ ಅಧ್ಯಯನದ ಅಗತ್ಯ ಬಹಳಷ್ಟಿದೆ. ಇಲ್ಲಿರುವ ಅಸಂಖ್ಯ ಜನವರ್ಗದಲ್ಲಿ ಇದುವರೆಗೆ ವೈದಿಕರ ಲೋಕದೃಷ್ಟಿಯ ಬಗೆಗೆ ಮಾತ್ರ ಸ್ವಲ್ಪ ಮಟ್ಟಿನ ವಿವೇಚನೆ ನಡೆದಿದೆ. ಐತಿಹಾಸಿಕವಾಗಿಯೂ ವೈದಿಕರ ಲೋಕದೃಷ್ಟಿಗೆ ರಾಜತ್ವದ ರಕ್ಷಣೆ ದೊರೆತಿದೆ. ಆ ಮೂಲಕ ಅದು ಸಾಮಾಜಿಕ ಮನ್ನಣೆಗೆ ಪಾತ್ರವಾಗಿದೆ. ಅನೇಕ ಪುರಾಣಗಳೂ ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿವೆ, ಎಷ್ಟೋ ಬಾರಿ ವೈದಿಕರ ಲೋಕದೃಷ್ಟಿಯೇ ಸಮಗ್ರ ಭಾರತದ ಲೋಕದೃಷ್ಟಿಯೆಂದು ಸಾರಲ್ಪಟ್ಟು,ದೇಶೀಯ ಮತ್ತು ಪಾಶ್ಚಾತ್ಯ ವಿದ್ವಾಂಸರ ವಿಶ್ಲೇಷಣೆಗೆ ಮೈ ಒಡ್ಡಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ವೈದಿಕರ ಲೋಕದೃಷ್ಟಿಯನ್ನು ಹಿಂದೂ ಲೋಕದೃಷ್ಟಿಯೆಂದು ಮಾನ್ಯ ಮಾಡುತ್ತಾ, ಅದನ್ನೇ ಅಖಿಲ ಭಾರತದ ಏಕೈಕ ಲೋಕದೃಷ್ಟಿಯೆಂದು ಹೇಳುವವರೂ ಕಾಣಿಸಿಕೊಳ್ಳುತ್ತಿದ್ದಾರೆ. ‘ಸೃಷ್ಟಿಯ ಆದಿಯಲ್ಲಿ ಕೇವಲ ನೀರು ಇದ್ದು, ಅದರ ಮೇಲೆ ತೇಲುತ್ತಿರುವ ಆಲದ ಎಲೆಯಲ್ಲಿ ಭಗವಂತನು ಕಾಲು ಬೆರಳನ್ನು ಚೀಪುತ್ತಾ ಮಲಗಿದ್ದನು’ ಎಂಬ ಕತೆ ಅಖಿಲ ಭಾರತದ ಮಟ್ಟದಲ್ಲಿ ಜನಪ್ರಿಯವಾಗಿದೆ. ಆದರೆ ಅಂತಹ ಕತೆಗಳು ಹಲವಿವೆ. ಉದಾಹರಣೆಗೆ, ‘ಸೃಷ್ಟಿಯ ಆದಿಯಲ್ಲಿ ನೀರೇ ಇತ್ತು, ಅದರಲ್ಲಿ ಒಂದು ಡೋಲು ತೇಲುತ್ತಿತ್ತು, ಆ ಡೋಲಿನಲ್ಲಿ ಅಣ್ಣ ತಂಗಿಯರು ಇದ್ದರು ’ ಎಂಬುದು ಕೊರಗ ಸಮುದಾಯದವರು ಹೇಳುವ ಪುರಾಣ.

ಇವತ್ತು ವೈದಿಕ ಲೋಕ ದೃಷ್ಟಿಯನ್ನೂ ಒಳಗೊಂಡು ಜಾನಪದರ ಲೋಕದೃಷ್ಟಿಯನ್ನು ಅಭ್ಯಾಸ ಮಾಡುವುದರಿಂದ ಕನಿಷ್ಠ ಮೂರು ಬಗೆಯ ಪ್ರಯೋಜನವಿದೆ.

1ಸೃಜನಶೀಲರಲ್ಲದವರೆಂಬ ಅಪವಾದಕ್ಕೆ ತುತ್ತಾದ ದೊಡ್ಡ ಜನವರ್ಗದ ಅದ್ಭುತ ಸೃಜನ ಸಾಮರ್ಥ್ಯದ ಪರಿಚಯ.

2ಅಖಿಲ ಭಾರತ ಮಟ್ಟದಲ್ಲಿ ಪಸರಿಸಿಕೊಂಡು ಜನಪ್ರಿಯವಾಗಿರುವ ಮೌಖಿಕ ಪರಂಪರೆಯ ವೈವಿಧ್ಯತೆ ಮತ್ತು ಸತ್ವದ ಒಟ್ಟಾರೆ ಅರಿವು.

3ಈ ಸಂಸ್ಕೃತಿಯಲ್ಲಿ ಇನ್ನು ಅನಾವರಣಗೊಳ್ಳದ, ಇದುವರೆಗೆ ನಿರ್ಲಕ್ಷ ್ಯಕ್ಕೆ ಒಳಗಾದ ದೊಡ್ಡ ಜ್ಞಾನ ಸಂಪತ್ತಿನ ಬಗ್ಗೆ ತಿಳಿವಳಿಕೆ.

ಮೇಲಿನ ಮೂರು ಅಂಶಗಳು ಇದುವರೆಗಿನ ನಮ್ಮ ಜ್ಞಾನದ ಮಿತಿಯನ್ನೂ, ರಾಷ್ಟ್ರದ ಬಗೆಗಿನ ನಮ್ಮ ಪರಿಕಲ್ಪನೆಯ ಮಿತಿಗಳನ್ನೂ, ಅಭಿವೃದ್ಧಿಯ ಬಗೆಗಿನ ನಮ್ಮ ತಪ್ಪು ಕಲ್ಪನೆಗಳನ್ನೂ, ಇವೆಲ್ಲಕ್ಕಿಂತ ಮಿಗಿಲಾಗಿ ಸಂಸ್ಕೃತಿಯ ಬಗೆಗಿನ ಕುರುಡು ಮೋಹ ಮತ್ತು ಅಹಂಕಾರವನ್ನು ಪುನರ್ವಿಮರ್ಶಿಸಿಕೊಳ್ಳಲು ಒತ್ತಾಯಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಪುರುಷೋತ್ತಮ ಬಿಳಿಮಲೆ

contributor

Similar News

ಬೆಚ್ಚು