×
Ad

ಎಸ್‌‌ ಐ ರ್ ನಾಗರಿಕ Vs ಪ್ರಶ್ನೆ ಕೇಳುವ ನಾಗರಿಕ

Update: 2025-12-23 11:55 IST

ಆಗಸ್ಟ್ ನಿಂದ ನವೆಂಬರ್ ವರೆಗೆ ರಾಹುಲ್ ಗಾಂಧಿ ಮತದಾರರ ಪಟ್ಟಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಆ ಗಂಭೀರ ಪ್ರಶ್ನೆಗಳಿಗೆ ಉತ್ತರ ಕೊಡುವುದನ್ನು ಬಿಟ್ಟು ಅವುಗಳನ್ನು ತಮಾಷೆ ಮಾಡಲಾಗುತ್ತಿದೆ. ಚುನಾವಣಾ ಆಯುಕ್ತರ ವಿರುದ್ಧ ಯಾವುದೇ ಕೇಸು ದಾಖಲಾಗುವುದಿಲ್ಲ ಎಂದು ಮೋದಿ ಸರಕಾರ ಕಾನೂನು ತಂದ ಮೇಲೆ ಚುನಾವಣಾ ಆಯೋಗಕ್ಕೂ ಯಾವುದೇ ಭಯವಿಲ್ಲ.

ಕನ್ನಡಕ್ಕೆ: ನೂರ್ ಜಹಾನ್

ಬಿಹಾರ ಮೂಲದ ರವೀಶ್ ಕುಮಾರ್ ಬೆಳೆದಿದ್ದು ದಿಲ್ಲಿಯಲ್ಲಿ. ಇಂದು ದೇಶದ ಮಾಧ್ಯಮ ರಂಗದ ಅತ್ಯಂತ ಚಿರಪರಿಚಿತ ಹೆಸರು. ಎನ್‌ಡಿಟಿವಿ ಇಂಡಿಯಾ ಹಿಂದಿ ವಾಹಿನಿಯ ಹಿರಿಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದವರು. ಪ್ರತಿರಾತ್ರಿ ಇವರು ನಡೆಸಿಕೊಡುವ ಪ್ರೈಮ್ ಟೈಮ್ ಶೋ ದೇಶದ ಪ್ರಮುಖ ರಾಜಕೀಯ, ಸಾಮಾಜಿಕ, ಆರ್ಥಿಕ ವಿದ್ಯಮಾನ ಗಳ ಕುರಿತ ಅತ್ಯಂತ ನಿಖರ ಮಾಹಿತಿ ಮತ್ತು ಪ್ರಖರ ವಿಶ್ಲೇಷಣೆಗೆ ಮನೆಮಾತಾಗಿತ್ತು. ಎನ್‌ಡಿಟಿವಿ ಅದಾನಿ ತೆಕ್ಕೆಗೆ ಸರಿದ ಬೆನ್ನಿಗೇ, ಅಷ್ಟೇ ದಿಟ್ಟತನದಿಂದ ಅಲ್ಲಿಂದ ಹೊರಬಂದು ಪತ್ರಿಕೋದ್ಯಮಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸಿ ಸುದ್ದಿಯಾದರು. ಅನುಭವೀ ವರದಿಗಾರ, ಆಕರ್ಷಕ ಹಿಂದಿ ನಿರೂಪಕ, ಸತ್ಯ ಹೊರಗೆಳೆಯುವ ಸಂದರ್ಶಕ, ಕಟುಸತ್ಯವನ್ನು ಮುಂದಿಡುವ ವಿಶ್ಲೇಷಕ, ಖ್ಯಾತ ಲೇಖಕ, ನೇರ ಮಾತುಗಳ ರಾಜಕೀಯ ಚಿಂತಕರಾಗಿ ಸರಕಾರಗಳ ನಿದ್ದೆಗೆಡಿಸಿದವರು, ಜನರನ್ನು ಬಡಿದು ಎಚ್ಚರಿಸಿದವರು ಮತ್ತು ಸರಕಾರದ ಅಂಧ ಭಕ್ತರ ಕೆಂಗಣ್ಣಿಗೆ ಗುರಿಯಾದವರು ಮ್ಯಾಗ್ಸೆಸೆ ಪುರಸ್ಕೃತ ರವೀಶ್ ಕುಮಾರ್.

ಸಂಸತ್ತು, ರಾಷ್ಟ್ರಪತಿ ಭವನ, ಪ್ರಧಾನಮಂತ್ರಿಗಳ ನಿವಾಸ ಹಾಗೂ ವಿವಿಧ ಸಚಿವಾಲಯಗಳಿಂದ ಮಾತ್ರ ದಿಲ್ಲಿ ರಾಜಧಾನಿಯಾಗಿಲ್ಲ. ಇಡೀ ದೇಶದಿಂದ ದಿಲ್ಲಿಗೆ ಬಂದಿರುವ ಜನರ ಪ್ರಜ್ಞಾವಂತಿಕೆ ಹಾಗೂ ಸಕ್ರಿಯ ಚಟುವಟಿಕೆಗಳಿಂದಲೂ ದಿಲ್ಲಿ ರಾಜಧಾನಿಯಾಗಿ ರೂಪುಗೊಂಡು ಇಡೀ ದೇಶದ ಗಮನ ಸೆಳೆಯುತ್ತಿದೆ. ಆದರೆ

2025ರ ವರ್ಷದಲ್ಲಿ ದಿಲ್ಲಿ ನಾಗರಿಕರ ರಾಜಧಾನಿ ಎಂಬ ಹೆಗ್ಗಳಿಕೆಯನ್ನು ಬಿಟ್ಟು ಬಿಟ್ಟ ಹಾಗೆ ಕಾಣುತ್ತಿದೆ. ಇಲ್ಲಿನ ಬೀದಿಗಳಲ್ಲಿ ನಡೆದು ನೋಡಿ, ಯಾವಾಗ ನೋಡಿದರೂ ಬರೀ ಹೊಗೆ ಆವರಿಸಿರುತ್ತದೆ, ಮಬ್ಬು ಕವಿದಿರುತ್ತದೆ. ಗಾಳಿಯಲ್ಲಿ ಮಾಲಿನ್ಯ ಮಿತಿ ಮೀರಿರುವುದರಿಂದ ಸೂರ್ಯನ ಬೆಳಕು ಬೀದಿಗಳ ಮೇಲೆ ಬೀಳುತ್ತಿಲ್ಲ. ಈಗಂತೂ ಜನ ಮಾಸ್ಕ್ ಹಾಕಿಕೊಳ್ಳುವುದನ್ನೂ ಬಿಟ್ಟು ಬಿಟ್ಟಿದ್ದಾರೆ. ಅಂದರೆ ಅವರೀಗ ಗಾಳಿಯಲ್ಲಿ ಸೇರಿರುವ ವಿಷದ ಬಗ್ಗೆ ಯೋಚಿಸುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಇರುವ ಗಾಳಿಯನ್ನೇ ಅವರು ಉಸಿರಾಡುತ್ತಿದ್ದಾರೆ.


 



ಆದರೆ ದಿಲ್ಲಿಯ ಜನರ ಈ ಸಹನಶೀಲತೆ ಭಯ ಸೃಷ್ಟಿಸುತ್ತಿದೆ. ಕೊನೆಗೆ ಜನರ ಶ್ವಾಸಕೋಶವೂ ಇಂಗಾಲ ಹಾಗೂ ನೈಟ್ರೋಜನ್ ಗಳ ಸಣ್ಣ ಸಣ್ಣ ಕಣಗಳನ್ನು ಸಹಿಸುವ ಹಾಗೆ ಬದಲಾಗಿ ಬಿಡುತ್ತಾ, ಇಲ್ಲಿನ ಜನ ಕಾಲುವೆಯ ನೀರನ್ನೂ ಫಿಲ್ಟರ್ ಮಾಡದೆಯೇ ಕುಡಿಯಲು ಪ್ರಾರಂಭಿಸುತ್ತಾರಾ ಎಂಬ ಆತಂಕ ಕಾಡುತ್ತದೆ. ದಿಲ್ಲಿಯ ಎರಡು ಕೋಟಿ ಜನರಲ್ಲಿ ಎರಡು ನೂರು ಜನ ಧ್ವನಿ ಎತ್ತಿದಾಗ ಅದನ್ನು ಪೊಲೀಸರು ಅಲ್ಲಿಯೇ ದಮನಿಸಿಬಿಟ್ಟರು. ಅಲ್ಲಿಗೆ ಇಡೀ ರಾಜಧಾನಿ ಮೌನವಾಯಿತು. ಎಲ್ಲರಿಗೂ ಗಾಳಿ ಬೇಕು. ಆದರೆ ಗಾಳಿಗಾಗಿ ಎಲ್ಲರೂ ಮಾತಾಡಲ್ಲ. ಹಾಗಾಗಿ ಈಗ ದಿಲ್ಲಿ ಭಾರತದ ಜನರ ಪ್ರಜ್ಞಾವಂತಿಕೆಯ ಸಂಕೇತವಾಗಿದ್ದ ರಾಜಧಾನಿಯಾಗಿ ಉಳಿದಿಲ್ಲ. ಇಲ್ಲಿ ವಿಚಾರಗಳ ಸ್ವಾತಂತ್ರ್ಯ ಒಂದು ಪಕ್ಷದ ವಿಚಾರಧಾರೆಯ ಗುಲಾಮನಾಗಿ ಬಿಟ್ಟಿದೆ. ರಾಜಕೀಯ ಪಕ್ಷವೊಂದು ಸಿಟ್ಟು ಮಾಡಿಕೊಳ್ಳುತ್ತದೆ ಎಂದು ಜನ ಈಗ ಮಾತಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಹೊಸ ಯೋಚನೆ, ಪ್ರಶ್ನಿಸುವುದು, ತಮ್ಮ ಬೇಡಿಕೆಗಳನ್ನು ಮಂಡಿಸುವುದು ಇತ್ಯಾದಿಗಳು ನಾಗರಿಕ ಜೀವನದಿಂದ ಕಾಣೆಯಾದರೆ ಆ ಜೀವನ ಜೈಲಿನ ಜೀವನ ಆಗಿಬಿಡುತ್ತದೆ. ಒಂದಿಡೀ ನಗರವನ್ನು ನೀವು ‘ಮ್ಯೂಟ್’ ನಲ್ಲಿ ನೋಡಿದಂತೆ ಭಾಸವಾಗುತ್ತದೆ. ಯಾರಾದರೂ ಬಂದ ಕೂಡಲೇ ನಾವು ವೀಕ್ಷಿಸುತ್ತಿದ್ದ ವೀಡಿಯೊದ ಧ್ವನಿಯನ್ನು ನಿಲ್ಲಿಸಿ ಆ ವೀಡಿಯೊ ಮಾತ್ರ ಹಾಗೇ ನಡೆಯುತ್ತಾ ಇರುವಂತೆ ದಿಲ್ಲಿ ಈಗ ‘ಮ್ಯೂಟ್’ ನಲ್ಲಿ ನಡೆಯುತ್ತಿರುವಂತೆ ಕಾಣುತ್ತಿದೆ.

ದಿಲ್ಲಿಯ ಹೊರಗೆ ಬಿಹಾರದಲ್ಲಿ ಒಂದು ಕಾಲು ಕೋಟಿಗೂ ಹೆಚ್ಚು ಮಹಿಳೆಯರ ಖಾತೆಗಳಿಗೆ ತಲಾ ಹತ್ತು ಸಾವಿರ ರೂ. ಹಾಕಲಾಯಿತು. ಆ ದುಡ್ಡಿಗೆ ಮಹಿಳೆಯರು ತಮ್ಮ ಓಟು ಮಾರಿಬಿಟ್ಟರೆ ಅಥವಾ ವ್ಯಾಪಾರ ಮಾಡಲು ಎಂದು ಕೊಟ್ಟಿದ್ದನ್ನು ಅದಕ್ಕೇ ಬಳಸಿದರೇ? ಈ ಪ್ರಶ್ನೆಗಳ ಬಗ್ಗೆ ಈಗ ಯಾರೂ ತಲೆಕೆಡಿಸಿಕೊಂಡಿಲ್ಲ. ಆಗಸ್ಟ್‌ನಿಂದ ನವೆಂಬರ್‌ವರೆಗೆ ರಾಹುಲ್ ಗಾಂಧಿ ಮತದಾರರ ಪಟ್ಟಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಆ ಗಂಭೀರ ಪ್ರಶ್ನೆಗಳಿಗೆ ಉತ್ತರ ಕೊಡುವುದನ್ನು ಬಿಟ್ಟು ಅವುಗಳನ್ನು ತಮಾಷೆ ಮಾಡಲಾಗುತ್ತಿದೆ. ಚುನಾವಣಾ ಆಯುಕ್ತರ ವಿರುದ್ಧ ಯಾವುದೇ ಕೇಸು ದಾಖಲಾಗುವುದಿಲ್ಲ ಎಂದು ಮೋದಿ ಸರಕಾರ ಕಾನೂನು ತಂದ ಮೇಲೆ ಚುನಾವಣಾ ಆಯೋಗಕ್ಕೂ ಯಾವುದೇ ಭಯವಿಲ್ಲ. ಚುನಾವಣಾ ಆಯೋಗದ ಆ ಮೂವರು ಈಗ ಒಂದು ಪ್ರತ್ಯೇಕ ವರ್ಗವಾಗಿಬಿಟ್ಟಿದ್ದಾರೆ. ಅವರ ಕೆಲಸದಲ್ಲಿನ ಯಾವುದೇ ಲೋಪದೋಷಗಳ ಬಗ್ಗೆ ಈಗ ಯಾವುದೇ ಕಾನೂನು ಕ್ರಮ ಸಾಧ್ಯವಿಲ್ಲ.


 



ಚುನಾವಣಾ ಪ್ರಕ್ರಿಯೆ ಬಗ್ಗೆ ಅದೆಷ್ಟು ಪ್ರಶ್ನೆಗಳನ್ನು ಕೇಳಲಾಯಿತು? ಒಂದೇ ಒಂದು ಪ್ರಶ್ನೆಗೂ ಸರಿಯಾದ ಉತ್ತರ ಕೊಡಲಿಲ್ಲ. ಅಷ್ಟೇ ಅಲ್ಲ ಆ ಉತ್ತರ ಕೊಡುವ ಪ್ರಕ್ರಿಯೆಯಲ್ಲಿ ಎಲ್ಲೂ ನಾಗರಿಕರನ್ನು ಸೇರಿಸಿಕೊಳ್ಳಲಿಲ್ಲ. ಈಗ ನಮ್ಮ ಸಾಂವಿಧಾನಿಕ ಸಂಸ್ಥೆಗಳು ಉತ್ತರ ಕೊಡುವುದನ್ನೇ ನಿಲ್ಲಿಸಿಬಿಟ್ಟಿವೆ. ಜನರು ಪ್ರಶ್ನೆ ಕೇಳುವುದನ್ನೂ ಬಿಟ್ಟು ಬಿಟ್ಟಿದ್ದಾರೆ. ಜನರನ್ನು ಕೆವೈಸಿ ಅರ್ಜಿ ತುಂಬಿಸುವುದು ಹಾಗೂ ಎಸ್ ಐ ಆರ್‌ನಲ್ಲಿ ಹೆಸರು ಸೇರಿಸಲು ಆಧಾರ್ ನಂಬರ್ ತುಂಬಿಸುವುದರಲ್ಲಿ ಬಿಝಿ ಇಡಲಾಗಿದೆ. ನಾಗರಿಕರು ತಮ್ಮ ಗುರುತು ಸಾಬೀತು ಮಾಡುವಂತೆ ಹೇಳಲಾಗಿದೆ. ಅವರು ತಮ್ಮ ಗುರುತು ಸಾಬೀತಾಗಿದ್ದೇ ಸಾಧನೆ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ನಾಗರಿಕ ಅಂದರೆ ಸರಕಾರದ ಮೇಲೆ ಕಣ್ಣಿಟ್ಟಿರುವ ಪ್ರಜ್ಞಾವಂತ ಎಂಬ ಅರ್ಥ ಈಗ ಉಳಿದಿಲ್ಲ. ಈಗಿನ ನಾಗರಿಕ ನೋಡುವುದನ್ನು, ಯೋಚಿಸುವುದನ್ನು, ಕೇಳುವುದನ್ನು, ಹೇಳುವುದನ್ನು ನಿಲ್ಲಿಸಿಬಿಟ್ಟಿದ್ದಾನೆ.

ಭಾರತದ ನಾಗರಿಕರನ್ನು ನೀವು ಯಾವುದೇ ರೀತಿಯಲ್ಲಿ ಭಯ ಬೀಳಿಸಲು ಸಾಧ್ಯವಿಲ್ಲ. ಇಲ್ಲಿ ಪ್ರಜಾಪ್ರಭುತ್ವವೇ ಇಲ್ಲವಾಗಲಿದೆ ಎಂದು ನೀವು ನೂರು ಉದಾಹರಣೆ ಕೊಟ್ಟು ನೋಡಿ, ಆ ನಾಗರಿಕ ಮೌನವಾಗಿರುತ್ತಾನೆ. ಗಾಳಿಯಲ್ಲಿ ಪಿಎಂ 2.5 ಆದ ಬಗ್ಗೆ, ಶ್ವಾಸಕೋಶ, ಕಿಡ್ನಿ ಹಾಳಾಗುವ ಅಪಾಯದ ಬಗ್ಗೆ ನೀವು ನೂರು ಉದಾಹರಣೆ ಕೊಡಿ, ಆ ನಾಗರಿಕ ಮೌನವಾಗಿರುತ್ತಾನೆ. ಸಂಬಳ ಹೆಚ್ಚಾಗುತ್ತಿಲ್ಲ, ಉದ್ಯೋಗವೇ ಸಿಗುತ್ತಿಲ್ಲ ಆದರೂ ಆ ನಾಗರಿಕ ಮೌನವಾಗಿರುತ್ತಾನೆ.

ಈಗ ಧಾರ್ಮಿಕ ಸಮಾವೇಶಗಳು ಹಾಗೂ ಹಬ್ಬಗಳ ಮೇಲೆ ಒಂದು ಪಕ್ಷದ ಕಬ್ಜಾ ಆಗಿಬಿಟ್ಟಿದೆ. ದೇಶದಲ್ಲಿ ಗೌರವ ಸ್ಥಾಪನೆಯ ಒಂದು ಭ್ರಮೆ ಸೃಷ್ಟಿಸಲಾಗಿದೆ. ನಾಗರಿಕ ಜೀವನದಲ್ಲಿ ಯಾವುದೇ ಗೌರವ ಉಳಿದಿಲ್ಲ. ಆದರೆ ಸಾಂಸ್ಕೃತಿಕ ಜೀವನದಲ್ಲಿ ಘನತೆ ಹಾಗೂ ಗೌರವ ಸ್ಥಾಪನೆಯ ನಾಟಕ ಮಾಡಲಾಗುತ್ತಿದೆ.

ಧರ್ಮ ನೈತಿಕ ಶಕ್ತಿ ಕೊಡುತ್ತದೆ. ಆದರೆ ರಾಜಕೀಯದಲ್ಲಿ ಧರ್ಮದ ಬಳಕೆ ನೈತಿಕತೆ ಸ್ಥಾಪಿಸುವುದಕ್ಕಾಗಿ ಆಗುತ್ತಿಲ್ಲ. ರಾಜಕೀಯದಲ್ಲಿ ಆಗುತ್ತಿರುವ ಎಲ್ಲ ಅನೈತಿಕ ಆಟಗಳ ಮೇಲೆ ಪರದೆ ಹಾಕಲು ರಾಜಕಾರಣಿಗಳು ಹಣೆಗೆ ತಿಲಕ ಇಟ್ಟುಕೊಂಡು ಧಾರ್ಮಿಕರಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದ ಮಹತ್ವದ ಸಂಸ್ಥೆಗಳಲ್ಲಿ ಆಗುತ್ತಿರುವ ಪಾಪ ಕಾರ್ಯಗಳಿಂದ ಬಚಾವಾಗಲು ಧರ್ಮವನ್ನು ಬಳಸಿಕೊಳ್ಳಲಾಗುತ್ತಿದೆ.

ಧರ್ಮದ ಮೂಲಕ ಒಂದು ಸಮಾಜದಲ್ಲಿ ನೈತಿಕತೆ ಹಾಗೂ ಸತ್ಯದ ಬಲ ಕಾಣುತ್ತಿಲ್ಲ ಎಂದಾದರೆ ಆ ಸಮಾಜ ಧರ್ಮವನ್ನು ಪಾಲಿಸುತ್ತಿಲ್ಲ, ಬರೀ ಪಾಲಿಸುವ ನಾಟಕ ಮಾಡುತ್ತಿದೆ ಎಂದರ್ಥ. ಇವತ್ತಿನ ಭಾರತದಲ್ಲಿ ಸತ್ಯಕ್ಕೆ ಏನಾದರೂ ಸ್ಥಾನ ಇದೆಯೇ? ಸತ್ಯದ ಸಂಬಂಧ ಅನ್ವೇಷಣೆಯ ಜೊತೆಗಿದೆ. ಜಿಜ್ಞಾಸೆಯ ಜೊತೆಗಿದೆ. ಆದರೆ ರಾಜಧಾನಿ ದಿಲ್ಲಿಯ ಮೀಡಿಯಾ ಸತ್ಯದ ವಿರೋಧಿಯಾಗಿದೆ. ಅದು ಪ್ರಶ್ನೆ ಮಾಡುವುದೇ ಇಲ್ಲ. ಅನ್ವೇಷಣೆ ಅಲ್ಲಿ ಇಲ್ಲವೇ ಇಲ್ಲ. ಅಲ್ಲಿನ ಮೀಡಿಯಾ ಸತ್ಯಕ್ಕೆ ಪರದೆ ಹಾಕುವ ಕೆಲಸ ಮಾಡುತ್ತದೆ. ಅದಕ್ಕೆ ಧರ್ಮ ಅಥವಾ ಧರ್ಮದ ರಾಜಕೀಯ ಅಂದರೆ ಒಂದು ರಾಜಕೀಯ ಪಕ್ಷದ ಕಬ್ಜಾವನ್ನು ಕಾಪಾಡುವುದು ಹಾಗೂ ಸತ್ಯವನ್ನು ಸಮಾಧಿ ಮಾಡಿಬಿಡುವುದು. ಈಗ ಧರ್ಮವನ್ನು ರಾಜಕೀಯ ಸಂಪೂರ್ಣವಾಗಿ ಆವರಿಸಿಬಿಟ್ಟಿದೆ.


 



ಧಾರ್ಮಿಕ ಅಧಿಕಾರ ಸ್ವೀಕರಿಸುವ ಯಾವುದೇ ವ್ಯಕ್ತಿ ಯಾವುದೇ ರಾಜಕೀಯ ಪಕ್ಷದ ಎದುರು ಇಷ್ಟು ಗುಲಾಮನಾಗಲು ಹೇಗೆ ಸಾಧ್ಯ? ಆತ ಧರ್ಮದ ಅಧಿಕಾರದ ಬಗ್ಗೆ ನಂಬಿಕೆ ಇಟ್ಟವನಾದರೆ ರಾಜಕೀಯ ಪಕ್ಷಕ್ಕೂ ಪ್ರಶ್ನೆ ಕೇಳುವ ಧೈರ್ಯ ಆತನಿಗಿರಬೇಕು. ಧರ್ಮ ಇದನ್ನೇ ಮಾಡುತ್ತದೆ. ನಿಮ್ಮ ವರ್ತನೆಯನ್ನು ಶುದ್ಧಗೊಳಿಸುತ್ತದೆ, ಭಯದಿಂದ ಮುಕ್ತಗೊಳಿಸುತ್ತದೆ. ಆದರೆ ಈಗ ಉಲ್ಟಾ ಆಗುತ್ತಿದೆ. ಧರ್ಮದ ಮೇಲೆ ಕಬ್ಜಾ ಮಾಡಿಕೊಂಡ ರಾಜಕೀಯ ಪಕ್ಷದ ಭಯದಿಂದ ನಾಗರಿಕರು ಧರ್ಮಾನುಸಾರ ಕೇಳಲೇಬೇಕಾದ ಪ್ರಶ್ನೆಗಳನ್ನೂ ಕೇಳುತ್ತಿಲ್ಲ. ಅವರಿಗೀಗ ಧಾರ್ಮಿಕ ಪಾತ್ರಗಳು ಕೇವಲ ಕತೆ ಕೇಳುವುದಕ್ಕೆ ಹಾಗೂ ಸಮಾವೇಶಗಳಲ್ಲಿ ಸೇರುವುದಕ್ಕೆ, ಜನರನ್ನು ಆಕರ್ಷಿಸುವುದಕ್ಕೆ ಬೇಕಾದ ಪ್ರಸಂಗಗಳಾಗಿ ಬಿಟ್ಟಿವೆ.

ಆ ಧಾರ್ಮಿಕ ಸಮಾವೇಶಗಳಲ್ಲಿ ಪ್ರೇರಣೆಯ ಮಾತು ಧಾರಾಳ ಇರುತ್ತದೆ , ಆದರೆ ಅದನ್ನು ಕೇಳಿ ಜನರಲ್ಲಿ ಯಾವುದೇ ಪ್ರೇರಣೆ ಕಾಣುವುದಿಲ್ಲ. ನಾಗರಿಕರ ವ್ಯಕ್ತಿತ್ವ ರೂಪಿಸಲು, ಬದಲಿಸಲು, ಸತ್ಯವೇ ಎಲ್ಲಕ್ಕಿಂತ ದೊಡ್ಡ ಧರ್ಮ ಎಂದು ತಿಳಿದುಕೊಳ್ಳಲಿ ಎಂದು ಈಗ ಧಾರ್ಮಿಕ ಮಾತುಗಳನ್ನು ಆಡಲಾಗುತ್ತಿಲ್ಲ, ಬದಲಿಗೆ ಧರ್ಮದ ಹೆಸರಲ್ಲಿ ಏನೋ ಕೆಲಸ ಆಗುತ್ತಿದೆ ಎಂದು ತೋರಿಸಲಿಕ್ಕಾಗಿ ಅದನ್ನು ಆಡಲಾಗುತ್ತಿದೆ. ನನ್ನ ಪಾಲಿಗೆ ಧರ್ಮ ಎಂದರೇನು ಎಂದು ಇವತ್ತು ಪ್ರತಿಯೊಬ್ಬ ನಾಗರಿಕನೂ ಪ್ರಶ್ನಿಸಬೇಕಾಗಿದೆ. ಇವತ್ತಿನ ರಾಜಕೀಯದ ಎದುರು ಧರ್ಮ ಆತನಿಗೆ ಸತ್ಯ ಹೇಳುವ ನೈತಿಕ ಶಕ್ತಿ ನೀಡುತ್ತಿದೆಯೇ ಅಥವಾ ಧರ್ಮದ ಹೆಸರಲ್ಲಿ ಆತ ಸುಮ್ಮನಿರುವಂತೆ ಒತ್ತಡ ಹಾಕಲಾಗುತ್ತಿದೆಯೇ ಎಂದು ಆತ ಪ್ರಶ್ನಿಸಬೇಕಾಗಿದೆ.

ದೇವರ ಆರಾಧನೆ ನಮ್ಮ ಜೀವನ ಆದರೆ ಪ್ರಜಾಪ್ರಭುತ್ವದ ಜೀವನ ರಾಜಕೀಯದಿಂದ ನಡೆಯುತ್ತದೆ ಎಂದು ಜನರು ತಿಳಿದುಕೊಳ್ಳಬೇಕಾಗಿದೆ. ರಾಜಕೀಯವನ್ನು ಧರ್ಮದ ದೃಷ್ಟಿಯಿಂದ ನೋಡಿದರೆ ಪ್ರಜಾಪ್ರಭುತ್ವಕ್ಕೆ ನಷ್ಟವಾಗಲಿದೆ. ಅದರ ಪರಿಣಾಮ ಕೊನೆಗೆ ಜನರ ಮೇಲೆಯೇ ಆಗಲಿದೆ. ಅವರು ತಮ್ಮ ಜೀವನವನ್ನು ಉತ್ತಮಗೊಳಿಸುವ ಹೊಸ ಹೊಸ ಪ್ರಶ್ನೆಗಳನ್ನು ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಸವಾಲುಗಳನ್ನು ಧರ್ಮದ ಹೆಸರಲ್ಲಿ ಬದಿಗೆ ಸರಿಸಿ ನೀವು ನಿಮ್ಮ ಜೀವನವನ್ನು ಉತ್ತಮವಾಗಿಸಲು ಸಾಧ್ಯವಿಲ್ಲ. ಭಾರತದ ಪ್ರಜಾಪ್ರಭುತ್ವ ಯಾವುದೇ ಕಟ್ಟಡದಲ್ಲಿ ವಾಸಿಸುವುದಿಲ್ಲ. ಅದು ಈ ದೇಶದ ನಾಗರಿಕ ಸಮೂಹದ ಪ್ರಜ್ಞಾವಂತಿಕೆಯಲ್ಲಿ ಅದು ಉಸಿರಾಡುತ್ತದೆ. ಈ ಪ್ರಜ್ಞಾವಂತಿಕೆಯ ಮೇಲೆ ಧರ್ಮದ ಭಯ ಹಾಗೂ ಧರ್ಮದ ಹೆಸರಿನಲ್ಲಿ ದ್ವೇಷ ಕೂತು ಬಿಟ್ಟರೆ ಮತ್ತೆ ಪ್ರಜಾಪ್ರಭುತ್ವ ನಾಶವಾಗುತ್ತದೆ.

ನಾಗರಿಕ ವಿಷಗಾಳಿಯನ್ನೇ ಉಸಿರಾಡುತ್ತಾ ಇರುತ್ತಾನೆ. ಆದರೆ ಈ ಗಾಳಿಯನ್ನು ಸ್ವಚ್ಛಗೊಳಿಸುವ ಕರ್ತವ್ಯ ನಿಮ್ಮದಾಗಿತ್ತು ಆದರೆ ನೀವು ಅದನ್ನು ನಿರ್ವಹಿಸಿಲ್ಲ ಯಾಕೆ ಎಂದು ಆತ ಸರಕಾರವನ್ನು ಪ್ರಶ್ನಿಸಲಾರ. ಆತ ಒಂದಾದ ಬಳಿಕ ಇನ್ನೊಂದು ಆಸ್ಪತ್ರೆಗೆ ಅಲೆಯುತ್ತಾ ತನ್ನ ಅಸ್ವಸ್ಥ ಶ್ವಾಸಕೋಶವನ್ನು ತೋರಿಸುತ್ತಾ ಇರಬೇಕಾಗುತ್ತದೆ. ತನ್ನ ಚಿಕಿತ್ಸೆಗಾಗಿ ತನ್ನ ಮನೆಯನ್ನೇ ಮಾರಬೇಕಾಗುತ್ತದೆ. ದಿಲ್ಲಿಯ ಜನರು ತಾವು ಎಸ್‌ಐಆರ್‌ನಲ್ಲಿ ಹೆಸರಿರುವ ನಾಗರಿಕರಾಗಿ ಇರುವಂತೆ ನೋಡಿಕೊಳ್ಳುತ್ತೇವೆ, ಆದರೆ ಪ್ರಶ್ನೆ ಕೇಳುವ, ಬೀದಿಗಿಳಿಯುವ ನಾಗರಿಕರಾಗುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಸುಮ್ಮನಾಗುವ ಯಾವುದೇ ನಾಗರಿಕ ತನ್ನನ್ನು ಪ್ರಜಾಪ್ರಭುತ್ವದಿಂದ ದೂರ ಮಾಡಿಕೊಳ್ಳುತ್ತಾ ಹೋಗುತ್ತಾನೆ. ದಿಲ್ಲಿಯ ಗಾಳಿ ಇನ್ನೆಂದೂ ಶುದ್ಧವಾಗುವುದಿಲ್ಲ. ದಿಲ್ಲಿಯ ಜನತೆ ಅದೇ ಗಾಳಿಯ ಜೊತೆ ಬದುಕಲು ಕಲಿತುಕೊಂಡು ಬಿಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರವೀಶ್ ಕುಮಾರ್

contributor

Similar News