ಎಲ್ಲ ರಾಜ್ಯಗಳಲ್ಲಿ, ಎಲ್ಲ ಭಾಷೆಗಳಲ್ಲಿ ʼವಾರ್ತಾ ಭಾರತಿʼ ಜನರಿಗೆ ತಲುಪಲಿ : ಕೆ.ಎಸ್. ಶೇಖ್ ಕರ್ನಿರೆ
ವಾರ್ತಾಭಾರತಿಗೆ 24ರ ಸಂಭ್ರಮ
ರಿಯಾದ್ : ವಾರ್ತಾ ಭಾರತಿ ಕನ್ನಡ ದೈನಿಕ ಯಶಸ್ವೀ 24 ನೇ ವರ್ಷಕ್ಕೆ ಕಾಲಿಟ್ಟಿರುವುದು ಸಮಸ್ತ ಕನ್ನಡಿಗರ ಪಾಲಿಗೆ ಬಹಳ ಸಂತೋಷದ ವಿಷಯ. ಮಂಗಳೂರಿನಿಂದ ಪ್ರಾರಂಭವಾದ ಈ ಪರ್ಯಾಯ ದೈನಿಕ ಇವತ್ತು ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ, ವಿಶ್ವಾಸಾರ್ಹ ಮಾಧ್ಯಮವಾಗಿ ಬೆಳೆದಿದೆ. ಪ್ರತಿದಿನ ಲಕ್ಷಗಟ್ಟಲೆ ಓದುಗರು, ವೀಕ್ಷಕರನ್ನು ತಲುಪುತ್ತಿದೆ. ಮುದ್ರಣ ಮಾಧ್ಯಮ ಮಾತ್ರವಲ್ಲದೆ ಡಿಜಿಟಲ್ ಮೀಡಿಯಾದಲ್ಲೂ ಅಪಾರ ಜನಮನ್ನಣೆ ಗಳಿಸಿದೆ. ಇವತ್ತು ಇಡೀ ದೇಶವೇ ಗುರುತಿಸುವ ಪ್ರಮುಖ ಮಾಧ್ಯಮ ಸಂಸ್ಥೆಯಾಗಿದೆ.
ಈ ಎಲ್ಲ ಸಾಧನೆಗಳ ನಡುವೆಯೂ ಅದು ಸತ್ಯ ಎಲ್ಲೆಡೆಗೆ ತಲುಪಿಸುವ ತನ್ನ ಧ್ಯೇಯದೊಂದಿಗೆ ಎಂದೂ ರಾಜಿ ಮಾಡಿಕೊಂಡಿಲ್ಲ. ಸಮಾಜದ ಎಲ್ಲ ದುರ್ಬಲ ವರ್ಗಗಳ ಗಟ್ಟಿ ಧ್ವನಿಯಾಗಿ ನಿರಂತರ ಕೆಲಸ ಮಾಡಿದೆ. ವಾರ್ತಾಭಾರತಿಯ ಯುಟ್ಯೂಬ್ ಚಾನಲ್ ಕೂಡ ಅತ್ಯುತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ.
ಇಂಗ್ಲೀಷ್, ಹಿಂದೂಸ್ತಾನಿ ಭಾಷೆಗಳಲ್ಲೂ ಈಗ ವಾರ್ತಾ ಭಾರತಿ ದೇಶ ವಿದೇಶಗಳ ಜನರನ್ನು ತಲುಪುತ್ತಿದೆ. ಪತ್ರಕರ್ತರು, ಸಿಬ್ಬಂದಿಗಳ ಬೃಹತ್ ವೃತ್ತಿಪರ ಹಾಗೂ ನಿಷ್ಠಾವಂತ ತಂಡ ವಾರ್ತಾ ಭಾರತಿಯ ಹಿಂದಿದೆ. ಇಂತಹದೊಂದು ವೃತ್ತಿಪರ ಅಷ್ಟೇ ನ್ಯಾಯಪರ ಮಾಧ್ಯಮ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಸುಲಭವಲ್ಲ.
ಎಲ್ಲ ಸವಾಲುಗಳನ್ನು , ಸಮಸ್ಯೆಗಳನ್ನು ಮೆಟ್ಟಿ ನಿಂತು ವಾರ್ತಾ ಭಾರತಿ ತಂಡ ಇವತ್ತು ಈ ಅದ್ಭುತ ಸಾಧನೆ ಮಾಡಿದೆ. ಅದಕ್ಕಾಗಿ ನಾನು ಅದರ ಪ್ರಧಾನ ಸಂಪಾದಕ ಅಬ್ದುಸಲಾಮ್ ಪುತ್ತಿಗೆ ಹಾಗೂ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ವರ್ಷ ವಾರ್ತಾ ಭಾರತಿ 25 ನೇ ವರ್ಷಕ್ಕೆ ತಲುಪುವಾಗ ದೇಶದ ಎಲ್ಲ ರಾಜ್ಯಗಳಲ್ಲೂ ವಿವಿಧ ಭಾಷೆಗಳಲ್ಲಿ ವಾರ್ತಾ ಭಾರತಿ ಪ್ರತಿದಿನ ಕೋಟ್ಯಂತರ ಜನರಿಗೆ ಸತ್ಯವನ್ನು ತಲುಪಿಸಲಿ ಎಂದು ಹಾರೈಸುತ್ತೇನೆ.
ಕೆ.ಎಸ್. ಶೇಖ್ ಕರ್ನಿರೆ, COO, Expertise ಗ್ರೂಪ್, KSA