ಯುಎಸ್ಎ: ಆ.29ರಂದು ವಾರ್ತಾಭಾರತಿ ಸುದ್ದಿಸಂಸ್ಥೆಯು ಯಶಸ್ವಿ 23 ವರ್ಷಗಳನ್ನು ಪೂರೈಸಿ ತನ್ನ 24ನೇ ವರ್ಷಕ್ಕೆ ಕಾಲಿಡುತ್ತಿರುವುದು ಹರ್ಷದ ವಿಷಯ. ಬಹಳ ವರ್ಷಗಳಿಂದ ವಾರ್ತಾಭಾರತಿಯ ಓದುಗನಾಗಿ, ಈ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.

ಡಿಜಿಟಲ್ ಮಾಧ್ಯಮದ ಮೂಲಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕನ್ನಡದಲ್ಲಿ ಸುದ್ದಿ ಪ್ರಸಾರ ಮಾಡುವಲ್ಲಿ ವಾರ್ತಾಭಾರತಿ ಮುಂಚೂಣಿಯಲ್ಲಿದೆ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೆ ನಮ್ಮ ಮಾತೃಭಾಷೆಯಲ್ಲಿ ಓದುವ ತುಡಿತವನ್ನು ಅರಿತು, ಸ್ಪಂದಿಸಿ ವಾರ್ತಾಭಾರತಿಯು ಬಹಳ ಹಿಂದೆಯೇ ಅಂತರ್ಜಾಲದ ಮುಖೇನ ಸುದ್ದಿಯನ್ನು ಪ್ರಸಾರ ಮಾಡಲು ಪ್ರಾರಂಭಿಸಿತು. ಅಂತರರಾಷ್ಟ್ರೀಯ ಹಾಗೂ ಭಾರತದ ಸುದ್ದಿಯ ಜೊತೆಗೆ ನಮ್ಮೆಲ್ಲರಿಗೂ ಕರ್ನಾಟಕದ ಸುದ್ದಿಯನ್ನು ಕ್ಷಣಾಂತರದಲ್ಲಿ ವಿಶ್ವದಾದ್ಯಂತ ಓದುವ ಸದಾವಕಾಶವನ್ನು ಕಲ್ಪಿಸಿ ಅನಿವಾಸಿ ಕನ್ನಡಿ ಗರು ತಮ್ಮ ಮಾತೃಭೂಮಿಯಿಂದ ದೂರವಿಲ್ಲವೆಂಬ ಭಾವನೆಯನ್ನು ಮೂಡಿಸಿದೆ. ವಿಶ್ವದಾದ್ಯಂತವಿರುವ ಕನ್ನಡಿ ಗರಿಗೆ ಸುದ್ದಿಯನ್ನು ತಲಿಪಿಸುವಲ್ಲಿ ವಾರ್ತಾಭಾರತಿಯು ಸಂಪರ್ಕ ಕೊಂಡಿಯಾಗಿದೆ.

ಇದೇ ರೀತಿ, ಯೂಟ್ಯೂಬ್ ನಲ್ಲಿ ವಾರ್ತಾಭಾರತಿ ಚಾನಲ್ ಪ್ರಾರಂಭಿಸಿ ಉತ್ತಮ ಗುಣಮಟ್ಟದ ಸುದ್ದಿ, ಚರ್ಚೆ ಹಾಗೂ ಸಂವಾದಗಳನ್ನು ವಿಡಿಯೋ ಪ್ರಸಾರ ಮಾಡುತ್ತಿದೆ. ಇಷ್ಟೇ ಅಲ್ಲದೆ, ಅನಿವಾಸಿ ಕನ್ನಡಿಗರ ಸುದ್ದಿಗಳಿಗೆ, ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಕನ್ನಡದಲ್ಲೇ ಪ್ರಥಮವಾಗಿ 'ಗ್ಲೋಬಲ್ ಕನ್ನಡ ಡಾಟ್ ಕಾಮ್' ವೆಬ್ಸೈಟ್ ಪ್ರಾರಂಭಿಸಿದ ಶ್ರೇಯ ವಾರ್ತಾಭಾರತಿಗೆ ಸಲ್ಲುತ್ತದೆ. ಕನ್ನಡ ಭಾಷೆಯಲ್ಲದೆ ಇಂಗ್ಲಿಷ್ ಅವತರಣಿಕೆಯಲ್ಲೂ ಈಗ ವಾರ್ತಾಭಾರತಿ ಅಂತರ್ಜಾಲದ ಮುಖೇನ ಉಪಲಬ್ದವಿದೆ.

ಪತ್ರಿಕಾ ಮಾಧ್ಯಮವು ನಾಲ್ಕನೇ ಸ್ಥoಭವೆಂದು ಕರೆಯಲ್ಪಡುತ್ತದೆ. ಪ್ರಜೆಗಳ ಧ್ವನಿಯಾಗಿ ಅವರ ಸಮಸ್ಯೆಗಳನ್ನು ಸಮರ್ಪಕವಾಗಿ, ನಿಷ್ಪಕ್ಷತೆಯಿಂದ, ನಿರ್ಭೀತಿಯಿಂದ ಪ್ರಸ್ತುತ ಪಡಿಸುವುದೇ ನಿಜವಾದ ಪತ್ರಿಕಾಧರ್ಮ. ಅಧಿಕಾರ ದಲ್ಲಿರುವವರಿಗೆ ಹೆದರಿ, ಕೈಗೊಂಬೆಗಳಾಗಿ, ಭಟ್ಟಂಗಿತನವನ್ನು ಪ್ರದರ್ಶಿಸುವ ಇಂದಿನ ಕೆಲವು ಮಡಿಲ ಮಾಧ್ಯಮ ಗಳ ನಡುವೆ ವಾರ್ತಾಭಾರತಿಯು ಸ್ವತಂತ್ರ್ಯ ಹಾಗೂ ದಿಟ್ಟ ಪತ್ರಿಕೋದ್ಯಮದಿಂದ ಭಿನ್ನವಾಗಿದೆ. ಇಂದು, ವಸ್ತುನಿಷ್ಠ ಸುದ್ದಿಯನ್ನು ಬೆಂಬಲಿಸುವ ಓದುಗರ ಆಯ್ಕೆ ವಾರ್ತಾಭಾರತಿಯಾಗಿದೆ.

ವಾರ್ತಾಭಾರತಿಯು 24 ವರ್ಷವನ್ನು ದಾಟಿ ಬೆಳ್ಳಿ ಹಬ್ಬಕ್ಕೆ ಕಾಲಿಡುವ ಸಂದರ್ಭದಲ್ಲಿ, ಪತ್ರಿಕೆಯನ್ನು ಪ್ರೋತ್ಸಾಹಿಸಿ ಬೆಳೆಸುತ್ತಿರುವ ಓದುಗರಿಗೆ, ಸಂಪಾದಕೀಯ ತಂಡಕ್ಕೆ ಹಾಗೂ ಇಡೀ ಸಿಬ್ಬಂದಿ ವರ್ಗಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ವಾರ್ತಾಭಾರತಿ ಕನ್ನಡದ ಪತ್ರಿಕಾರಂಗದಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸಿಕೊಂಡು ಉತ್ತುಂಗಕ್ಕೇರಲೆಂದು ಹಾರೈಸುತ್ತೇನೆ.

-ಕೆ. ಆರ್. ಶ್ರೀನಾಥ್, ಅಟ್ಲಾಂಟ, ಯುಎಸ್ಎ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor