ಕನ್ನಡ ಪತ್ರಿಕೋದ್ಯಮದ ಇತಿಹಾಸವನ್ನು ಕೇವಲ ಪ್ರಸಾರ ಸಂಖ್ಯೆಗಳ ಇತಿಹಾಸವಾಗಿ ನೋಡಲು ಸಾಧ್ಯವಿಲ್ಲ. ಅದು ಕನ್ನಡಿಗರ ಚಿಂತನೆಯ, ಪ್ರಶ್ನೆಗಳ, ಸಂಘರ್ಷಗಳ ಮತ್ತು ಬದಲಾಗುತ್ತಿರುವ ಪ್ರಜ್ಞೆಯ ಇತಿಹಾಸವೂ ಹೌದು.

1843ರಲ್ಲಿ ಮಂಗಳೂರಿನಿಂದ ಹೊರಬಂದ ಹರ್ಮನ್ ಫ್ರೆಡರಿಕ್ ಮೋಗ್ಲಿಂಗರ ‘ಮಂಗಳೂರು ಸಮಾಚಾರ’ದಿಂದ ಆರಂಭವಾದ ಕನ್ನಡ ಪತ್ರಿಕೋದ್ಯಮದ ಪಯಣ ಇಂದಿನ ಡಿಜಿಟಲ್ ಯುಗದವರೆಗೆ ಸಾಗಿಬಂದ ಹಾದಿಯಲ್ಲಿ ಸುದ್ದಿ ಯನ್ನು ನೀಡುವುದರ ಜೊತೆಗೆ ನಾಡಿಗೆ ನೀಡಿದ ಅತ್ಯಂತ ಮಹತ್ವದ ಕೊಡುಗೆ ಪ್ರಶ್ನಿಸುವ ಅಭ್ಯಾಸವನ್ನು ಬೆಳೆಸಿದ್ದು.

ಕನ್ನಡ ನಾಡು ಅಸಾಧಾರಣ ಸಾಹಿತ್ಯ ಪರಂಪರೆಯನ್ನು ಹೊಂದಿರುವ ನಾಡು. ದೇಶದಲ್ಲೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ರಾಜ್ಯ. ಕನ್ನಡದ ಸಾಹಿತ್ಯ ಪರಂಪರೆ ಭಾಷೆಯನ್ನು ಮಾತ್ರ ಶ್ರೀಮಂತಗೊಳಿಸಿಲ್ಲ, ಕನ್ನಡಿಗರ ಸಾಮಾಜಿಕ ಮತ್ತು ರಾಜಕೀಯ ಚಿಂತನೆಯನ್ನೂ ಪ್ರಭಾವಿಸಿದೆ. ಕನ್ನಡ ಪತ್ರಿಕೋದ್ಯಮದ ಆರಂಭ ಕಾಲದಿಂದಲೂ ಸಾಹಿತ್ಯ ಮತ್ತು ಪತ್ರಿಕೋದ್ಯಮ ನಡುವೆ ಗಟ್ಟಿಯಾದ ಸಂಬಂಧವಿದೆ.

ಕನ್ನಡ ಸಾಹಿತ್ಯದಂತೆಯೇ ಕನ್ನಡದ ಅನೇಕ ಪತ್ರಿಕೆಗಳು ತಮ್ಮ ಕಾಲದ ಸಮಾಜವನ್ನು ಕೇವಲ ಪ್ರತಿಬಿಂಬಿಸುವುದು ಮಾತ್ರವಲ್ಲದೆ ಅದನ್ನು ರಚನಾತ್ಮಕವಾಗಿ ಕಟ್ಟುವ ಪ್ರಯತ್ನವನ್ನೂ ಮಾಡಿವೆ. ಪತ್ರಿಕೆ ಯಾರ ಪರವಾಗಿ ಮಾತನಾಡಬೇಕು ಎಂಬ ಪ್ರಶ್ನೆಗೆ ಕನ್ನಡದ ಹಲವು ತಲೆಮಾರುಗಳು ತಮ್ಮದೇ ರೀತಿಯಲ್ಲಿ ಉತ್ತರಿಸಿವೆ. ಸಾಮಾಜಿಕ ಸುಧಾರಣೆಯ ಚಳವಳಿಗಳಿಂದ ಹಿಡಿದು ದಲಿತ-ಬಂಡಾಯ ಸಾಹಿತ್ಯದವರೆಗೆ, ಪತ್ರಿಕೋದ್ಯಮ ಕೇವಲ ಸುದ್ದಿಯನ್ನು ನೀಡದೆ ಸಮಾಜದೊಳಗಿನ ಅಸಮಾನತೆಗಳನ್ನು ಪ್ರಶ್ನಿಸುವ ಕೆಲಸವನ್ನೂ ಮಾಡಿದೆ.

ಸುಧಾ, ಮಯೂರ, ಕಸ್ತೂರಿ, ಪ್ರಜಾಮತ, ತರಂಗ ಮುಂತಾದ ನಿಯತಕಾಲಿಕೆಗಳು ಸಾಹಿತ್ಯ ಮತ್ತು ಚಿಂತನೆಯನ್ನು ಮನೆಮನೆಗೆ ಕೊಂಡೊಯ್ದರೆ, ವಡ್ಡರ್ಸೆ ರಘುರಾಮ ಶೆಟ್ಟಿಯವರ ಮುಂಗಾರು ಓದುಗರನ್ನೇ ಪತ್ರಿಕೆಯ ಮಾಲಕರನ್ನಾಗಿಸುವ ಪ್ರಯೋಗದ ಮೂಲಕ ಜನಪರ ಪತ್ರಿಕೋದ್ಯಮಕ್ಕೆ ಹೊಸ ಅರ್ಥ ನೀಡಿತು. ನಂತರ ಬಂದ ಲಂಕೇಶ್ ಪತ್ರಿಕೆ ಪತ್ರಿಕೋದ್ಯಮದ ಭಾಷೆಯನ್ನೇ ಬದಲಿಸಿತು. ಸುದ್ದಿಯನ್ನು ಒಂದು ನಿರ್ಲಿಪ್ತ, ಅಧಿಕಾರಪರ ಭಾಷೆಯಲ್ಲಿ ಹೇಳಬೇಕೆಂಬ ಕಲ್ಪನೆಯನ್ನು ಮುರಿದು, ವ್ಯಂಗ್ಯ, ಸಾಹಿತ್ಯ, ರಾಜಕೀಯ ಉತ್ತರದಾಯಿತ್ವ ಮತ್ತು ಸಾಮಾಜಿಕ ಬದ್ಧತೆಯನ್ನು ಪತ್ರಿಕೋದ್ಯಮದ ಭಾಗವನ್ನಾಗಿಸಿತು.

ಓದುಗರನ್ನು ಪ್ರಶ್ನಿಸಲು ಕಲಿಸಿದ್ದು, ಬಹುಶಃ ಲಂಕೇಶ್ ಪತ್ರಿಕೆಯ ಬಹು ದೊಡ್ಡ ಕೊಡುಗೆ. ಅಧಿಕಾರದಲ್ಲಿರುವವರನ್ನು ಮಾತ್ರವಲ್ಲ, ನಮ್ಮನ್ನು, ಸಮಾಜವನ್ನು, ನಮ್ಮ ಪೂರ್ವಾಗ್ರಹಗಳನ್ನು, ನಮ್ಮ ಅನುಕೂಲಕರ ಸತ್ಯಗಳನ್ನೂ ಸಹ.

ಒಂದು ಒಳ್ಳೆಯ ಪತ್ರಿಕೆ ತನ್ನ ಕಾಲದ ಸಾಕ್ಷಿಯಾಗುವು ದರೊಂದಿಗೇ ತನ್ನ ಕಾಲದ ಮನಸ್ಸುಗಳೊಂದಿಗೆ ವಾದಿಸುತ್ತದೆ. ಈ ಪರಂಪರೆಯಲ್ಲಿಯೇ ‘ವಾರ್ತಾಭಾರತಿ’ಯ ಇಪ್ಪತ್ತನಾಲ್ಕು ವರ್ಷಗಳ ಪಯಣವನ್ನು ನೋಡಬೇಕೆಂದು ನನಗನಿಸುತ್ತದೆ.

ಮಂಗಳೂರಿನಿಂದ ಆರಂಭವಾಗಿ ಇಂದು ಹಲವು ಕಡೆಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿರುವ ‘ವಾರ್ತಾ ಭಾರತಿ’, ಮುಖ್ಯವಾಹಿನಿಯಲ್ಲಿ ದನಿಯಿಲ್ಲದವರ ಧ್ವನಿಗಳಿಗೆ ಜಾಗ ನೀಡುವ ಪ್ರಯತ್ನ ಮಾಡಿದೆ. ಜನಪರ ಪತ್ರಿಕೋದ್ಯಮ ವಿಶೇಷವಾಗಿ ಇಂದಿನ ರಾಜಕೀಯ ಪರಿಸರದಲ್ಲಿ ಸುಲಭದ ದಾರಿಯಲ್ಲ. ರಾಜಕೀಯ ಒತ್ತಡ, ಆರ್ಥಿಕ ಅವಲಂಬನೆ, ದೃಶ್ಯಮಾಧ್ಯಮ, ಜಾಹೀರಾತಿನ ಪ್ರಭಾವ, ಸಾಮಾಜಿಕ ಮಾಧ್ಯಮದ ಸುಳ್ಳು ಸುದ್ದಿಗಳ ಪ್ರವಾಹ ಮತ್ತು ತತ್‌ಕ್ಷಣದ ಸಂಚಲನದ ಒತ್ತಡಗಳ ನಡುವೆ, ಒಂದು ಪತ್ರಿಕೆ ತನ್ನ ಜನಪರ ನಿಲುವನ್ನು ಉಳಿಸಿಕೊಳ್ಳುವುದು ಕಷ್ಟ ಸಾಧ್ಯ.

ಸತ್ಯ ಅನನುಕೂಲವಾಗಿರುವಾಗಲೂ ಸತ್ಯದ ಪರ ನಿಲ್ಲುವುದೇ ಪತ್ರಿಕೋದ್ಯಮದ ನಿಜವಾದ ಪರೀಕ್ಷೆ.

ಈ ದೃಷ್ಟಿಯಿಂದ ನೋಡಿದಾಗ, ‘ವಾರ್ತಾಭಾರತಿ’ಯ ಇಪ್ಪತ್ತನಾಲ್ಕು ವರ್ಷಗಳ ನಿರಂತರತೆ ಮತ್ತು ಪ್ರತಿಕೂಲ ಪರಿಸರದಲ್ಲೂ ತನ್ನ ಜನಪರ ದೃಷ್ಟಿಕೋನವನ್ನು ಉಳಿಸಿಕೊಳ್ಳುವ ಪ್ರಯತ್ನ ಅಭಿನಂದನೆಗೆ ಅರ್ಹ. ಅದನ್ನು ಒಪ್ಪದಿರುವ, ಪ್ರಶ್ನಿಸುವ ಹಕ್ಕು ಓದುಗರಿಗಿದೆ. ಆದರೆ ಪ್ರಶ್ನೆಗಳನ್ನು ಎದುರಿಸುತ್ತಲೇ ತನ್ನ ಧ್ವನಿಯನ್ನು ಉಳಿಸಿಕೊಳ್ಳುವುದು ಒಂದು ಪತ್ರಿಕೆಯ ಪ್ರಜಾಸತ್ತಾತ್ಮಕ ಆರೋಗ್ಯದ ಸಂಕೇತ.

ಪತ್ರಿಕೆಯ ಕೆಲಸ ಎಲ್ಲರನ್ನೂ ಸಂತೋಷಪಡಿಸುವುದಲ್ಲ. ಕೆಲವೊಮ್ಮೆ ಅದು ಅಸಮಾಧಾನವುಂಟುಮಾಡಬೇಕು, ಅಧಿಕಾರಕ್ಕೆ ಕಿರಿಕಿರಿ ಉಂಟುಮಾಡಬೇಕು. ಸಮಾಜದ ಬಹುಮತದ ನಂಬಿಕೆಗಳನ್ನೂ ಪ್ರಶ್ನಿಸಬೇಕು. ಆಗಲೇ ಅದು ನಿಜ ಅರ್ಥದಲ್ಲಿ ಜನರ ಪರ ನಿಂತ ಪತ್ರಿಕೆಯಾಗುತ್ತದೆ. ಸಮಾಜದ ಆತ್ಮಸಾಕ್ಷಿಯಾಗುತ್ತದೆ.

ಇಪ್ಪತ್ತೈದು ವರ್ಷಗಳ ಸಂಭ್ರಮದಲ್ಲಿ ‘ವಾರ್ತಾಭಾರತಿ’ ಯನ್ನು ಅಭಿನಂದಿಸುವುದು ಎಂದರೆ ಕೇವಲ, ಅದರ ಸಾಧನೆಗಳನ್ನು ಹೊಗಳುವುದು ಮಾತ್ರವಲ್ಲ, ಕನ್ನಡ ಪತ್ರಿಕೋದ್ಯಮ, ಸುದ್ದಿಯನ್ನು ಚಿಂತನೆಯಾಗಿ, ಪ್ರಶ್ನೆಯಾಗಿ, ಸಾಮಾಜಿಕ ಬದಲಾವಣೆಯಾಗಿ ಪರಿವರ್ತಿಸಿದ ದೀರ್ಘ ಪರಂಪರೆಯನ್ನು ಗೌರವಿಸಿದಂತೆ.

ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ತಂತ್ರಜ್ಞಾನ ಬದಲಾಗಬಹುದು. ಪತ್ರಿಕೆಯ ರೂಪ ಬದಲಾಗಬಹುದು. ಓದುವ ವಿಧಾನ ಬದಲಾಗಬಹುದು. ಆದರೆ ಜನರ ದನಿಯಾಗಬೇಕೆನ್ನುವ ಪತ್ರಿಕೋದ್ಯಮದ ಮೂಲ ಧ್ಯೇಯ ಬದಲಾಗಬಾರದು.

ಕೇವಲ ಸುದ್ದಿಯ ಮಧ್ಯವರ್ತಿಯಾಗಿಯೇ ಸತ್ಯದ ಪರವಾಗಿ, ಅಧಿಕಾರವನ್ನು, ಸಮಾಜವನ್ನು ಪ್ರಶ್ನಿಸುವ ನೈತಿಕ ಧೈರ್ಯವನ್ನು ಜೀವಂತವಾಗಿಟ್ಟುಕೊಂಡು ಜನರ ನಡುವೆ ಪತ್ರಿಕೋದ್ಯಮ ತನ್ನ ಧ್ವನಿಯನ್ನು ಕಳೆದುಕೊಳ್ಳದೆ ನಿಲ್ಲಬಹುದೇ ಎಂಬ ಪ್ರಶ್ನೆಗೆ ತನ್ನ ಮುಂದಿನ ಇಪ್ಪತ್ತೈದು ವರ್ಷಗಳ ಮೂಲಕ ವಾರ್ತಾಭಾರತಿ ಉತ್ತರಿಸುವಂತಾಗಲಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕಿಶೋರ್

contributor