‘ವಾರ್ತಾಭಾರತಿ’ ನಾಡಿನ ಪ್ರಮುಖ ಜನದನಿಗಳಲ್ಲಿ ಒಂದು. ಇಂದಿನ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ನಡುವೆ ಸ್ಪರ್ಧಾತ್ಮಕವಾಗಿ ತನ್ನದೇ ಅಸ್ತಿತ್ವವನ್ನು ಮಹತ್ವವನ್ನು ಕಾಯ್ದುಕೊಂಡಿರುವ ಕೆಲವೇ ಪತ್ರಿಕೆಗಳಲ್ಲಿ ವಾರ್ತಾಭಾರತಿಯೂ ಒಂದಾಗಿದೆ. ಕಾರಣ ಪತ್ರಿಕೆಗೆ ಇರುವ ಬದ್ಧತೆ, ಪ್ರಾಮಾಣಿಕತೆ, ನಿಜವಾದ ಜನಪರ ಕಾಳಜಿ.

ಮಾಧ್ಯಮ ಅಥವಾ ಪತ್ರಿಕೆ ಸಮಾಜದ ಪ್ರತಿಬಿಂಬ. ‘ವಾರ್ತಾಭಾರತಿ’ ಓದುವಾಗ ನೋಡುವಾಗ ಈ ಮಾತು ನಿಜ ಎನಿಸುತ್ತದೆ. ನಾನು ಕವಿತೆ ಬರೆಯಲಾರಂಭಿಸಿದ ದಿನಗಳಿಂದ ಇಂದಿಗೂ ನನ್ನ ಕವಿತೆ, ಲೇಖನ ಇಂತಹ ಪತ್ರಿಕೆಯಲ್ಲಿ ಪ್ರಕಟವಾಗಬೇಕೆಂದು ಕನಸು ಕಾಣುತ್ತಿದ್ದೆ. ಆ ಸಾಲಿನಲ್ಲಿ ವಾರ್ತಾಭಾರತಿಯೂ ಒಂದು. ದೇವನೂರರಿಂದ ಹಿಡಿದು ಸುಬ್ಬು ಹೊಲೆಯಾರ್, ಶಿವಸುಂದರ್ ಮೊದಲಾದವರವರೆಗೆ ಮಹತ್ವದ ಲೇಖಕರು, ಬರಹಗಾರರು ಈ ಪತ್ರಿಕೆಯಲ್ಲಿ ಬರೆಯವುದು ಸ್ಫೂರ್ತಿದಾಯಕ ಮತ್ತು ಓದುಗ ವಲಯದ ವಿಸ್ತರಣೆಯಲ್ಲಿಯೂ ಮುಖ್ಯ.

ವಾರ್ತಾಭಾರತಿ ರಾಜ್ಯ-ದೇಶ ಮಟ್ಟದ ಪತ್ರಿಕೆ ಮತ್ತು ಸಮೂಹ ಮಾಧ್ಯಮಗಳ ನಡುವೆ ಇಂದು ತನ್ನದೇ ಆದ ಸ್ಥಾನ ಹೊಂದಿದೆ. ಇದಕ್ಕೆ ಪತ್ರಿಕೆಗಿರುವ ನಿಷ್ಪಕ್ಷ, ಸರ್ವಸಮಾನ, ತಳಮಟ್ಟದ ಇಡೀ ಸಮಾಜದ ಎಲ್ಲವನ್ನು ಒಳಗೊಳ್ಳುವ ಅದರ ಧೋರಣೆ ಮುಖ್ಯವಾಗಿದೆ. ಸಾಹಿತ್ಯ, ಸಂಸ್ಕೃತಿ, ಚರಿತ್ರೆ, ಸಾಮಾಜಿಕ, ಧಾರ್ಮಿಕ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರಗಳ ಸಮಕಾಲೀನ ಸುದ್ದಿ ಮತ್ತು ಲೇಖನಗಳಿಗೆ ಇಲ್ಲಿ ಜಾಗವಿದೆ. ಮಹತ್ವವಿದೆ. ಇಂತಹ ದೃಷ್ಟಿ ಪತ್ರಿಕೆಯನ್ನು ಕಾಯುವ ಓದುವ ತುಡಿತವನ್ನು ಕಾಪಾಡಿಕೊಳ್ಳುವಲ್ಲಿ ಗಮನಾರ್ಹ.

ಬಹಳ ಮುಖ್ಯವಾಗಿ ಯಾವುದು ನ್ಯಾಯ, ಯಾವುದು ಅನ್ಯಾಯ, ಯಾವುದು ಸರಿ, ಯಾವುದು ತಪ್ಪು ಎಂಬ ದೃಢತೆ ಪತ್ರಿಕೆಗೆ ಮುಖ್ಯ. ರಾಜಕೀಯವಾಗಲೀ, ಸಾಮಾಜಿಕವಾಗಲೀ ಮನುಷ್ಯಪರ, ಜೀವಪರ ಯಾವುದು ಎಂಬ ಕ್ಲಾರಿಟಿ ‘ವಾರ್ತಾಭಾರತಿ’ಯ ವಿಸ್ತಾರಕ್ಕೆ ಕಾರಣ. ಎಡಪಂಥೀಯ, ಬಲ ಪಂಥೀಯ, ಕೋಮುವಾದ, ಸೆಕ್ಯುಲರ್‌ವಾದ, ಪ್ರಜಾಸತ್ತಾತ್ಮಕ, ಸಂವಿಧಾನ ಪರ, ಸಂವಿಧಾನ ವಿರೋಧ ಇಂತಹವುಗಳ ವಿಷಯದಲ್ಲಿ ವಾರ್ತಾಭಾರತಿಗೆ ತುಂಬಾ ಕ್ಲಾರಿಟಿ ಇದೆ. ಅದಕ್ಕಾಗಿಯೇ ನನಗೆ ‘ವಾರ್ತಾಭಾರತಿ’ ಮುಖ್ಯ ಮತ್ತು ಓದುಗರಿಗೂ ಮುಖ್ಯ.

ಇಂದಿಗೂ ಮುದ್ರಣ ಅಥವಾ ಸೋಷಿಯಲ್ ಮೀಡಿಯಾ ಎರಡರಲ್ಲೂ ‘ವಾರ್ತಾಭಾರತಿ’ ನಿರ್ವಹಿಸುತ್ತಿರುವ ಪಾತ್ರ ನನಗೆ ಅಚ್ಚುಮೆಚ್ಚು. ರಾಜ್ಯದ ಸುದ್ದಿ ಇರಲಿ, ದೇಶದ ಸುದ್ದಿ ಇರಲಿ ಎಲ್ಲಾ ಕಡೆ ‘ವಾರ್ತಾಭಾರತಿ’ ಪ್ರತಿನಿಧಿಸುತ್ತದೆ. ಯಾರೂ ಬಿತ್ತರಿಸದ, ಬರೆಯದ, ಪ್ರಕಟಿಸದ ಅನೇಕ ಸುದ್ದಿಗಳು, ‘ವಾರ್ತಾಭಾರತಿ’ಯಲ್ಲಿ ಬರುತ್ತದೆ. ಇದರ ಪತ್ರಕರ್ತ ಸ್ನೇಹಿತರು ಅಷ್ಟೇ ನಿಷ್ಠುರವಾಗಿ ಸಮಾಜದ ಧ್ವನಿಯಾಗಿ ನೊಂದವರ ನುಡಿಯಾಗಿ ಕಾಣುತ್ತಾರೆ.

ಇತ್ತೀಚಿನ ಸಿಜೆಪಿ ಜಂತರ್ ಮಂತರ್‌ನಲ್ಲಿ ನಡೆಸಿದ ಹೋರಾಟದವರೆಗೆ ‘ವಾರ್ತಾಭಾರತಿ’ ಮಾಡಿದ ಸುದ್ದಿ ಪಾತ್ರ ಅತ್ಯಂತ ಜನಪರ ಮತ್ತು ಅಚ್ಚುಮೆಚ್ಚು. ಅದರಲ್ಲೂ ಕನ್ನಡದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ, ಪ್ರಗತಿಪರ ಹೋರಾಟಗಳ ಬಗೆಗೆ ಕೊಡುವ ಅಪ್‌ಡೇಟ್‌ಗಳು, ಬರೆಯುವ ಸುದ್ದಿಗಳು, ಲೇಖನಗಳು ಗಮನಾರ್ಹ ಮತ್ತು ಮುಖ್ಯ. ಅದಕ್ಕಾಗಿ ‘ವಾರ್ತಾಭಾರತಿ’ಯನ್ನು ನಾನು ಅಭಿನಂದಿಸುತ್ತೇನೆ.

‘ವಾರ್ತಾಭಾರತಿ’ ಇಂದಿನ ಪತ್ರಿಕಾ ಸಮೂಹ ಮಾಧ್ಯಮಗಳಲ್ಲಿ ದಿಟ್ಟ ಮತ್ತು ಗಟ್ಟಿ ಧ್ವನಿಯಾಗಿ ಕೇಳಿ ಬರುತ್ತಿರುವ ಪತ್ರಿಕೆಗಳಲ್ಲಿ ಒಂದು. ಇಂದಿನ ಮನುವಾದಿ, ಕೋಮುವಾದಿ, ಜೀವವಿರೋಧಿ, ಬಹುತ್ವ ವಿರೋಧಿ ಪ್ರಭುತ್ವ ಮತ್ತು ಹಿಂದುತ್ವ ವ್ಯವಸ್ಥೆಯ ವಿರುದ್ಧ ಕೇಳಿಬರುವ ಧ್ವನಿಗಳಿಗೆ ನೆಲೆಯನ್ನು ವೇದಿಕೆಯನ್ನು ಕಲ್ಪಿಸಿಕೊಡುವ ಮಾಧ್ಯಮಗಳು ಅಪರೂಪ. ಅಂತಹ ಅಪರೂಪವಾದ ನೆಲೆಯನ್ನು, ವೇದಿಕೆಯನ್ನು ಒದಗಿಸುವ ವಾರ್ತಾಭಾರತಿ ಮಹತ್ವದ್ದಾಗಿ ಕಾಣುತ್ತದೆ.

ಸಮಾನತೆ, ಮಾನವೀಯತೆ, ಪ್ರಜಾಸತ್ತಾತ್ಮಕ ಮೌಲ್ಯಗಳ ಧ್ವನಿಗಳಿಗೆ ವಾರ್ತಾಭಾರತಿ ಆದ್ಯತೆಯನ್ನು ನೀಡುತ್ತದೆ. ಅತ್ಯಂತ ನಿಷ್ಠುರವಾದ ಮತ್ತು ನಿರ್ಭಯದ ಧ್ವನಿಗಳಿಗೆ ಮತ್ತು ಬರಹಗಳಿಗೆ ವಾರ್ತಾಭಾರತಿಯಲ್ಲಿ ಸ್ಥಳವಿದೆ ಎಂಬುದು ಕನ್ನಡದ ಹೆಮ್ಮೆಯಾಗಿದೆ. ಇದರ ಸಾಮಾಜಿಕ ಮಾಧ್ಯಮದಲ್ಲಿ, ಅಭಿಜೀತ್ ದೀಪ್ಕೆ, ನೇಹಾ ಬೋರಾ, ಪ್ರಕಾಶ್ ರಾಜ್, ಕಿಶೋರ್ ಮೊದಲಾದಂತಹ ಪ್ರಖರ ಭಾಷಣ ಮತ್ತು ಬರಹಗಾರರ ಧ್ವನಿಗಳನ್ನು ‘ವಾರ್ತಾಭಾರತಿ’ಯಲ್ಲಿ ನಾನು ಕೇಳಿದ್ದೇನೆ ಮತ್ತು ಓದಿದ್ದೇನೆ.

ಇಂತಹ ದಿಟ್ಟವಾದ ನಿರ್ಭೀತ ಪತ್ರಿಕೋದ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ‘ವಾರ್ತಾಭಾರತಿ’ ತನ್ನ ಸುದೀರ್ಘ ಪಯಣವನ್ನು ಮಾಡಿ ತನ್ನದೇ ವಿಶಿಷ್ಟ ಹೆಜ್ಜೆಗುರುತುಗಳನ್ನು ಬಿಟ್ಟಿದೆ. ನನ್ನ ಸ್ನೇಹಿತರೊಬ್ಬರು ನಿವೃತ್ತ ಪೊಲೀಸ್ ಅಧಿಕಾರಿ, ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ಶಂಭುಲಿಂಗಸ್ವಾಮಿ ‘ವಾರ್ತಾಭಾರತಿ’ಯ ಗಂಭೀರ ಓದುಗ ಮತ್ತು ಚಿಂತಕ. ವಾರ್ತಾಭಾರತಿಯಲ್ಲಿ ಬರುವ ಹಲವು ವಿಚಾರಗಳನ್ನು ಸ್ನೇಹಿತರ ಗುಂಪುಗಳ ಜೊತೆ ಚರ್ಚಿಸುವುದನ್ನು ನಾನು ಗಮನಿಸಿದ್ದೇನೆ. ಅದೇ ರೀತಿ ನನ್ನ ಸಂಪರ್ಕದಲ್ಲಿರುವ ಹಲವು ಸಂಘಟನೆಗಳ ಹೋರಾಟಗಾರರು, ಬರಹಗಾರರು, ಚಿಂತಕರು ‘ವಾರ್ತಾಭಾರತಿ’ಯ ಲೇಖನ ಮತ್ತು ಸುದ್ದಿಗಳನ್ನು ಹಲವು ಚರ್ಚೆಗಳು ಮತ್ತು ಗೋಷ್ಠಿಗಳಲ್ಲಿ ಬಳಸಿರುವುದನ್ನು ನಾನು ಕಂಡಿದ್ದೇನೆ.

ಕವಿಗಳ, ಸಾಹಿತಿಗಳ, ವಿದ್ಯಾರ್ಥಿಗಳ ಸ್ನೇಹಿಯಾಗಿ ವಾರ್ತಾಭಾರತಿ ಜನಸಮುದಾಯದ ನಡುವೆ ಸ್ಥಾನ ಪಡೆದಿರುವುದನ್ನು ಅಲ್ಲಗಳೆಯಲಾಗದು. ಹಾಗಾಗಿ ‘ವಾರ್ತಾಭಾರತಿ’ಯ 23 ವರ್ಷಗಳ ಯಾನ ಸಾರ್ಥಕ ಹೆಜ್ಜೆಗಳೇ ಆಗಿವೆ.

ಪತ್ರಿಕೆ ಸುಮ್ಮನೆ ಅಲ್ಲ, ಅದು ಪರಿವರ್ತನೆಯ ಅಸ್ತ್ರ, ಸಾರ್ವಜನಿಕ ಅಭಿಪ್ರಾಯ ರೂಪಿಸುವ ಬಹುದೊಡ್ಡ ಪಾತ್ರ ವಹಿಸುವ ಪ್ರಜಾಪ್ರಭುತ್ವದ ಅಂಗ. ಇದನ್ನು ವಾರ್ತಾಭಾರತಿ ಸಮರ್ಥವಾಗಿ ನಿರ್ವಹಿಸುತ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಈ ಕೆಲಸವನ್ನು ಹೀಗೆ ಮುನ್ನಡೆಸಲಿ. ನಾವೆಲ್ಲರೂ ಜತೆ ಇರುತ್ತೇವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಹಾದೇವ ಶಂಕನಪುರ ಕೊಳ್ಳೇಗಾಲ

contributor

ಕವಿಗಳು, ಕೊಳ್ಳೇಗಾಲ