ʼವಾರ್ತಾ ಭಾರತಿʼ ವಿಶ್ವಾಸಾರ್ಹ, ಧೈರ್ಯಶಾಲಿ ಮತ್ತು ಜನಪರ ಪತ್ರಿಕೆ: ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ
ವಾರ್ತಾಭಾರತಿಗೆ 24ರ ಸಂಭ್ರಮ
ದುಬೈ: 24 ವರ್ಷಗಳ ಹಿಂದೆ ಸತ್ಯದ ದೀವಿಗೆಯಾಗಿ ಆರಂಭವಾದ "ವಾರ್ತಾ ಭಾರತಿ" ಇಂದು ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ಧೈರ್ಯಶಾಲಿ ಮತ್ತು ಜನಪರ ದಿನಪತ್ರಿಕೆಯಾಗಿ ಬೆಳೆದು ನಿಂತಿರುವುದು ಅನಿವಾಸಿ ಕನ್ನಡಿಗರಿಗೆ ಹೆಮ್ಮೆಯ ವಿಷಯ.
ಸಾಮಾಜಿಕ ನ್ಯಾಯ ಮತ್ತು ಸತ್ಯಾನ್ವೇಷಣೆಯೇ ತನ್ನ ಉಸಿರಾಗಿಸಿಕೊಂಡು, ಯಾವುದೇ ಒತ್ತಡಗಳಿಗೆ ಮಣಿಯದೆ ನೇರ, ನಿಷ್ಪಕ್ಷಪಾತ ಪತ್ರಿಕೋದ್ಯಮವನ್ನು ನಡೆಸಿಕೊಂಡು ಬಂದಿರುವ ನಿಮ್ಮ ಸಾಧನೆ ಅಸಾಮಾನ್ಯವಾದದ್ದು. ಕರಾವಳಿ ಕರ್ನಾಟಕದಿಂದ ಆರಂಭವಾದ ನಿಮ್ಮ ಪಯಣ ಇಂದು ಜಾಗತಿಕ ಕನ್ನಡಿಗರ ಮನೆಮಾತಾಗಿದೆ.
ದುಬೈನಲ್ಲಿ ನೆಲೆಸಿರುವ ನಮಗೆ, ನಾಡಿನ ಸುದ್ದಿ, ನುಡಿ ಮತ್ತು ಸಂಸ್ಕೃತಿಯ ಸ್ಪರ್ಶವನ್ನು ಪ್ರತಿದಿನ ತಲುಪಿಸುತ್ತಿರುವುದು ವಾರ್ತಾಭಾರತಿ. ನಿಮ್ಮ ಪ್ರಬುದ್ಧ ಸಂಪಾದಕೀಯಗಳು, ಆಳವಾದ ವಿಶ್ಲೇಷಣೆಗಳು ಮತ್ತು ಮಾನವೀಯ ಕಾಳಜಿಯ ವರದಿಗಳು ನಮ್ಮಲ್ಲಿ ಹೊಸ ಚಿಂತನೆಯನ್ನು ಮೂಡಿಸುತ್ತವೆ.
ಈ ಮಹತ್ವದ 24ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ವಾರ್ತಾಭಾರತಿ ತಂಡದ ಎಲ್ಲಾ ಸಂಪಾದಕರು, ವರದಿಗಾರರು ಮತ್ತು ಸಿಬ್ಬಂದಿ ವರ್ಗದವರಿಗೆ ನನ್ನ ಮತ್ತು ದುಬೈ ಕರ್ನಾಟಕ ಸಂಘದ ಎಲ್ಲಾ ಸದಸ್ಯರ ಪರವಾಗಿ ಮನದಾಳದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ವಾರ್ತಾಭಾರತಿ ತನ್ನ ಬೆಳಕನ್ನು ಇನ್ನಷ್ಟು ಪ್ರಖರವಾಗಿ ಹರಡುತ್ತಾ, ನಾಡಿನ ಧ್ವನಿಯಾಗಿ, ಸತ್ಯದ ದನಿಯಾಗಿ ಶತಮಾನದತ್ತ ದಾಪುಗಾಲು ಹಾಕಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.
-ಶಶಿಧರ ನಾಗರಾಜಪ್ಪ, ಅಧ್ಯಕ್ಷರು ಕರ್ನಾಟಕ ಸಂಘ ದುಬೈ (ರಿ), ಯುಎಇ