ಮಾಧ್ಯಮ ಧರ್ಮವನ್ನು ಎತ್ತಿಹಿಡಿದ ‘ವಾರ್ತಾಭಾರತಿ’
ಪತ್ರಿಕೋದ್ಯಮವು ಇಂದು ಹಲವು ಬಗೆಯ ಒತ್ತಡಗಳು ಮತ್ತು ವ್ಯಾಪಾರೀಕರಣದ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಸತ್ಯ, ವಸ್ತುನಿಷ್ಠತೆ, ನಿಷ್ಪಕ್ಷಪಾತತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ತನ್ನ ಮೂಲ ಆಶಯಗಳನ್ನಾಗಿ ಮಾಡಿಕೊಂಡು ಮುನ್ನಡೆಯುತ್ತಿರುವ ವಾರ್ತಾಭಾರತಿ ಪತ್ರಿಕೆಯ 24ನೇ ವರ್ಷಾಚರಣೆಯ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕರು, ಪತ್ರಕರ್ತರು, ಸಿಬ್ಬಂದಿ ಹಾಗೂ ಓದುಗರೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಸಂವಿಧಾನದ ಆಶಯಗಳನ್ನೇ ತನ್ನ ಸಂಪಾದಕೀಯ ನೀತಿಯನ್ನಾಗಿ ಮಾಡಿಕೊಂಡಿರುವ ವಾರ್ತಾಭಾರತಿ ಪತ್ರಿಕೆ ಕನ್ನಡಿಗರ ಆತ್ಮಸಾಕ್ಷಿಯಾಗಿದೆ.
ಹಣಕಾಸಿನ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ಹಾದಿ ತಪ್ಪದೆ, ಅಧಿಕಾರದ ಗದ್ದುಗೆಯ ಮುಲಾಜಿಗೆ ಬೀಳದೆ, ಬಡವರು, ಶೋಷಿತರು ಮತ್ತು ದುರ್ಬಲರ ಪರವಾಗಿ ಧ್ವನಿ ಎತ್ತುತ್ತಾ ಅನ್ಯಾಯ, ಅಧರ್ಮ, ಅನೀತಿಗಳ ವಿರುದ್ಧ ಜನಜಾಗೃತಿಗೊಳಿಸುತ್ತಾ ಮುನ್ನಡೆಯುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ.
ಮಾಧ್ಯಮಗಳು ಉದ್ಯಮವಾಗುತ್ತಿರುವ ಪೈಪೋಟಿಯಲ್ಲಿ ವಾರ್ತಾಭಾರತಿ ತನ್ನ ವೃತ್ತಿಧರ್ಮವನ್ನು ಕಳೆದುಕೊಳ್ಳಲಿಲ್ಲ, ವಿಶ್ವಾಸಾರ್ಹತೆಯ ಶೀಲ ಭಂಗವಾಗಲು ಅವಕಾಶ ನೀಡಲಿಲ್ಲ, ಅಧಿಕಾರದ ಗದ್ದುಗೆಗಳಿಗೆ ಶರಣಾಗಲಿಲ್ಲ ಎನ್ನುವುದು ಮಾಧ್ಯಮ ಕ್ಷೇತ್ರದ ಬಗ್ಗೆ ಭರವಸೆ ಮೂಡಿಸಿದೆ. ಕಾಲದ ಕರೆಗೆ ಓಗೊಟ್ಟು ಮುದ್ರಣ ಮಾಧ್ಯಮದ ಜೊತೆಯಲ್ಲಿ ಡಿಜಿಟಲ್ ಮಾಧ್ಯಮದಲ್ಲಿಯೂ ಛಾಪು ಮೂಡಿಸುತ್ತಿರುವ ವಾರ್ತಾಭಾರತಿ ಪತ್ರಿಕೆಯ ಧ್ವನಿ ಜಗದಗಲಕ್ಕೂ ಕೇಳಿಸಲಿ ಎಂದು ಆಶಿಸುತ್ತೇನೆ.
ಪತ್ರಿಕೆಯೊಂದರ ಯಶಸ್ಸನ್ನು ಅದರ ಪ್ರಸಾರ ಸಂಖ್ಯೆ ಅಥವಾ ವ್ಯಾಪಾರದ ಪ್ರಮಾಣದಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ. ಸಮಾಜದಲ್ಲಿ ಅದು ಯಾವ ಧ್ವನಿಗೆ ವೇದಿಕೆಯಾಗುತ್ತದೆ, ಯಾರ ಪರವಾಗಿ ನಿಲ್ಲುತ್ತದೆ, ಯಾವ ಸತ್ಯವನ್ನು ಜನರ ಮುಂದಿಡುತ್ತದೆ ಮತ್ತು ಅಧಿಕಾರವನ್ನು ಎಷ್ಟು ಹೊಣೆಗಾರಿಕೆಯಿಂದ ಪ್ರಶ್ನಿಸುತ್ತದೆ ಎಂಬುದೇ ಅದರ ನಿಜವಾದ ಯಶಸ್ಸಿನ ಮಾನದಂಡ. ಈ ದೃಷ್ಟಿಯಿಂದ ಕಳೆದ 23 ವರ್ಷಗಳ ‘ವಾರ್ತಾಭಾರತಿ’ಯ ಪಯಣ ಮಹತ್ವದ್ದಾಗಿದೆ.
ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳದ, ನಿರ್ಲಕ್ಷ್ಯಕ್ಕೊಳಗಾದ, ಶೋಷಿತ ಮತ್ತು ದುರ್ಬಲ ವರ್ಗಗಳ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ‘ವಾರ್ತಾಭಾರತಿ’ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ರೂಪಿಸಿಕೊಂಡಿದೆ. ಸಮಾಜದ ಕನ್ನಡಿಯಂತೆ ಸಮಾಜದ ನೋವು, ಸಂಘರ್ಷ, ಅಸಮಾನತೆ ಮತ್ತು ವಾಸ್ತವಗಳನ್ನು ಪ್ರತಿಬಿಂಬಿಸುವ ಕೆಲಸವನ್ನು ಅದು ನಿರಂತರವಾಗಿ ಮಾಡುತ್ತಿದೆ.
ಪ್ರಜಾಪ್ರಭುತ್ವದಲ್ಲಿ ಮಾಧ್ಯಮವು ಕೇವಲ ಸುದ್ದಿಯನ್ನು ತಲುಪಿಸುವ ಸಾಧನವಲ್ಲ. ಅದು ಸಮಾಜದ ವಿವೇಕವನ್ನು ಎಚ್ಚರಿಸುವ ಮತ್ತು ಅಧಿಕಾರವನ್ನು ಪ್ರಶ್ನಿಸುವ ಪ್ರಮುಖ ಪ್ರಜಾಪ್ರಭುತ್ವದ ಸಂಸ್ಥೆ. ಆ ಜವಾಬ್ದಾರಿಯನ್ನು ಅರಿತುಕೊಂಡು, ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ವಸ್ತುನಿಷ್ಠವಾಗಿ ವಿಷಯಗಳನ್ನು ಜನರ ಮುಂದಿಡುವುದು ಇಂದಿನ ಸಂದರ್ಭದಲ್ಲಿ ಅತ್ಯಂತ ಅಗತ್ಯವಾಗಿದೆ.
ಜಾತಿ, ಧರ್ಮ, ಭಾಷೆ ಮತ್ತು ಪ್ರಾದೇಶಿಕತೆಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಯ ವಾತಾವರಣ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ, ಭಾರತದ ಸಂವಿಧಾನ ಪ್ರತಿಪಾದಿಸುವ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಜನಮನದಲ್ಲಿ ಬಿತ್ತುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಈ ಆಶಯಗಳನ್ನು ತನ್ನ ಬರಹ ಮತ್ತು ವರದಿಗಳ ಮೂಲಕ ಜನರಿಗೆ ತಲುಪಿಸುವ ‘ವಾರ್ತಾಭಾರತಿ’ಯ ಪ್ರಯತ್ನ ಶ್ಲಾಘನೀಯ.
ಪ್ರಭುತ್ವದ ಪದಾಘಾತವನ್ನು ಎದುರಿಸಲಿಕ್ಕಾಗದೆ ಸ್ವತಂತ್ರ ಮಾಧ್ಯಮಗಳು ಮಡಿಲಮಾಧ್ಯಮಗಳಾಗಿ ಬದಲಾಗುತ್ತಿರುವ ದಿನಗಳಲ್ಲಿ ಗುಂಪಿನಲ್ಲಿ ಸೇರಿಕೊಳ್ಳದೆ ಸ್ವತಂತ್ರವಾಗಿ, ಪತ್ರಿಕಾಧರ್ಮದ ಪಂಜನ್ನು ಎತ್ತಿಹಿಡಿದು ಸಾಗುತ್ತಿರುವ ವಾರ್ತಾಭಾರತಿ ಪತ್ರಿಕೆಯ ಮುಂದಿನ ಪಯಣಕ್ಕೆ ಶುಭ ಕೋರುತ್ತೇನೆ. ಸತ್ಯವನ್ನು ಹೇಳುವುದು ಸುಲಭವಲ್ಲ. ವಿಶೇಷವಾಗಿ ಸತ್ಯವು ಯಾರಿಗಾದರೂ ಅಸಮಾಧಾನ ಉಂಟುಮಾಡುವ ಸಂದರ್ಭದಲ್ಲಿ ಅದನ್ನು ನಿರ್ಭೀತಿಯಿಂದ ಹೇಳುವುದು ಇನ್ನಷ್ಟು ಕಷ್ಟ. ಆದರೆ ಪತ್ರಿಕೋದ್ಯಮದ ಶಕ್ತಿ ಅಧಿಕಾರದ ಪರವಾಗಿ ನಿಲ್ಲುವುದರಲ್ಲಿ ಅಲ್ಲ, ಅಧಿಕಾರವನ್ನು ಪ್ರಶ್ನಿಸುವ ಧೈರ್ಯದಲ್ಲಿ ಇದೆ. ಈ ಧೈರ್ಯ ಮತ್ತು ಬದ್ಧತೆಯನ್ನು ಪತ್ರಿಕೆ ಮುಂದಿನ ದಿನಗಳಲ್ಲಿಯೂ ಉಳಿಸಿಕೊಳ್ಳಲಿ ಎಂಬುದು ನನ್ನ ಆಶಯ.
ಸಂವಿಧಾನದ ಆಶಯಗಳನ್ನು ಬಲಪಡಿಸುವ, ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತುವ, ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸುವ ಮತ್ತು ಸಮಾಜದಲ್ಲಿ ದ್ವೇಷದ ಬದಲು ಸಹಬಾಳ್ವೆ ಹಾಗೂ ಮಾನವೀಯತೆಯನ್ನು ಬೆಳೆಸುವ ಪತ್ರಿಕೋದ್ಯಮ ಇಂದಿನ ಅಗತ್ಯವಾಗಿದೆ.
ಕಳೆದ 23 ವರ್ಷಗಳಲ್ಲಿ ವಾರ್ತಾಭಾರತಿ ಸಂಪಾದಿಸಿರುವ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡು, ಸತ್ಯ ಮತ್ತು ನ್ಯಾಯದ ಪರವಾದ ತನ್ನ ಪಯಣವನ್ನು ಮತ್ತಷ್ಟು ದೃಢವಾಗಿ ಮುಂದುವರಿಸಲಿ. ಜನರ ಧ್ವನಿಯಾಗಿ, ಜನರ ಹಕ್ಕುಗಳ ಕಾವಲುಗಾರನಾಗಿ ಮತ್ತು ಸಂವಿಧಾನದ ಮೌಲ್ಯಗಳ ರಕ್ಷಕನಾಗಿ ವಾರ್ತಾಭಾರತಿ ಇನ್ನೂ ಹಲವು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸುತ್ತೇನೆ.
24ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ವಾರ್ತಾಭಾರತಿಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಶುಭಾಶಯಗಳು.