ಸಮಾಜಕ್ಕೆ ‘ವಾರ್ತಾಭಾರತಿ’ ಕೊಡುಗೆ ಅಪಾರ
ನಮ್ಮ ದೈನಂದಿನ ಜೀವನ ಮತ್ತು ಸಮಾಜದಲ್ಲಿ ಒಂದು ಮಾಧ್ಯಮ/ಪತ್ರಿಕೆಯ ಪಾತ್ರ ವಿಶೇಷವಾದುದು. ಮಾಧ್ಯಮ/ಪತ್ರಿಕೆ ರಂಗವನ್ನು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗ ಎಂದು ತಿಳಿದುಕೊಳ್ಳುತ್ತೇವೆ. ರಾಜ್ಯದಲ್ಲಿ ಪ್ರಚಲಿತವಾದ ವಾರ್ತಾಭಾರತಿ ಪತ್ರಿಕೆ ಜನರ ಮನದಲ್ಲಿ ಮನೆ ಮಾಡಿದೆ ಎಂದು ಹೇಳಬಹುದು. ಕಳೆದ 23 ವರ್ಷಗಳಿಂದ ನಿರಂತರ ತನ್ನ ಪತ್ರಿಕಾ ಸೇವೆಯನ್ನು ನೀಡುವುದರಲ್ಲಿ ಬದ್ಧತೆಯನ್ನು ಕಾಪಾಡಿಕೊಂಡು ಬಂದಿದೆ.
ನಾನು ವಾರ್ತಾಭಾರತಿ ಪತ್ರಿಕೆಯನ್ನು ಬಲು ಹತ್ತಿರದಿಂದ ಗಮನಿಸುತ್ತಾ ಬಂದಿರುತ್ತೇನೆ. ನನ್ನ ಪ್ರಕಾರ ಈ ಪತ್ರಿಕೆಯು ಮೂರು ಪ್ರಮುಖ ಕಾರಣಗಳಿಂದಾಗಿ ಜನರ ಮನ್ನಣೆ ಪಡೆದಿದೆ ಎಂದು ಧೈರ್ಯವಾಗಿ ಹೇಳ ಬಯಸುತ್ತೇನೆ.
ಒಂದನೆಯದಾಗಿ, ವಾರ್ತಾಭಾರತಿ ಪತ್ರಿಕೆ ಈಗ ಕರ್ನಾಟಕ ರಾಜ್ಯದ ಎಲ್ಲಾ ಸ್ಥಳಗಳಿಗೆ ತಲುಪುತ್ತಿದೆ. ಮಂಗಳೂರಿನಲ್ಲಿ ಇದರ ಆರಂಭವಾದರೂ, ರಾಜ್ಯದಾದ್ಯಂತ ಇದು ಹರಡಿಕೊಂಡಿದೆ ಎಂಬ ವಿಚಾರ ಸಂತೋಷ ತಂದುಕೊಡುತ್ತದೆ.
ಎರಡನೆಯದಾಗಿ ವಾರ್ತಾಭಾರತಿ ಪತ್ರಿಕೆ ಸಂವಿಧಾನದ ಜಾತ್ಯತೀತತೆ Secular Ethosನ್ನು ಸಂಪೂರ್ಣವಾಗಿ ಒಳಗೊಂಡಿರುತ್ತದೆ. ಸಂವಿಧಾನದ ಮೂಲ ತತ್ವಗಳ ಆಶಯಗಳ, ವಿಚಾರಗಳ ಬಗ್ಗೆ ಎಂದೂ ರಾಜಿ ಮಾಡಿಕೊಂಡಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ, ಪತ್ರಿಕೆಯಲ್ಲಿ ಸಂಪಾದಕೀಯ, ವೈಚಾರಿಕ ಬರಹಗಳು ಮತ್ತು ಟೀಕೆ ಟಿಪ್ಪಣಿಗಳಲ್ಲಿ ತೆರೆದ ಮನಸ್ಸು ಕಾಣುತ್ತೇವೆ. ಅಲ್ಲಿ ಪ್ರಚಲಿತ ವಿಷಯಗಳು, ಸುದ್ದಿಗಳು, ಯಾವುದೇ ಒಂದು ಧರ್ಮಾಧಾರಿತವಾಗಿರದೆ, ಸತ್ಯಗಳನ್ನು ಜನರ ಮುಂದೆ ಇಡಲು ನಡೆಸುವ ಪ್ರಯತ್ನಗಳಾಗಿವೆ.
ಮೂರನೆಯದಾಗಿ ‘ವಾರ್ತಾಭಾರತಿ’ ಎಲ್ಲಾ ಧರ್ಮಗಳಿಗೆ ಸಮಾನವಾದ ಅವಕಾಶವನ್ನು ನೀಡುತ್ತಿದೆ. ಪ್ರತೀ ಧರ್ಮದ ಆಚರಣೆಗಳಿಗೆ, ಕಾರ್ಯಕ್ರಮಗಳಿಗೆ, ಹಬ್ಬ ಹರಿದಿನ ಸಂಭ್ರಮಗಳಿಗೆ ಧ್ವನಿಯಾಗುತ್ತಿದೆ. ಸೂಕ್ಷ್ಮತೆಯಿಂದ ಸಮಾಜದಲ್ಲಿ ಧರ್ಮಗಳಿಂದ, ಧರ್ಮ ಗುರುಗಳು, ಧಾರ್ಮಿಕ ಮುಖಂಡರುಗಳ ಬಗ್ಗೆ ಪ್ರೀತಿ ಮತ್ತು ಗೌರವ ನೀಡುವಂತಹ ಹಾಗೂ ಪ್ರೋತ್ಸಾಹ ಬೆಳೆಸುವಂತಹ ವಿಚಾರಗಳನ್ನು ನೀಡುವುದು ನಾವು ನೋಡುತ್ತೇವೆ.
ಸಮಾಜದಲ್ಲಿ ಆರೋಗ್ಯದಾಯಕ ಹಾಗೂ ಶಾಂತಿ, ಸಹಕಾರ, ಪರಸ್ಪರ ಗೌರವ ಬೆಳೆಸುವ ನಿಟ್ಟಿನಲ್ಲಿ ವಾರ್ತಾ ಭಾರತಿಯ ಪ್ರಯತ್ನಗಳು ಅಮೋಘವಾದುದು.
ತಮ್ಮ ಪ್ರಾಮಾಣಿಕ ಪ್ರಯತ್ನಗಳಿಗೆ, ರಾಜ್ಯದ ಸರ್ವ ಜನರ ಮನ್ನಣೆ ಲಭಿಸಲಿ. ಸಮಾಜದ ಸದೃಢ ಏಳಿಗೆಗಾಗಿ ವಾರ್ತಾಭಾರತಿ ಪತ್ರಿಕೆಯ ಕೊಡುಗೆ ಇನ್ನಷ್ಟು ಇರಲಿ ಎಂದು ಸಂಪಾದಕೀಯ ಮಂಡಳಿಗೆ ಶುಭವನ್ನು ಕೋರುತ್ತೇನೆ. ಮುಂದೆಯೂ ಈ ಪತ್ರಿಕೆ ಸರ್ವ ಜನರ ಮೆಚ್ಚುಗೆಗೆ ಪಾತ್ರವಾಗಲಿ ಎಂದು ಹಾರೈಸುತ್ತಿದ್ದೇನೆ.