×
Ad

65 ದಿನಗಳ ವೈವಾಹಿಕ ಜೀವನ: ವಿಚ್ಛೇದನ ದಾವೆಗೆ 13 ವರ್ಷ!

Update: 2026-01-21 08:40 IST

ಹೊಸದಿಲ್ಲಿ: ವಿವಾಹದ ಬಳಿಕ ಕೇವಲ 65 ದಿನಗಳ ಕಾಲ ಜತೆಯಾಗಿ ಇದ್ದ ದಂಪತಿ, ಆ ಬಳಿಕ ಪರಸ್ಪರರ ವಿರುದ್ಧ ಒಟ್ಟು 40 ಪ್ರಕರಣಗಳನ್ನು ದಾಖಲಿಸಿ, ವಿಚ್ಛೇದನಕ್ಕಾಗಿ 13 ವರ್ಷಗಳ ಸುಧೀರ್ಘ ಕಾನೂನು ಹೋರಾಟ ನಡೆಸಿದ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರ ಪ್ರಕರಣ ಇತ್ಯರ್ಥಗೊಂಡಿದ್ದು, ನ್ಯಾಯಾಲಯವನ್ನು ತಮ್ಮ ಸಮರದ ವೇದಿಕೆಯಾಗಿ ಬಳಸಿಕೊಂಡು ನ್ಯಾಯ ವ್ಯವಸ್ಥೆಯನ್ನು ಸ್ತಬ್ಧಗೊಳಿಸಿದ ಕಾರಣಕ್ಕಾಗಿ ಸುಪ್ರೀಂಕೋರ್ಟ್ ಇಬ್ಬರಿಗೂ ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿದೆ.

ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಲ್ ಹಾಗೂ ಮನಮೋಹನ ಅವರನ್ನು ಒಳಗೊಂಡ ನ್ಯಾಯಪೀಠ, ಸಂವಿಧಾನದ 142ನೇ ವಿಧಿಯನ್ವಯ ತನ್ನ ಅಧಿಕಾರವನ್ನು ಬಳಸಿಕೊಂಡು ಈ ಜೋಡಿಗೆ ವಿಚ್ಛೇದನ ನೀಡಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಂಗ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳದಂತೆ ಹಾಗೂ ಪರಸ್ಪರರ ವಿರುದ್ಧ ಮತ್ತಷ್ಟು ಪ್ರಕರಣಗಳನ್ನು ದಾಖಲಿಸದಂತೆ ತಡೆ ವಿಧಿಸಿದೆ.

“ಪತಿ–ಪತ್ನಿ ಕೇವಲ 65 ದಿನಗಳ ವೈವಾಹಿಕ ಜೀವನ ನಡೆಸಿದ್ದರೂ, ದಾವೆಗಳು ತಮ್ಮ ಪರವಾಗಿ ಇತ್ಯರ್ಥವಾಗಬೇಕು ಎಂಬ ಕಾರಣಕ್ಕೆ 13 ವರ್ಷಗಳ ಕಾಲ ಪರಸ್ಪರರ ವಿರುದ್ಧ 40 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇಬ್ಬರೂ ವೆಚ್ಚ ಭರಿಸುವ ಜತೆಗೆ ಶಿಕ್ಷೆಗೆ ಅರ್ಹರಾಗಿದ್ದಾರೆ. ಆದ್ದರಿಂದ ಇಬ್ಬರಿಗೂ ತಲಾ 10 ಸಾವಿರ ರೂಪಾಯಿ ಸಾಂಕೇತಿಕ ದಂಡ ವಿಧಿಸಲಾಗುತ್ತಿದೆ. ಈ ಮೊತ್ತವನ್ನು ಸುಪ್ರೀಂಕೋರ್ಟ್ ವಕೀಲರ ಸಂಘಕ್ಕೆ ಠೇವಣಿ ಮಾಡಬೇಕು,” ಎಂದು ನ್ಯಾಯಪೀಠ ಸೂಚಿಸಿದೆ.

ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಸಂಬಂಧಿತ ವ್ಯಾಜ್ಯಗಳು ಹಲವು ಪಟ್ಟು ಹೆಚ್ಚುತ್ತಿರುವುದನ್ನು ಗಮನಿಸಿದ ನ್ಯಾಯಪೀಠ, ಪ್ರಕರಣಗಳು ನ್ಯಾಯಾಲಯದ ಕಟಕಟೆಗೆ ತಲುಪುವ ಮುನ್ನವೇ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News