ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್, ಮ್ಯಾಕ್ಸಿ ಕ್ಯಾಬ್ ಅಸೋಸಿಯೇಶನ್ ಸುವರ್ಣ ಸಂಭ್ರಮ
ಮಂಗಳೂರು, ಸೆ.3: ಯಾವುದೇ ರೀತಿಯ ಪ್ರತಿಕೂಲ ಹವಾಮಾನಕ್ಕೂ ಹೊಂದಿಕೊಂಡು ಸಾರ್ವಜನಿಕರಿಗೆ ಶ್ರಮಜೀವಿಗಳಾಗಿ, ಸಮಾಜದ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೂ ಸರಕಾರದಿಂದ ನಿವೇಶನ ದೊರೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಒತ್ತಾಯಿಸಿದ್ದಾರೆ.
ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ವತಿಯಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ರವಿವಾರ ಆಯೋಜಿಸಲಾದ ‘ಸುವರ್ಣ ಸಂಭ್ರಮ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
70 ವರ್ಷ ಮೇಲ್ಪಟ್ಟವರೂ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್‌ಗಳಲ್ಲಿ ಚಾಲಕರಾಗಿ ಸೇವೆ ಸಲ್ಲಿಸುವವರಿದ್ದಾರೆ. ಬಹಳಷ್ಟು ಚಾಲಕರು ಸಂಕಷ್ಟದಲ್ಲಿದ್ದು, ಸರಕಾರ ಈ ಬಗ್ಗೆ ಗಮನ ಹರಿಸಿ ಜಿಲ್ಲೆಯಲ್ಲಿ ಕನಿಷ್ಠ 100 ಎಕರೆ ಜಾಗವನ್ನು ಇಂತಹ ಚಾಲಕರಿಗೆ ಮೀಸಲಿಟ್ಟು ಕಾಲನಿ ಮಾದರಿಯಲ್ಲಿ ನಿವೇಶನ ಒದಗಿಸಲು ಮುಂದಾಗಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯಲ್ಲಿ ಸಾಷ್ಟು ಹಣ ಲಭ್ಯವಿದ್ದು ಇದನ್ನು ಇಂತಹ ಚಾಲಕರ ಕಲ್ಯಾಣಕ್ಕಾಗಿ ಉಪಯೋಗಿಸಬೇಕು ಎಂದು ಹೇಳಿದ ಐವನ್ ಡಿಸೋಜಾ, ಅಸೋಸಿಯೇಶನ್ ವತಿಯಿಂದ ಪ್ರತಿ ವರ್ಷ ಉತ್ತಮ ಚಾಲಕರನ್ನು ಗುರುತಿಸಿಪ್ರೋತ್ಸಾಹಿಸುವ ಹಾಗೂ ಚಾಲಕರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ಒದಗಿಸುವ ಕಾರ್ಯ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಸಾಧಕರನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್‌ನ ಮಾಜಿ ಸದಸ್ಯ, ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ, ಕೆ. ಮೋನಪ್ಪ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಅವಸರದಲ್ಲಿ ತೆರಳಿದ ಸಂಸದ ನಳಿನ್ ಕುಮಾರ್!
ದ.ಕ. ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ನ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಅತ್ಯಂತ ಅವಸರದಲ್ಲಿಯೇ ಕಾರ್ಯಕ್ರಮದಿಂದ ನಿರ್ಗಮಿಸಿದ ಪ್ರಸಂಗ ನಡೆಯಿತು.
ಪ್ರಾರ್ಥನೆಗೆ ಮುನ್ನವೇ ಉದ್ಘಾಟನೆ ನಡೆಸಿ ತೆರಳಲು ಮುಂದಾದ ಸಂಸದರನ್ನು ಶುಭ ನುಡಿಯುವಂತೆ ಕಾರ್ಯಕ್ರಮ ಆಯೋಜಕರು ಕೋರಿಕೊಂಡರು. ಸುಮಾರು ಎರಡು ನಿಮಿಷವಷ್ಟೇ ಮಾತನಾಡಿದ ಅವರು, ಯಾವುದೇ ಸಂಸ್ಥೆ ಅಥವಾ ಸಂಘಟನೆ 25 ಅಥವಾ 50 ವರ್ಷಗಳನ್ನು ಪೂರ್ಣಗೊಳಿಸುವುದು ಮುಖ್ಯವಲ್ಲ. ಬದಲಾಗಿ ಏನು ಸಾಧನೆ ಮಾಡಿದೆ ಎನ್ನುವುದು ಪ್ರಮುಖ ಎಂದು ಹೇಳಿದ ಅವರು, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌ಗಳ ಚಾಲಕರು ಪಾರ್ಕಿಂಗ್ ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ರಾಜ್ಯ ಸರಕಾರದ ಉಚಿತ ಕೊಡುಗೆಗಳ ಭರವಸೆಗಳಿಂದಾಗಿಯೂ ಟ್ಯಾಕ್ಸಿಮೆನ್‌ಗಳು ಸಮಸ್ಯೆಯಲ್ಲಿದ್ದಾರೆ. ನಿಮ್ಮ ಜತೆ ನಾವಿದ್ದೇವೆ ಎಂದು ಹೇಳುತ್ತಾ ಸಭೆಯಿಂದ ಸಂಸದ ನಳಿನ್ ಕುಮಾರ್ ಅವರು ನಿರ್ಗಮಿಸಿದರು. ಬಳಿಕ ಪ್ರಾರ್ಥನೆ ನಡೆಯಿತು.
ಮೇಯರ್ ಜಯಾನಂದ ಅಂಚನ್, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಕರ ಸಂಘದ ಅಧ್ಯಕ್ಷ ಮತ್ತು ಪ್ರವಾಸೋದ್ಯಮ ಕಮಿಟಿ ಸದಸ್ಯ ಕೆ. ರಾಧಾಕೃಷ್ಣ ಹೊಳ್ಳ, ಅಸೋಸಿಯೇಶನ್ ಗೌರವಾಧ್ಯಕ್ಷ ದಿನೇಶ್ ಕುಂಪಲ ಎಂ., ಕಾರ್ಯಾಧ್ಯಕ್ಷ ಪ್ರಮೋದ್ ಕುಮಾರ್, ರಮೇಶ್ ಕೋಟ್ಯಾನ್, ಸತೀಶ್ ಭಟ್ ಮರಕಡ ಹಾಗೂ ಅಸೋಸಿಯೇಶನ್‌ನ ಪದಾಧಿಕಾರಿಗಳು, ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಅಸೋಸಿಯೇಶನ್ ಅಧ್ಯಕ್ಷ ಆನಂದ್ ಕೆ. ಸ್ವಾಗತಿಸಿದರು.
ತನುಶ್ರೀ ಪ್ರಾರ್ಥಿಸಿದರು. ಸಂದೇಶ್ ಮುಲ್ಕಿ ಕಾರ್ಯಕ್ರಮ ನಿರೂಪಿಸಿದರು.