ಮುಂದಿನ ವರ್ಷ ರಂಗ ತರಬೇತಿ ಸಂಸ್ಥೆ ಆರಂಭಿಸುವ ಯೋಜನೆ: ದೇವದಾಸ ಕಾಪಿಕಾಡ್
ಮಂಗಳೂರು, ಆ.26: ಮಂಗಳೂರಿನಲ್ಲಿ ರಂಗ ತರಬೇತಿ ನೀಡುವ ಸಂಸ್ಥೆಯ ಕೊರತೆಯಿದ್ದು, ರಂಗ ತರಬೇತಿ ನೀಡುವ ಉತ್ತಮ ಸಂಸ್ಥೆಯನ್ನು ಆರಂಭಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ನಟ, ನಿರ್ದೇಶಕ ದೇವದಾಸ ಕಾಪಿಕಾಡ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಸ್ವೀಕರಿಸಿ ಮಾತನಾಡಿದರು.
ಮುಂದಿನ ವರ್ಷ ರಂಗ ತರಬೇತಿ ಕೇಂದ್ರ ಕಾರ್ಯಾರಂಭಿಸಲಿದೆ. ಐದು ವರ್ಷಗಳ ಹಿಂದೆ ಪ್ರಾರಂಭಿಸುವ ಯೋಜನೆ ಇತ್ತು. ಕೋವಿಡ್ ಕಾರಣದಿಂದಾಗಿ ಸಾಧ್ಯವಾಗಲಿಲ್ಲ. ಮಂಗಳೂರಿನಲ್ಲಿ ಸುಂದರ ರಂಗಮಂದಿರ ನಿರ್ಮಾಣದ ಇನ್ನೂ ಈಡೇರಿಲ್ಲ. ಎಲ್ಲದಕ್ಕೂ ಪುರಭವನವನ್ನು ಅವಲಂಭಿಸಬೇಕಾದ ಪರಿಸ್ಥಿತಿ ಇದೆ ಎಂದರು.
ಹಿಂದೆ ನಾಟಕ ಕಲಾವಿದರಿಗೆ ಪ್ರೋತ್ಸಾಹ ಇರಲಿಲ್ಲ. ನಾಟಕಕಾರನ ಬಗ್ಗೆಯೂ ಸಮಾಜ ತಿರಸ್ಕಾರದಿಂದ ನೋಡು ತ್ತಿತ್ತು. ಕಲಾವಿದನಾಗಿ ವೃತ್ತಿ ಬದುಕು ಆರಂಭಿಸುವಾಗ ಪೂರಕವಾದ ವಾತಾವರಣ ಇರಲಿಲ್ಲ. ಕಠಿಣ ಪರಿಶ್ರಮದ ಮೂಲಕ ಬೆಳೆದಿರುವೆನು. ಇವತ್ತು ವಾತಾವರಣ ಬದಲಾಗಿದೆ. ತಮಗೆ ರಂಗಭೂಮಿ ಘನತೆ, ಗೌರವ ಎಲ್ಲವನ್ನು ತಂದುಕೊಟ್ಟಿದೆ ಎಂದು ಹೇಳಿದರು.
ಮೊದಲು ಹೆಣ್ಣು ಮಕ್ಕಳು ನಾಟಕದಿಂದ ದೂರ ನಿಲ್ಲುತ್ತಿದ್ದರು. ಪುರುಷರೇ ಸ್ತ್ರೀ ಪಾತ್ರವನ್ನು ನಿರ್ವಹಿಸಬೇಕಾದ ಪರಿಸ್ಥಿತಿ ಇತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಹೆಣ್ಣುಮಕ್ಕಳು ಅವಕಾಶ ಕೇಳಿ ಬರುತ್ತಿದ್ದಾರೆ ಎಂದರು.
ಸಂಗೀತಕ್ಕೆ ಈಗ ಉತ್ತಮ ಅವಕಾಶ ಇದೆ. ತಾನು ಮೂರು ಸಿನೆಮಾಗಳಿಗೆ ಸಂಗೀತ ಸಂಯೋಜನೆ ಮಾಡಿರು ವುದಾಗಿ ತಿಳಿಸಿದ ಅವರು ವಿದ್ಯಾರ್ಥಿಗಳು ಸಂಗೀತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು. ಕಲಿಕೆಯ ಜತೆಗೆ ತಮಗೆ ಅಭಿರುಚಿ ಇರುವ ಕಲೆಯಲ್ಲಿ ಪರಿಣತಿ ಪಡೆಯಬೇಕು ಎಂದು ಅವರು ಹೇಳಿದರು.
ದ.ಕ. ಜಿಲ್ಲೆಯಲ್ಲಿ ಎಲ್ಲ ಕಲಾವಿದರು ಒಗ್ಗಟ್ಟಿನಿಂದ ಇದ್ದಾರೆ. ವೃತ್ತಿ ಮತ್ಸರ, ದ್ವೇಷ ಯಾರಲ್ಲೂ ಇಲ್ಲ. ನಾಟಕ ತಂಡಗಳು ಪರಸ್ಪರ ಸಹಕಾರ ದೊಂದಿಗೆ ಬೆಳೆಯುತ್ತಿದೆ ಎಂದು ಹೇಳಿದರು.
ಬಾಲ್ಯದಲ್ಲಿ ಬಡತನವಿತ್ತು. ತಂದೆಗೆ ಹಾಗೂ ಸಹೋದರನಿಗೆ ಆರೋಗ್ಯ ಸರಿ ಇಲ್ಲದ ಕಾರಣದಿಂದಾಗಿ ಸಮಸ್ಯೆ ಎದುರಿಸಿದ್ದೆ, ಹೊಡೆತದ ಮೇಲೆ ಹೊಡೆತ ತಿಂದಿದ್ದೇನೆ. ಶಾಲಾ ದಿನಗಳಲ್ಲೇ ನಾಟಕ ಮತ್ತು ಹಾಡುಗಾರಿಕೆಯಲ್ಲಿ ಆಸಕ್ತಿ ವಹಿಸಿಸಿದೆ. ಜತೆಗೆ ಹಾಸ್ಯ ಪ್ರವೃತ್ತಿ ಇತ್ತು. ಶಾಲಾ ಗುರುಗಳು ಪ್ರೋತ್ಸಾಹ ನೀಡಿದರು. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕೆ ಸೇರ್ಪಡೆಯಾದದ್ದು ಬದುಕಿಗೆ ಹೊಸ ತಿರುವು ನೀಡಿತು. ನನ್ನೊಳಗಿನ ಕಲಾವಿದ ಬೆಳಕಿಗೆ ಬರಲು ಅವಕಾಶ ದೊರೆಯಿತು ಎಂದು ಹೇಳಿದರು.
‘ಎನ್ನನೇ ಕಥೆ ’60ನೇ ನಾಟಕ : ನನ್ನದೇ ಆದ ಚಾ ಪರ್ಕ ತಂಡದ ಮೂಲಕ ಶುದ್ಧ ಹಾಸ್ಯದ ನಾಟಕಗಳನ್ನು ಪ್ರದರ್ಶಿಸಿ ಯಶಸ್ಸು ಸಿಕ್ಕಿತು. ತುಳುನಾಡಿನ ಜನರ ಅಭಿಮಾನ ಹಾಗೂ ಆಶೀರ್ವಾದದಿಂದ ಬೆಳೆದೆ. ಈಗ ಪ್ರದರ್ಶನವಾಗುತ್ತಿರುವ ‘ಎನ್ನನೇ ಕಥೆ ’60ನೇ ನಾಟಕ ಎಂದು ಅವರು ಹೇಳಿದರು.
ಶ್ರೀನಿವಾಸ ವಿ.ವಿ.ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಶ್ಮಿತಾ.ಎಸ್.ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು , ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪ್ರೆಸ್‌ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಆನಂದ ಶೆಟ್ಟಿ, ಮಹಾರಾಷ್ಟ್ರ -ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಕಾರ್ಯ ಕ್ರಮ ಸಂಯೋಜಕ ಸತೀಶ್ ಇರಾ ಉಪಸ್ಥಿತರಿದ್ದರು.
ಮಂಗಳೂರು ಪ್ರೆಸ್ ಕ್ಲಬ್ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ವಂದಿಸಿದರು. ಪತ್ರಕರ್ತ ಸಂತೋಷ್ ಮೊಂತೆರೊ ಕಾರ್ಯಕ್ರಮ ನಿರೂಪಿಸಿದರು.