ಉಳ್ಳಾಲ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ
ಕೊಣಾಜೆ: ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ನಮ್ಮ ಜೀವನದಲ್ಲೂ ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ ಮುನ್ನಡೆಯಬೇಕು. ಉತ್ತಮ ಜೀವನ ನಿರ್ವಹಣೆಯ ಕಲೆಗಾರಿಕೆಯನ್ನು ಕ್ರೀಡಾಕೂಟಗಳಿಂದಲೂ ಮೈಗೂಡಿಸಿ ಕೊಳ್ಳಲು ಸಾಧ್ಯ ಎಂದು ಮೂಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉಳ್ಳಾಲ ತಾಲೂಕು ಆಡಳಿತ, ಉಳ್ಳಾಲ ನಗರಸಭೆ, ಕೋಟೆಕಾರ್ ಪಟ್ಟಣ ಪಂಚಾಯಿತಿ ಹಾಗೂ ಸೋಮೇಶ್ವರ ಪುರಸಭೆಯ ಸಂಯುಕ್ತ ಆಶಯದಲ್ಲಿ 2025- 26 ನೇ ಸಾಲಿನ ಉಳ್ಳಾಲ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ದಾಮೋದರ್ ಕುಂದರ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕ್ರೀಡೆಯಲ್ಲಿ ನಾವು ಸಕ್ರೀಯವಾಗಿ ತೊಡಗಿಸಿಕೊಂಡರೆ ದೈಹಿಕ ಸಾಮರ್ಥ್ಯ ಮಾತ್ರವಲ್ಲ ನಮಗೆ ಜೀವನೋತ್ಸಾಹವನ್ನೂ ನೀಡುತ್ತದೆ.
ಉಳ್ಳಾಲ ನಗರಸಭೆ ಪೌರಾಯುಕ್ತ ನವೀನ್ ಹೆಗ್ಡೆ ಮಾತನಾಡಿ, ನಮ್ಮದು ಯುವ ಪೀಳಿಗೆಯ ದೇಶ. ಯುವ ಪೀಳಿಗೆ ದೈಹಿಕ ಸಾಮರ್ಥ್ಯ, ಮನೋಸಾಮರ್ಥ್ಯ ಅತ್ಯಗತ್ಯ. ಆದ್ದರಿಂದ ಎಳವೆಯಲ್ಲಿಯೇ ಕ್ರೀಡಾಸ್ಪೂರ್ತಿಯನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು.
ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ಅಚ್ಯುತಗಟ್ಟಿ, ಮಂಗಳೂರು ವಿವಿ ಪ್ರಾಧ್ಯಾಪಕ ಡಾ.ಗೋವಿಂದ ರಾಜು, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಎ.ಕೆ.ಅಬ್ದುಲ್ ರಹಿಮಾನ್, ದೈಹಿಕ ಶಿಕ್ಷಣ ತರಬೇತುದಾರ ದೇವಣ್ಣ ಮೊದಲಾದವರು ಉಪಸ್ಥಿತರಿದ್ದರು.
ಕ್ರೀಡಾಕೂಟದ ನೋಡೆಲ್ ಅಧಿಕಾರಿ ತ್ಯಾಗಂ ಹರೇಕಳ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಶಿವಕುಮಾರ್ ವಂದಿಸಿದರು. ಪಾವೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣಕುಮಾರ್ ನಿರೂಪಿಸಿದರು.