×
Ad

ಬೆಳ್ತಂಗಡಿ | ಡಿವೈಎಫ್ಐ 'ಯುವಜನ ಜಾಥಾ'ಕ್ಕೆ ಚಾಲನೆ

Update: 2025-09-07 13:01 IST

ಬೆಳ್ತಂಗಡಿ: 'ಉದ್ಯೋಗ ಸೇಷ್ಟಿಸಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿ' ಎಂಬ ಎಂಬ ಘೋಷಣೆಯೊಂದಿಗೆ ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ 'ಯುವಜನ ಜಾಥಾ'ಕ್ಕೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ರವಿವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಹಿರಿಯ ರಂಗಕರ್ಮಿ ಸಂತೋಷ್ ಶೆಟ್ಟಿ ಹಿರಿಯಡ್ಕ, ಮಾತನಾಡಿ, ನಮ್ಮ ಜಿಲ್ಲೆಗೆ ಬಂದಿರುವ ಕೈಗಾರಿಕೆಗಳಿಂದಾಗಿ ನಮ್ಮ ನೆಲ, ಜಲ, ವಾಯು ಹಾಳಾಗುತ್ತಿದೆ. ಆದರೆ ನಮ್ಮ ಯುವಕರಿಗೆ ಉದ್ಯೋಗಾವಕಾಶಗಳು ಮರೀಚಿಕೆಯಾಗಿಯೇ ಉಳಿದಿದೆ ಎಂಬುದು ದುರಂತ. ಅವಕಾಶಗಳ ಕೊರತೆಯಿಂದಾಗಿ ಯುವ ಸಮುದಾಯ ಅಭದ್ರತೆಯಲ್ಲಿ ಬದುಕುವಂತಾಗಿದೆ. ಡಿವೈಎಫ್.ಐ ಹಮ್ಮಿಕೊಂಡಿರುವ ಈ ಜಾಥಾ ಯುವಜನರನ್ನು ಎಚ್ಚರಗೊಳಿಸುವ ಕಾರ್ಯ ಮಾಡಲಿ ಎಂದರು.

ಡಿವೈಎಫ್ಐ ದ.ಕ. ಜಿಲ್ಲಾ ಅಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಪ್ರಕ್ಷುಬ್ಧ ವಾತಾವರಣ ಯುವಜನರ ಮೇಲೆ ಗಾಢವಾದ ಪರಿಣಾಮ ಬೀರುತ್ತಿದೆ. ಜಿಲ್ಲೆಯಲ್ಲಿನ ಅಶಾಂತಿಯ ವಾತಾವರಣ ಜಿಲ್ಲೆಯನ್ನು ಅಭಿವೃದ್ಧಿಯಿಂದ ಹಿಂದಕ್ಕೆ ಸರಿಸುತ್ತಿದೆ, ಉದ್ಯೋಗಗಳು ನಾಶವಾಗುತ್ತಿವೆ. ಜಿಲ್ಲೆಯ ಅಭಿವೃದ್ಧಿ ಆಗಬೇಕಾದರೆ, ಉದ್ಯೋಗಗಳು ಸೃಷ್ಟಿಯಾಗಬೇಕಾದರೆ ಮೊದಲು ಶಾಂತಿ ಸೌಹಾರ್ದ ನೆಲೆಸುವಂತೆ ನೋಡಿಕೊಳ್ಳಬೇಕು ಎಂದರು.

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕೋಶಾಧಿಕಾರಿ ಮನೋಜ್ ವಾಮಂಜೂರು, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಕಿರಣ ಪ್ರಭ, ಭಾರತ ವಿದ್ಯಾರ್ಥಿ ಸಂಘಟನೆಯ ವಿನುಶ ರಮಣ, ಇನಾಸ್ ಬಿ.ಕೆ, ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಅದಿತಿ, ಕಾರ್ಯದರ್ಶಿ ಅಭಿಷೇಕ್ ಬೆಳ್ತಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆ ಬೆಳ್ತಂಗಡಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ರೈತ ಸಂಘದ ಮುಖಂಡರು ಸುರೇಶ್ ಭಟ್ ವಹಿಸಿದ್ದರು.

ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಆದ್ಯತೆ ಒದಗಿಸಿ, ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳನ್ನು ಜಾರಿಗೆ ತನ್ನಿ ಎಂಬ ಬೇಡಿಕೆಯೊಂದಿಗೆ ಬೆಳ್ತಂಗಡಿಯಿಂದ ಆರಂಭವಾಗಿರುವ ಯುವಜನ ಜಾಥಾ ಜಿಲ್ಲಾದ್ಯಂತ ಸಂಚರಿಸಿ ಸೆ.9ರಂದು ಮಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಸಮಾರೋಪಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News