×
Ad

ಮಂಗಳೂರಿನಲ್ಲಿ ಟೆಕ್ ಪಾರ್ಕ್ ಪ್ರಸ್ತಾವ; ಶೀಘ್ರವೇ ಸಚಿವ ಸಂಪುಟದಲ್ಲಿ ಅನುಮೋದನೆ: ಸಚಿವ ಪ್ರಿಯಾಂಕ್ ಖರ್ಗೆ

Update: 2025-09-24 16:10 IST

ಮಂಗಳೂರು, ಸೆ. 24: ಮಂಗಳೂರಿನಲ್ಲಿ ಅತಿ ದೊಡ್ಡ ಟೆಕ್ ಪಾರ್ಕ್ ನಿರ್ಮಾಣದ ಪ್ರಸ್ತಾವ ಗುರುವಾರ ಅಥವಾ ಮುಂದಿನ ವಾರ ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಬರಲಿದೆ ಎಂದು ಐಟಿ ಮತ್ತು ಬಿಟಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್ ನಲ್ಲಿ ಬುಧವಾರ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ)ನ ಐದನೇ ಆವೃತ್ತಿಯ 'ಟೆಕ್ನೋವಾಂಜಾ-2025' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಮಂಗಳೂರಿನಲ್ಲಿ 3.25 ಎಕರೆ ಭೂಮಿಯಲ್ಲಿ ಟೆಕ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು 3.5 ಲಕ್ಷ ಚದರ ಅಡಿ ವಿಸ್ತೀರ್ಣದ ಕಟ್ಟಡ ಮತ್ತು 3,500 ಕೋಟಿ ರೂ.ಗಳ ಕಾರ್ಯಕಾರಿ ಬಂಡವಾಳದೊಂದಿಗೆ ಟೆಕ್ ಪಾರ್ಕ್ ಅಸ್ತಿತ್ವಕ್ಕೆ ಬರಲಿದ್ದು, ಮುಂದಿನ ಐದು ವರ್ಷದೊಳಗೆ ಮಂಗಳೂರನ್ನು ಐಟಿ ಕ್ಷೇತ್ರದಲ್ಲಿ ಮತ್ತೊಂದು ಬೆಂಗಳೂರು ಆಗಿ ರೂಪಿಸಲು ಪ್ರಯತ್ನವಾಗಲಿದೆ. ಮಂಗಳೂರಿನ ಅಭಿವೃದ್ಧಿಯ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಜತೆಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಕರೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರಕಾರದ ವೀಕ್ಷಿತ್ ಭಾರತ್, ಮೇಕ್ ಇನ್ ಇಂಡಿಯಾ ಮೊದಲಾದ ಕಾರ್ಯಕ್ರಮಗಳಿಗೆ ರಾಜ್ಯ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧವಿದ್ದು, ಸಂಸದರು ಈ ಬಗ್ಗೆ ಕಾರ್ಯಪ್ರವೃತ್ತರಾಗುವಂತೆ ಮನವಿ ಮಾಡಿದರು.

ಕರ್ನಾಟಕದ ಜಾಗತಿಕ ಸಾಮರ್ಥ್ಯ ಕೇಂದ್ರ(ಜಿಸಿಸಿ)ಗಳ ನೀತಿಯು ಮಹಾತ್ವಾಕಾಂಕ್ಷೆಯಿಂದ ಕೂಡಿದ್ದು, 2029ರೊಳಗೆ ರಾಜ್ಯದ್ಲಿ 500 ಹೊಸ ಜಿಸಿಸಿಗಳನ್ನು ಆಕರ್ಷಿಸುವ ಗುರಿ ಹೊಂದಿರುವುದಾಗಿ ಹೇಳಿದರು. ಈ ಮೂಲಕ 3.5ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿದ್ದು, ಇದಕ್ಕಗಾಗಿ ಮುಂದಿನ ತಿಂಗಳು ಸರಕಾರವು ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಆರ್ಥಿಕ ನೀತಿಯನ್ನು ರೂಪಿಸಲಿದೆ ಎಂದವರು ಹೇಳಿದರು.

ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಯುವ ಉದ್ಯಮಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಇನ್ಫೋಸಿಸ್ ನ ಮಾಜಿ ಸಿಎಫ್ಒ ಮೋಹನದಾಸ್ ಪೈ ಕರ್ನಾಟಕದಲ್ಲಿ ಸ್ಟಾರ್ಟ್ಅಪ್ ಗಳನ್ನು ಪೋಷಿಸಲು ಮತ್ತು ರಾಜ್ಯವನ್ನು ಎಐ ಹಬ್ ಆಗಿಸಲು ‘ಎಲಿವೇಟ್ ಎಐ 100 ಕಾರ್ಯಕ್ರಮ’ದ ಅಗತ್ಯತೆ ಬಗ್ಗೆ ತಿಳಿಸಿದಾಗ, ನವೆಂಬರ್ 18 ರಿಂದ 20 ರವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್ 2025 ರಲ್ಲಿ ಈ ವಿಚಾರವನ್ನು ಚರ್ಚಿಸಲಾಗುವುದು ಎಂದರು.

'ಎಐ ಎಲಿವೇಟ್ 100'ಗಾಗಿ ನಾನು 5 ಕೋಟಿ ರೂ.ಗಳ ಪ್ರತಿಜ್ಞೆ ಮಾಡಲು ಸಿದ್ಧ. ದೇಶದ ಇತರ ಉದ್ಯಮ ಸಂಸ್ಥೆಗಳು ಮುಂಬರುವ ಸಭೆಯಲ್ಲಿ ಭಾಗವಹಿಸಿ ತಲಾ 5 ಕೋಟಿ ರೂ.ಗಳ ವಾಗ್ದಾನ ಮಾಡುವುದನ್ನು ಖಾತರಿಪಡಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನ ಅಧ್ಯಕ್ಷ ಬಿ.ವಿ. ನಾಯ್ಡು, ಕೇಂದ್ರ ಸರಕಾರದಿಂದ ಕರ್ನಾಟಕದಲ್ಲಿ ಗಿಫ್ಟ್ ಸಿಟಿ ಘೋಷಣೆಗೆ ಪ್ರಯತ್ನಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕದಿಂದ ಈಗಾಗಲೇ ಕೇಂದ್ರಕ್ಕೆ ಸಲ್ಲಿಕೆಯಾದ ಬೇಡಿಕೆ ತಿರಸ್ಕರಿಸಲ್ಪಟ್ಟಿದೆ. ದೇಶಕ್ಕೆ ಒಂದೇ ಗಿಫ್ಟ್ ಸಿಟಿ ಹಬ್ ನೀಡಲು ಸಾಧ್ಯ ಎಂದು ಹೇಳಿ ಅದನ್ನು ಗುಜರಾತ್ ಗೆ ಮಾನ್ಯ ಮಾಡಲಾಗಿದೆ. ಆದರೆ, ಯುವ ಸಂಸದ ಬ್ರಿಜೇಶ್ ಚೌಟ ಅಂತಹವರು ಈ ಬಗ್ಗೆ ಒತ್ತು ನೀಡಿ ಕೇಂದ್ರದ ಮನವೊಲಿಸಿದರೆ ಸಾಧ್ಯವಾಗಬಹುದು. ಕರ್ನಾಟಕದ ಎಲ್ಲಾ ಸಂಸದರು ಈ ಬಗ್ಗೆ ಕೇಂದ್ರದ ಹಣಕಾಸು ಸಚಿವರು ಹಾಗೂ ಪ್ರಧಾನಿ ಜೊತೆ ಮಾತನಾಡಿ ಒತ್ತಡ ಹೇರಬೇಕಾಗಿದೆ ಎಂದವರು ಹೇಳಿದರು.

ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಕೆಡಿಇಎಂ ಮೂಲಕ ರಾಜ್ಯ ಸರಕಾರವು ಟೆಕ್ನೋವಾಂಜಾ ಕಾಯರ್ಕಕ್ರಮಕ್ಕೆ ಉತ್ತೇಜನ ನೀಡಿರುವುದು ಅಭಿನಂದನೀಯ. ಜಿಲ್ಲೆಯ ಬಂದರು ಸೇರಿದಂತೆ ಸಾಮರ್ಥ್ಯ ಇರುವ ಇತರ ಉದ್ದಿಮೆ ವಲಯಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಿ, ಅಭಿವೃದ್ಧಿಯ ದಿಸೆಯಲ್ಲಿ ಜನಪ್ರತಿನಿಧಿಗಳು ಒಂದಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.

ಕೆಡಿಇಎಂನ ಅಧ್ಯಕ್ಷ ಬಿ.ವಿ. ನಾಯ್ಡು, ಬೆಂಗಳೂರಿನ ಎಸ್ಟಿಪಿಐ ಸಂಸ್ಥೆಯ ಸಂಜಯ್ ತ್ಯಾಗಿ ಮಾತನಾಡಿದರು.

ಶಾಸಕರಾದ ವೇದವ್ಯಾಸ ಕಾಮತ್, ಡಾ. ಮಂಜುನಾಥ ಭಂಡಾರಿ, ಹಿರಿಯ ಅಧಿಕಾರಿ ಎಲ್.ಕೆ. ಅತೀಕ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News