×
Ad

ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು

Update: 2026-03-09 20:38 IST

ಉಳ್ಳಾಲ: ಬೆಂಗಳೂರಿನ ಕಟ್ಟಡವೊಂದರಲ್ಲಿ ಎಸಿ ಜೋಡಣೆ ಕಾರ್ಯನಿರ್ವಹಿಸುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದ ತಲಪಾಡಿ ನಿವಾಸಿ ಯುವಕ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ತಲಪಾಡಿ ನಿವಾಸಿ ವಿಶ್ವನಾಥ್‌ ಮತ್ತು ಮೀನಾಕ್ಷಿ ದಂಪತಿ ಪುತ್ರ ಹರ್ಷಿತ್‌ ಪೂಜಾರಿ (32) ಮೃತ ಯುವಕ.

ವಿದೇಶದಲ್ಲಿ ಶಿಪ್ಪಿಂಗ್ ನಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹರ್ಷಿತ್‌ ಮೂರು ತಿಂಗಳಿಗೊಮ್ಮೆ ಸಿಗುವ ರಜೆಯಲ್ಲಿ ಊರಿಗೆ ಮರಳಿದಾಗ ತನ್ನ ಮೂಲ ಎಸಿ ಮೆಕ್ಯಾನಿಕ್‌ ಕೆಲಸವನ್ನು ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಊರಿಗೆ ಬಂದಿದ್ದ ಅವರು ಸಂಬಂಧಿಯೋರ್ವರಿಗೆ ಎಸಿ ಮೆಕ್ಯಾನಿಕ್‌ ತರಬೇತಿ ನೀಡುವ ಪ್ರಯುಕ್ತ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಬಹುಮಹಡಿ ಕಟ್ಟಡದಲ್ಲಿ ಎಸಿ ಜೋಡಣೆ ನಡೆಸುವ ವೇಳೆ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳು ಹರ್ಷಿತ್ ರನ್ನು ತಕ್ಷಣವೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮಾ.7 ರಂದು ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ಕರೆತರುವ ಸಂದರ್ಭದಲ್ಲಿ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಹರ್ಷಿತ್ ಅವರ ಪಾರ್ಥಿವ ಶರೀರದ ಅಂತ್ಯ ಕ್ರಿಯೆ ಸೋಮವಾರ ಬೆಳಗ್ಗೆ ನಡೆದಿದೆ. ಮೃತ ಹರ್ಷಿತ್ ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಎರಡು ವರ್ಷದ ಪುಟ್ಟ ಹೆಣ್ಣು ಮಗುವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News