ಆಯುಷ್ಮಾನ್ ಭಾರತ್ ಸೌಲಭ್ಯ :ದ.ಕ.ಜಿಲ್ಲೆಯಲ್ಲಿ 16 ದೂರುಗಳು ಸಲ್ಲಿಕೆ
ಮಂಗಳೂರು: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ದ.ಕ.ಜಿಲ್ಲೆಯಲ್ಲಿ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ನಿಗದಿತ ಸೌಲಭ್ಯ ಕೊಡದಿರುವ ಬಗ್ಗೆ ಹಾಗೂ ಹೆಚ್ಚುವರಿ ಮೊತ್ತ ಪಾವತಿಸಿರುವ ಬಗ್ಗೆ ಮಾರ್ಚ್‌ನಿಂದ ಈವರೆಗೆ 16 ದೂರುಗಳು ಸಲ್ಲಿಕೆಯಾಗಿದೆ ಎಂದು ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.
ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆಯುಷ್ಮಾನ್ ಯೋಜನೆಯ ಜಿಲ್ಲಾ ಕುಂದುಕೊರತೆ ನಿವಾರಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ದಾಖಲಾದ ರೋಗಿಗಳಿಗೆ ಸಿಗುವ ಎಲ್ಲಾ ಸೌಲಭ್ಯಗಳು ಆಸ್ಪತ್ರೆಗಳು ಒದಗಿಸಲೇ ಬೇಕು. ಅದೇ ರೀತಿ ಸರಕಾರ ನಿಗದಿಪಡಿಸಿದ ಮೊತ್ತವನ್ನೇ ಪಡೆಯಬೇಕು. ಹೆಚ್ಚುವರಿ ಮೊತ್ತ ಪಡೆಯುವಂತಿಲ್ಲ ಎಂದು ಸೂಚಿಸಿದರು.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ವಿರುದ್ಧ 16 ದೂರುಗಳು ಸಾರ್ವಜನಿಕರಿಂದ ಸ್ವೀಕಾರಗೊಂಡಿದೆ. ಈ ಪೈಕಿ 9 ಪ್ರಕರಣವನ್ನು ಜಿಲ್ಲಾ ಆರೋಗ್ಯಧಿಕಾರಿ ಹಂತದಲ್ಲಿ ಇತ್ಯರ್ಥ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಮಾತನಾಡಿ ಆಯುಷ್ಮಾನ್ ಯೋಜನೆಯಡಿ ರೋಗಿಗಳಿಗೆ ಸಮರ್ಪಕ ಸೇವೆಗಳನ್ನು ಆಸ್ಪತ್ರೆಗಳು ನೀಡಬೇಕು. ಯಾವುದೇ ದೂರುಗಳು ಬಾರದಂತೆ ರೋಗಿಗಳೊಂದಿಗೆ ವ್ಯವಹರಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್‌ಜೈನ್, ಆಯುಷ್ಮಾನ್ ಭಾರತ್ ನೋಡಲ್ ಅಧಿಕಾರಿ ಡಾ.ಸುದರ್ಶನ್, ಪ್ರಾದೇಶಿಕ ಸಮನ್ವಯ ಅಧಿಕಾರಿಗಳಾದ ಡಾ.ಯಶಸ್ವಿನಿ, ಡಾ.ನೌಷಾದ್ ಮತ್ತಿತರರು ಉಪಸ್ಥಿತರಿದ್ದರು.