ವೀಕ್ಷಕರಿಂದ ಮತದಾರರ ಪಟ್ಟಿ ಪರಿಶೀಲನೆ: ದ.ಕ. ಜಿಲ್ಲೆಯಲ್ಲಿ 17.85 ಲಕ್ಷ ಮತದಾರರು
ಮಂಗಳೂರು: ದ.ಕ. ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತೆ ಡಾ. ಬಿ.ಆರ್. ಮಮತಾ ರವಿವಾರ ಜಿಲ್ಲೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿಗಳ ಬಗ್ಗೆ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ಈಗಿನ ಕರಡು ಮತದಾರರ ಪಟ್ಟಿಯಲ್ಲಿ 17,85,835 ಮತದಾರರು ಇದ್ದಾರೆ. ಈ ಪೈಕಿ 8,73,389 ಗಂಡ ಸರು ಮತ್ತು 9,12,369 ಮಹಿಳೆಯರು ಹಾಗೂ 77 ತೃತೀಯ ಲಿಂಗಿಗಳಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಮಾಹಿತಿ ನೀಡಿದರು.
ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರಲ್ಲಿ ಜಿಲ್ಲೆಯಲ್ಲಿ 27,740 ಹೆಸರು ಸೇರ್ಪಡೆ, 15,961 ತಿದ್ದುಪಡಿ, 24,870 ಹೆಸರು ತೆಗೆದು ಹಾಕಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 22,511 ಯುವ ಮತದಾರರು (18-19 ವರ್ಷ ಪ್ರಾಯ) ಇದ್ದಾರೆ. ಮತದಾ ರರ ಪಟ್ಟಿಯ ಲಿಂಗಾನುಪಾತ 1048 ಇದೆ. ಒಟ್ಟು 13,755 ವಿಕಲಚೇತನರು ಹಾಗೂ 233 ಅನಿವಾಸಿ ಭಾರತೀಯರು ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಸಭೆಯ ಬಳಿಕ ವೀಕ್ಷಕಿ ಡಾ. ಬಿ.ಆರ್. ಮಮತಾ ಬೆಳ್ತಂಗಡಿ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತಗಟ್ಟೆಗಳ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದ ಅವರು, ಯುವ ಮತದಾರರ ಸೇರ್ಪಡೆ ಹಾಗೂ ಮೃತ ಮತದಾರರ ಹೆಸರು ಪಟ್ಟಿಯಿಂದ ತೆಗೆದು ಹಾಕುವ ಬಗ್ಗೆ ಪುನಃ ಪರಿಶೀಲಿಸುವಂತೆ ಮತಗಟ್ಟೆ ಅಧಿಕಾರಿಗಳಿಗೆ ಮತ್ತು ಮೇಲ್ವಿಚಾರಕರಿಗೆ ನಿರ್ದೇಶಿಸಿದರು.