×
Ad

ಮಂಗಳೂರು ವಿವಿ: ಮಾರ್ಚ್‌ನಲ್ಲಿ 42ನೇ ವಾರ್ಷಿಕ ಘಟಿಕೋತ್ಸವ

Update: 2024-01-25 19:37 IST

ಮಂಗಳೂರು,ಜ.26: ಮಂಗಳೂರು ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸವವನ್ನು ಮಾರ್ಚ್ 2024ರಂದು ನಡೆಸಲು ಉದ್ದೇಶಿಸಲಾಗಿದೆ. ಎಲ್ಲಾ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಪೂರ್ಣಗೊಳಿಸಿ ಡಿಸೆಂಬರ್ 31, 2023ರೊಳಗೆ ವಿವಿಧ ಪದವಿಗಳನ್ನು ಪಡೆಯಲು ಅರ್ಹರಾಗಿರುವ ಅಭ್ಯರ್ಥಿಗಳ ಯಾದಿಯನ್ನು ನಲ್ವತ್ತೆರಡನೆಯ ಘಟಿಕೋತ್ಸವದಲ್ಲಿ ದೃಢೀಕರಿಸಲಾಗುವುದು.

ಡಾಕ್ಟರಲ್ ಡಿಗ್ರಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು ಮತ್ತು ರ್ಯಾಂಕ್ ಚಿನ್ನದ ಪದಕ/ ಬಹುಮಾನ ಪಡೆಯುವ ಪದವಿ ಮತ್ತು ಸ್ನಾತಕೋತ್ತರ ಪದವಿ ಮಟ್ಟದ ಅಭ್ಯರ್ಥಿಗಳು ಅಂದು ಗಣ್ಯರಿಂದ ಪದವಿ ಸ್ವೀಕರಿಸಲಿದ್ದಾರೆ. ಸಭಾ ಕಾರ್ಯಕ್ರಮ ಮುಗಿದ ಬಳಿಕ ಆನ್‌ಲೈನ್ ದಾಖಲಾತಿ ಮಾಡಿಕೊಂಡವರು ಸ್ನಾತಕ, ಸ್ನಾತಕೋತ್ತರ ಪದವಿ (6 ಮತ್ತು 6 ಕ್ಕಿಂತ ಹೆಚ್ಚಿನ ಸರಾಸರಿ ಸಂಚಿತ ವರ್ಗಾಂಶ- ಸಿಜಿಪಿಎ) ಪ್ರಮಾಣಪತ್ರ ಸ್ವೀಕರಿಸಬಹುದು. ಬಿ.ಪಿ.ಎಡ್ ಮತ್ತು ಬಿ.ಎಡ್ ಪದವೀಧರರನ್ನು ಸ್ನಾತಕೋತ್ತರ ವಿದ್ಯಾರ್ಥಿಗಳೆಂದು ಪರಿಗಣಿಸಲಾಗುವುದಿಲ್ಲ. ಈ ವಿಷಯದಲ್ಲಿ ಪದಕ,ಬಹುಮಾನ ಪಡೆಯಲು ಅರ್ಹರಾದ ಮತ್ತು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಮಾತ್ರ ಘಟಿಕೋತ್ಸವದಲ್ಲಿ ಪ್ರವೇಶ ಪಡೆಯಲು ಅರ್ಹರು.

ಆಗಸ್ಟ್ 31, 2023ರೊಳಗೆ ವಿವಿಧ ಪದವಿಗಳನ್ನು ಪಡೆಯಲು ಅರ್ಹರಾದ ಎಲ್ಲಾ ಪುನರಾವರ್ತಿತ ಅಭ್ಯರ್ಥಿಗಳು ‘ಗೈರುಹಾಜರಿ’ಯಲ್ಲೇ ಪದವಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬೇಕು. ಪ್ರಾಂಶುಪಾಲರುಗಳು ಎಲ್ಲಾ ಅರ್ಹ ಅಭ್ಯರ್ಥಿಗಳಿಂದ ನಿಗದಿತ ಶುಲ್ಕ ಸಂಗ್ರಹಿಸಿ ರಾಷ್ಟ್ರೀಕೃತ ಬ್ಯಾಂಕಿನ ಶಾಖೆಗಳ ಮುಖಾಂತರ ವಿಶ್ವವಿದ್ಯಾನಿಲಯದ ನಿಧಿಗೆ ಜಮೆ ಆಗುವಂತೆ ಡಿ.ಡಿ. ಚಲನ್ ಮೂಲಕ ಅಥವಾ ವಿಶ್ವವಿದ್ಯಾನಿಲಯದ ಅಂತರ್ಜಾಲದ www.mangaloreuniversity.ac.in ) quick link ನಡಿ online fees collection ಮೂಲಕ ಪಾವತಿಸಿ ವಿದ್ಯಾರ್ಥಿಗಳ ವಿವರಗಳನ್ನು ಕುಲಸಚಿವರ(ಪ) ಕಚೇರಿಗೆ ಫೆಬ್ರವರಿ 15, 2024ರೊಳಗೆ ಸಲ್ಲಿಸತಕ್ಕದ್ದು.

ಪಿ.ಎಚ್.ಡಿ, ಡಿ.ಎಸ್ಸಿ, ಡಿ.ಲಿಟ್ ಪದವಿ ಪಡೆಯುವ ಅರ್ಹ ಅಭ್ಯರ್ಥಿಗಳು ಅರ್ಜಿಯೊಂದಿಗೆ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಬೇಕು. ಪದವಿ ಪ್ರಮಾಣ ಪತ್ರದ ಶುಲ್ಕ, ಅರ್ಜಿ ಶುಲ್ಕ ಮೊದಲಾದ ಮಾಹಿತಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ ಸೈಟ್ www.mangaloreuniversity.ac.in ನ ಮೂಲಕ ತಿಳಿದುಕೊಳ್ಳಬಹುದು. ಘಟಿಕೋತ್ಸವದ ಅಧಿಕೃತ ದಿನಾಂಕವನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಕಟಿಸಿ ತಿಳಿಸಲಾಗುವುದು ಎಂದು ಕುಲಸಚಿವರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News