×
Ad

ಮಂಗಳೂರು| ನಕಲಿ ನೋಟು ಚಲಾವಣೆ ಪ್ರಕರಣ: ಆರೋಪಿಗೆ 5 ವರ್ಷ ಕಠಿಣ ಶಿಕ್ಷೆ, ದಂಡ

Update: 2025-02-12 18:24 IST

ಮಂಗಳೂರು, ಫೆ.12: ನಕಲಿ ನೋಟುಗಳನ್ನು ಚಲಾವಣೆ ಮಾಡಿದ ಆರೋಪವು ಸಾಬೀತಾಗಿದ್ದು, ನ್ಯಾಯಾಲಯವು ಆರೋಪಿಗೆ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಬಂಟ್ವಾಳ ತಾಲೂಕು ಇರಾ ಗ್ರಾಮದ ದರ್ಬೆ ಹೌಸ್ ಅಬ್ಬಾಸ್ (57) ಶಿಕ್ಷೆಗೊಳಗಾದ ಆರೋಪಿ. 2020ರ ಅ.31ರಂದು ಆರೋಪಿಯು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಸ್ಟೇಟ್‌ಬ್ಯಾಂಕ್ ಬಳಿಯ ಶ್ರೀ ಕಟೀಲ್ ಎಂಟರ್ ಪ್ರೈಸಸ್ ಎಂಬ ಕಚೇರಿಗೆ ಹೋಗಿ ಮಕ್ಕಳ ಪ್ರಾಜೆಕ್ಟ್‌ಗೆಂದು ಸುಳ್ಳು ಹೇಳಿ 100 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಕಲರ್ ಪ್ರಿಂಟ್ ಮಾಡಿಸಿದ್ದ. ಈ ನೋಟುಗಳನ್ನು ಮೋರ್ಗನ್ಸ್‌ಗೇಟ್‌ನಲ್ಲಿರುವ ಅಂಗಡಿಯೊಂದರಲ್ಲಿ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಚಲಾವಣೆಗೆ ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು.

ಈ ಸಂದರ್ಭ ಸಿಸಿಬಿ ಎಸ್ಸೈ ಪ್ರದೀಪ್ ಟಿ.ಆರ್. ಹಾಗೂ ಸಿಬ್ಬಂದಿಯು ದಾಳಿ ನಡೆಸಿ ಅಬ್ಬಾಸ್‌ನನ್ನು ಬಂಧಿಸಿದ್ದರು. ಅಲ್ಲದೆ 11 ನಕಲಿ ಹಾಗೂ 2 ಅಸಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಪಾಂಡೇಶ್ವರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಎಸ್ಸೈ ಸುರೇಶ್ ಕುಮಾರ್ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾ ಧೀಶೆ ಸುನಿತಾ ಎಸ್.ಜಿ. ಅವರು 13 ಸಾಕ್ಷಿದಾರರನ್ನು ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ. ಈ ಪ್ರಕರಣದಲ್ಲಿ ಸರಕಾರ ಪರವಾಗಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ, ಬಿ. ಪ್ರಕಾಶ್ಚಂದ್ರ ಶೆಟ್ಟಿ, ಹರಿಶ್ಚಂದ್ರ ಉದಿಯಾವರ್ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News