ಡಿ.28 : ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿಯ ಬೆಳ್ಳಿ ಹಬ್ಬದ ಪ್ರಯುಕ್ತ ʼರಜತ ರುಕ್ಮಿಣಿʼ ಸಮಾರಂಭ
ಉಳ್ಳಾಲ: ಕುಂಪಲದ ಶ್ರೀ ಬಾಲಕೃಷ್ಣ ಮಂದಿರದ ಅಂಗ ಸಂಸ್ಥೆಯಾದ ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿಯ ಬೆಳ್ಳಿ ಹಬ್ಬದ ಪ್ರಯುಕ್ತ ಇದೇ ಡಿ.28 ರಂದು ಕುಂಪಲ ಬಾಲಕೃಷ್ಣ ಮಂದಿರದ ಕೃಷ್ಣಾಂಗಣದಲ್ಲಿ "ರಜತ ರುಕ್ಮಿಣಿ" ಸಮಾರಂಭ ನಡೆಯಲಿದೆಯೆಂದು ಕುಂಪಲ ಬಾಲಕೃಷ್ಣ ಮಂದಿರದ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್.ಕುಂಪಲ ಹೇಳಿದರು.
ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರದಂದು ನಡೆದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು.
ಡಿ.28ರ ಬೆಳಿಗ್ಗೆ 9 ಗಂಟೆಗೆ ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆಗೊಂಡು ಬಳಿಕ ದಕ್ಷಿಣ ಕನ್ನಡ-ಕಾಸರಗೋಡು ಉಭಯ ಜಿಲ್ಲಾ ಮಟ್ಟದ "ಮಾತೃವಾಣಿ" ಮಹಿಳಾ ಭಜನಾ ಸ್ಫರ್ಧೆ ನಡೆಯಲಿದೆ ಎಂದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇದರ ಶ್ರೀ ಮತಾನಂದಮಯೀ ಆಶೀರ್ವಚನ ನೀಡಲಿದ್ದು, ಅನ್ವಿತ್ ಇಲೆಕ್ಟ್ರಾನಿಕ್ಸ್ ತೊಕ್ಕೊಟ್ಟು ಇದರ ನಿರ್ದೇಶಕಿ ಮೋಹನ ಕುಮಾರಿ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಪ್ರಗತಿಪರ ಕೃಷಿಕರಾದ ಮೀನಾಕ್ಷಿ ಸೀತಾರಾಮ ಶೆಟ್ಟಿ ಭಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಶಕ್ತಿ ಕಾಂಪ್ಲೆಕ್ಸ್ ತೊಕ್ಕೊಟ್ಟು ಇದರ ಮಾಲಕರಾದ ಮಧುಶ್ರೀ ಸುರೇಶ್ ಭಟ್ನಗರ, ಮಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಗಟ್ಟಿ ಪಿಲಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ
ಮಧ್ಯಾಹ್ನ 3 ಗಂಟೆಯಿಂದ "ನೃತ್ಯ ದಾಮಿನಿ 2025" ಜಿಲ್ಲಾ ಮಟ್ಟದ ಜನಪದ ನೃತ್ಯ ಸ್ಫರ್ಧೆ ನಡೆಯಲಿದೆ.ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ 25 ಸಾಧಕ ಮಹಿಳೆಯರು ಮತ್ತು ಮಹಿಳಾ ಸಂಘ ಸಂಸ್ಥೆಗಳಿಗೆ "ರಜತ ರಾಣಿ"ಪುರಸ್ಕಾರ ಪ್ರದಾನಿಸಲಾಗುವುದು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಶ್ರೀ ಬಾಲಕೃಷ್ಣ ಮಂದಿರದ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷರಾದ ಜಯಲಕ್ಷ್ಮಿ ಬಿ.ಜೆ, ಪ್ರಧಾನ ಕಾರ್ಯದರ್ಶಿ ಮಮತಾ ಸತೀಶ್ ಕುಂಪಲ,ಕೋಶಾಧಿಕಾರಿ ಶಾಲಿನಿ ಗಣೇಶ್ ,ಕ್ರೀಡಾ ಕಾರ್ಯದರ್ಶಿ ಗಾಯತ್ರಿ ಜಯಚಂದ್ರ ,ಬಾಲಕೃಷ್ಣ ಮಂದಿರದ ಉಪಾಧ್ಯಕ್ಷರಾದ ಜಗದೀಶ್ ಆಚಾರ್ಯ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.