ಜು.14-16: ಕುಂದಾಪುರದಿಂದ ಸುಳ್ಯದವರೆಗೆ ಸೌಹಾರ್ದ ಸಂಚಾರ; ಎಸ್‌ವೈಎಸ್‌ನಿಂದ ವಿಶಿಷ್ಟ ಕಾರ್ಯಕ್ರಮ
ಮಂಗಳೂರು, ಜು.10: ಹೃದಯ-ಹೃದಯಗಳನ್ನು ಬೆಸೆಯೋಣ ಎಂಬ ಘೋಷಣೆಯೊಂದಿಗೆ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ವತಿಯಿಂದ ಜು.14ರಿಂದ 16ರವರೆಗೆ ಕುಂದಾಪುರದಿಂದ ಸುಳ್ಯದವರೆಗೆ ಸೌಹಾರ್ದ ಸಂಚಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರಾವಳಿಯು ಒಂದು ಕಾಲದಲ್ಲಿ ಸೌಹಾರ್ದಕ್ಕೆ ಹೆಸರುವಾಸಿಯಾಗಿತ್ತು. ಬಳಿಕ ಅಶಾಂತಿಯ ಬೀಡಾಗಿದೆ. ಕೋಮುವೈಷಮ್ಯ ಹೆಚ್ಚಾಗಿವೆ. ಹಲ್ಲೆ, ಹತ್ಯೆಗಳು ಸಾಮಾನ್ಯವಾಗಿದೆ. ಜಾತಿ, ಮತ-ಪಥಗಳು ಭಿನ್ನವಾ ದರೂ ಎಲ್ಲರನ್ನು ಮನುಷ್ಯರನ್ನಾಗಿ ಕಾಣುವ ಹೃದಯವಂತಿಕೆ ಮುಖ್ಯವಾಗಿದೆ. ಪರಸ್ಪರ ಅರಿತು ಬಾಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೃದಯ-ಹೃದಯಗಳನ್ನು ಬೆಸೆಯೋಣ ಎಂಬ ಘೋಷಣೆಯೊಂದಿಗೆ ಜು.14, 15,16ರಂದು ಕುಂದಾಪುರದಿಂದ ಸುಳ್ಯದವರೆಗೆ ಕರಾವಳಿ ನೆಲದಲ್ಲಿ ಸೌಹಾರ್ದ ಸಂಚಾರ ಎಂಬ ಕಾರ್ಯಕ್ರಮ ನಡೆಯಲಿದೆ ಎಂದರು.
ಜು.14ರಂದು ಕುಂದಾಪುರ, ಉಡುಪಿ, ಕಾರ್ಕಳ, ಕಾಪು, ಪಡುಬಿದ್ರೆ ಮತ್ತು ಜು.15ರಂದು ಮುಲ್ಕಿ, ಸುರತ್ಕಲ್, ಮಂಗಳೂರು, ಫರಂಗಿಪೇಟೆ, ಬಿ.ಸಿ.ರೋಡ್, ಕಲ್ಲಡ್ಕ ಹಾಗೂ ಜು.16ರಂದು ಪುತ್ತೂರು, ಉಪ್ಪಿನಂಗಡಿ, ಕಡಬ, ಸುಳ್ಯದಲ್ಲಿ ಕಾಲ್ನಡಿಗೆ ಜಾಥಾ, ಸಭಾ ಕಾರ್ಯಕ್ರಮಗಳು ನಡೆಯಲಿದೆ. ಇದರಲ್ಲಿ ಎಲ್ಲಾ ಧರ್ಮೀಯರೂ ಪಾಲ್ಗೊಳ್ಳಲಿದ್ದಾರೆ ಎಂದು ಕೆ.ಎಂ. ಅಬೂಬಕರ್ ಸಿದ್ದೀಕ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು, ಮಾಜಿ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಮಡಿಕೇರಿ, ರಾಜ್ಯ ಕೋಶಾಧಿಕಾರಿ ಮನ್ಸೂರ್ ಅಲಿ ತೀರ್ಥಹಳ್ಳಿ, ರಾಜ್ಯ ಉಪಾಧ್ಯಕ್ಷ ರಾದ ಸಯ್ಯದ್ ಹಾಮೀಂ ತಂಳ್ ಬಾಳೆಹೊನ್ನೂರು, ಇಬ್ರಾಹೀಂ ಖಲೀಲ್ ಮಾಲಿಕಿ, ರಾಜ್ಯ ಕಾರ್ಯ ದರ್ಶಿ ಹಸೈನಾರ್ ಆನೆಮಹಲ್ ಹಾಸನ, ದ.ಕ.ಜಿಲ್ಲಾಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಸಮಾಜ ಸೇವಕ ಹೈದರ್ ಪರ್ತಿಪ್ಪಾಡಿ ಉಪಸ್ಥಿತರಿದ್ದರು.