ಆ.3: ಮಂಗಳೂರಿನಲ್ಲಿ ‘ಕುಂದಾಪ್ರ ಕನ್ನಡ ಹಬ್ಬʼ
ಮಂಗಳೂರು, ಜು.31: ಕುಡ್ಲದಗಿಪ್ಪ ಕುಂದಾಪ್ರದರ್ ವಾಟ್ಸಪ್ ಬಳಗದವರ ಆಶ್ರಯದಲ್ಲಿ ‘ಕುಂದಾಪ್ರ ಕನ್ನಡ ಹಬ್ಬʼ ಆಗಸ್ಟ್. 3ರಂದು ಬೆಳಗ್ಗೆ 9 ರಿಂದ ಸಂಜೆ 7ರ ತನಕ ಮಂಗಳೂರಿನ ಉರ್ವ ಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಸಂಚಾಲಕ ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಂದಗನ್ನಡದ ನೆಲದಲ್ಲಿ ಜನಿಸಿ, ವೃತ್ತಿ ನಿಮಿತ್ತ ಮಂಗಳೂರಿಗೆ ಬಂದು ನೆಲೆಸಿ, ತುಳುನಾಡಿನವರೇ ಆಗಿದ್ದರೂ, ತಮ್ಮ ಮೂಲ ನೆಲೆಯ ಭಾಷೆ, ಸಂಸ್ಕೃತಿ ಆಚರಣೆ, ಸಂಪ್ರದಾಯವನ್ನ ಉಳಿಸಿಕೊಂಡು ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ಕುಂದಾಪ್ರ ದಿನಾಚರಣೆಯನ್ನು ಆಷಾಢ ಮಾಸದ ಒಂದು ದಿನದಲ್ಲಿ ‘ಕುಂದಾಪ್ರ ಹಬ್ಬ’ ಹೆಸರಿನಲ್ಲಿ ಹಲವು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಕ್ರೀಡಾಕೂಟ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದ್ದು, ಇದರ ಉದ್ಘಾಟನೆಯನ್ನು ‘ಮನಸ್ಸಿನಿ’ ತುಂಗ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಡಾ. ರವೀಶ್ ತುಂಗ ನೆರವೇರಿಸುವರು. ಸಂಜೆ 4 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಲಾ ಶೆಟ್ಟಿ ಬಾರ್ಕೂರು ವಹಿಸಲಿದ್ದಾರೆ.
ಕುಂದಾಪುರ ಕನ್ನಡ ಪ್ರತಿಷ್ಠಾನ ರಿ. ಬೆಂಗಳೂರು ಇದರ ಅಧ್ಯಕ್ಷ ಡಾ. ದೀಪಕ್ ಶೆಟ್ಟಿ ಬಾರ್ಕೂರು ದಿಕ್ಸೂಚಿ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್‌ನ ಅಧ್ಯಕ್ಷ ಕಿಶೋರ್ ಕುಮಾರ್ ಬಿ. ನಿವೃತ್ತ ಪ್ರಾಂಶುಪಾಲ ಪ್ರೊ. ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ , ಸಿಎ ಎಸ್.ಎಸ್ ನಾಯಕ್ ಸಾಸ್ತಾನ ಭಾಗವಹಿಸಲಿದ್ದಾರೆ.
ಡಾ. ಅಣ್ಣಯ್ಯ ಕುಲಾಲ್, ಸಿಎ ಶಾಂತರಾಮ ಶೆಟ್ಟಿ , ಡಾ.ಅರುಣ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಮದು ಸಂತೋಷ್ ಶೆಟ್ಟಿ ಮಾಹಿತಿ ನೀಡಿದರು.
ಅಧ್ಯಕ್ಷ ಮಾಲಾ ಎಸ್. ಶೆಟ್ಟ, ಕಾರ್ಯದರ್ಶಿ ಲಿಖಿತ ಶೆಟ್ಟಿ, ಗೌರವಾಧ್ಯಕ್ಷ ಜಿ.ಕೆ. ಶೆಟ್ಟಿ, ಕೋಶಾಧಿಕಾರಿ ಶರತ್ ಆಚಾರ್ಯ ಮತ್ತು ಸಂತೋಷ್ ಶೆಟ್ಟಿ ಐರೋಡಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.