×
Ad

ರಾಜ್ಯದ ಸಾಂಸ್ಕೃತಿಕ ಪಟ್ಟಿಗೆ ಜಾದೂ ಕಲೆ ಸೇರಿಸಿ: ಕುದ್ರೋಳಿ ಗಣೇಶ್

Update: 2024-02-21 15:34 IST

ಮಂಗಳೂರು, ಫೆ. 21: ಜಾದೂ ಕೂಡಾ ಸಾಂಸ್ಕೃತಿ ಕಲೆಯಾಗಿದ್ದು, ಕೇಂದ್ರದ ನಾಟಕ ಅಡಾಡೆಮಿಯಲ್ಲಿ ಪಟ್ಟಿಯಲ್ಲಿದ್ದು, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪಟ್ಟಿಯಲ್ಲಿಯೂ ಸೇರ್ಪಡೆಗೊಳ್ಳಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ವಹಿಸಬೇಕು ಎಂದು ಖ್ಯಾತ ಜಾದೂ ಕಲಾವಿದ ಕುದ್ರೋಳಿ ಗಣೇಶ್ ಒತ್ತಾಯಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಫೆಬ್ರವರಿ ಮಾಹೆಯ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿಯಾಗಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಸಂಗೀತ, ನೃತ್ಯ, ಯಕ್ಷಗಾನದಂತೆ ಜಾದೂ ಕೂಡಾ ಸಾಂಸ್ಕೃತಿಕ ಕಲೆಯಾಗಿದ್ದು, ನಶಿಸಿ ಹೋಗುತ್ತಿರುವ ಈ ಕಲೆಯನ್ನು ಸಂಕ್ಷಿಸುವ ನಿಟ್ಟಿನಲ್ಲಿ ತರಬೇತಿ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಇದಕ್ಕಾಗಿ ವ್ಯವಸ್ಥಿತ ಜಾದೂ ಕಾಲೇಜು ಸ್ಥಾಪನೆಯ ಅಗತ್ಯವಿದ್ದು, ಭಾರತದ ಎಲ್ಲಾ ಕಡೆಯಿಂದ ನುರಿತ ಜಾದೂಗಾರನ್ನು ಸೇರಿಸಿಕೊಂಡು ತರಬೇತಿ, ಪ್ರದರ್ಶನದ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ. ಬಹುತೇಕವಾಗಿ ವೃತ್ತಿಪರತೆಗಿಂತಲೂ ಹವ್ಯಾಸಿ ಕಲೆಯಾಗಿ ಉಳಿದಿರುವ ಜಾದೂವನ್ನು ನವರಸ ಪೂರ್ಣ ಭಾವದೊಂದಿಗೆ, ರಂಗಭೂಮಿಯ ಕಲೆಯಾಗಿ ಬೆಳೆಸಬೇಕಾಗಿದೆ ಎಂದವರು ಅಭಿಪ್ರಾಯಿಸಿದರು.

1998ರಿಂದ ತುಳುನಾಡಿನ ದೈವರಾಧಾನೆಯನ್ನು ಮುಖ್ಯ ವಿಷಯವನ್ನಾಗಿಸಿ ಜಾದೂವನ್ನು ಪ್ರಸ್ತುತ ಪಡಿಸಿದ ಪರಿಣಾಮ ವಿಸ್ಮಯ ತಂಡ ಇದು ವಿಶ್ವವಿಖ್ಯಾತಿಯಾಗಲು ಸಾಧ್ಯವಾಗಿದೆ. ನಮ್ಮ ಮಣ್ಣಿನ ಜನಪದ ಸ್ಪರ್ಶವನ್ನು ಜಾದೂವಿನ ತಂತ್ರಗಾರಿಕೆಯ ಜತೆ ಬೆಸೆದಾಗ ವೀಕ್ಷಕನ ಭಾವನೆಗಳನ್ನು ತಟ್ಟಲು ಸಾಧ್ಯವಾಗುತ್ತದೆ. ಜಾದೂ ಕೂಡಾ ಸಾಮಾಜಿಕ ಕಳಕಳಿಯೊಂದಿಗೆ ಬೆರೆತಾಗ ಹೃದಯವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಮ್ಮ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸ್ರೀನಿವಾಸ ನಾಯಕ್ ಇಂದಾಜೆ, ಕಾರ್ಯಕ್ರಮ ಸಂಯೋಜಕ ಆತ್ಮಭೂಷಣ ಭಟ್, ಉಪಸ್ಥಿತರಿದ್ದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಸಿ. ಭಟ್ ಕಾರ್ಯಕ್ರಮ ನಿರೂಪಿಸಿದರು. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ವಂದಿಸಿದರು. 

ಓದಿನ ಹವ್ಯಾಸ ಜಾದೂ ಕಲೆಗೆ ಪ್ರೇರಣೆ

8ನೇ ತರಗತಿಯಿಂದಲೇ ಪುಸ್ತಕ ಓದುವ ಹುಚ್ಚು ಸಣ್ಣ ಪುಟ್ಟ ಮ್ಯಾಜಿಕ್‌ಗಳ ಬಗೆಗೆ ಆಸಕ್ತಿ ಬೆಳೆಸಿತು. ಬಳಿಕ ದ್ವಿತೀಯ ಪಿಯುಸಿಯಲ್ಲದ್ದಾಗ ಮ್ಯಾಜಿಕ್ ಫೋರ್ ದಿ ಬಿಗಿನರ್ಸ್ ಎಂಬ ಪುಸ್ತಕ ಓದಿನ ಹುಚ್ಚಿನ ಜತೆಗೆ ಜಾದೂವಿನ ಆಸಕ್ತಿಯನ್ನು ಇಮ್ಮಡಿಸಿತು. ಬಳಿಕ ವೃತ್ತಿಯಲ್ಲಿ ಬ್ಯಾಂಕರ್ ಆಗಿದ್ದ, ಹವ್ಯಾಸಿ ಜಾದೂಗಾರರಾಗಿದ್ದ ಪ್ರದೀಪ್ ಅವರು ನನ್ನ ಗುರುವಾದರು. ಅವರು ಜಾದೂ ತಂತ್ರಗಾರಿಕೆಯನ್ನು ನನಗೆ ಹೇಳಿಕೊಟ್ಟಿದ್ದಲ್ಲದೆ, ಹಲವು ಪರಿಕರಗಳನ್ನೂ ನೀಡಿದರು. ಇದರ ಜತೆಗೆ ಪದವಿ ಬಳಿಕ ಮುಂಗಾರು ಪತ್ರಿಕೆಯಲ್ಲಿ ಸುಮಾರು ೩ ವರ್ಷಗಳ ಕಾಲ ಉಪಸಂಪಾದಕನಾಗಿದ್ದ ಸಂದರ್ಭ ಓದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರಿಂದ ಜಾದೂವಿನ ನನ್ನ ಆಸಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯವಾಯಿತು. ಜಾದೂವನ್ನು ಇತರ ಕಲೆಗಳಂತೆ ತರಗತಿ ಕೊಠಡಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಒಟ್ಟಾಗಿ ಕಲಿಸಲು ಸಾಧ್ಯವಿಲ್ಲ. ಜಾದೂ ಕಲಿಯುವ ವಿದ್ಯಾರ್ಥಿಯಲ್ಲಿ ಮೆದುಳು ಮತ್ತು ಕೈಚಳಕದ ಜತೆಗೆ ತರ್ಕವಾದ ಅರ್ಥಮಾಡಿಕೊಳ್ಳುವ ಸಮರ್ಪಣಾ ಮನೋಭಾವ ಅಗತ್ಯವಾಗಿರುತ್ತದೆ. ಮಾತ್ರವಲ್ಲದೆ ಜಾದೂ ಕಲೆ ಸಿದ್ಧಿಸಿಕೊಳ್ಳಬೇಕೆಂದರೆ ಕನಿಷ್ಟ ಆರೇಳು ವರ್ಷಗಳ ಅಭ್ಯಾಸದ ಅಗತ್ಯವಿದೆ. ಇಂತಹ ಶಿಷ್ಯಂದಿರನ್ನು ಹುಟ್ಟುಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ತರಬೇತಿ ನೀಡುವ, ಕಾಲೇಜು ತೆರೆಯುವ ಆಶಯವೂ ಇದೆ ಎಂದು ಕುದ್ರೋಳಿ ಗಣೇಶ್ ಅಭಿಪ್ರಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News