ಅಡ್ಯಾರ್: ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಮೃತ್ಯು
ವಿದ್ಯಾರ್ಥಿಗಳನ್ನು ಬಸ್ ಹತ್ತಿಸುತ್ತಿರುವಾಗ ನಡೆದ ಘಟನೆ
ಮಂಗಳೂರು, ಆ.13: ಕಾಲೇಜು ಬಸ್ಸಿನಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ನಿರ್ವಾಹಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ನಗರದ ಅಡ್ಯಾರ್ ಬಳಿ ನಡೆದಿದೆ.
ತೊಕ್ಕೊಟ್ಟು ಸಮೀಪದ ಕುತ್ತಾರು ಪದವು ನಿವಾಸಿ ಸಂತೋಷ್ (40) ಮೃತಪಟ್ಟ ಬಸ್ ನಿರ್ವಾಹಕ. ಇವರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ದೇರಳಕಟ್ಟೆಯ ಖಾಸಗಿ ವಿಶ್ವವಿದ್ಯಾನಿಲಯಕ್ಕೆ ಸೇರಿದ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ಬುಧವಾರ ಬೆಳಗ್ಗೆ ಶಾಲಾ ವಿದ್ಯಾರ್ಥಿಗಳನ್ನು ಬಸ್ಸಿಗೆ ಹತ್ತಿಸುತ್ತಿರುವಾಗಲೇ ಹಠತ್ತನೆ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಸಂತೋಷ್ ಅವರನ್ನು ಪಡೀಲಿನ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ತಪಾಸಣೆ ನಡೆಸಿದ ವೈದ್ಯರು ಸಂತೋಷ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಂತೋಷ್ ಹಲವು ವರ್ಷಗಳಿಂದ ನಿಟ್ಟೆ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ನಿಟ್ಟೆ ಸಂಸ್ಥೆಯು ಕೆಲವು ವರ್ಷಗಳಿಂದ ಸರಕಾರಿ ಶಾಲೆ, ಆಶ್ರಮಗಳಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ಸಂಸ್ಥೆಯ ಬಸ್ಸುಗಳಲ್ಲೇ ಶಾಲೆಗೆ ಬಿಡುವ ಸೇವೆಯನ್ನು ನಡೆಸುತ್ತಿದೆ. ಈ ಬಸ್ಸಿನಲ್ಲೇ ಸಂತೋಷ್ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.