ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ: ಶ್ವಾಸಕೋಶದ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ರೋಗಿಗೆ ಜೀವದಾನ
ಮಂಗಳೂರು: ಶ್ವಾಸಕೋಶ ಸಂಬಂಧಿ ತೀವ್ರ ಕಾಯಿಲೆಯಿಂದ ಸಾವು ಬದುಕಿನ ಹೋರಾಟದಲ್ಲಿದ್ದ ಹಾಸನ ಮೂಲದ 38 ಹರೆಯದ ರೋಗಿಗೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ತಂಡವು ವಿನೂತನ ಶೈಲಿಯ ಕ್ಲಿಷ್ಟಕರ ಮತ್ತು ಅಪಾಯಕಾರಿ ಶಸ್ತ್ರ ಚಿಕಿತ್ಸೆಯನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದರೊಂದಿಗೆ ವೈದ್ಯರ ತಂಡವು ರೋಗಿಗೆ ಜೀವದಾನ ನೀಡುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ.
ರೋಗಿಯು ದೀರ್ಘ ಕಾಲದ ತೀವ್ರ ಉಸಿರಾಟದ ಸಮಸ್ಯೆ, ಗಂಭೀರ ರಕ್ತಹೀನತೆ, ತೀಕ್ಷ್ಣ ಎದೆ ನೋವು, ನಿಶಕ್ತಿ, ಸಮಸ್ಯೆಗಳಿಂದ ಬಳಲುತ್ತಿದ್ದು, ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ತಜ್ಞರಾದ ಡಾ.ಎಚ್.ಪ್ರಭಾಕರ್ ಅವರನ್ನು ಭೇಟಿ ಯಾಗಿದ್ದರು. ವೈದ್ಯರು ಸೂಕ್ಷ್ಮವಾಗಿ ರೋಗಿಯನ್ನು ಸಮಗ್ರ ಆರೋಗ್ಯ ತಪಾಸಣೆ ಒಳಪಡಿಸಿದಾಗ ರೋಗಿಯು ತೀವ್ರ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತಿದ್ದರು.
ರಕ್ತ ಚಲನವಲನದ ಸಮಸ್ಯೆ, ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ಪರಿಗಣಿಸಿ, ಈ ಗಂಭೀರ ಕಾಯಿಲೆ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಅರಿತು ತಕ್ಷಣ ವೈದ್ಯರು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ರೋಗಿಯನ್ನು ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಆನಂದ್ ಕೆ.ಟಿ.ಯವರನ್ನು ಶಸ್ತ್ರ ಚಿಕಿತ್ಸೆಗಾಗಿ ಭೇಟಿಯಾಗಲು ಸಲಹೆ ನೀಡಿದರು. ಅವರು ತುರ್ತು 6 ಗಂಟೆ ಅವಧಿಯ ವಿನೂತನ ಶೈಲಿಯ ಕ್ಲಿಷ್ಟಕರ ಶ್ವಾಸಕೋಶ ಶಸ್ತ್ರ ಚಿಕಿತ್ಸೆ ಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಇವರಿಗೆ ಹೃದ್ರೋಗ ಶಾಸ್ತ್ರ ಅರಿವಳಿಕೆ ತಜ್ಞರಾದ ಡಾ. ಎಮ್.ಎಮ್. ಚೇತನಾ ಆನಂದ್ ಸಹಕರಿಸಿದ್ದರು.
ರೋಗಿಯು ಇದೀಗ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕ ವಂ ಫೌಸ್ಟಿನ್ ಲ್ಯೂಕಸ್ ಲೋಬೊ ವೈದ್ಯಕೀಯ ತಂಡದ ಗಮನಾರ್ಹ ಸಾಧನೆಯನ್ನು ಅಭಿನಂದಿಸಿದ್ದಾರೆ.