ಮೂಡುಬಿದಿರೆ: ಜ.30ರಿಂದ ಭಾರತೀಯ ಸೇನಾ ನೇಮಕಾತಿ ರ‍್ಯಾಲಿ
ಮೂಡುಬಿದಿರೆ: ಅಗ್ನಿಪಥ್ ಯೋಜನೆಯಡಿ ಜ.30ರಿಂದ ಫೆಬ್ರವರಿ 14ರವರೆಗೆ ಸ್ವರಾಜ್ಯ ಮೈದಾನದಲ್ಲಿ ನಡೆಯಲಿ ರುವ ಭಾರತೀಯ ಸೇನಾ ನೇಮಕಾತಿ ರ‍್ಯಾಲಿ ಗೆ ಮೈದಾನವು ಅಗತ್ಯವಿರುವ ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿದೆ.
ಶುಕ್ರವಾರ ಬೆಳಗ್ಗೆ 3 ಗಂಟೆಯಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ರಾಜ್ಯದ 11 ಜಿಲ್ಲೆಗಳಿಂದ ಪ್ರತಿದಿನ ಸುಮಾರು ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಒಟ್ಟು 10 ದಿನಗಳ ಅವಧಿಯಲ್ಲಿ ಸುಮಾರು 15,000 ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಗ್ನಿಪಥ್ ನ ನೋಡೆಲ್ ಅಧಿಕಾರಿ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.
ರ‍್ಯಾಲಿಯಲ್ಲಿ ಮೊದಲ ಹಂತವಾಗಿ ದೈಹಿಕ ಪರೀಕ್ಷೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಹಂತ ದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಆಯೋಜಕರು ಕಲ್ಪಿಸಿದ್ದಾರೆ. ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ರ‍್ಯಾಲಿಗೆ ಕೈಜೋಡಿಸಿವೆ.
ನೇಮಕಾತಿ ರ‍್ಯಾಲಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಪೂರ್ಣ ಸಹಕಾರ ನೀಡುತ್ತಿದ್ದು, ವಿದ್ಯಾಗಿರಿ ಆವರಣದಲ್ಲಿ ವಸತಿ ವ್ಯವಸ್ಥೆ, ಸ್ವಯಂಸೇವಕರ ನಿಯೋಜನೆ, ಸಿಂಥೆಟಿಕ್ ಟ್ರ‍್ಯಾಕ್‌ನಲ್ಲಿ ರನ್ನಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಆಳ್ವಾಸ್ 150 ಮಂದಿ ಎನ್‌ಸಿಸಿ, ಎನ್‌ಎಸ್‌ಎಸ್ ಸ್ವಯಂಸೇವಕರು, 25 ಸಿಬ್ಬಂದಿಗಳು ರ‍್ಯಾಲಿಗೆ ಶ್ರಮಿಸುತ್ತಿದ್ದಾರೆ.
ವಿದ್ಯಾಗಿರಿಯಲ್ಲಿ ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ಆರೋಗ್ಯ ಸೇವೆ, ಸಂಚಾರ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಆಹಾರ ವಸ್ತುಗಳನ್ನು ಸರ್ಕಾರ ಒದಗಿಸಿದ್ದು, ಶುಚಿರುಚಿಯಾಗಿ ಆಳ್ವಾಸ್‌ನ ತಂಡ ತಯಾರಿಸಲಿದೆ ಎಂದು ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಮಾಹಿತಿ ನೀಡಿದ್ದಾರೆ.