×
Ad

‘ಆರ್.ಅಶೋಕ ಅಲ್ಲ, ಅಡ್ಜಸ್ಟ್‌ಮೆಂಟ್ ಅಶೋಕ: ಪುನೀತ್ ಅತ್ತಾವರ ಟೀಕೆ

Update: 2024-02-21 19:52 IST

ಮಂಗಳೂರು: ನೀವು ಆರ್. ಅಶೋಕ ಅಲ್ಲ. ನಿಮ್ಮ ಹೆಸರನ್ನು ಎ. ಅಶೋಕ ಅಂತ ಬದಲಾಯಿಸಿ ಬಿಡಿ. ಎ ಅಂದರೆ ಅಡ್ಜಸ್ಟ್‌ಮೆಂಟ್ ಅಶೋಕ. ಹಾಗಂತ ಹೇಳಿಕೊಂಡಿದ್ದು, ಬಜರಂಗದಳದ ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ.

ನಾನು ಗೃಹ ಸಚಿವನಾಗಿದ್ದಾಗ ಮಂಗಳೂರಿನಲ್ಲಿ ಪಬ್ ದಾಳಿ ನಡೆದಿತ್ತು. ಆವಾಗ ಬಜರಂಗ ದಳದವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡಿದ್ದೆ ಎಂದು ವಿಧಾನ ಸಭೆಯ ವಿಪಕ್ಷ ನಾಯಕ ಆರ್.ಅಶೋಕ ನೀಡಿರುವ ಹೇಳಿಕೆಗೆ ಪುನೀತ್ ಅತ್ತಾವರ ತನ್ನ ಫೇಸ್‌ಬುಕ್ ಖಾತೆಯಲ್ಲಿ ವ್ಯಂಗ್ಯವಾಡಿದ್ದಾರೆ.

ವಿಧಾನ ಸಭೆಯಲ್ಲಿ ಮಾತನಾಡುವಾಗ ಆರ್.ಅಶೋಕ ‘ಮಂಗಳೂರಿನ ಪಬ್‌ನಲ್ಲಿ ಬಜರಂಗದಳ ಕಾರ್ಯಕರ್ತರು ನುಗ್ಗಿ ಹೆಣ್ಮಕ್ಕಳಿಗೆ ಹೊಡೆದರು ಎಂದು ಈ ಸದನದಲ್ಲಿ ಧರಣಿ ನಡೆದಿತ್ತು. ಆವಾಗ ನಾನು ಗೃಹಸಚಿವ. ನನ್ನ ಮೇಲೆ ತುಂಬಾ ಒತ್ತಡವಿತ್ತು. ಫೋನ್ ಕರೆಗಳು ಬಂದಿದ್ದವು. ಆದರೆ ನಾನು ಹಿಂದೆ ಮುಂದೆ ನೋಡದೆ ಅವರ ವಿರುದ್ಧ ಗೂಂಡಾ ಕಾಯ್ದೆ ಹಾಕಿಸಿದೆ ಎಂದು ಹೇಳಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆ ವೀಡಿಯೊ ತುಣುಕನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಪುನೀತ್ ಅತ್ತಾವರ ‘ನಿಮ್ಮ ನಾಲಗೆಯನ್ನು, ನಾಲಗೆ ರೀತಿ ಬಳಸಿ. ಎಕ್ಕಡದ ರೀತಿ ಬಳಸಿಕೊಳ್ಳಬೇಡಿ. ಅಡ್ಜಸ್ಟ್‌ಮೆಂಟ್ ರಾಜಕಾರಣ ಎಂಬ ಗೊಚ್ಚೆಯಲ್ಲಿ ಹೊರಳಾಡುತ್ತಿರುವ ನಿಮಗೆ ಬಜರಂಗದಳದ ಕಾರ್ಯಕರ್ತರ ಹೆಸರು ಎತ್ತಲೂ ಯೋಗ್ಯತೆಯಿಲ್ಲ. ಸಿದ್ಧಾಂತಕ್ಕಾಗಿ ಹೋರಾಡುವ ಬಜರಂಗದಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿ ಅವರನ್ನು ಸುಮ್ಮನಿರಿಸುವಷ್ಟು ದೊಡ್ಡವರು ನೀವಾಗಿಲ್ಲ. ಬಜರಂಗದಳ ಕಾರ್ಯಕರ್ತರು ಹೋರಾಡುವುದು ನಿಮ್ಮ ಹಾಗೆ ವೈಯಕ್ತಿಕ ಲಾಭದ ಆಸೆಗಾಗಿ ಅಲ್ಲ. ನಿಮ್ಮ ರಾಜಕೀಯ ತೆವಲಿಗಾಗಿ ಬಜರಂಗದಳ ಕಾರ್ಯಕರ್ತರ ಬಗ್ಗೆ ಆಡಿದ ಮಾತನ್ನು ಹಿಂದೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಪಕ್ಷ ನಾಯಕನಾಗಿರುವ ನೀವು ಒಂದಲ್ಲ ಒಂದು ದಿನ ಮಂಗಳೂರಿಗೆ ಬಂದೇ ಬರುತ್ತೀರಿ ಎಂಬ ಮಾತು ನೆನಪಿರಲಿ. ಹಿಂದೂ ವಿರೋಧಿ ಕೃತ್ಯಕ್ಕೆ ಪ್ರತಿರೋಧ ಒಡ್ಡಿ ಹೋರಾಡುವ ನಮಗೆ ನೀವೊಬ್ಬರು ಹೆಚ್ಚಾಗುವುದಿಲ್ಲ. ಒಂದಾ ಬಜರಂಗದಳದ ಕಾರ್ಯಕರ್ತರ ಬಗ್ಗೆ ಆಡಿದ ಮಾತುಗಳನ್ನು ಹಿಂದೆ ಪಡೆಯಿರಿ. ಇಲ್ಲದಿದ್ದರೆ ಬಜರಂಗದಳದ ಕಾರ್ಯಕರ್ತರ ಪ್ರತಿರೋಧವನ್ನು ಎದುರಿಸಲು ಸಿದ್ಧರಾಗಿ ಎಂದು ಪುನೀತ್ ಅತ್ತಾವರ ಎಚ್ಚರಿಕೆಯನ್ನೂ ನೀಡಿದ್ದಾರೆ.


Full View


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News