×
Ad

ರೈತ ಮತ್ತು ಅಲ್ಪಸಂಖ್ಯಾತರ ವಿರೋಧಿ ಕಾನೂನು ಹಿಂದಕ್ಕೆ ಪಡೆಯಲು ಒತ್ತಾಯಿಸಿ ಕಾಂಗ್ರೆಸ್ ನಿಯೋಗ ಮುಖ್ಯಮಂತ್ರಿಗೆ ಮನವಿ

Update: 2025-11-19 23:40 IST

ಮಂಗಳೂರು: ಬಿಜೆಪಿ ಸರಕಾರ ಜಾರಿಗೆ ತಂದಿದ್ದ ರೈತ ಹಾಗೂ ಅಲ್ಪಸಂಖ್ಯಾತರ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಗಳ ನಿವಾಸದಲ್ಲಿ ಬುಧವಾರ ಭೇಟಿಯಾಗಿ ಮನವಿ ಸಲ್ಲಿಸಿತು.

ಕಳೆದ ಬಿಜೆಪಿ ಸರಕಾರವು ವಿವಾದಿತ ಹಾಗೂ ಕೋಮು ಪ್ರಚೋದಿತ, ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯ್ದೆ 2021 ಹಾಗೂ ಕರ್ನಾಟಕ ಧರ್ಮ ಸ್ವಾತಂತ್ರ ಸಂರಕ್ಷಣಾ ಕಾಯ್ದೆ 2021ನ್ನು ಜಾರಿಗೆ ತಂದಿದೆ. ಈ ಕರಾಳ ಸಂವಿಧಾನ ವಿರೋಧಿ ಕಾನೂನುಗಳನ್ನು ಬಿಜೆಪಿ ಸರಕಾರ ಜಾರಿಗೆ ತಂದಾಗ ರಾಜ್ಯದ ಬಹುಪಾಲು ಜನರು ತೀವ್ರವಾಗಿ ವಿರೋಧಿಸಿದ್ದರು. 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಇಂತಹ ಕರಾಳ ಹಾಗೂ ಜನವಿರೋಧಿ ಕಾನೂನುಗಳನ್ನು ಅಧಿಕಾರಕ್ಕೆ ಬಂದ ಒಂದು ವರ್ಷದ ಒಳಗೆ ಹಿಂದಕ್ಕೆ ಪಡೆಯುವ ಬಗ್ಗೆ ಆಶ್ವಾಸನೆಯನ್ನು ನೀಡಿತ್ತು. ಪ್ರಸಕ್ತ ಈ ಕಾನೂನುಗಳ ಅನುಷ್ಠಾನದಿಂದ, ಅದರಲ್ಲೂ ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯ್ದೆಯಿಂದಾಗಿ ದ.ಕ. ಜಿಲ್ಲೆಯಲ್ಲಿ ಭಯದ ವಾತಾವರಣ ಉಂಟಾಗಿದೆ. ಗೋ ಸಾಗಾಣಿಕದಾರರ ಮೇಲೆ ಪೊಲೀಸರು ಶೂಟೌಟ್ ಮಾಡುವುದು, ಅವರ ಮನೆಗಳನ್ನು ಜಪ್ತಿ ಮಾಡುವುದು ಮುಂತಾದ ಕಳವಳಕಾರಿ ಘಟನೆಗಳು ನಡೆದಿದೆ. ಇದರಿಂದ ರೈತರು ತಮ್ಮ ಜಾನುವಾರಗಳನ್ನು ಮಾರಾಟ ಮಾಡಲಾಗದ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ಕರ್ನಾಟಕ ಧರ್ಮ ಸಂರಕ್ಷಣಾ ಕಾಯ್ದೆಯ ನೆಪವನ್ನು ಹೋರಿಸಿ ಕೋಮುವಾದಿಗಳು ಅಲ್ಪಸಂಖ್ಯಾತರ ಮೇಲೆ ನಿರಂತರ ದೌಜನ್ಯವನ್ನು ನಡೆಸುತ್ತಿದ್ದಾರೆ. ಸಂವಿಧಾನ ಬದ್ಧವಾಗಿ ಪ್ರತಿಯೊಬ್ಬರಿಗೂ ಅವರಿಗೆ ಬೇಕಾದ ಧರ್ಮವನ್ನು ಯಾವುದೇ ಒತ್ತಡವಿಲ್ಲದೆ, ಒಪ್ಪಿ, ಆ ಪ್ರಕಾರ ನಡೆದುಕೊಂಡು ಹೋಗಲು ಅವಕಾಶಗಳು ಇರುವಾಗ, ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನು ಚಾಲ್ತಿಯಲ್ಲಿರುವುದು ಸಂವಿಧಾನ ವಿರೋಧಿಯಾಗಿದೆ. ಈ ಕಾನೂನು ಸಂಘ ಪರಿವಾರದ ಕೋಮು ಅಜೆಂಡದಲ್ಲಿ ಒಂದಾಗಿದೆ. ಇದರಿಂದ ಸಂವಿಧಾನದ ಮೂಲ ಆಶಯಕ್ಕೆ ಕೊಡಲಿ ಏಟು ನೀಡಿದೆ ಎಂಬುದನ್ನು ಮನವಿ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು. ಅಲ್ಲದೆ ಈ ಕರಾಳ ಕಾನೂನುಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಲಾಯಿತು.

ನಿಯೋಗದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ರಮನಾಥ ರೈ, ಮಾಜಿ ಶಾಸಕ ಜೆ.ಆರ್. ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್ ಪೂಜಾರಿ, ಇನಾಯತ್ ಅಲಿ ಮುಲ್ಕ್ಕಿ, ರಕ್ಷಿತ್ ಶಿವರಾಂ, ಎಂ.ಎಸ್.ಮುಹಮ್ಮದ್, ಕೆಪಿಸಿಸಿ ಸಂಯೋಜಕ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಾಹುಲ್ ಹಮೀದ್ ಕೆ.ಕೆ., ಮಾಜಿ ಮೇಯರ್ ಕೆ. ಅಶ್ರಫ್, ಪಕ್ಷದ ಮುಖಂಡರಾದ ಅಲ್ವಿನ್ ಪ್ರಕಾಶ್, ಶಾಲೆಟ್ ಪಿಂಟೋ, ಚಾರ್ಮಾಡಿ ಹಸನಬ್ಬ, ಜಲೀಲ್ ಕೃಷ್ಣಾಪುರ, ಹೈದರಾಲಿ, ಹಬಿಬುಲ್ಲ ಕಣ್ಣೂರ್, ಸಮದ್ ಸೋಂಪಾಡಿ, ಮುಸ್ತಫ ಸುಳ್ಯ, ಶಂಸುದ್ದೀನ್ ಸುಳ್ಯ, ಟಿ.ಎಚ್. ಮೊಯ್ದಿನ್, ರಫೀಕ್ ಕಣ್ಣೂರ್, ಅಶ್ರಫ್ ಬಜಾಲ್, ವಿಕ್ಕಿ ಸಿಂಗ್, ಶಬೀರ್ ಸಿದ್ದಕಟ್ಟೆ, ಕರೀಮ್ ಗೇರು ಕಟ್ಟೆ, ಇಬ್ರಾಹಿಂ ಕಾಜೂರ್, ಸಿದ್ದೀಕ್ ಕಾಜೂರ್ ಮತ್ತಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News