×
Ad

ಉಪ್ಪಿನಂಗಡಿ| ಚಾಲನೆ ಸಂದರ್ಭ ಚಾಲಕನಿಗೆ ಎದೆನೋವು; ಪ್ರಯಾಣಿಕನ ಸಮಯಪ್ರಜ್ಞೆಯಿಂದ ತಪ್ಪಿದ ಅಪಾಯ

Update: 2025-12-25 20:20 IST

ಉಪ್ಪಿನಂಗಡಿ: ಬಸ್ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಪ್ರಯಾಣಿಕರೋರ್ವರ ಸಮಯ ಪ್ರಜ್ಞೆಯಿಂದ ಸಂಭವನೀಯ ಅಪಾಯ ತಪ್ಪಿಸಿ ಬಸ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ವರದಿಯಾಗಿದೆ.

ಗುರುವಾರ ಸುಬ್ರಹ್ಮಣ್ಯದಿಂದ ಕಾರವಾರಕ್ಕೆ ಕೆಎಸ್ಸಾರ್ಟಿಸಿ ಬಸ್ ಅನ್ನು ಚಾಲನೆ ಮಾಡುತ್ತಿದ್ದ ಚಾಲಕ ಗೋವಿಂದ ನಾಯ್ಕ ಎಂಬವರಿಗೆ ಪೆರ್ನೆ ಗ್ರಾಮದ ಕರ್ವೇಲು ಎಂಬಲ್ಲಿ ಸಮೀಪಿಸುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು, ಬಸ್ ಚಾಲನೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಇದನ್ನು ಗಮನಿಸಿದ ಬಸ್ಸಿನಲ್ಲಿದ್ದ ನ್ಯಾಯವಾದಿ ನೆಲ್ಯಾಡಿಯ ಇಸ್ಮಾಯೀಲ್ ಎಂಬವರ ಪುತ್ರ ಸಲ್ಮಾನುಲ್‌ ಫಾರಿಸ್ ತಕ್ಷಣವೇ ಚಾಲಕನತ್ತ ದೌಡಾಯಿಸಿ ಚಲಿಸುತ್ತಿದ್ದ ಬಸ್ ಅನ್ನು ನಿಧಾನಕ್ಕೆ ಹತೋಟಿಗೆ ತಂದು ರಸ್ತೆ ಬದಿಗೆ ನಿಲ್ಲಿಸಿದರು. ತಕ್ಷಣವೇ ಚಾಲಕನನ್ನು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇವರ ಸಮಯ ಪ್ರಜ್ಞೆಯಿಂದ ಸಂಭವನೀಯ ಅಪಾಯವೊಂದು ತಪ್ಪಿದಂತಾಗಿದೆ. ಬಳಿಕ ಸಾರಿಗೆ ನಿಯಂತ್ರಕರ ಸಹಕಾರದಿಂದ ಬಸ್ ಅನ್ನು ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ತಂದಿಡಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News