×
Ad

ಧರ್ಮಸ್ಥಳ ಪ್ರಕರಣ | 13ನೇ ಗುರುತಿನಲ್ಲಿ ಇಂದು GPR ಬಳಸಿ ಶೋಧ: ಹೂತಿಟ್ಟ ಸತ್ಯ ಹೊರಬರುತ್ತಾ?

ಏನಿದು GPR? ಕಾರ್ಯನಿರ್ವಹಣೆ ಹೇಗೆ? 13ರಲ್ಲಿ ಉತ್ಖನನದ ಬಳಿಕ ಎಸ್ಐಟಿ ನಡೆ ಏನು?

Update: 2025-08-12 09:53 IST

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂತಿಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ(ಎಸ್ಐಟಿ) ಕಳೆದ ಎರಡು ವಾರಗಳಿಂದ ನಡೆಸುತ್ತಿರುವ ತನಿಖೆಯ ಭಾಗವಾಗಿ ದೂರುದಾರ ಗುರುತಿಸಿರುವ ಪಾಯಿಂಟ್ ನಂಬರ್ 13ರಲ್ಲಿ ಇಂದು ಶೋಧ ಕಾರ್ಯ ನಡೆಯಲಿದೆ.

ತನಿಖೆಯ ಆರಂಭದಲ್ಲಿ ದೂರುದಾರ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ ಒಟ್ಟು 13 ಸ್ಥಳಗಳನ್ನು ಗುರುತಿಸಿದ್ದ. ಸ್ಥಳ ಗುರುತಿಸಿದ ಮರುದಿನದಿಂದಲೇ ಎಸ್ಐಟಿ ಅಧಿಕಾರಿಗಳು ಮಣ್ಣು ಅಗೆತ ಆರಂಭಿಸಿ ಶೋಧ ನಡೆಸತೊಡಗಿದ್ದರು.

ಈ ಪೈಕಿ ಪಾಯಿಂಟ್ ನಂಬರ್ 6 ಲ್ಲಿ ಮಾನವ ಅವಶೇಷ ಪತ್ತೆಯಾಗಿರುವುದಾಗಿ ವರದಿಯಾಗಿತ್ತು. ಗುರುತು ಸಂಖ್ಯೆ 10ರಲ್ಲಿ ಶೋಧ ನಡೆಸಿದ ಎಸ್ಐಟಿ ತಂಡ ಬಳಿಕ ಬಂಗ್ಲಗುಡ್ಡೆಯಲ್ಲಿ ಎರಡು ಹೊಸ ಜಾಗಗಳಲ್ಲಿ ಶೋಧ ನಡೆಸಿರುವುದಾಗಿಯೂ ವರದಿಯಾಗಿತ್ತು. ಇಲ್ಲಿಯೂ ಕೆಲವು ಮಾನವ ಅವಶೇಷಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿತ್ತು. ಗುರುತು ಸಂಖ್ಯೆ 11 ಮತ್ತು 12ರಲ್ಲಿ ಶೋಧ ನಡೆಸಿದ ಎಸ್ಐಟಿ ತಂಡ ಬಳಿಕ ಅಚ್ಚರಿಯ ಬೆಳವಣಿಗೆಯಲ್ಲಿ ಗುರುತು ಸಂಖ್ಯೆ 13ನ್ನು ಕೈಬಿಟ್ಟು ನೇರವಾಗಿ ಕಲ್ಲೇರಿ ಸಮೀಪದ ಬೋಳಿಯಾರ್ನ ಗುಡ್ಡದಲ್ಲಿ ಶೋಧ ನಡೆಸಿತ್ತು. ಆದರೆ ಅಲ್ಲಿ ಯಾವುದೇ ಮಾನವ ಅವಶೇಷಗಳು ಪತ್ತೆಯಾಗಿಲ್ಲ ಎನ್ನಲಾಗುತ್ತಿದ್ದರೂ ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ಆ ಬಳಿಕದ ಬೆಳವಣಿಗೆಯಲ್ಲಿ ದೂರುದಾರನೊಂದಿಗೆ ಎಸ್ಐಟಿ ನೇರವಾಗಿ ಪ್ರವೇಶ ಮಾಡಿದ್ದು, ಧರ್ಮಸ್ಥಳ ದೇವಸ್ಥಾನದ ದ್ವಾರದ ಮೂಲಕ ಬಾಹುಬಲಿ ಬೆಟ್ಟದ ಸಮೀಪಕ್ಕೆ. ಈ ಬೆಳವಣಿಗೆಯೂ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಬಾಹುಬಲಿ ಬೆಟ್ಟ ಸಮೀಪದ ತಿರುವೊಂದರಲ್ಲಿ ದೂರುದಾರನ ಸೂಚನೆ ಮೇರೆಗೆ ಜೆಸಿಬಿ ಬಳಸಿ ಶೋಧ ನಡೆಸಿದ ಎಸ್ಐಟಿಗೆ ಯಾವುದೇ ಮಾನವ ಅವಶೇಷ ಸಿಕ್ಕಿರಲಿಲ್ಲ. ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿದ್ದ ಸುಜಾತಾ ಭಟ್ ವಕೀಲ ಮಂಜುನಾಥ್, ಅಲ್ಲಿ ಕಟ್ಟಡ ಅವಶೇಷಗಳನ್ನು ರಾಶಿ ಹಾಕುವ ಮೂಲಕ ಸಾಕ್ಷ್ಯನಾಶದ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದರು.

ಬಾಹುಬಲಿ ಬೆಟ್ಟದಲ್ಲಿ ಶೋಧ ನಡೆಸುವ ಮೂಲಕ ಎಸ್ಐಟಿ ಒಟ್ಟು 15 ಗುರುತುಗಳಲ್ಲಿ ಶೋಧ ಕಾರ್ಯ ಮುಗಿಸಿತ್ತು. ಇನ್ನು ಕೌತುಕದ ಗೂಡಾಗಿದ್ದ 13ನೇ ಗುರುತಿನಲ್ಲಿ ಮಂಗಳವಾರ ಎಸ್ಐಟಿ ಜಿಪಿಆರ್ ಅರ್ಥಾತ್ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ ಬಳಸಿ ಶೋಧ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರವೇ ಅಲ್ಲಿ ಪ್ರಾಯೋಗಿಕವಾಗಿ ಈ ಡ್ರೋನ್ ಆಧಾರಿತ ಜಿಪಿಆರ್ ಅನ್ನು ಪ್ರಾಯೋಗಿಕವಾಗಿ ಪರಿಶೀಲನೆ ನಡೆಸಲಾಗಿತ್ತು. ಈ ಪರಿಶೀಲನೆ ಧನಾತ್ಮಕ ಫಲಿತಾಂಶ ನೀಡಿದ್ದು, ಮಂಗಳವಾರ ಈ ತಂತ್ರಜ್ಞಾನ ಬಳಸಿ ಶೋಧ ನಡೆಸಲಾಗುವುದು ಎಂದು ತಿಳಿದು ಬಂದಿದೆ.

ಪಾಯಿಂಟ್ ನಂಬರ್ 13ರಲ್ಲಿ ಜಿಪಿಆರ್ ಯಾಕೆ?

ಭಾರೀ ಕುತೂಹಲ ಮೂಡಿಸಿದ್ದ ಪಾಯಿಂಟ್ ನಂಬರ್ 13ರಲ್ಲಿ ದೂರುದಾರ ಒಂದಕ್ಕಿಂತ ಹೆಚ್ಚು ಮೃತ ದೇಹಗಳನ್ನು ಹೂತು ಹಾಕಿರುವುದಾಗಿ ಆರೋಪಿಸಿದ್ದ. ಅಲ್ಲದೇ ದೂರುದಾರ ಈ ವರೆಗೆ ಗುರುತಿಸಿದ್ದ ಹೆಚ್ಚಿನ ಸ್ಥಳಗಳಲ್ಲಿ ಯಾವುದೇ ಮಾನವ ಅವಶೇಷಗಳು ಪತ್ತೆಯಾಗಿರಲಿಲ್ಲ. ಇಲ್ಲೂ ರಾಡಾರ್ ಬಳಸಿ ಶೋಧ ಕಾರ್ಯ ನಡೆಸಿದಾಗ ಕುರುಹು ಪತ್ತೆಯಾದರೆ ಮಾತ್ರ ಉತ್ಖನನ ನಡೆಸುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಎಸ್ಐಟಿ ಇಳಿದಿದೆ ಎನ್ನಲಾಗುತ್ತಿದೆ. ಅಲ್ಲದೇ ಉತ್ಖನನಕ್ಕೆ ರಾಡಾರ್ ಬಳಸುವಂತೆಯೂ ಸುಜಾತಾ ಭಟ್ ಪರ ವಕೀಲರು ಆಗ್ರಹಿಸಿದ್ದರು. 13ನೇ ಗುರುತು ಇರುವ ಸ್ಥಳವು ನೇತ್ರಾವತಿ ಸ್ನಾನ ಘಟ್ಟದ ಬಳಿ ಇರುವ ಕಿಂಡಿ ಅಣೆಕಟ್ಟಿನ ಸಮೀಪ ಇದ್ದು, ಆ ಪ್ರದೇಶದಲ್ಲಿ ಜೆಸಿಬಿ ಬಳಸಿ ಅಗೆಯುತ್ತಾ ಹೋದರೆ ಅದು ಅಣೆಕಟ್ಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೆಂದು ಅಂದಾಜಿಸಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ 13ನೇ ಪಾಯಿಂಟ್ ನಲ್ಲಿ ಜಿಪಿಆರ್ ಅರ್ಥಾತ್ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ ಅನ್ನು ಬಳಸಲು ಎಸ್ಐಟಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ಎಂದರೇನು?

ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ಎನ್ನುವುದು ಭೂಮಿಯ ಮೇಲ್ಮೈಯ ಕೆಳಗಿರುವ ವಸ್ತುಗಳನ್ನು ಪತ್ತೆಹಚ್ಚಲು ಬಳಸುವ ಒಂದು ಭೌಗೋಳಿಕ ವಿಧಾನವಾಗಿದೆ. ಇದು ರೇಡಿಯೋ ತರಂಗಗಳನ್ನು ಬಳಸಿ ಭೂಮಿಯೊಳಗಿನ ಚಿತ್ರಗಳನ್ನು ರಚಿಸುತ್ತದೆ. ಇದು ಅಪಾಯಕಾರಿಯಲ್ಲದ ಮತ್ತು ಅಡಚಣೆಯನ್ನುಂಟು ಮಾಡದ ತಂತ್ರಜ್ಞಾನವಾಗಿದ್ದು, ಯಾವುದೇ ಅಗೆತ ಅಥವಾ ಉತ್ಖನನ ಮಾಡದೆಯೇ ಭೂಗತ ಪ್ರದೇಶಗಳನ್ನು ಸಮೀಕ್ಷೆ ಮಾಡಬಹುದು.

GPR ವ್ಯವಸ್ಥೆಯು ಭೂಮಿಯೊಳಗೆ ತರಂಗಗಳನ್ನು ಕಳುಹಿಸುತ್ತದೆ ಮತ್ತು ಪ್ರತಿಫಲನಗೊಂಡು ಹಿಂದಿರುಗುವ ಸಂಕೇತಗಳನ್ನು ವಿಶ್ಲೇಷಿಸುತ್ತದೆ. ಈ ಮೂಲಕ ಅಲ್ಲಿಮ ಸ್ಪಷ್ಟ ಮಾಹಿತಿಗಳನ್ನು ಚಿತ್ರಣಗಳ ಮೂಲಕ ರವಾನಿಸುತ್ತದೆ.

ಈ ವಿದ್ಯುತ್ಕಾಂತೀಯ ತರಂಗಗಳು ಭೂಮಿಯೊಳಗೆ ಚಲಿಸುತ್ತವೆ. ಈ ತರಂಗಗಳು ವಿಶ್ಲೇಷಿಸುವ ಮೂಲಕ, GPR ವ್ಯವಸ್ಥೆಯು ಭೂಮಿಯೊಳಗಿನ ವಿವರವಾದ ಚಿತ್ರ ಅಥವಾ ಪ್ರೊಫೈಲ್ ಅನ್ನು ರಚಿಸುತ್ತದೆ. ಮತ್ತು ಆ ಮಾಹಿತಿಯನ್ನು ಸಂಸ್ಕರಿಸಿ ಸಾಮಾನ್ಯವಾಗಿ 2D ಅಡ್ಡ-ವಿಭಾಗದ ಚಿತ್ರ ಅಥವಾ 3D ಮಾದರಿಯಾಗಿ ಪ್ರದರ್ಶಿಸಲಾಗುತ್ತದೆ. ಈ ಚಿತ್ರವು ವಿವಿಧ ಭೂಗತ ವಸ್ತುಗಳ ಸ್ಥಳ, ಆಳ ಮತ್ತು ಆಕಾರವನ್ನು ತೋರಿಸುತ್ತದೆ, ಇದರಿಂದಾಗಿ ಆಪರೇಟರ್ಗಳು ಭೂಮಿಯನ್ನು ಅಗೆಯದೆಯೇ ಅದರ ಒಳಗಿರುವ ವಸ್ತುಗಳನ್ನು ನೋಡಬಹುದು.

ಎಲ್ಲೆಲ್ಲಿ ಜಿಪಿಆರ್ ಬಳಸಲಾಗುತ್ತದೆ?

ಜಿಪಿಆರ್ ನ್ನು ತೈಲ, ಗಣಿ ನಿಕ್ಷೇಪಗಳನ್ನು ಪತ್ತೆ ಹಚ್ಚಲು, ನಿರ್ಮಾಣ ಮತ್ತು ಇಂಜಿನಿಯರಿಂಗ್ ಸಂದರ್ಭದಲ್ಲಿ ಅಲ್ಲಿನ ಪೈಪ್ ಗಳು, ಕೇಬಲ್ ಗಳು ಮತ್ತು ತಂತಿಗಳಂತಹ ಭೂಗತ ಸೌಲಭ್ಯಗಳನ್ನು ಪತ್ತೆಹಚ್ಚಲು, ಸೇನೆಯಲ್ಲಿ ನುಸುಳುಕೋರರ ಪತ್ತೆಗೆ, ಜಲ ಪ್ರಳಯದಂತಹ ಪ್ರಾಕೃತಿಕ ದುರಂತ ಸಂದರ್ಭದಲ್ಲಿ ಮಣ್ಣಿನಡಿ ಹುದುಗಿರುವವರ ಪತ್ತೆಗೆ, ಹೂತಿರುವ ಕಲಾಕೃತಿಗಳು, ಪ್ರಾಚೀನ ಕಟ್ಟಡಗಳ ಅಡಿಪಾಯ ಮತ್ತು ಸ್ಮಶಾನಗಳನ್ನು ಪತ್ತೆಹಚ್ಚಲು, ಭೂವೈಜ್ಞಾನಿಕ ಅಧ್ಯಯನ ಮೊದಲಾದ ಅಗತ್ಯಗಳಿಗೆ ಬಳಸಲಾಗುತ್ತದೆ.

ಆದರೆ 2024ರ ಜುಲೈನಲ್ಲಿ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಪತ್ತೆಹಚ್ಚಲು ಜಿಪಿಆರ್ ಬಳಸಲಾಗಿದ್ದು, ಅದು ನೀಡಿದ ಮಾಹಿತಿಯು ವಾಸ್ತವಕ್ಕೆ ವಿರುದ್ಧವಾಗಿತ್ತು.

13ನೇ ಗುರುತಿನಲ್ಲಿ ಶೋಧ ಬಳಿಕ ಎಸ್ಐಟಿ ನಡೆ ಏನು?

13ನೇ ಗುರುತಿನಲ್ಲಿ ಶೋಧ ಕಾರ್ಯಾಚರಣೆ ಮುಗಿದರೆ, ದೂರುದಾರ ತೋರಿಸಿದ ಎಲ್ಲ ಸ್ಥಳಗಳಲ್ಲಿ ಶೋಧ ಕಾರ್ಯ ಮುಗಿಯುತ್ತದೆ. ಆದರೆ ದೂರುದಾರ ಮತ್ತೆ ಹೊಸ ಸ್ಥಳಗಳನ್ನು ಗುರುತಿಸುತ್ತಾನೋ ಎಂಬುದನ್ನು ಕಾದು ನೋಡಬೇಕಿದೆ. ಈ ನಡುವೆ ಸಾಮಾಜಿಕ ಕಾರ್ಯಕರ್ತ ಜಯಂತ್ ಟಿ. ಮೃತದೇಹ ಹೂತು ಹಾಕಿರುವ ಸ್ಥಳದ ಬಗ್ಗೆ ಮಾಹಿತಿ ಇರುವುದಾಗಿ ಎಸ್ಐಟಿಗೆ ದೂರು ನೀಡಿದ್ದರು. ಈ ದೂರಿನ ತನಿಖೆ ಯಾವ ರೀತಿ ನಡೆಯುತ್ತದೆಯೇ ಎಂಬ ಕುತೂಹಲವೂ ಸಾರ್ವಜನಿಕರಿಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News