×
Ad

ಲೇಡಿಗೋಶನ್ ಮಾದರಿ ಇತರ ಆಸ್ಪತ್ರೆಗಳಲ್ಲಿ ಅಳವಡಿಕೆಯಾಗಬೇಕಿದೆ: ಡಾ.ನಾಗಲಕ್ಷ್ಮೀ ಚೌಧರಿ

ಆಸ್ಪತ್ರೆ ವೈದ್ಯಾಧಿಕಾರಿ, ಸಖಿ ಕೇಂದ್ರಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಶ್ಲಾಘನೆ

Update: 2026-03-06 14:28 IST

ಮಂಗಳೂರು, ಮಾ.6: ಲೇಡಿಗೋಶನ್ ತಾಯಿ ಮಗುವಿನ ಆಸ್ಪತ್ರೆ ನಿರ್ವಹಣೆ ಮತ್ತು ಕಾರ್ಯವೈಖರಿ ಅತ್ಯುತ್ತಮವಾಗಿದ್ದು, ಈ ಆಸ್ಪತ್ರೆಯ ಮಾದರಿಯನ್ನು ರಾಜ್ಯದ ಇತರ ಆಸ್ಪತ್ರೆಗಳಲ್ಲಿಯೂ ಅಳವಡಿಸುವ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವರು ಶುಕ್ರವಾರ ನಗರದ ಲೇಡಿಗೋಶನ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅಲ್ಟ್ರಾ ಸೌಂಡ್ ಕೊಠಡಿ, ತುರ್ತು ನಿಗಾ ವಿಭಾಗ, ಸಖಿ ಕೇಂದ್ರ, ಅಧೀಕ್ಷಕರ ಕೊಠಡಿ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಿದ್ದರು.

ಆಯೋಗದ ಅಧ್ಯಕ್ಷೆಯಾಗಿ ಇಂತಹ ಆಸ್ಪತ್ರೆಗಳಿಗೆ ಭೇಟಿ ನೀಡುವ ಸಂದರ್ಭ ಮುಖ್ಯವಾಗಿ ಅಲ್ಲಿನ ಲೋಪದೋಷಗಳ ಬಗ್ಗೆಯೇ ಹೆಚ್ಚಿನ ನಿಗಾ ವಹಿಸುತ್ತೇನೆ. ಆದರೆ ಲೇಡಿಗೋಶನ್ ಆಸ್ಪತ್ರೆಯಲ್ಲಿ ಅಂತಹ ಯಾವುದೇ ಲೋಪಗಳು ಕಂಡುಬಂದಿಲ್ಲ. ಬದಲಾಗಿ, ತಾಯಿ ಮಗುವಿನ ಆರೈಕೆಯ ವಿಚಾರದಲ್ಲಿ ಎಲ್ಲರಿಗಿಂತಲ್ಲೂ ಭಿನ್ನವಾಗಿ ಕೆಲಸ ಮಾಡುತ್ತಿದೆ. ಮಗುವಿನ ಜತೆಗೆ ತಾಯಿಯ ಹಾರೈಕೆಯಲ್ಲಿ ಲೇಡಿಗೋಶನ್ ಎಲ್ಲರಿಗೂ ಮಾದರಿಯಾಗುವಂತಹ ವ್ಯವಸ್ಥೆಯನ್ನು ಮಾಡಿಕೊಂಡಿದೆ ಎಂದರು.

ಆಸ್ಪತ್ರೆಯ ಅಧೀಕ್ಷಕರು ಮಾತೃ ಹೃದಯದವರು.

ಆಸ್ಪತ್ರೆಯ ಅಧೀಕ್ಷಕರು ನಿಜಕ್ಕೂ ತಾಯಿ ಹೃದಯದ ವ್ಯಕ್ತಿ ಎಂದು ಬಣ್ಣಿಸಿದ ಡಾ.ನಾಗಲಕ್ಷ್ಮಿ ಚೌಧ, ತಾಯಿ ನೋವಿನ ಜೊತೆಯಲ್ಲಿ ಆಸ್ಪತ್ರೆಗೆ ಬಂದಾಗ ಅವರು ತಾಯಿ ಮಗುವಿನ ಆರೈಕೆಯಲ್ಲಿ ತೋರುವ ಅವರ ಕಾಳಜಿ ಬಹಳ ದೊಡ್ದದು. ಮುಖ್ಯವಾಗಿ ಆಸ್ಪತ್ರೆಯ ಅಟೆಂಡರ್ ಹಾಗೂ ಸಿಬ್ಬಂದಿಯನ್ನು ಬಳಸಿಕೊಳ್ಳುವ ರೀತಿ ಉತ್ತಮವಾಗಿದ್ದು, ಗರ್ಭಿಣಿ, ಬಾಣಂತಿಯರ ಜೊತೆಗೆ ಬಂದ ಪುರುಷರಿಗೆ ಮಾಡಿದ ಪ್ರತ್ಯೇಕವಾದ ವ್ಯವಸ್ಥೆ ಮಾದರಿಯಾಗಿದೆ. ವಿಶೇಷವಾಗಿ ಔಷಧ ದಾಸ್ತಾನು ವಿಚಾರದಲ್ಲಿ ಆಸ್ಪತ್ರೆಯ ಮುಂಜಾಗ್ರತಾ ವ್ಯವಸ್ಥೆ ಬಹಳ ಉತ್ತಮವಾಗಿದೆ. ಮೂರು ತಿಂಗಳ ಮೊದಲೇ ಆಸ್ಪತ್ರೆಗೆ ಬೇಕಾಗುವ ಔಷಧವನ್ನು ಮುಂಚೆಯೇ ಇಂಡೆಂಟ್ ಮಾಡಿಕೊಳ್ಳುವ ಮೂಲಕ ಔಷಧಕ್ಕೆ ಯಾವುದೇ ಕೊರತೆ ಇಲ್ಲದ ವ್ಯವಸ್ಥೆ ಇಲ್ಲಿದೆ ಎಂದರು.

ಲೇಡಿಗೋಶನ್ಗೆ ಬೇರೆ ಬೇರೆ ಜಿಲ್ಲೆ, ತಾಲೂಕುಗಳಿಂದ ಗರ್ಭಿಣಿಯರನ್ನು ಕೊನೆ ಕ್ಷಣದಲ್ಲಿ ಕರೆತರುವ ಸಂದರ್ಭ ಬೇರೆ ಆಸ್ಪತ್ರೆಯಿಂದ ಲೇಡಿಗೋಶನ್ ಮುಟ್ಟುವ ಮೊದಲೇ ಗರ್ಭಿಣಿಯ ಮಾಹಿತಿ ಸೇರಿದಂತೆ ಎಲ್ಲ ವಿಚಾರವನ್ನು ವಾಟ್ಸ್ ಆ್ಯಪ್ ಮೂಲಕ ಪಡೆದುಕೊಂಡು ತುರ್ತಾಗಿ ಆಪರೇಶನ್ ಥಿಯೇಟರ್ಗೆ ಸಾಗಿಸುವ ಮೂಲಕ ಅಮೂಲ್ಯ ಸಮಯದ ಉಳಿತಾಯ ಜೊತೆಗೆ ತಾಯಿ ಮಗುವಿನ ರಕ್ಷಣೆಗೆ ಮುಂದಾಗುವ ಕ್ರಮ ಶ್ಲಾಘನೀಯವಾಗಿದೆ. ಸಖಿ ಒನ್ ಸ್ಟಾಪ್ ಸೆಂಟರ್ ಕೂಡ ಬಹಳ ಉತ್ತಮವಾಗಿ ನಡೆಯುತ್ತಿದ್ದು, ಬಹಳಷ್ಟು ಹೆಣ್ಣು ಮಕ್ಕಳ ಬದುಕಿಗೆ ಹೊಸ ದಿಶೆಯನ್ನು ನೀಡುವ ಕೆಲಸ ಮಾಡುತ್ತಿದೆ. ದೌರ್ಜನ್ಯ, ಆತ್ಯಾಚಾರಕ್ಕೆ ಗುರಿಯಾಗಿರುವ ಹೆಣ್ಣು ಮಕ್ಕಳಿಗೆ ಕೂಡ ಸಾಂತ್ವನದ ಕೇಂದ್ರವಾಗಿ ಕೆಲಸ ಮಾಡುತ್ತಿದೆ ಎಂದರು.

ಈ ಸಂದರ್ಭ ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್., ಆರ್ಎಂಒ ಡಾ.ಜಗದೀಶ್, ಆಸ್ಪತ್ರೆಯ ಹಿರಿಯ ತಜ್ಞರಾದ ಡಾ.ದಯಾನಂದ್, ಡಾ.ರವಿಕುಮಾರ್, ಸಖಿ ಒನ್ ಸ್ಟಾಪ್ ಸೆಂಟರ್ನ ಪ್ರಿಯಾ ಕೆ.ಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಸೇರಿದಂತೆ ನಾನಾ ಅಧಿಕಾರಿಗಳು, ಲೇಡಿಗೋಶನ್ ನ ಸಿಬ್ಬಂದಿ, ದಾದಿ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News