ಉಳ್ಳಾಲ ತಾಲೂಕಿಗೆ ತಾಲೂಕು ಆಸ್ಪತ್ರೆ ಮಂಜೂರು ಮಾಡುವಂತೆ ಡಿವೈಎಫ್ಐಯಿಂದ ಮನವಿ
ಉಳ್ಳಾಲ : ತಾಲೂಕು ರಚನೆಯಾಗಿ ಐದು ವರ್ಷ ಕಳೆದರೂ, ಉಳ್ಳಾಲದಲ್ಲಿ ಇನ್ನೂ ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆ ಸ್ಥಾಪನೆಯಾಗದಿರುವುದು ಸ್ಥಳೀಯರಲ್ಲಿ ನಿರಾಸೆ ಮೂಡಿಸಿದೆ. ಉಳ್ಳಾಲ ತಾಲೂಕು ರಚನೆಯಾಗುವ ವೇಳೆ ಜನಸಾಮಾನ್ಯರ ಮುಖ್ಯ ನಿರೀಕ್ಷೆಗಳಲ್ಲಿ ಒಂದು ಸರಕಾರಿ ಆಸ್ಪತ್ರೆಯೂ ಆಗಿತ್ತು. ಖಾಸಗಿ ಮೆಡಿಕಲ್ ಕಾಲೇಜುಗಳ ಏಕಸ್ವಾಮ್ಯದಿಂದ ತತ್ತರಿಸಿರುವ ಉಳ್ಳಾಲದ ಜನತೆಗೆ ಸರ್ಕಾರಿ ಆಸ್ಪತ್ರೆ ತುರ್ತು ಅಗತ್ಯವಾಗಿದೆ.
ಆದರೆ ಇಂದಿಗೂ ತಾಲೂಕು ಆಸ್ಪತ್ರೆ ನಿರ್ಮಾಣದ ದಿಶೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಬದಲಿಗೆ, ತಾಲೂಕು ವ್ಯಾಪ್ತಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪಿಪಿಪಿ (PPP) ಮಾದರಿಯಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳ ಅಧೀನಕ್ಕೆ ನೀಡಲಾಗಿದೆ. ಇದು ಬಡಜನರ ಆರೋಗ್ಯ ಹಕ್ಕಿಗೆ ಧಕ್ಕೆ ತಂದು, ಚಿಕಿತ್ಸೆ ಪಡೆಯುವ ಕನಸಿಗೆ ತಣ್ಣೀರು ಎರಚಿದೆ ಎಂದು ಡಿವೈಎಫ್ಐ ಆರೋಪಿಸಿದೆ.
ರಾಜ್ಯ ಸರ್ಕಾರದ ವೈದ್ಯಕೀಯ ಅಧಿನಿಯಮದ ಪ್ರಕಾರ ಪ್ರತಿ ತಾಲೂಕಿಗೂ ಕಡ್ಡಾಯವಾಗಿ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ಇರಬೇಕು ಎಂಬ ನಿಯಮವನ್ನು ಉಲ್ಲಂಘಿಸಲಾಗುತ್ತಿದೆ. ಆದ್ದರಿಂದ ಉಳ್ಳಾಲ ತಾಲೂಕಿಗೆ ತಕ್ಷಣ ತಾಲೂಕು ಆಸ್ಪತ್ರೆ ಮಂಜೂರು ಮಾಡುವಂತೆ ಹಾಗೂ ಮುಡಿಪು ಹೋಬಳಿಗೆ 40 ಹಾಸಿಗೆಗಳ ಸಮುದಾಯ ಆಸ್ಪತ್ರೆ ಅನುಮೋದಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದೇ ವೇಳೆ ತಾಲೂಕು ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ವೈದ್ಯರು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಡಿವೈಎಫ್ಐ ಆಗ್ರಹಿಸಿದೆ.
ಈ ಕುರಿತು ಮನವಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಡಿವೈಎಫ್ಐ ಉಳ್ಳಾಲ ತಾಲೂಕು ಸಮಿತಿ ಸಲ್ಲಿಸಿತು. ನಿಯೋಗದಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ, ಉಪಾಧ್ಯಕ್ಷ ರಝಾಕ್ ಮುಡಿಪು, ಮಂಗಳೂರು ನಗರ ಕಾರ್ಯದರ್ಶಿ ತೈಯ್ಯೂಬ್ ಬೆಂಗ್ರೆ ಮತ್ತು ಮುಖಂಡ ರಫೀಕ್ ಹರೇಕಳ ಉಪಸ್ಥಿತರಿದ್ದರು.