ಡ್ರಗ್ಸ್ ಸೇವಿಸುವವರ ಮನ ಪರಿವರ್ತನೆಗೆ ಹೆತ್ತವರ ಪ್ರಯತ್ನ ಅಗತ್ಯ: ಮಂಗಳೂರು ಕಮಿಷನರ್ ಕುಲದೀಪ್ ಕುಮಾರ್ ಜೈನ್
ಮಂಗಳೂರು : ಡ್ರಗ್ಸ್ ಸೇವನೆಯ ಚಟ ಅಂಟಿಕೊಂಡವರ ಮನ ಪರಿವರ್ತನೆ ಕಾರ್ಯ ಹೆತ್ತವರಿಂದ ಪ್ರತಿ ಮನೆಯಲ್ಲೂ ನಡೆದಾಗ ಡ್ರಗ್ಸ್ ಮುಕ್ತ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಮಂಗಳೂರು ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್ ಜೈನ್ ಹೇಳಿದ್ದಾರೆ.
ಕುದ್ರೋಳಿ ಜಂಕ್ಷನ್ ಉರ್ದು ಶಾಲಾ ವಠಾರದಲ್ಲಿ ಬುಧವಾರ ರಾತ್ರಿ ನಡೆದ ಬೃಹತ್ ಜನಜಾಗೃತಿ ಸಮಾವೇವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಡ್ರಗ್ಸ್ ದುಷ್ಪರಿಣಾಮದ ಬಗ್ಗೆ ಹೆತ್ತವರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಡ್ರಗ್ಸ್ ಸೇವನೆ, ಮಾರಾಟ ದಂಧೆಯಲ್ಲಿ ಸಿಲುಕಿಕೊಂಡವರನ್ನು ಹೆತ್ತವರಿಂದ ಮತ್ತು ಸಮಾಜದಿಂದ ಸರಿಪಡಿಸಲು ಸಾಧ್ಯವಾಗದಿದ್ದರೆ ಪೊಲೀಸ್ ಇಲಾಖೆ ನಿಮ್ಮ ನೆರವಿಗೆ ಬರುತ್ತದೆ ಎಂದ ಅವರು ಕುದ್ರೋಳಿಯಲ್ಲಿ ಸಮಾಲೋಚನಾ ಕೇಂದ್ರ ಸ್ಥಾಪನೆಗೆ ಸಲಹೆ ನೀಡಿದರು.
ಡ್ರಗ್ಸ್ ಚಟ ಅಂಟಿಕೊಂಡವರಿಂದ ಉಪಟಳವನ್ನು ನಿಲ್ಲಿಸಲು ತಮಗೆ ಅಥವಾ ಎಸಿಪಿಗೆ ಮೆಸೇಜ್ ಮಾಡುವಂತೆ ತಿಳಿಸಿದರು.
ಎಸಿಪಿ ಮಹೇಶ್ ಕುಮಾರ್ ಮಾತನಾಡಿ ಕುದ್ರೋಳಿಯಲ್ಲಿ ಕೈಗೊಂಡಿರುವ ಡ್ರಗ್ಸ್‌ಮುಕ್ತ ಅಭಿಯಾನ ಇಡೀ ಕರ್ನಾಟಕಕ್ಕೆ ಮಾದರಿಯಾಗಿದೆ ಎಂದರು.
ವಿಧಾನ ಪರಿಷತ್‌ನ ಮಾಜಿ ಸದಸ್ಯ ಹಾಗೂ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಲ್‌ಹಾಜ್ ಕೆಎಸ್ ಮುಹಮ್ಮದ್ ಮಸೂದ್ ಅಧ್ಯಕ್ಷತೆ ವಹಿಸಿದ್ದರು.
ಮೊಟಿವೇಷನಲ್ ಸ್ಪೀಕರ್ ಕೌನ್ಸಿಲರ್ ರಫೀಕ್ ಮಾಸ್ಟರ್ ಮಾತಾಡಿ ಹಲವಾರು ಉದಾಹರಣೆಗಳ ಮೂಲಕ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಿದರು.
ಕುದ್ರೋಳಿ ಯುವಕ ಸಂಘದ ಅಧ್ಯಕ್ಷ ಅಶೋಕ್ ಕುಮಾರ್, ವಿಠೋಭ ಭಜನಾ ಮಂದಿರ ಅಧ್ಯಕ್ಷ ನಾರಾಯಣ ಕರ್ಕೇರ , ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಯಾಸೀನ್ ಕುದ್ರೋಳಿ, ಕೋಶಾಧಿಕಾರಿ ಮಕ್ಬೂಲ್ ಅಹ್ಮದ್ , ಮಾಜಿ ಮೇಯರ್ ಕೆ ಅಶ್ರಫ್, ಕಾರ್ಪೋರೇಟರ್ ಶಂಸುದ್ದೀನ್, ಮಾಜಿ ಕಾರ್ಪೊರೇಟರ್ ಅಬ್ದುಲ್ ಅಝೀಝ್, ನಡುಪಳ್ಳಿ ಮಸೀದಿಯ ಅಧ್ಯಕ್ಷ ಫಝಲ್ ಮುಹಮ್ಮದ್ , ಮೊಹ್ದಿನ್ ಮಸೀದಿಯ ಅಧ್ಯಕ್ಷ ಅಬ್ದುಲ್ ಅಝೀಝ್ , ಕಂಡತ್ ಪಳ್ಳಿ ಅಧ್ಯಕ್ಷ ಮೊಹಮ್ಮದ್ ಶಮೀಮ್, ನಾಸಿರ್ ಐಕೋ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಸ್ಲಿಂ ಐಕ್ಯತಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಿ ಅಬೂಬಕರ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಮುಹಮ್ಮದ್ ಹಾರಿಸ್ ಕಾರ್ಯಕ್ರಮ ನಿರೂಪಿಸಿದರು.