ಜ.3ರಿಂದ ದ.ಕ. ಜಿಲ್ಲೆಯಲ್ಲಿ ‘ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ
ಮಂಗಳೂರು, ಜ.29: ದ.ಕ. ಜಿಲ್ಲೆಯಲ್ಲಿ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನಾ ಕಾರ್ಯಕ್ರಮ 2026 ಜ.30ರಿಂದ ಫೆ.13ರವರೆಗೆ ನಡೆಯಲಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ತಿಮ್ಮಯ್ಯ ಎಚ್.ಆರ್. ತಿಳಿಸಿದ್ದಾರೆ.
ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜನರಲ್ಲಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಸಮುದಾಯದ ಮನೆ ಬಾಗಿಲಿಗೆ ಕುಷ್ಠ ರೋಗದ ಬಗ್ಗೆ ಮಾಹಿತಿ , ಕುಷ್ಠರೋಗದ ಬಗ್ಗೆ ಇರುವ ಸಾಮಾಜಿಕ ಕಳಂಕ ಮತ್ತು ಸಾಮಾಜಿಕ ತಾರತಮ್ಯಗಳನ್ನು ನಿವಾರಿಸುವ ಜೊತೆಗೆ ಶೀಘ್ರ ಕುಷ್ಠರೋಗಿಗಳ ಪತ್ತೆ ಹಚ್ಚುವುದು ಮತ್ತು ಸೂಕ್ತ ಚಿಕಿತ್ಸೆ ನೀಡುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು.
ಕುಷ್ಠರೋಗವು ಮೈಕೋಬ್ಯಾಕ್ಟಿರಿಯಂ ಲೆಪ್ರೇ ಎಂಬ ಸೂಕ್ಷ್ಮರೋಗಾಣುವಿನಿಂದ ಬರುವ ಕಾಯಿಲೆ ಹಾಗೂ ಇದು ನಿಧಾನವಾಗಿ ಹರಡುವ ಸೋಂಕು ರೋಗವಾಗಿದೆ. ಇದು ಮುಖ್ಯವಾಗಿ ಚರ್ಮ ಮತ್ತು ನರಗಳಿಗೆ ಬರುವ ಖಾಯಿಲೆ.ರೋಗದ ಮೊದಲ ಲಕ್ಷಣಗಳು 2-5 ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದರು.
ಸ್ಪರ್ಶಜ್ಞಾನ, ನೋವು, ನವೆ ಇಲ್ಲದ ತಾಮ್ರ ಅಥವಾ ತಿಳಿ ಬಿಳುಪಾದ ಮಚ್ಚೆಗಳು.ಕೈಕಾಲುಗಳಲ್ಲಿ ಜೋಮು ಉಂಟಾಗುವುದು ಮತ್ತು ಮರಗಟ್ಟುವುದು.ಮುಖ ಅಥವಾ ಕಿವಿಯ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊ ಳ್ಳುವುದು ಮತ್ತು ಎಣ್ಣೆ ಸವರಿದಂತೆ ಚರ್ಮ ಕಾಣಿಸಿಕೊಳ್ಳುವುದು.ನರಗಳ ಊತವಾಗುವಿಕೆ (ನ್ಯೂರೈಟಿಸ್) ಈ ರೋಗದ ಲಕ್ಷಣಗಳಾಗಿದೆ ಎಂದು ವಿವರಿಸಿದರು.
*47 ಪ್ರಕರಣಗಳು ಪತ್ತೆ : ದ.ಕ. ಜಿಲ್ಲೆಯಲ್ಲಿ 2025 ಎಪ್ರಿಲ್‌ನಿಂದ ಡಿಸೆಂಬರ್ ಅಂತ್ಯದ ತನಕ 47 ಮಂದಿ ಕುಷ್ಠ ರೋಗ ಬಾಧಿಸಿರುವುದು ದೃಢಪಟ್ಟಿತ್ತು. ಇದರಲ್ಲಿ 30 ಮಂದಿ ದ.ಕ. ಜಿಲ್ಲೆ ನಿವಾಸಿಗಳಿಗೆ ಮತ್ತು 17 ಹೊರಗಿನಿಂದ ಬಂದವರಲ್ಲಿ ಕುಷ್ಠರೋಗ ಕಂಡು ಬಂದಿದೆ. ಈ ಪೈಕಿ ಗಂಭೀರ ಪ್ರಕರಣಗಳು 42( ದ.ಕ. ಜಿಲ್ಲೆ 25, ಹೊರಗಿನ 17), ಆರಂಭಿಕ ಹಂತ 5, ಜಿಲ್ಲೆಯ 1 ಮಗುವಿಗೆ ಕುಷ್ಠರೋಗದ ಲಕ್ಷಣ ಕಂಡು ಬಂದಿದೆ ಎಂದು ಮಾಹಿತಿ ನೀಡಿದರು.
2020-21ರಲ್ಲಿ 29, 2021-22ರಲ್ಲಿ 39, 2022-23ರಲ್ಲಿ 75, 2023-24ರಲ್ಲಿ 62, 2024-25ರಲ್ಲಿ 43 ಕುಷ್ಠ ರೋಗ ಪ್ರಕರಣಗಳು ದ.ಕ. ಜಿಲ್ಲೆಯಲ್ಲಿ ದೃಢಪಟ್ಟಿತ್ತು ಎಂದು ಡಾ. ತಿಮ್ಮಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಷಯ ರೋಗ ನಿಯಂತ್ರಣಧಿಕಾರಿ ಡಾ. ದಿಲ್ಶಾದ್ ಖತೀಜ ಎಂ.ಪಿ., ವೈದ್ಯಾಧಿಕಾರಿಗಳಾದ ಡಾ.ಸುದರ್ಶನ್, ಡಾ.ಸುಜಯ್ , ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಉಪಸ್ಥಿತರಿದ್ದರು.