×
Ad

ರಾಷ್ಟ್ರಮಟ್ಟದ ಕಿರಾಅತ್ ಸ್ಪರ್ಧೆ: ಕಾಸರಗೋಡಿನ ಉಮರ್ ಮುಕ್ತಾರ್ ಪ್ರಥಮ

Update: 2026-01-29 18:27 IST

ಮಂಗಳೂರು, ಜ.29: ಯುವ ಪೀಳಿಗೆಗೆ ಪವಿತ್ರ ಕುರಾನ್ ಪಠಣದ ಮಹತ್ವವನ್ನು ತಲುಪಿಸುವ ಉದ್ದೇಶದಿಂದ ಡಾ.ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್‌ನ ದಶಮಾನೋತ್ಸವದ ಅಂಗವಾಗಿ ನಗರದ ಇಂಡಿಯಾನ ಕನ್ವೆನ್ಶನ್ ಹಾಲ್‌ನಲ್ಲಿ ರಾಷ್ಟ್ರಮಟ್ಟದ ಮುಕ್ತ ಕಿರಾಅತ್ ಸ್ಪರ್ಧೆಯು ಬುಧವಾರ ಜರುಗಿತು.

ರಾಷ್ಟ್ರಮಟ್ಟದ ಈ ಸ್ಪರ್ಧೆಗೆ 2,252 ಮಂದಿ ಆನ್‌ಲೈನ್ ಮೂಲಕ ಕಿರಾಅತ್ ವೀಡಿಯೊಗಳನ್ನು ಕಳುಹಿಸಿದ್ದರು. ಖ್ಯಾತ ವಿದ್ವಾಂಸರಿಂದ ನಡೆದ ತಾಂತ್ರಿಕ ಪರಿಶೀಲನೆಯ ನಂತರ 50 ಸ್ಪರ್ಧಿಗಳನ್ನು (40 ಮಂದಿ ಹುಡುಗರು ಮತ್ತು 10 ಮಂದಿ ಹುಡುಗಿಯರು) ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. ಕರ್ನಾಟಕ, ಕೇರಳ, ಗೋವಾ, ತೆಲಂಗಾಣ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸ್ಪರ್ಧಿಗಳು ಅಂತಿಮ ಹಂತದಲ್ಲಿ ಪೈಪೋಟಿ ನೀಡಿದರು. ಉತ್ತರ ಪ್ರದೇಶದ ಶೈಖ್ ಸರ್ಫರಾಝ್ ಅಝ್‌ಹರಿ ಮತ್ತು ಹೈದರಾಬಾದ್‌ನ ಖಾರಿ ಅಹ್ಮದ್ ಮುನೀರ್ ತೀರ್ಪುಗಾರರಾಗಿದ್ದರು.

ಯುವಜನತೆಯನ್ನು ಮಾದಕ ವ್ಯಸನ ಹಾಗೂ ಅಪರಾಧ ಚಟುವಟಿಕೆಗಳಿಂದ ದೂರವಿಟ್ಟು, ಆಧ್ಯಾತ್ಮಿಕ ಶಿಕ್ಷಣದತ್ತ ಕೊಂಡೊಯ್ಯುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ದಕ್ಷಿಣ ಭಾರತದಲ್ಲಿ ನಡೆದ ಮೊದಲ ರಾಷ್ಟ್ರಮಟ್ಟದ ಮುಕ್ತ ಕಿರಾಅತ್ ಸ್ಪರ್ಧೆ ಇದಾಗಿದ್ದು, ಇಂತಹ ಇನ್ನಷ್ಟು ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದು ಆಯೋಜಕ ಅಬ್ದುಲ್ ಶಕೀಲ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುಆಗೈದರು. ಹಝರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಯು.ಟಿ.ಇಫ್ತಿಕಾರ್, ರಮಾನಾಥ ರೈ, ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಪೂಜಾರಿ, ಕೆ.ಕೆ. ಶಾಹುಲ್ ಹಮೀದ್, ಎಸ್.ಎಂ. ರಶೀದ್ ಹಾಜಿ, ನಾಸಿರ್ ಲಕ್ಕಿಸ್ಟಾರ್, ಎಸ್‌ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜಕ ಅಬ್ದುಲ್ ಶಕೀಲ್‌ರನ್ನು ಸನ್ಮಾನಿಸಲಾಯಿತು. ಸಲಾಹ್ ಕುತ್ತಾರ್, ಸಮ್‌ರಾನ್, ಶೈಬಾನ್ ಮಾಡನ್ನೂರು ಕಾರ್ಯಕ್ರಮ ನಿರೂಪಿಸಿದರು.

* ಪ್ರಥಮ ಸ್ಥಾನ: ಉಮರ್ ಮುಕ್ತಾರ್ ಬಿ.ಎಂ. (ಕಾಸರಗೋಡು, ಕೇರಳ)

*ದ್ವಿತೀಯ ಸ್ಥಾನ: ಮುಹಮ್ಮದ್ ರಶಾದ್ (ಪಾಲಕ್ಕಾಡ್, ಕೇರಳ)

* ತೃತೀಯ ಸ್ಥಾನ: ಮುಹಮ್ಮದ್ ಸಾದ್ (ಮೈಸೂರು, ಕರ್ನಾಟಕ)

ಪ್ರಥಮ ಸ್ಥಾನ ವಿಜೇತರಿಗೆ 1,11,111 ರೂ., ದ್ವಿತೀಯ ಸ್ಥಾನ ವಿಜೇತರಿಗೆ 55,555 ರೂ. ತೃತೀಯ ಸ್ಥಾನ ವಿಜೇತರಿಗೆ 33,333 ರೂ. ಬಹುಮಾನದ ಚೆಕ್ ವಿತರಿಸಲಾಯಿತು.








 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News