×
Ad

ರೋಗಗಳಿಂದ ಪಾರಾಗಲು ಪ್ರಕೃತಿ ಮೂಲದ ಚಿಕಿತ್ಸೆಗೆ ಒಳಪಡುವುದು ಸೂಕ್ತ : ಸ್ಪೀಕರ್ ಯು.ಟಿ. ಖಾದರ್

Update: 2023-11-18 19:24 IST

ಮಂಗಳೂರು : ಬದಲಾದ ಜೀವನ ಶೈಲಿ, ಪರಿಸರ ಮತ್ತು ಆಹಾರ ಪದ್ಧತಿಯಿಂದ ಇಂದು ಎಲ್ಲರಲ್ಲೂ ವಿವಿಧ ಬಗೆಯ ರೋಗಗಳು ಕಾಣಿಸಿಕೊಳ್ಳುತ್ತಿವೆ. ಪ್ರಕೃತಿಯಿಂದ ನಾವು ದೂರವಾದ ಕಾರಣ ರೋಗಗಳಿಗೆ ಹತ್ತಿರವಾಗಿದ್ದೇವೆ. ರೋಗಗಳಿಂದ ಪಾರಾಗಲು ಪ್ರಕೃತಿ ಮೂಲದ ಚಿಕಿತ್ಸೆಗೆ ಒಳಪಡುವುದು ಸೂಕ್ತ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.

ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸ್ ಉಜಿರೆ, ಎಸ್‌ಡಿಎಂ ಗ್ರೂಫ್ ಆಫ್ ಯೋಗ ಆ್ಯಂಡ್ ನ್ಯಾಚುರೋಪಥಿ ಆಸ್ಪತ್ರೆ, ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಕ್ಲಿನಿಕಲ್ ರಿಸರ್ಚ್ ಸೆಂಟರ್ ನ್ಯಾಚುರೋಪಥಿ ಆ್ಯಂಡ್ ಯೋಗಿಕ್ ಸೈನ್ಸ್ ವತಿಯಿಂದ ಇಂಡಿಯನ್ ನ್ಯಾಚುರೋಪಥಿ ಆ್ಯಂಡ್ ಯೋಗ ಗ್ರಾಜ್ಯುಯೇಟ್ಸ್ ಮೆಡಿಕಲ್ ಅಸೋಸಿಯೇಶನ್ ಸಹಯೋಗದಲ್ಲಿ ದ.ಕ. ಜಿಲ್ಲಾಡಳಿತ ಸಹಕಾರದೊಂದಿಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ನಡೆದ 6ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಚುರೋಪತಿ ಅತ್ಯಂತ ಉನ್ನತವಾದ ಚಿಕಿತ್ಸಾ ಪದ್ಧತಿಯಾಗಿದೆ. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಕೃತಿ ಚಿಕಿತ್ಸೆ ನಮ್ಮ ಮೊದಲ ಆದ್ಯತೆಯಾಗಬೇಕು ಸಮಾಜದ ಸರ್ವರಿಗೆ ಇಂದು ಪ್ರಕೃತಿ ಚಿಕಿತ್ಸೆಯ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಉಂಟಾಗಿ ಪ್ರಕೃತಿ ಚಿಕಿತ್ಸೆ ಅನಿವಾರ್ಯವಾಗಲಿದೆ ಎಂದರು.

ಅತಿಥಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಮಾತನಾಡಿ, ರೋಗ ಗುಣಪಡಿಸಲು, ರೋಗ ನಿರೋಧಕ ಶಕ್ತಿ ಹೆಚ್ಚಲು, ರೋಗ ಬಾರದಂತೆ ತಡೆಗೆ ಪ್ರಕೃತಿ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ಹಿಂದಿನ ಕಾಲದಲ್ಲಿ ಪ್ರಕೃತಿ ಚಿಕಿತ್ಸೆ ಎಂಬುದು ನಮ್ಮ ಜೀವನದ ಭಾಗವೇ ಆಗಿತ್ತು. ಆಹಾರವೇ ಔಷಧವಾಗಿತ್ತು. ಇಂದು ಪರಿಸ್ಥಿತಿ ಬದಲಾಗಿದೆ. ನ್ಯಾಚುರೋಪತಿ ಪದವಿ ವಿದ್ಯಾರ್ಥಿಗಳು ಸಂಶೋಧನೆ, ಆವಿಷ್ಕಾರಗಳ ಮೂಲಕ ಪ್ರಕೃತಿ ಚಿಕಿತ್ಸೆ ಬಗ್ಗೆ ಜನರಿಗೆ ವಿಶ್ವಾಸ ಮೂಡುವಂತೆ ಮಾಡಬೇಕು ಎಂದರು.

ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಅತಿಥಿಗಳಾಗಿದ್ದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ, ಕಣಚೂರು ಮೆಡಿಕಲ್ ಕಾಲೇಜು ಅಧ್ಯಕ್ಷ ಡಾ. ಯು.ಕೆ. ಮೋನು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿ, ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಡಾ. ಸುಜಾತ ವಂದಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಉಜಿರೆಯಲ್ಲಿ ನ್ಯಾಚುರೋಪಥಿ ಕಾಲೇಜು ಆರಂಭಿಸುವ ಮೂಲಕ ಪ್ರಕೃತಿ ಚಿಕಿತ್ಸೆಯ ಮಹತ್ವ ಸಾರಿದ್ದಾರೆ. ನಾನೂ ಕೂಡಾ ಆಗಾಗ ಉಜಿರೆಗೆ ತೆರಳಿ ಪ್ರಕೃತಿ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ನನ್ನ ಆರೋಗ್ಯ ಕಾಪಾಡಿಕೊಂಡಿದ್ದೇನೆ

-ಯು.ಟಿ. ಖಾದರ್ , ಸ್ಪೀಕರ್ ರಾಜ್ಯ ವಿಧಾನ ಸಭೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News