×
Ad

ಕಲ್ಲಡ್ಕ ಪ್ರಭಾಕರ ಭಟ್ ದ್ವೇಷ ಭಾಷಣ ಪ್ರಕರಣ: ಅರ್ಜಿ ವಿಚಾರಣೆ ನ.15ಕ್ಕೆ ಮುಂದೂಡಿಕೆ

Update: 2025-11-10 20:16 IST

 ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು : ದೀಪೋತ್ಸವ ಕಾರ್ಯಕ್ರಮದಲ್ಲಿ ಕೋಮು ಪ್ರಚೋದಕ, ಮಹಿಳೆಯರ ಘನತೆಗೆ ಧಕ್ಕೆ ತರುವ ಹಾಗೂ ಸಾರ್ವಜನಿಕ ಅಶಾಂತಿ ಉಂಟು ಮಾಡುವ ಭಾಷಣ ಮಾಡಿರುವ ಆರೋಪದಡಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ದೂರು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ಹಾಗೂ ವಾದ ಮಂಡಿಸಲು ಅವಕಾಶ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನ.15ಕ್ಕೆ ಮುಂದೂಡಿದೆ.

ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಅ.22ರಂದು ನಡೆದ ದೀಪೋತ್ಸವ ಮತ್ತು ಗೋಪೂಜೆಯಲ್ಲಿ ಭಾಗವಹಿಸಿದ್ದ ಕಲ್ಲಡ್ಕ ಪ್ರಭಾಕರ ಭಟ್ ಕೋಮು ಪ್ರಚೋದನಾತ್ಮಕವಾಗಿ ಭಾಷಣ ಮಾಡಿರುವ ಬಗ್ಗೆ ಈಶ್ವರಿ ಪದ್ಮುಂಜ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಮನೆಗೆ ನೋಟೀಸ್ ಜಾರಿಗೊಳಿಸಿದ್ದರು. ಬಳಿಕದ ಬೆಳವಣಿಗೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅ.27ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು ಬಲವಂತದ ಕ್ರಮ ತೆಗೆದುಕೊಳ್ಳದಂತೆ ಮಧ್ಯಂತರ ಆದೇಶ ನೀಡಿ ಪೂರ್ಣ ವಿಚಾರಣೆಯನ್ನು ಅ.29ಕ್ಕೆ ಮುಂದೂಡಿತ್ತು. ಅ.29ರಂದು ದೂರುದಾರೆ ಈಶ್ವರಿ ಪದ್ಮುಂಜ ಅವರ ಪರ ವಕೀಲರು ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ಬಿಎನ್‌ಎಸ್‌ಎಸ್ ಸೆಕ್ಷನ್ 338, 339 ಅಡಿ ವಾದ ಮಂಡಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಅಂದು ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ನ.4ಕ್ಕೆ ಮುಂದೂಡಿತ್ತು. ಬಳಿಕ ಮತ್ತೊಮ್ಮೆ ನ.10ಕ್ಕೆ ಮುಂದೂಡಿತ್ತು. ಇದೀಗ ನ.15ಕ್ಕೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News