ಕಟೀಲು | ಮರವೇರಿದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು
Update: 2025-12-11 00:01 IST
ಕಟೀಲು, ಡಿ.10: ತೆಂಗಿನಕಾಯಿ ಕೀಳಲು ಏರಿದ ವ್ಯಕ್ತಿಯೊಬ್ಬರು ಮರದಲ್ಲೇ ಮೃತಪಟ್ಟ ಘಟನೆ ಕಟೀಲು ಜಲಕದ ಕಟ್ಟೆ ಸಮೀಪ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಜಯರಾಮ ಶೆಟ್ಟಿ(75) ಎಂದು ಗುರುತಿಸಲಾಗಿದೆ.
ಸುರತ್ಕಲ್‌ನ ಮುಕ್ಕದಲ್ಲಿ ವಾಸವಾಗಿರುವ ಜಯರಾಮ ಶೆಟ್ಟಿಯವರು ಬುಧವಾರ ಕಟೀಲು ಸಮೀಪದ ತಮ್ಮ ಜಮೀನಿನಲ್ಲಿರುವ ತೆಂಗಿನಮರಕ್ಕೆ ಯಂತ್ರದ ಸಹಾಯದಿಂದ ಏರಿದ್ದಾರೆ. ಈ ಸಂದರ್ಭ ತೆಂಗಿನ ಮರದಲ್ಲಿ ಹೃದಯಾಘಾತಕ್ಕೀಡಾಗಿದ್ದಾರೆ. ಆದರೆ ಈ ಸಂದರ್ಭ ಯಾರೂ ಇಲ್ಲದ ಕಾರಣ ಗಮನಕ್ಕೆ ಬಂದಿಲ್ಲ, ಸಂಜೆ ತೆಂಗಿನ ಮರದಲ್ಲಿ ವ್ಯಕ್ತಿ ನೇತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕದಳ ಮತ್ತು ಬಜ್ಪೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದವರ ಸಹಾಯದಿಂದ ಜಯರಾಮ ಶೆಟ್ಟಿಯವರ ಮೃತ ದೇಹವನ್ನು ಕೆಳಗೆ ಇಳಿಸಲಾಗಿದೆ.
ಜಯರಾಮ ಶೆಟ್ಟಿಯವರ ಪತ್ನಿ ಮತ್ತು ಮಕ್ಕಳು ಬೆಂಗಳೂರಿನಲ್ಲಿ ವಾಸವಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.