ಮಂಗಳೂರು | ಮಾದಕ ವಸ್ತು ಮಾರಾಟ ಆರೋಪ : ಇಬ್ಬರ ಬಂಧನ
Update: 2025-12-10 19:13 IST
ಸಾಂದರ್ಭಿಕ ಚಿತ್ರ
ಮಂಗಳೂರು, ಡಿ.10: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಶಿವಮೊಗ್ಗ ಜಿಲ್ಲೆಯ ರಾಮನಗರದ ಸೈಯದ್ ಕಲಿಮುಲ್ಲಾ (31) ಮತ್ತು ಮಂಜೇಶ್ವರ ಮಂಗಲ್ಪಾಡಿಯ ಅಶ್ರಫ್ ಆಲಿ (26) ಎಂಬವರನ್ನು ಮಂಗಳವಾರ ಉರ್ವ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಬಾರೆಬೈಲ್ ಬಳಿ ಇಬ್ಬರು ಯುವಕರು ಸಂಶಯಾಸ್ಪದ ರೀತಿಯಲ್ಲಿ ಹೋಗುತ್ತಿದ್ದರು. ಯುವಕರನ್ನು ವಿಚಾರಿಸಿದಾಗ ಮಾದಕ ದ್ರವ್ಯ ಎಂಡಿಎಂಎ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದಾರೆ. ಸೈಯದ್ ಕಲಿಮುಲ್ಲಾನಿಂದ 25,000 ರೂ. ಮೌಲ್ಯದ 12.27 ಗ್ರಾಂ ಎಂಡಿಎಂಎ ಮತ್ತು 7,000 ರೂ. ಮೌಲ್ಯದ ಮೊಬೈಲ್ ಫೋನ್ ಹಾಗೂ ಅಶ್ರಫ್ ಆಲಿಯಿಂದ 12,500 ರೂ. ಮೌಲ್ಯದ 6.18 ಗ್ರಾಂ ಎಂಡಿಎಂಎ ಮತ್ತು ಮೊಬೈಲ್ ಪೋನ್ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.