ಮೀಫ್: ಎಸೆಸೆಲ್ಸಿ ಆಯ್ದ ವಿದ್ಯಾರ್ಥಿಗಳ ಕಾರ್ಯಾಗಾರ ಉದ್ಘಾಟನೆ
ಕೃಷ್ಣಾಪುರ,ಡಿ.10: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕೇಂದ್ರ ಘಟಕದ ವತಿಯಿಂದ ಕೃಷ್ಣಾಪುರದ ಚೈತನ್ಯ ಪಬ್ಲಿಕ್ ಸ್ಕೂಲ್‌ನ ಸಹಯೋಗದಿಂದ 2025-26ನೇ ಸಾಲಿನ ಎಸೆಸೆಲ್ಸಿ ಆಯ್ದ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್ ಎರಡು ದಿವಸಗಳ ಕಾರ್ಯಾಗಾರದ ಉದ್ಘಾಟನೆಯು ಬುಧವಾರ ಚೈತನ್ಯ ಪಬ್ಲಿಕ್ ಸ್ಕೂಲ್‌ನ ಸಭಾಂಗಣದಲ್ಲಿ ನಡೆಯಿತು.
ದ.ಕ. ಜಿಲ್ಲಾ ಡಿಡಿಪಿಐ ಜಿ.ಎಸ್. ಶಶಿಧರ್ ಕಾರ್ಯಾಗಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮೀಫ್ ವತಿಯಿಂದ ಪ್ರತೀ ವರ್ಷ ಜಿಲ್ಲಾದ್ಯಂತ ಎಸೆಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ಇಂತಹ ಪಾಸಿಂಗ್ ಪ್ಯಾಕೇಜ್ ಕಾರ್ಯಾಗಾರ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಪ್ರತೀ ವರ್ಷದಂತೆ ಈ ಬಾರಿಯೂ ದ.ಕ. ಮತ್ತು ಉಡುಪಿ ಜಿಲ್ಲೆಗಳ 14 ಕೇಂದ್ರಗಳಲ್ಲಿ ಡಿಸೆಂಬರ್ ಮತ್ತು ಜನವರಿಯಲ್ಲಿ ಎಸೆಸೆಲ್ಸಿ ಆಯ್ದ ವಿದ್ಯಾರ್ಥಿಗಳಿಗೆ ತಲಾ ಎರಡು ದಿವಸಗಳ ಕಾರ್ಯಾಗಾರವನ್ನು ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಮೀಫ್ ನಡೆಸಲಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಮೀಫ್ ಕೇಂದ್ರ ಘಟಕದ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ತಿಳಿಸಿದರು.
ಅತಿಥಿಯಾಗಿ ಜಿಲ್ಲಾ ವಾರ್ತಾ ಅಧಿಕಾರಿ ಖಾದರ್ ಶಾ ಭಾಗವಹಿಸಿದ್ದರು. ಚೈತನ್ಯ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎ.ಖಾದರ್, ಉದ್ಯಮಿ ಟಿ. ಅಬ್ದುಲ್ ಅಝೀಝ್ ಚೊಕ್ಕಬೆಟ್ಟು, ಮೀಫ್ ಕೇಂದ್ರ ಘಟಕದ ಉಪಾಧ್ಯಕ್ಷ ಪರ್ವೇಜ್ ಅಲಿ, ಕಾರ್ಯಕಾರಿ ಸದಸ್ಯರಾದ ಅಝೀಝ್ ಅಂಬರ್‌ವ್ಯಾಲಿ, ಚೈತನ್ಯ ಪಬ್ಲಿಕ್ ಸ್ಕೂಲಿನ ಸಂಚಾಲಕ ಹನೀಫ್ ಎಂ.ಎ. ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಣ ಇಲಾಖೆಯ ವಿಲ್ಮಾ ಲೋಬೋ, ಶಿಕ್ಷಕಿಯರಾದ ವಿಕ್ಟೊರಿಯಾ ಪ್ರೌಢಶಾಲೆ ಲೇಡಿಹಿಲ್ (ವಿಜ್ಞಾನ) ಮತ್ತು ವೈಶಾಲಿ ಉಚ್ಚಿಲ್, ವಿದ್ಯಾದಾಯಿನಿ ಪ್ರೌಢ ಶಾಲೆ ಸುರತ್ಕಲ್ (ಗಣಿತ) ಭಾಗವಹಿಸಿದ್ದಾರೆ.
ಚೈತನ್ಯ ಪಬ್ಲಿಕ್ ಸ್ಕೂಲಿನ ಮುಖ್ಯ ಶಿಕ್ಷಕಿ ಶಶಿಕಲಾ ಸ್ವಾಗತಿಸಿದರು. ಸುನೀತಾ ವಂದಿಸಿದರು. ಮೀಫ್ ಕೇಂದ್ರ ಘಟಕದ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಾಗಾರದಲ್ಲಿ ಕೃಷ್ಣಾಪುರ ಪರಿಸರದ ಅಂಜುಮಾನ್ ಆಂಗ್ಲ ಮಾಧ್ಯಮ ಶಾಲೆ ಮುಕ್ಕ, ಅಂಜುಮಾನ್ ಆಂಗ್ಲ ಮಾಧ್ಯಮ ಶಾಲೆ ಜೋಕಟ್ಟೆ, ಹಿರಾ ಆಂಗ್ಲ ಮಾಧ್ಯಮ ಶಾಲೆ ಕೃಷ್ಣಾಪುರ, ನೂರುಲ್ ಹುದಾ ಆಂಗ್ಲ ಮಾಧ್ಯಮ ಶಾಲೆ ಕಾಟಿಪಳ್ಳ, ಹಿದಾಯತ್ ಆಂಗ್ಲ ಮಾಧ್ಯಮ ಶಾಲೆ ಸೂರಿಂಜೆ, ಅಸ್-ಸಿರಾತುಲ್ ಮುಸ್ತಕೀಮ್ ಆಂಗ್ಲ ಮಾಧ್ಯಮ ಶಾಲೆ ಕಾಟಿಪಳ್ಳ, ಜಾಮಿಯಾ ಆಂಗ್ಲ ಮಾಧ್ಯಮ ಶಾಲೆ ಚೊಕ್ಕಬೆಟ್ಟು ಮತ್ತು ಚೈತನ್ಯ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆ ಕೃಷ್ಣಾಪುರ ಸಹಿತ 8 ವಿದ್ಯಾ ಸಂಸ್ಥೆಗಳಿಂದ 140 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ.