ಕೊಣಾಜೆ | ಉತ್ತಮ ಶಿಕ್ಷಣದೊಂದಿಗೆ ಸಮಾಜಕ್ಕೆ ಕೊಡುಗೆ ನೀಡಿ : ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ
ಕೊಣಾಜೆ : ವಿದ್ಯಾರ್ಥಿಗಳು ಉತ್ತಮ ಶಿಕ್ಷಣ, ಪರಿಶ್ರಮ ಸಾಧನೆಯೊಂದಿಗೆ ಮುಂದೆ ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅಭಿಪ್ರಾಯಪಟ್ಟರು.
ಅವರು ನಾಟೆಕಲ್ ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಇದರ ಪ್ರಥಮ ಬ್ಯಾಚ್‌ನ ಶಿಷ್ಯೋಪನಯನೀಯ ಆಯುರ್ ಪ್ರವೇಶಿಕಾ ಹಾಗೂ ಎನ್ ಎ ಬಿ ಹೆಚ್ ಅಕ್ರಿಡೇಷನ್ ಅನುಮತಿ ಪತ್ರದ ಹಸ್ತಾಂತರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಸ್ಟೇಟ್ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಫರೀದ್ ಮಾತನಾಡಿ , ಮಂಗಳೂರು ಕ್ಷೇತ್ರದಲ್ಲಿ ವೈದ್ಯಕೀಯ ಕಾಲೇಜುಗಳು ಹಾಗೂ ವೈದ್ಯಕೀಯ ಕಾಲೇಜುಗಳು, ಮೂರು ವಿಶ್ವವಿದ್ಯಾನಿಲಯಗಳು ಇರುವುದು ಶಿಕ್ಷಣ ಕ್ರಾಂತಿಯ ಜೊತೆಗೆ ಸಮಾಜಸೇವೆಯ ಭಾಗವಾಗಿದೆ. ಶೀಘ್ರದಲ್ಲೇ ಕಣಚೂರು ವಿಶ್ವವಿದ್ಯಾನಿಲಯ ಆಗಿ ಹೊರಹೊಮ್ಮಲಿದೆ ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯಗಳ ಕುಲಸಚಿವ ಅರ್ಜುನ್ ಎಸ್.ಒಡೆಯರ್ ಮಾತನಾಡಿ, ಕಾಯಿಲೆ ಬರುವ ಮೊದಲು ತಡೆಯುವ ಸಾಮರ್ಥ್ಯ ಹೊಂದಿರುವ ಅಪೂರ್ವ ತತ್ತ್ವಶಾಸ್ತ್ರ. ಇಂದಿನ ಜಾಗತಿಕ ಆರೋಗ್ಯ ಸವಾಲುಗಳಿಗೆ ಆಯುರ್ವೇದ ಪರಿಣಾಮಕಾರಿ ಪರಿಹಾರ ನೀಡುತ್ತಿದೆ. ವೈದ್ಯಕೀಯ ವೃತ್ತಿಯ ಮಹಾನ್ ಮಾನವೀಯ ಕರ್ತವ್ಯವಾಗಿರುವುದರಿಂದ ಅಂಗಾಂಗ ದಾನಗಳಿಗೆ ಹೆಚ್ಚಿನ ಒಲವು ನೀಡುತ್ತಿದೆ ಎಂದರು.
ಎನ್ ಎ ಬಿ ಹೆಚ್ ಅಕ್ರಿಡೇಷನ್ ಅನುಮತಿ ಪತ್ರವನ್ನು ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕಣಚೂರು ಮೋನು ಅವರಿಗೆ ಹಸ್ತಾಂತರಿಸಲಾಯಿತು. ಶಿಷ್ಯೋಪನಯನೀಯ ಸಂಸ್ಕಾರವನ್ನು ವಿದ್ಯಾರ್ಥಿಗಳಿಗೆ ಅತಿಥಿಗಳು ನಡೆಸಿಕೊಟ್ಟರು.
ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡಾ.ವಿದ್ಯಾಪ್ರಭಾ ಆರ್. ಉಪಸ್ಥಿತರಿದ್ದರು. ಈ ಸಂದರ್ಭ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಸಲಹೆಗಾರ ಡಾ.ಸುರೇಶ್ ನೆಗಲಗುಳಿ ವಂದಿಸಿದರು.