×
Ad

ಕೋಟೆಕಾರು ಪಟ್ಟಣ ಪಂಚಾಯತ್‌ ಸಾಮಾನ್ಯ ಸಭೆ; ಸಂಚಾರಿ ನಿಯಮ‌ ಉಲ್ಲಂಘನೆಯದ್ದೇ ಚರ್ಚೆ

Update: 2025-12-30 19:35 IST

ಉಳ್ಳಾಲ: ಸಂಚಾರಿ ನಿಯಮ‌ ಉಲ್ಲಂಘನೆ ಮಾಡಿದವರಿಗೆ ಪೊಲೀಸ್ ಇಲಾಖೆ ದಂಡಶುಲ್ಕದಲ್ಲಿ 50ಶೇ. ರಿಯಾಯಿತಿ ಘೋಷಿಸಿದ್ದರೂ ಅದು ಅವಧಿ ಮುಗಿಯುವ ಹೊತ್ತಿಗೆ ಜನ ಸಾಮಾನ್ಯರ ಗಮನಕ್ಕೆ ಬರುತ್ತದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ‌ ಹೆಚ್ಚಿನ ಪ್ರಚಾರ ಕೊಡಬೇಕು ಎಂದು ಕೌನ್ಸಿಲರ್ ಸುಜಿತ್ ಮಾಡೂರು ಆಗ್ರಹಿಸಿದರು.

ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಸತೀಶ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಂಚಾರಿ ನಿಯಮ‌ ಉಲ್ಲಂಘನೆ, ದಂಡ ಶುಲ್ಕ ರಿಯಾಯಿತಿ ಕುರಿತು ವ್ಯಾಪಕ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಯಶವಂತ್ ಸಂಚಾರಿ ನಿಯಮ ಉಲ್ಲಂಘನೆ ಬಹಳಷ್ಟು ಹೆಚ್ಚಾಗುತ್ತಿದೆ. ಅದಕ್ಕಾಗಿ ಇಲಾಖೆ ನಿರ್ದೇಶನದಡಿಯಲ್ಲಿ ಸಂಘ ಸಂಸ್ಥೆಗಳು, ಕಾಲೇಜು, ಠಾಣೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ಆದರೂ ಅದು ಇನ್ನೂ ಪರಿಣಾಮಕಾರಿಯಾಗಿಲ್ಲ ಎಂಬಂತೆ ನಿತ್ಯವೂ ಮೂರರಿಂದ ನಾಲ್ಕು ಅಪಘಾತವಾಗುತ್ತಿದೆ. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಆಡಳಿತ ಅವಕಾಶ ನೀಡುತ್ತಿಲ್ಲ. ಹಾಗಾಗಿ ಪಟ್ಟಣ ಪಂಚಾಯಿತಿ ಆಡಳಿತದ ನೇತೃತ್ವದಲ್ಲಿ ಜಾಗೃತಿ ಮೂಡಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.

ವಾರ್ಡ್ ವ್ಯಾಪ್ತಿಯಲ್ಲಿ ಅಲ್ಲಲ್ಲಿ ರಸ್ತೆ ಅಗೆಯುತ್ತಿದ್ದು ಮತ್ತೆ ಸರಿಯಾಗಿ ಮುಚ್ಚುವ ಕಾರ್ಯ ಆಗುತ್ತಿಲ್ಲ. ಹಾಗಾಗಿ ಲೋಕಾಯುಕ್ತಕ್ಕೆ ದೂರು ಕೊಡುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಸಿದ್ದು ಅವರಿಗೆ ಉತ್ತರ ಕೊಡಲು ಶೀಘ್ರದಲ್ಲಿಯೇ ಅಂತಹ ಸಮಸ್ಯೆ ಯನ್ನು ಪರಿಹರಿಸಬೇಕು ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಹೇಳಿದರು.

ಹಿರಿಯ ಸದಸ್ಯ ಅಹ್ಮದ್ ಅಜ್ಜಿನಡ್ಕ ಮಾತನಾಡಿ ನನ್ನ‌ ವಾರ್ಡಿನಲ್ಲಿ ಪೈಪ್ ಲೈನ್ ನಿರ್ಮಾಣ ಚೆನ್ನಾಗಿ ನಡೆದಿತ್ತಾ ದರೂ ರಸ್ತೆ ಅಗಲೀಕರಣಕ್ಕೆ ಅಗೆದಾಗ ಅಲ್ಲಲ್ಲಿ ಪೈಪ್ ಒಡೆದು ಹೋಗಿದ್ದು ,ಎಲ್ಲಿ ಎಲ್ಲಿ ಸಮಸ್ಯೆ ಇದೆ ಎಂದು ಸಂಪೂರ್ಣ ಮಾಹಿತಿಯನ್ನು ಅಧ್ಯಕ್ಷರಿಗೆ ಕೊಡುತ್ತೇನೆ, ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಸರಿಪಡಿಸಿ. ಹಾಗೆಯೇ ಸಭೆಯಲ್ಲಿ ದೊಡ್ಡ ಶಬ್ಧ ಮಾಡದೆ ಚರ್ಚಿಸುವ ಸದಸ್ಯರ ವಾರ್ಡಿನ ಸಮಸ್ಯೆಯನ್ನೂ ಪರಿಹರಿಸಿ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಆದ ಕೆಲವು ಫೈಲ್ ಎಸಿ ಆಫೀಸಿನಲ್ಲಿದ್ದು ವಿಎ ಅವರಿಗೆ ಮುಖ್ಯಾಧಿಕಾರಿ ಮಾಹಿತಿ ನೀಡಬೇಕು ಅಥವಾ ವಿಎ ಮುಖ್ಯಾಧಿಕಾರಿಯವರಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದು ಸುಜಿತ್ ಹೇಳಿದಾಗ ಇದಕ್ಕೆ ಕೌನ್ಸಿಲರ್ ಸೆಲೀಮಾಬಿ ಧ್ವನಿಗೂಡಿಸಿದರು.

ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ , ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News