ದ.ಕ. ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ನೌಕರರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ
ಮಂಗಳೂರು, ಪುತ್ತೂರು ವಿಭಾಗದ ರೂಟ್‌ಗಳಲ್ಲಿ ಬಸ್‌ಗಳ ಸಂಚಾರ
ಮಂಗಳೂರು, ಆ.5: ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ನೌಕರರು ಹಾಗೂ ನಿವೃತ್ತ ನೌಕರರ ಹಕ್ಕುಗಳು ಉಲ್ಲಂಘನೆಗಳಿಗೆ ಸರಕಾರದಿಂದ ಸ್ಪಂದನೆ ಸಿಗದ ಕಾರಣ ಸಾರಿಗೆ ನೌಕರ ಜಂಟಿ ಕ್ರಿಯಾ ಸಮಿತಿಯ ವತಿಯಿಂದ ಮಂಗಳವಾರ ಕರೆ ನೀಡಲಾಗಿದ್ದ ಬಸ್ ಮುಷ್ಕರಕ್ಕೆ ನಿಗಮದ ಮಂಗಳೂರು ಹಾಗೂ ಪುತ್ತೂರು ವಿಭಾಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದ.ಕ.ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಮಂಗಳೂರು ಹಾಗೂ ಪುತ್ತೂರು ವಿಭಾಗೀಯ ಕಚೇರಿಗಳಿವೆ. ತಲಾ ಐದು ಡಿಪೋಗಳಿವೆ. ಮಂಗಳೂರು ವಿಭಾಗದಲ್ಲಿ ಮಂಗಳೂರು 1,2,3, ಕುಂದಾಪುರ, ಉಡುಪಿ ಡಿಪೋ ಇದೆ. ಪುತ್ತೂರು ವಿಭಾಗದಲ್ಲಿ ಪುತ್ತೂರು, ಸುಳ್ಯ, ಬಂಟ್ವಾಳ, ಧರ್ಮಸ್ಥಳ, ಮಡಿಕೇರಿ ಡಿಪೋ ಇದೆ.
ಮಂಗಳೂರು ಹಾಗೂ ಪುತ್ತೂರು ವಿಭಾಗದಲ್ಲಿ ಮುಷ್ಕರ ನಡೆಸದಂತೆ ನಿಗಮದ ಅಧಿಕಾರಿಗಳು ಮನವಿ ಮಾಡಿದ್ದರು. ಹಾಗಾಗಿ ಮಂಗಳೂರು ಹಾಗೂ ಪುತ್ತೂರು ವಿಭಾಗದಲ್ಲಿ ಬಸ್ ನೌಕರರರು ಮುಷ್ಕರದಲ್ಲಿ ಪಾಲ್ಗೊಂಡಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಸರಕಾರಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮುಷ್ಕರ ನಡೆಸಬಾರದು. ಮುಷ್ಕರ ನಡೆಸಿದರೆ ಕಾರ್ಮಿಕರ ಮೇಲೆ ಶಿಸ್ತು ಕ್ರಮ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಹಾಗಾಗಿ ನೌಕರರು ಮುಷ್ಕರಿಂದ ದೂರ ಉಳಿದಿದ್ದಾರೆ. ಇತರ ದಿನಗಳಿಗೆ ಹೋಲಿಸಿದರೆ ಮಂಗಳವಾರಕ್ಕೆ ದೂರದ ಊರುಗಳ ಪ್ರಯಾಣದ ಬುಕ್ಕಿಂಗ್ ಅಷ್ಟೇನೂ ಇರಲಿಲ್ಲ. ಎಲ್ಲಾ ಬಸ್‌ಗಳು ಎಂದಿನಂತೆ ಸಂಚರಿಸಿದೆ ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.