×
Ad

ಸಿಎ ಓದಬೇಕೆಂಬುದೇ ನನ್ನ ಉದ್ದೇಶ: ವಾಣಿಜ್ಯ ವಿಭಾಗದ ಪ್ರಥಮ ರ‍್ಯಾಂಕ್ ವಿಜೇತೆ ದೀಪಶ್ರೀ

Update: 2025-04-08 14:11 IST

ಮಂಗಳೂರು, ಎ. 8: ‘ನಾನು ಮುಂದೆ ಸಿಎ ಓದಬೇಕೆಂಬ ಗುರಿಯನ್ನಿರಿಸಿಕೊಂಡು ಪಿಯುಸಿಯಲ್ಲಿ ವಾಣಿಜ್ಯ ವಿಭಾಗವನ್ನು ಆಯ್ದುಕೊಂಡಿದ್ದೆ. 595 ಕ್ಕಿಂತ ಹೆಚ್ಚಿನ ಅಂಕ ಪಡೆಯುವ ನಿರೀಕ್ಷೆ ಇತ್ತು. ಆದರೆ ಪ್ರಥಮ ರ‍್ಯಾಂಕ್ ಬರುತ್ತದೆ ಅಂದುಕೊಂಡಿರಲಿಲ್ಲ’ ಎನ್ನುತ್ತಾರೆ ಕೆನರಾ ಪಿಯು ಕಾಲೇಜು ವಿದ್ಯಾರ್ಥಿನಿ ದೀಪಶ್ರೀ.

ದೀಪಶ್ರೀ ಅವರು ವಾಣಿಜ್ಯ ವಿಭಾಗದಲ್ಲಿ 599 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಬಿಕರ್ನಕಟ್ಟೆಯ ಗೃಹಿಣಿ ಸುಮಾ ಮತ್ತು ಇನ್‌ವರ್ಟರ್ ಸರ್ವಿಸ್ ವೃತ್ತಿ ನಿರ್ವಹಿಸುತ್ತಿರುವ ಅಶೋಕ್, ದಂಪತಿಯ ಪುತ್ರಿ ದೀಪಶ್ರೀಯವರು ಎಸೆಸೆಲ್ಸಿಯಲ್ಲಿ ಶೇ. 98.24 ಅಂಕಗಳನ್ನು ಗಳಿಸಿದ್ದರು.

‘ತರಗತಿಯಲ್ಲಿ ಉಪನ್ಯಾಸಕರ ಪಾಠಕ್ಕೆ ಹೆಚ್ಚು ಒತ್ತು ನೀಡಿ ಆಸಕ್ತಿಯಿಂದ ಆಲಿಸುತ್ತಿದ್ದೆ. ಉಳಿದಂತೆ ಮನೆಯಲ್ಲಿ ಸಮಯ ಸಿಕ್ಕಾಗ ಮನನ ಮಾಡಿಕೊಂಡು ಓದುತ್ತಿದ್ದೆ’ ಎಂದು ಹೇಳುವ ದೀಪಶ್ರೀ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆಭ್ಯಾಸ ಮಾಡಿಕೊಂಡಿದ್ದಾರೆ.

‘ಆಕೆಗೆ ಉತ್ತಮ ಅಂಕದೊಂದಿಗೆ ರ‍್ಯಾಂಕ್ ಸಿಗುವ ನಿರೀಕ್ಷೆಯೂ ಇತ್ತು. ಆದರೆ ಆಕೆ ಪ್ರಥಮ ರ‍್ಯಾಂಕ್ ಬಂದಿರುವುದು ಖುಷಿ ನೀಡಿದೆ. ಆಕೆಗೆ ಸಿಎ ಆಗಬೇಕೆಂಬ ಆಸೆ. ಆಕೆಯ ಆಸೆಗೆ ನಾವು ಬೆಂಬಲ ನೀಡಿದ್ದೇವೆ. ಕಾಲೇಜಿನಲ್ಲಿ ಉಪನ್ಯಾಸಕರು ಕೂಡಾ ಆಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ ’ ಎಂದು ದೀಪಶ್ರೀ ತಾಯಿ ಸುಮಾ ತಿಳಿಸಿದ್ದಾರೆ.

‘ದೀಪಶ್ರೀ ಕಲಿಕೆಯಲ್ಲಿ ಮಾತ್ರವಲ್ಲ ನಡತೆಯಲ್ಲೂ ಅತ್ಯುತ್ತಮ ವಿದ್ಯಾರ್ಥಿನಿ. ಪರಿಶ್ರಮಿಯಾಗಿರುವ ಆಕೆಗೆ ರ‍್ಯಾಂಕ್ ಬರುವ ನಿರೀಕ್ಷೆ ನಮಗೂ ಇತ್ತು. ಆದರೆ ರಾಜ್ಯಕ್ಕೆ ಟಾಪರ್ ಆಗಿರುವುದು ಹೆಮ್ಮೆ ತಂದಿದೆ’ ಎಂದು ಕೆನರಾ ಪಿಯು ಕಾಲೇಜಿನ ಪ್ರಾಂಶುಪಾಲೆ ಲತಾ ಮಹೇಶ್ವರಿ ಸಂತೋಷ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News