×
Ad

ಪ್ರದೇಶಗಳ ಅಭಿವೃದ್ಧಿಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯ‌ ಪಾತ್ರ ಮಹತ್ವದ್ದು: ಯು.ಟಿ.ಖಾದರ್

Update: 2023-11-28 19:26 IST

ಕೊಣಾಜೆ; ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ ಇದರ ಉಳ್ಳಾಲ ತಾಲೂಕು ಮಟ್ಟದ ನೂತನ ಕೊಣಾಜೆ ಉಪವಿಭಾಗ ಮತ್ತು ನೂತನ ಬೋಳ್ಯಾರ್, ಕಿನ್ಯಾ ಸೋಮೇಶ್ವರ‌ ಶಾಖೆಗಳ ಉದ್ಘಾಟನಾ ಸಮಾರಂಭದ ಮಂಜನಾಡಿ ಗ್ರಾಮದ‌ ಅಸೈಗೋಳಿಯಲ್ಲಿ ನಡೆಯಿತು.

ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು, ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿದ್ದಲ್ಲಿ ಪ್ರದೇಶಗಳ ಅಭಿವೃದ್ಧಿ ಸಾಧ್ಯವಿಲ್ಲ. ಭವಿಷ್ಯದಲ್ಲಿ ಶೈಕ್ಷಣಿಕ ಕ್ಷೇತ್ರ, ಕೈಗಾರಿಕೆಗಳು ಬರುವಾಗ ವಿದ್ಯುತ್ ಕ್ಷಾಮ ಆಗದಂತೆ ಚಿಂತನೆಯನ್ನು ಇಟ್ಟುಕೊಂಡು ಉಪವಿಭಾಗಗಳನ್ನು ಆರಂಭಿಸಲಾಗಿದೆ. ಮುಂದಿನ 30-40 ವರ್ಷಗಳ ದೃಷ್ಠಿಯನ್ನಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ ಎಂದರು.

ವಿಟ್ಲ ಸ್ಟೇಷನ್ ವ್ಯಾಪ್ತಿಗೆ ಬರುವ ಇರಾ ಗ್ರಾಮವನ್ನು ನೂತನ ಉಪವಿಭಾಗಕ್ಕೆ ಸೇರಿಸುವ ಚಿಂತನೆಯನ್ನು ಮಾಡಲಾಗಿದೆ. ಎಲ್ಲಾ ಅಧಿಕಾರಿಗಳು ತಂಡದ ರೂಪವಾಗಿ ಕಾರ್ಯಾಚರಿಸಿ, ಜನಪರ ಯೋಜನೆಗಳಿಗೆ ವಿಳಂಬ ಮಾತುಗಳನ್ನಾಡದೆ ತಕ್ಷಣದಲ್ಲಿ ಯೋಜನೆಗಳನ್ನು ರೂಪಿಸುವ ದೂರದೃಷ್ಟಿಯನ್ನು ಇಟ್ಟುಕೊಳ್ಳಬೇಕಿದೆ. ಕ್ಷೇತ್ರದಲ್ಲಿ ರಸ್ತೆ, ವಿದ್ಯುತ್, ಶಿಕ್ಷಣ ಒದಗಿಸುವ ಮೂಲಕ ಕನಿಷ್ಠ ಮೂಲಭೂತ ವ್ಯವಸ್ಥೆಗಳ ವಿತರಿಸಲಾಗಿದೆ. ಈ ಮೂಲಕ ಅಭಿವೃದ್ಧಿಯ ಪಥವನ್ನು ಸಾಧಿಸುತ್ತಿದೆ. ಉಳ್ಳಾಲ ತಾಲೂಕಿಗೆ 110/33/11 ಕೆವಿ ಕೊಣಾಜೆ ಉಪಕೇಂದ್ರ ಹಾಗೂ 33/11 ಕೆವಿ ತೊಕ್ಕೊಟ್ಟು ಉಪಕೇಂದ್ರದಿಂದ ವಿದ್ಯುತ್‌ ಸರಬರಾಜಾಗುತ್ತಿದೆ. 33ಕೆವಿ ತೊಕ್ಕೊಟ್ಟು ಉಪಕೇಂದ್ರಕ್ಕೆ ಹೊಸದಾಗಿ ಚಾಲನೆಗೊಂಡ ಜೆಪ್ಪು 110 ಕೆವಿ ಉಪಕೇಂದ್ರದಿಂದ 33 ಕೆವಿ ಅಂಡರ್‌ ಗ್ರೌಂಡ್‌ ಕೇಬಲ್‌ ಅಳವಡಿಸುವ ಯೋಜನೆ ಹಾಗೂ 33 ಕೆವಿ ತೊಕ್ಕೊಟ್ಟು ಉಪಕೇಂದ್ರದಲ್ಲಿರುವ 5ಎಂವಿಎ ಶಕ್ತಿ ಪರಿವರ್ತಕವನ್ನು 10 ಎಂವಿಎ ಪರಿವರ್ತಕಕ್ಕೆ ಉನ್ನತೀಕರಿಸುವ ಯೋಜನೆ ಆರಂಭಗೊಳ್ಳಲಿದೆ. ಕೋಟೆಕಾರು ಭಾಗದಲ್ಲಿ 33 ಕೆವಿ ನೂತನ ಉಪಕೇಂದ್ರ ಹಾಗೂ ಶಾಖಾ ಕಚೇರಿಗಳ ಯೋಜನೆ ಪ್ರಗತಿಯಲ್ಲಿದೆ. 110 ಕೆವಿ ಕೊಣಾಜೆ ಉಪಕೇಂದ್ರದಲ್ಲಿ ಹೆಚ್ಚುವರಿ 20ಎಂವಿಎ ಶಕ್ತಿಪರಿವರ್ತಕವನ್ನು ಅಳವಡಿಸುವ ಕಾಮಗಾರಿ ಪ್ರಸ್ತಾವನೆಯಲ್ಲಿದ್ದು, ಅದಕ್ಕೆ ಅಗತ್ಯವಿರುವ ಎರಡು ಎಕರೆ ಜಮೀನಿಗೆ ಈಗಾಗಲೇ ಜಿಲ್ಲಾಡಳಿತದ ಅನುಮೋದನೆ ದೊರಕಿದೆ ಎಂದರು.

ಮಂಗಳೂರು ವಿದ್ಯುತ್ ಸರಬರಾಜು ಯೋಜನೆಯ ವ್ಯವಸ್ಥಪಾಕ ನಿರ್ದೇಶಕಿ ಪದ್ಮಾವತಿ ಅವರು ಮಾತನಾಡಿ, ಇಂದಿನ ಆಧುನಿಕತೆಯಲ್ಲಿ ವಿದ್ಯುತ್ ನ ಪಾತ್ರ ಮಹತ್ತರವಾದುದು. ಗ್ರಾಹಕರಿಗೆ ಪ್ರಾಮಾಣಿಕವಾಗಿ ಅತ್ಯುನ್ನತ ಮಟ್ಟದ ವಿದ್ಯುತ್ ಸೇವೆಯನ್ನು ಒದಗಿಸುವುದಕ್ಕೆ ಮೆಸ್ಕಾಂ ಪ್ರಯತ್ನ ಮಾಡುತ್ತಿದೆ ಎಂದರು.

ಮಂಜನಾಡಿ ಪಂಚಾಯತಿ ಅಧ್ಯಕ್ಷರಾದ ಸರೋಜಿನಿ‌‌ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೆಸ್ಕಾಂ ಮಂಗಳೂರು ವಿಭಾಗದ ನಿರ್ದೇಶಕರು ಹೆಚ್ ರಮೇಶ, ಮೆಸ್ಕಾಂ ಮುಖ್ಯ ಆರ್ಥಿಕಾಧಿಕಾರಿ ಜಗದೀಶ್ ಬಿ, ಮೆಸ್ಮಾಂ ಮಂಗಳೂರು ವಲಯದ ಮುಖ್ಯ ಇಂಜಿನಿಯರ್ ಪುಷ್ಪಾ‌, ಕಾರ್ಯನಿರ್ವಾಹಕ ಇಂಜಿನಿಯರ್ ರೋಹಿತ್ ಉಪಸ್ಥಿತರಿದ್ದರು.

ಮೆಸ್ಕಾಂ ಮಂಗಳೂರು ವೃತ್ತದ ಅಧೀಕ್ಷಕ, ಇಂಜಿನಿಯರ್ ಕೃಷ್ಣರಾಜ್ ಸ್ವಾಗತಿಸಿದರು. ಸಹಾಯಕ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ದಯಾನಂದ್‌ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News