×
Ad

ಡಿಸೆಂಬರ್‌ನಿಂದ ಮಾದರಿ ಜನಸ್ಪಂದನ: ಮೇಯರ್ ಸುಧೀರ್ ಶೆಟ್ಟಿ

Update: 2023-11-28 20:20 IST

ಮಂಗಳೂರು, ನ. 28: ಜನಸಾಮಾನ್ಯರ ಬಳಿಗೆ ತೆರಳಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಡಿಸೆಂಬರ್‌ನಿಂದಲೇ ಮಾದರಿ ಜನಸ್ಪಂದನ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಮಂಗಳವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದರು.

ಪಾಂಡೇಶ್ವರದ ಜಾರ್ಜ್ ಡಿಸೋಜಾ ಎಂಬವರು ಕರೆ ಮಾಡಿ, ನಗರದ 60 ವಾರ್ಡ್‌ಗಳ ಬದಲಿಗೆ 5-10 ವಾರ್ಡ್‌ಗಳನ್ನು ಸೀಮಿತಗೊಳಿಸಿ ಫೋನ್-ಇನ್ ನಡೆಸಿದರೆ ಸೂಕ್ತ ಎಂದು ಸಲಹೆ ನೀಡಿದರು.

ಇದಕ್ಕೆ ಉತ್ತರಿಸಿದ ಮೇಯರ್ ಸುಧೀರ್ ಶೆಟ್ಟಿ, ಫೋನ್-ಇನ್ ಕಾರ್ಯಕ್ರಮವನ್ನು ಈ ರೀತಿ ಸರಳಗೊಳಿಸುವುದು ಕಷ್ಟ. ಆದರೆ ಪಾಲಿಕೆ ವ್ಯಾಪ್ತಿಯ ನಾಗರಿಕರ ಅಹವಾಲುಗಳಿಗೆ ಕ್ಷಿಪ್ರವಾಗಿ ಸ್ಪಂದಿಸಲು ಜನಸ್ಪಂದನ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ.

ಡಿಸೆಂಬರ್ ಪ್ರಥಮದಲ್ಲಿ ನಗರದ ಪುರಭವನದಲ್ಲಿ ಉದ್ಘಾಟನೆಗೊಂಡು, ಬಳಿಕ ವಲಯವಾರು ಮೂರು ಕಡೆಗಳಲ್ಲಿ ಪ್ರತ್ಯೇಕವಾಗಿ ಜನಸ್ಪಂದನ ನಡೆಸಲಾಗುವುದು ಎಂದರು.

ಸ್ಟೇಟ್‌ಬ್ಯಾಂಕ್‌ನಿಂದ ಸರ್ವೀಸ್ ಬಸ್ ನಿಲ್ದಾಣಕ್ಕೆ ಸಿಟಿ ಬಸ್ ನಿಲುಗಡೆ ಸ್ಥಳಾಂತರಗೊಂಡಿದ್ದು, ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ ಎಂಬ ದೂರು ನಾಗರಿಕರಿಂದ ವ್ಯಕ್ತವಾಗಿದ್ದು, ಅರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮೇಯರ್ ತಿಳಿಸಿದರು.

ನಗರದ ವೆಲೆನ್ಸಿಯಾದಲ್ಲಿ ರಸ್ತೆ ಬದಿ ಹೊಂಡ ಬಿದ್ದಿದೆ. 5 ಲಕ್ಷ ರೂ.ಗಿಂತ ಜಾಸ್ತಿ ಮೊತ್ತದ ಕಾಮಗಾರಿ ನಡೆಸಿದರೆ, ಆ ಗುತ್ತಿಗೆದಾರರ ಹೆಸರು ಫಲಕದಲ್ಲಿ ಹಾಕಬೇಕು ಎಂಬ ನಿಯಮ ಇದೆ, ಇದನ್ನು ಯಾರೂ ಪಾಲಿಸುತ್ತಿಲ್ಲ ಎಂದು ಎಂದು ಸಾಮಾಜಿಕ ಹೋರಾಟಗಾರ ಜೆರಾರ್ಡ್ ಟವರ್ಸ್ ಆಕ್ಷೇಪಿಸಿದರು.

ಕಪಿತಾನಿಯಾದ ಮೇಬಲ್ ಎಂಬವರು ಕರೆ ಮಾಡಿ, ಕಳೆದ ಎರಡೂವರೆ ವರ್ಷದ ಹಿಂದೆ ಮನೆಯ ಬಳಿ ತಡೆಗೋಡೆ ಕುಸಿದಿದ್ದು, ಭವಿಷ್ಯದಲ್ಲಿ ಇನ್ನಷ್ಟು ಕುಸಿತದ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಮೇಯರ್, ಮಳೆಹಾನಿಯಲ್ಲಿ ದುರಸ್ತಿಗೆ ಅನುದಾನದ ಕೊರತೆ ಇದೆ ಎಂದರು.

2022ರಲ್ಲಿ ಮಳೆಹಾನಿಯಡಿ 187 ಕಾಮಗಾರಿಗೆ 20 ಕೋಟಿ ರು.ಗಳ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿತ್ತು. ಅನುದಾನ ಮಂಜೂರುಗೊಂಡು ಕಾಮಗಾರಿಗೆ ಸೂಚನೆ ನೀಡಲಾಗಿತ್ತು. ಆದರೆ ಇಲ್ಲಿವರೆಗೂ ಅನುದಾನ ಬಿಡುಗಡೆಯಾಗದೆ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. 2023ನೇ ಸಾಲಿನಲ್ಲಿ ಮಂಗಳೂರು ಉತ್ತರ ಶಾಸಕರಿಂದ 85, ದಕ್ಷಿಣ ಶಾಸಕರಿಂದ 206, ಪ್ರತಿಪಕ್ಷಗಳಿಂದ 55 ಸೇರಿ ಒಟ್ಟು 406 ಮಳೆಹಾನಿ ಕಾಮಗಾರಿಗೆ 42.63 ಕೋಟಿ ರೂ. ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಉತ್ತರ ಬಂದಿಲ್ಲ ಎಂದರು.

ಉಪ ಮೇಯರ್ ಸುನಿತಾ, ಉಪ ಆಯುಕ್ತರಾದ ರವಿಶಂಕರ್, ವಾಣಿ ಆಳ್ವ ಮತ್ತಿತರರು ಇದ್ದರು.

ಬೀದಿನಾಯಿ ಸಾಕಲು ಅವಕಾಶ

ಬೀದಿನಾಯಿ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡರೂ ಬೀದಿನಾಯಿ ಹಾವಳಿ ಸಮಸ್ಯೆಯಾಗಿಯೇ ಉಳಿಯುತ್ತಿರುವ ಹಿನ್ನೆಲೆಯಲ್ಲಿ ಬೀದಿನಾಯಿ ಸಾಕಲು ಮುಂದೆ ಬರುವವರಿಗೆ ಪೋತ್ಸಾಹ ನೀಡಲು ನೀಡಲು ಪಾಲಿಕೆ ನಿರ್ಧರಿಸಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ತಿಳಿಸಿದರು.

ಬೀದಿನಾಯಿ ಸಾಕಲು ಉತ್ಸಾಹ ತೋರುವವರು ರಸ್ತೆಬದಿಯಲ್ಲಿ ಕಂಡುಬರುವ ಬೀದಿ ನಾಯಿಗಳನ್ನು ಸಾಕಲು ಮುಕ್ತ ಅವಕಾಶ ನೀಡಲಾಗಿದೆ. ಇದಕ್ಕೆ ಪಾಲಿಕೆ ಅನುಮತಿ ನೀಡಲಿದ್ದು, ಸೂಕ್ತ ನೆರವೂ ನೀಡಲಿದೆ ಎಂದರು.

ನಗರ ಪ್ರದೇಶದ ಮನೆಗಳಲ್ಲಿ ನಾಯಿ ಸಾಕಲು ಕೂಡ ಹಿಂದೆಯೇ ಪರವಾನಿಗೆ ಕಡ್ಡಾಯ ನಿಯಮ ಇತ್ತು. ಈಗ ಆಯುಕ್ತರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ. ಮಂಗಳೂರಿಗೆ ಈ ನಿಯಮ ಅನುಷ್ಠಾನ ಕಡ್ಡಾಯವೇ ಎಂಬ ಬಗ್ಗೆ ಮತ್ತೊಮ್ಮೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಈಗಾಗಲೇ 20 ಮಂದಿ ನಾಯಿ ಸಾಕಲು ಅನುಮತಿ ಪಡೆದಿದ್ದಾರೆ ಎಂದರು.

ಅಡ್ಯಾರಿನಲ್ಲಿ ನೀರು ಸಂಗ್ರಹ ಸ್ಥಾವರ

ಬೇಸಿಗೆಯಲ್ಲಿ ನೀರಿನ ಕೊರತೆ ತಲೆದೋರದಂತೆ ಪೂರ್ವಭಾವಿಯಾಗಿ ಮಂಗಳೂರು ಪಾಲಿಕೆಗೆ ಹರೇಕಳ ಡ್ಯಾಂನಿಂದ ನೀರು ಪೂರೈಕೆಗೆ ಸಂಬಂಧಿಸಿ ನೀರು ಸಂಗ್ರಹಣಾ ಸ್ಥಾವರ(ಡಬ್ಲ್ಯೂಟಿಪಿ) ಸ್ಥಾಪನೆಗೆ ಜಲಸಿರಿ ಯೋಜನೆಯಲ್ಲಿ ಉಳಿಕೆ ಮೊತ್ತ 19 ಕೋಟಿ ರೂ.ಗಳನ್ನು ನೀಡಲಾಗಿದೆ. ಅಡ್ಯಾರಿನಲ್ಲಿ 10 ಎಕರೆ ಜಾಗದಲ್ಲಿ ಈ ಸ್ಥಾವರ ನಿರ್ಮಾಣವಾಗಬೇಕು. ಈ ಸ್ಥಾವರದಿಂದ 125 ಎಂಎಲ್‌ಡಿ ಹೆಚ್ಚುವರಿ ನೀರು ಮಂಗಳೂರು ಮಹಾನಗರಕ್ಕೆ ಪೂರೈಕೆಯಾಗಬೇಕು. 2024 ಡಿಸೆಂಬರ್ ಒಳಗೆ ಕಾಮಗಾರಿ ಮುಕ್ತಾಯಕ್ಕೆ ಅವಧಿ ನೀಡಲಾಗಿದೆ. ಇಲ್ಲದಿದ್ದರೆ ಅನುದಾನ ಹಿಂದಕ್ಕೆ ಹೋಗಲಿದೆ ಎಂದು ಮೇಯರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News