×
Ad

ಸಾಧನೆಗೆ ನಿರಂತರ ಪರಿಶ್ರಮ, ಬದ್ಧತೆ ಅಗತ್ಯ: ಹರೀಶ್ ಶೇರಿಗಾರ್

Update: 2023-11-28 22:15 IST

ಮಂಗಳೂರು : ಯಶಸ್ಸು ಎನ್ನುವುದು ಸುಲಭದಲ್ಲಿ ಸಿಗುವಂತದ್ದಲ್ಲ. ಅದಕ್ಕೆ ನಿರಂತರ ಪರಿಶ್ರಮ ಮತ್ತು ಬದ್ಧತೆ ಜತೆಯಲ್ಲಿ ಸಾಧಿಸುವ ಛಲದ ಜತೆಗೆ ಹಿರಿಯರ ಮಾರ್ಗದರ್ಶನ, ಆಶೀರ್ವಾದ ಅಗತ್ಯವಾಗಿ ಬೇಕಾಗುತ್ತದೆ ಎಂದು ಡಾ.ಕೆ.ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಟ್ರಸ್ಟಿ, ಉದ್ಯಮಿ ಹರೀಶ್ ಶೇರಿಗಾರ್ ಹೇಳಿದರು.

ಡಾ. ಕೆ.ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನಗರದ ಮಣ್ಣಗುಡ್ಡೆಯಲ್ಲಿರುವ ದೇವಾಡಿಗ ಸಮಾಜ ಭವನದಲ್ಲಿ ರವಿವಾರ ನಡೆದ ನಾನಾ ಕ್ಷೇತ್ರದಲ್ಲಿ ಸಾಧನೆ ತೋರಿದ ದೇವಾಡಿಗ ಯುವ ಪ್ರತಿಭೆಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿಧಾನವಾಗಿ ಹಾಗೂ ಸಾಧಿಸುವ ನಿರಂತರತೆಯಿಂದ ಒಂದು ಕಂಪನಿ ಅಥವಾ ಸಂಸ್ಥೆ ಯಶಸ್ಸು ಗಳಿಸುತ್ತದೆ. ಇದೇ ರೀತಿ ಯಲ್ಲಿ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸಾಧಿಸುವ ಅಚಲ ಗುರಿಯನ್ನು ಇಟ್ಟುಕೊಂಡು ಮುಂದೆ ಬಂದರೆ ಯಶಸ್ಸು ಸಿಗುತ್ತದೆ ಎಂದು ಹರೀಶ್ ಶೇರಿಗಾರ್ ಹೇಳಿದರು.

ಡಾ.ಕೆ.ವಿ.ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷ ಡಾ.ಕೆ.ವಿ.ದೇವಾಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀರಾಮಕೃಷ್ಣ ಕೋ- ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಕೆ. ಜೈರಾಜ್ ರೈ, ಮಂಗಳೂರು ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಶಿವಮೊಗ್ಗ ಕುವೆಂಪು ವಿವಿಯ ನಿವೃತ್ತ ಕುಲಪತಿ ಡಾ. ಬಿ.ಎಸ್. ಶೇರಿಗಾರ್ ಭಾಗವಹಿಸಿ ಮಾತನಾಡಿದರು.

ಡಾ.ಕೆ.ವಿ.ದೇವಾಡಿಗ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಡಾ. ದಿವಾಕರ್ ರಾವ್, ಕೆ.ಜೆ.ದೇವಾಡಿಗ, ಖಜಾಂಚಿ ಅಶೋಕ್, ಕಾರ‌್ಯಕ್ರಮ ಸಂಯೋಜಕ ಡಾ. ಸುಂದರ ಮೊಯ್ಲಿ ಮೊದಲಾದವರು ಉಪಸ್ಥಿತರಿದ್ದರು. ನಾನಾ ಕ್ಷೇತ್ರದಲ್ಲಿ ಸಾಧನೆ ತೋರಿದ 11 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಟ್ರಸ್ಟ್‌ನ ವತಿಯಿಂದ ಮನೆ ನಿರ್ಮಾಣ ಹಾಗೂ ವಿದ್ಯಾಭ್ಯಾಸಕ್ಕಾಗಿ ಸಹಾಯಧನವನ್ನು ನೀಡಲಾಯಿತು. ಮಿಸ್ ಟೀನ್ ಗ್ಲೋಬಲ್ ಪ್ರಶಸ್ತಿ ವಿಜೇತ ಯಶಸ್ವಿನಿ ದೇವಾಡಿಗ ಸುರತ್ಕಲ್ ಅವರನ್ನು ಸನ್ಮಾನಿಸಲಾಯಿತು.

ಟ್ರಸ್ಟ್‌ನ ಕಾರ್ಯದರ್ಶಿ ಡಾ. ದೇವರಾಜ್ ಕೆ ಸ್ವಾಗತಿಸಿದರು. ವೀಣಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News