ನಿಯಮ ಪಾಲಿಸಿ ದುರಂತ ತಡೆಯಿರಿ: ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಅನುಪಮ್ ಅಗರ್ವಾಲ್ ಕರೆ
ಮಂಗಳೂರು, ಜ.11: ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ದುರಂತಗಳನ್ನು ತಡೆಯುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದ್ದು, ಇದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಕರೆ ನೀಡಿದ್ದಾರೆ.
ಮಂಗಳೂರು ನಗರ ಸಂಚಾರ ಪೊಲೀಸ್ ವಿಭಾಗದ ವತಿಯಿಂದ ಸಾರಿಗೆ ಇಲಾಖೆ - ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸಹಯೋಗದಲ್ಲಿ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2024 ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತೀವರ್ಷ ಸಂಚಾರ ಸುರಕ್ಷತಾ ಸಪ್ತಾಹ ಆಯೋಜಿಸಲಾಗುತ್ತಿದೆ. ಅಪಘಾತಗಳ ಸಂಖ್ಯೆ ಕಡಿಮೆ ಆಗಿದೆಯೇ ಎಂದು ನೋಡಿದರೆ ಇಲ್ಲ ಎನ್ನುವ ಉತ್ತರ ದೊರೆಯುತ್ತದೆ. ಕುಟುಂಬಕ್ಕೆ ನೆರವಾಗಬೇಕಾದ ವಯಸ್ಸಿನಲ್ಲಿ ಯುವಕರು ಅಪಘಾತಕ್ಕೆ ಬಲಿಯಾಗುವುದು ನಿಜಕ್ಕೂ ದುರಂತ ಎಂದವರು ಹೇಳಿದರು.
ವಾಹನ ಚಾಲನೆ ಮಾಡುವ ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಬೇಕು. ಪೊಲೀಸರ ಭಯ ಹೋಗಬೇಕಾದರೆ ಸಂಚಾರ ನಿಯಮಗಳನ್ನು ಪಾಲಿಸಬೇಕು. ಜೀವನದಲ್ಲಿ ಇಂತಹ ಶಿಸ್ತು ಪಾಲನೆ ಮಾಡಿದರೆ ಉತ್ತಮ ಸ್ಥಾನಕ್ಕೆ ಏರಲು ಸಾಧ್ಯವಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯೇನಪೊಯ ವಿಶ್ವವಿದ್ಯಾನಿಲಯದ ಕುಲಪತಿ ಡಾ. ವಿಜಯ ಕುಮಾರ್ ಹೇಳಿದರು.
ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ.ಪಿ. ದಿನೇಶ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಗರದಲ್ಲಿ ಪ್ರತಿ ವರ್ಷ 600-800 ಅಪಘಾತಗಳು ಸಂಭವಿಸುತ್ತಿದ್ದು, 800-900 ಮಂದಿ ಗಾಯಾಳು ಗಳಾದರೆ, 100-120 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದರು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಆರ್‌ಎಂಒ ಡಾ. ಸುಧಾಕರ್, ಸಿಎಆರ್ ಮಂಗಳೂರು ಪೊಲೀಸ್ ಉಪ ಆಯುಕ್ತ ಪಿ. ಉಮೇಶ್, ಸಾರಿಗೆ ಉಪ ಆಯುಕ್ತ ಹಾಗೂ ಹಿರಿಯ ಸಾರಿಗೆ ಅಧಿಕಾರಿ ಶ್ರೀಧರ್ ಕೆ.ಮಲ್ಲಾಡ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಕಜೆ ಉಪಸ್ಥಿತರಿದ್ದರು.
ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಅವರು ರಸ್ತೆ ಸಂಚಾರದ ವೇಳೆ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಮಕ್ಕಳಿಗೆ ವಿವರಿಸಿದರು.
ಮಂಗಳೂರು ದಕ್ಷಿಣ ಸಂಚಾರ ಠಾಣೆ ಇನ್ಸ್ ಪೆಕ್ಟರ್ ರಮೇಶ್ ಹಾನಾಪುರ ಸ್ವಾಗತಿಸಿದರು. ಆರ್‌ಜೆ ಪ್ರಸನ್ನ ಮತ್ತು ಅಕ್ಷತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಇನ್ಸ್‌ಪೆಕ್ಟರ್ ಮುಹಮ್ಮದ್ ಶರೀಫ್ ವಂದಿಸಿದರು. ಕಮಿಷನರೇಟ್ ವ್ಯಾಪ್ತಿಯ ವಿವಿಧ ಶಾಲೆ - ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಗರದಲ್ಲಿ ಸಂಚಾರ ನಿಯಂತ್ರಣಕ್ಕೆ ಸ್ವಯಂ ಪ್ರೇರಣೆಯಿಂದ ಶ್ರಮಿಸುತ್ತಿರುವ ಟ್ರಾಫಿಕ್ ವಾರ್ಡನ್‌ಗಳಾದ ಫ್ರಾನ್ಸಿಸ್ ಮೊರಾಸ್, ರೋಶನ್ ಸಿಕ್ವೇರಾ, ರಮೇಶ್ ಕಾವೂರು ಅವನ್ನು ಸಮ್ಮಾನಿಸಲಾಯಿತು. ಅತ್ಯುತ್ತಮ ಕರ್ತವ್ಯ ನಿರ್ವಹಿಸುತ್ತಿ ರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.